ನಾಪತ್ತೆಯಾಗಿದ್ದ ಕುಮಟಾ ಕುಂಭೇಶ್ವರ ದೇವಸ್ಥಾನದ ಅರ್ಚಕ ವಿಶ್ವೇಶ್ವರ ಭಟ್ಟರು ಶವವಾಗಿ ಪತ್ತೆ.

Source: S.O. News Service | By MV Bhatkal | Published on 19th October 2018, 12:50 PM | Coastal News |

ಕುಮಟಾ : ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ಪಟ್ಟಣದ ಕುಂಭೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವಿಶ್ವೇಶ್ವರ ಭಟ್ಟ ಅವರು ಕೊಲೆಯಾದ ಸುಳಿವು ಪೊಲೀಸರಿಗೆ ದೊರೆತ್ತಿದೆ.
ಪಟ್ಟಣದ ಹೆಡ್‌ಪೋಸ್ಟ್ ಆಫೀಸ್ ಸಮೀಪದ ನಿವಾಸಿ ವಿಶ್ವೇಶ್ವರ ಭಟ್ ಅವರು ಕಳೆದ ಮಂಗಳವಾರ ಸಂಜೆ ತಾಲೂಕಿನ ಮೂರೂರು ಸಮೀಪದಲ್ಲಿ ಹೊಸ ಜಾಗದ ಶುದ್ಧಿಕರಣ ಹೋಮಕ್ಕಾಗಿ ಅಪರಿಚಿತ ವ್ಯಕ್ತಿಯೊಂದಿಗೆ ತನ್ನದೆ ಬೈಕ್‌ನಲ್ಲಿ ತೆರಳಿದ್ದರು. ರಾತ್ರಿಯಾದರೂ ಮನೆಗೆ ವಾಪಸ್ ಬಾರದ ಕಾರಣ ಗಾಬರಿಯಾದ ಅವರ ಪತ್ನಿ ಬುಧವಾರ ಕುಮಟಾ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಶ್ವೇಶ್ವರ ಭಟ್ ಬಳಸಿರುವ ಮೊಬೈಲ್‌ನ ಕರೆಗಳನ್ನು ಪರಿಶೀಲಿಸುವ ಜೊತೆಗೆ ಪಟ್ಟಣದಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾದ ವಿಡಿಯೋಗಳ ಪರಿಶೀಲನೆ ನಡೆಸಿದ್ದರು. ಭಟ್ಟರ ಮನೆಗೆ ಆಗಮಿಸಿದ ಜಾಕೆಟ್ ಧರಿಸಿದ ಅಪರಿಚಿತ ವ್ಯಕ್ತಿಯು ಹೊಸ ಬಸ್ ನಿಲ್ದಾಣದಿಂದ ಬೇರೆ ಬೈಕ್‌ನಲ್ಲಿ ಭಟ್ಟರ ಮನೆಗೆ ಬಂದಿರುವುದು ಮತ್ತು ಭಟ್ಟರ ಮನೆಯಿಂದ ಮೂರೂರು ರಸ್ತೆಗೆ ತೆರಳುತ್ತಿರುವ ದೃಶ್ಯಾವಳಿಯನ್ನು ಪೊಲೀಸರಿಗೆ ಲಭಿಸಿರುವುದು ತಿಳಿದುಬಂದಿತ್ತು. ಭಟ್ಟರ ಮೊಬೈಲ್ ಟವರ್ ಲೋಕೇಶನ್ ಕೂಡ ಮೂರೂರು ಗುಡ್ಡದಲ್ಲೆ ತೋರಿಸುತ್ತಿರುವುದರಿಂದ ಪೊಲೀಸರು ರಾತ್ರಿ ಕೂಡ ಗಸ್ತು ತಿರುಗುವ ಮೂಲಕ ಶೋಧ ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದರು.
ಮೊಬೈಲ್ ಕರೆ ಆಧರಿಸಿ ದೊರೆತ ಸುಳಿವಿನ ಮೇರೆಗೆ ಶಿರಸಿಯಲ್ಲಿ ಇಬ್ಬರನ್ನು ಗುರುವಾರ ಸಂಜೆ ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದಾಗ ವಿಶ್ವೇಶ್ವರ ಭಟ್ಟರ ಹತ್ಯೆಯಾಗಿರುವುದು ಬೆಳಕಿಗೆ ಬಂದಿದೆ. ತಕ್ಷಣ ಕಾರ್ಯಪ್ರವೃತರಾದ ಪೊಲೀಸರು ಕೂಜಳ್ಳಿ ಭಾಗದ ತೋಟವೊಂದರಲ್ಲಿ ಹೂತು ಹಾಕಿದ್ದ ಶವವನ್ನು ಮೇಲ್ಕೆತ್ತುವ ಪ್ರಕ್ರಿಯೆ ನಡೆದಿದೆ. ಜಮೀನು ವಿಷಯಕ್ಕೆ ಸಂಬಂಧಿಸಿದಂತೆ ಈ ಹತ್ಯೆ ನಡೆದಿದ್ದು, ಕೊಲೆ ಪ್ರಕರಣದಲ್ಲಿ ಸಂಬಂಧಿಕರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...