ಬೊಮ್ಮನಹಳ್ಳಿ ಜಲಾಶಯದಿಂದ ನೀರು ಬಿಡುವ ಸೂಚನೆ; ಸುರಕ್ಷಿತ ಸ್ಥಾನಕ್ಕೆ ತೆರಳುವಂತೆ ಮನವಿ

Source: sonews | By Staff Correspondent | Published on 24th August 2018, 11:26 PM | Coastal News |

ಕಾರವಾರ : ಸೂಪಾ ಜಲಾಶಯದ ಕೆಳಭಾಗದಲ್ಲಿ ಬರುವ ಬೊಮ್ಮನಹಳ್ಳಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗುತ್ತಿದ್ದು ಯಾವುದೇ ಸಮಯ ಜಲಾಶಯದಿಂದ ನೀರನ್ನು ಹೊರ ಬಿಡಬಹುದಾಗಿದ್ದು ನದಿಪಾತ್ರದ ಜನ ತಮ್ಮ ಜಾನವಾರುಗಳೊಂದಿಗೆ ಸುರಕ್ಷಿತ ಜಾಗದಲ್ಲಿ ಇರುವಂತೆ ಬೊಮ್ಮನಹಳ್ಳಿ ಜಲಾಶಯದ ಕಾರ್ಯನಿರ್ವಾಹಕ ಎಂಜಿನಿಯರ್ ಮುನ್ನೆಚ್ಚರಿಕೆ ನೀಡಿದ್ದಾರೆ.
    
ಸೂಪಾ ಅಣೆಕಟ್ಟೆಯ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆ ಬೀಳುತ್ತಿರುವುದರಿಂದ ಸೂಪಾ ಜಲಾಶಯದಲ್ಲಿ ಹೊರ ಬಿಡಬಹುದಾದ ನೀರಿನಿಂದ ಸೂಪಾ ಕೆಳಭಾಗದಲ್ಲಿ ಬರುವ ಬೊಮ್ಮನಹಳ್ಳಿ ಜಲಾಶಯ ಭರ್ತಿಯಾಗಿ ಯಾವುದೇ ಸಮಯ ನೀರನ್ನು ಹೊರ ಹರಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಬೊಮ್ಮನಹಳ್ಳಿ ಜಲಾಶಯದ ಕೆಳಭಾಗದ ನದಿಪಾತ್ರದಲ್ಲಿ ವಾಸಿಸುವವರು, ಮೀನುಗಾರರು ಎಚ್ಚರ ವಹಿಸುವಂತೆ ಅವರ ತಿಳಿಸಿದ್ದಾರೆ.
    
ಬೊಮ್ಮನಹಳ್ಳಿ ಜಲಾಶಯದ ಗರಿಷ್ಠ ಮಟ್ಟ 438.38 ಮೀಟರ್ ಇಂದಿಗೆ ಜಲಾಶಯದ ಮಟ್ಟ 432.40 ಮೀಟರ್ ಆಗಿದೆ. ಜಲಾಶಯದ ಒಳಹರಿವು ಹೆಚ್ಚುತ್ತಿದ್ದು ಇದು ಮುಂದುವರಿದರೆ ಹಾಗೂ 564 ಮಿಟರ್ ಇರುವ ಸೂಪಾ ಜಲಾಶಯದ ಇಂದಿನ ಮಟ್ಟ 561.80 ಮೀಟರ್ ಆಗಿರುವುದರಿಂದ ಯಾವುದೇ ಸಮಯದಲ್ಲಿ ಸೂಪಾ ಜಲಾಶಯದಿಂದ ನೀರು ಬಿಡಬಹುದಾಗಿದೆ. ಹಾಗೆಯೇ ಬೊಮ್ಮನಹಳ್ಳಿ ಜಲಾಶಯದ ಹೆಚ್ಚುವರಿ ನೀರನ್ನು ಹೊರ ಹರಿಸಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
    
ಆದ್ದರಿಂದ ಬೊಮ್ಮನಹಳ್ಳಿ ಅಣೆಕಟ್ಟೆಯ ಕೆಳದಂಡೆ ನದಿಪಾತ್ರದಲ್ಲಿ ದೋಣಿ ಸಂಚಾರ, ಮೀನುಗಾರಿಕೆ ಇತರೆ ಚಟುವಟಿಕೆಗಳನ್ನು ಮಳೆಗಾಲದ ಅವಧಿಯಲ್ಲಿ ನಡೆಸದಂತೆ ಹಾಗೂ ಜಲಾಶಯದ ನೀರಿನ ಮಟ್ಟ ಹಾಗೂ ಒಳಹರಿವಿನ ಪ್ರಮಾಣದ ಬಗ್ಗೆ ಮಾಧ್ಯಮಗಳಲ್ಲಿನ ಪ್ರಕಟಣೆಗಳನ್ನು ಗಮನಿಸಿ ಎಚ್ಚರವಹಿಸುವಂತೆ ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

Read These Next