ಅನ್ನ, ನೀರು, ವಸತಿ, ಶಿಕ್ಷಣ ಕೊಟ್ಟವರನ್ನು ಜನ ಮರೆಯುವುದಿಲ್ಲ : ಸಿಎಂ

Source: sonews | By Staff Correspondent | Published on 8th January 2018, 10:38 PM | Coastal News | State News | Don't Miss |

 

ಉಡುಪಿ : ರಾಜ್ಯದ ಜನತೆ ರಾಜಕೀಯವಾಗಿ ಪ್ರಬುದ್ಧರು. ಜೈಲಿಗೆ ಹೋಗಿ ಬಂದವರನ್ನು ಅವರು ಮರೆಯುತ್ತಾರೆ. ಅನ್ನ, ನೀರು, ವಸತಿ, ಶಿಕ್ಷಣ ಕೊಟ್ಟವರನ್ನು ಅವರು ಎಂದೂ ಮರೆಯುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. 

ಉಡುಪಿ ವಿಧಾನಸಭೆ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಆಶೀರ್ವಾದವೇ ನಮಗೆ ಶ್ರೀರಕ್ಷೆ. ಅವಕಾಶ ಕೊಟ್ಟಾಗ ಜನರ ಭಾವನೆಗಳಿಗೆ ಸ್ಪಂದಿಸುವಂತೆ ಕೆಲಸ ಮಾಡಬೇಕು.

ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಡಿಸೆಂಬರ್ ತಿಂಗಳಿಂದಲೂ ರಾಜ್ಯದಾದ್ಯಂತ ಸಂಚರಿಸುತ್ತಿದ್ದೇನೆ. ಎಲ್ಲೂ ಸರ್ಕಾರದ ವಿರುದ್ಧವಾದ ಅಲೆಯಿಲ್ಲ. ಸರ್ಕಾರದ ಪರವಾದ ಅಲೆಯಿದೆ. 

ಜನರಿಗೆ ನಮ್ಮ ಬಗ್ಗೆ ಸಮಾಧಾನ, ತೃಪ್ತಿ ಇದೆ. ನಾವು ನುಡಿದಂತೆ ನಡೆದಿದ್ದೇವೆ. ನಾವು ಕೊಟ್ಟ ವಚನಗಳನ್ನು ಈಡೇರಿಸಿದ್ದೇವೆ. 

2013ರಲ್ಲಿ ನಾವು ಪ್ರಣಾಳಿಕೆ ಮೂಲಕ ಕೊಟ್ಟ 165 ಭರವಸೆಗಳಲ್ಲಿ 155 ಭರವಸೆಗಳನ್ನು ಈಡೇರಿಸಿದ್ದೇವೆ. ಮಾರ್ಚ್ ಒಳಗಡೆ ಉಳಿದ ಭರವಸೆಗಳನ್ನೂ ಈಡೇರಿಸುತ್ತೇವೆ ಎಂದರು.

ನಾನು ಪ್ರಮಾಣ ವಚನ ಸ್ವೀಕರಿಸಿದ ಅರ್ಧ ಗಂಟೆಯಲ್ಲಿ ನೇರವಾಗಿ ಕ್ಯಾಬಿನೆಟ್ ಹಾಲಿಗೆ ಹೋಗಿ ಪ್ರಣಾಳಿಕೆಯಲ್ಲಿದ್ದ ಆರು ಪ್ರಮುಖ ಭರವಸೆಗಳನ್ನು ಜಾರಿಗೊಳಿಸಿದೆ. 

ಕರ್ನಾಟಕ ಹಸಿವುಮುಕ್ತ ರಾಜ್ಯವಾಗಬೇಕು ಎನ್ನುವುದು ನಮ್ಮ ಗುರಿ.

ನನ್ನ ಸ್ವಂತ ಅನುಭವದಲ್ಲಿ ಹೇಳುವುದಾದರೆ, ನಮ್ಮ ಊರಿನಲ್ಲಿ ಕೆಲವೇ ಜನರಿಗೆ ಮಾತ್ರ ನೀರಾವರಿ ಜಮೀನುಗಳಿದ್ದವು. ಶೇ.90ರಷ್ಟು ಜನ ಒಣ ಬೇಸಾಯ ಮಾಡುತ್ತಿದ್ದರು. ಆ ಕಾಲದಲ್ಲಿ ಬಡವರು ಅನ್ನು ತಿನ್ನುತ್ತಿದ್ದುದು ಹಬ್ಬಗಳಿಗೆ ಮಾತ್ರ. ಇಲ್ಲವೆಂದರೆ ಬರೀ ರಾಗಿಮುದ್ದೆ, ಜೋಳದ ಮುದ್ದೆ ತಿನ್ನುತ್ತಿದ್ದರು. 

ಮಕ್ಕಳಿಗೆ ಕಾಯಿಲೆ ಬಂದಾಗ ಅನ್ನ ಮಾಡಿದವರ ಮನೆಯಲ್ಲಿ ಒಂದು ತುತ್ತು ಅನ್ನಕ್ಕಾಗಿ ಕಾಯುತ್ತಿದ್ದರು. ನಮ್ಮ ರಾಜ್ಯದಲ್ಲಿ ಅನ್ನಕ್ಕಾಗಿ ಯಾರೂ ಕೈ ಚಾಚಬಾರದು, ಪ್ರತಿಯೊಬ್ಬರೂ ಎರಡು ಹೊತ್ತು ಊಟ ಮಾಡಬೇಕು ಎಂದು ನಾವು ನಿರ್ಧಾರ ಕೈಗೊಂಡೆವು ಎಂದರು.

2015-16, 2016-17ರಲ್ಲಿ ರಾಜ್ಯದಲ್ಲಿ ಎರಡು ವರ್ಷ ಭೀಕರ ಬರಗಾಲ ಇತ್ತು. ಬರಗಾಲ ಬಂದರೆ ಎಲ್ಲರೂ ಬೆಂಗಳೂರು, ಗೋವಾ, ಮುಂಬೈಗಳಿಗೆ ಗುಳೇ ಹೋಗುತ್ತಿದ್ದರು. 

ಅನ್ನಭಾಗ್ಯ ಕೊಟ್ಟ ನಂತರ ರಾಜ್ಯದಲ್ಲಿ ಯಾರೂ ಗುಳೇ ಹೋಗಲಿಲ್ಲ. ಹಸಿವಿನಿಂದ ಸಾಯಲಿಲ್ಲ. ಇಂದು 6.5 ಕೋಟಿ ಜನರಲ್ಲಿ 4 ಕೋಟಿಗೂ ಹೆಚ್ಚು ಜನರಿಗೆ ಪ್ರತಿ ತಿಂಗಳು ತಲಾ 7 ಕೆಜಿ ಅಕ್ಕಿ ನೀಡುತ್ತಿದ್ದೇವೆ. 

ದೇಶದಲ್ಲಿ 19 ರಾಜ್ಯಗಳಲ್ಲಿ ಬಿಜೆಪಿ ಆಡಳಿತವಿದೆ. ಎಲ್ಲಿಯಾದರೂ ಉಚಿತವಾಗಿ ಅಕ್ಕಿ ನೀಡುವ ಕಾರ್ಯಕ್ರಮ ಇದೆ ಎಂದು ಹೇಳಲಿ ಎಂದರು.

ಇದು ಹೆಗ್ಗಳಿಕೆಯಲ್ಲ. ಕರ್ನಾಟಕದಲ್ಲಿ ಹಸಿವು ನೀಗಿಸುವ ಕಾರ್ಯಕ್ರಮ. ಕರ್ನಾಟಕ ಹಸಿವುಮುಕ್ತ ರಾಜ್ಯವಾಗಬೇಕು ಎನ್ನುವುದು ನಮ್ಮ ಇಚ್ಛೆ. 

ಅನೇಕ ಜಿಲ್ಲೆಗಳಲ್ಲಿ ಮಕ್ಕಳು ಅಪೌಷ್ಠಿಕತೆಯಿಂದ ಮಕ್ಕಳು ನರಳುತ್ತಿದ್ದಾರೆ. ನಾನು ವಾರದಲ್ಲಿ ಐದು ದಿನ ಹಾಲು ಕೊಡಲು ಹಾಗೂ ಮೊಟ್ಟೆ ಕೊಡಲು ನಿರ್ಧರಿಸಿದೆ. ಈಗ ಅಲ್ಲಿನ ಶಾಲೆಗಳಲ್ಲಿ ಹಾಜರಿ ಜಾಸ್ತಿಯಾಗಿದೆ ಎಂದರು.

ಕ್ಷೀರಧಾರೆ ಕಾರ್ಯಕ್ರಮದಲ್ಲಿ ರೈತರು ಉತ್ಪಾದಿಸಿದ ಹಾಲಿಗೆ ಪ್ರತಿ ಲೀಟರ್ ಗೆ 5 ರೂ. ಸಬ್ಸಿಡಿ ನೀಡುತ್ತಿದ್ದೇವೆ. ಈ ಘೋಷಣೆ ಮಾಡುವ ಮುನ್ನ ಕೆಎಂಎಫ್ ಗೆ 50 ಲಕ್ಷ ಲೀಟರ್ ಹಾಲು ಬರುತ್ತಿತ್ತು. ಈಗ 75 ಲಕ್ಷ ಲೀಟರ್ ಹಾಲು ಬರುತ್ತಿದೆ.

ಇದರಿಂದ ಹಳ್ಳಿಗಳ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ. ಮಾರುಕಟ್ಟೆಗಳಲ್ಲಿ ರೈತರ ಶೋಷಣೆಯಾಗುತ್ತಿದೆ, ಅವರ ಉತ್ಪನ್ನಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಎಂದು ಆನ್ ಲೈನ್ ಮಾರುಕಟ್ಟೆ ವ್ಯವಸ್ಥೆ ತಂದಿದ್ದೇವೆ. 157 ಎಪಿಎಂಸಿಗಳಲ್ಲಿ ಆನ್ ಲೈನ್ ಮಾಡಿದ್ದೇವೆ. ಇದು ಮಾಡಿದ ನಂತರ ರೈತರ ಆದಾಯ ಶೇ.38ರಷ್ಟು ಹೆಚ್ಚಾಗಿದೆ ಎಂದು ನೀತಿ ಆಯೋಗವೇ ಹೇಳಿದೆ.

ಬಿಜೆಪಿ ಕಾಲದಲ್ಲಿ ಭಾಗ್ಯಜ್ಯೋತಿ ಫಲಾನುಭವಿಗಳಿಗೆ ಬಿಲ್ ಕಟ್ಟಲಿಲ್ಲ ಎಂದು ವಿದ್ಯುತ್ ಕಡಿತ ಮಾಡಿದ್ದರು. ನಾನು ಅಸಲು, ಬಡ್ಡಿ ಮನ್ನಾ ಮಾಡಿ ವಿದ್ಯುಚ್ಛಕ್ತಿ ನೀಡಿದ್ದೇನೆ.

ಅಂಬೇಡ್ಕರ್ ಅಭಿವೃದ್ಧಿ ನಿಗಮ, ವಾಲ್ಮೀಕಿ ಅಭಿವೃದ್ಧಿ ನಿಗಮ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಗಳಲ್ಲಿದ್ದ ಸಾಲಗಳನ್ನು ಮನ್ನಾ ಮಾಡಿದ್ದೇನೆ. 

ರೈತರಿಗೆ 3 ಲಕ್ಷ ರೂ.ವರೆಗೆ ಬಡ್ಡಿ ಇಲ್ಲ. ಮೂರು ಲಕ್ಷ ರೂ.ಗಳಿಂದ ಹತ್ತು ಲಕ್ಷ ರೂ.ವರೆಗೆ ಶೇ.3ರ ಬಡ್ಡಿಯಲ್ಲಿ ಸಾಲ ನೀಡುತ್ತಿದ್ದೇವೆ.

ಮೀನುಗಾರರ ಸಹಕಾರ ಸಂಘಗಳ ಮೂಲಕ
ಸಾಲವನ್ನು ಶೂನ್ಯ ಬಡ್ಡಿಯಲ್ಲಿ ನೀಡಬೇಕು ಎಂದು ಕೋರಿದ್ದಾರೆ. ಬಜೆಟ್ ನಲ್ಲಿ ಮೀನುಗಾರರ ಮಹಿಳಾ ಸಂಘಗಳ ಮೂಲಕವೂ ಶೂನ್ಯಬಡ್ಡಿಯಲ್ಲಿ ಸಾಲ ನೀಡುತ್ತೇವೆ. 

ಹಾಗೆಯೇ ನೇಕಾರರು ಕೊಡಬೇಕಾಗಿರುವ ಸಾಲವನ್ನು ಮನ್ನಾ ಮಾಡಿದ್ದೇವೆ. ಆಶ್ರಯ ಮನೆ, ಇಂದಿರಾ ಆವಾಸ್ ಮನೆ ಸಾಲಗಳನ್ನೂ ಮನ್ನಾ ಮಾಡಿದ್ದೇನೆ. ಬಡವರು ಋಣಮುಕ್ತರಾಗಬೇಕು. ಸಾಲಗಾರರಾಗಿರಬಾರದು ಎನ್ನುವುದು ನಮ್ಮ ಉದ್ದೇಶ ಎಂದರು.

ಬಿಜೆಪಿಯವರು ಹೆಣದ ಮೇಲೆ ರಾಜಕಾರಣ ಮಾಡುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬೆಂಕಿ ಹಚ್ಚಿದ್ದಾರೆ. ಯಾರೇ ಆಗಲಿ, ಅಧಿಕಾರಕ್ಕಾಗಿ ಧರ್ಮ ಧರ್ಮಗಳ ನಡುವೆ ಸಂಘರ್ಷ ಉಂಟು ಮಾಡಿ ಜನರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡಿದರೆ ಅವರು ಸಾರ್ವಜನಿಕ ಜೀವನದಲ್ಲಿ ಇರಲು ನಾಲಾಯಕ್ಕು ಎಂದರು.

ಇನ್ನೊಂದು ಧರ್ಮದವರನ್ನು ದ್ವೇಷಿಸುವವರು ಕೋಮುವಾದ. ಸ್ವಧರ್ಮ ನಂಬಿಕೆ ಇನ್ನೊಂದು ಧರ್ಮದ ಬಗ್ಗೆ ಸಹಿಷ್ಣುತೆ ಇರುವವರೇ ಧರ್ಮ ಪಾಲನೆ ಮಾಡುವವರು ಎಂದು ಮುಖ್ಯಮಂತ್ರಿಯವರು ಹೇಳಿದರು.

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...