ಕೇರಳ: ಸಿಸ್ಟರ್ ಅಭಯ ಕೊಲೆ ಪ್ರಕರಣಕ್ಕೆ ಮರುಜೀವ

Source: sonews | By sub editor | Published on 22nd January 2018, 7:58 PM | National News | Don't Miss |

ತಿರುವನಂತಪುರಂ: ಕೇರಳದಲ್ಲಿ ಸುದೀರ್ಘ ಅವಧಿಯಿಂದ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಸಿಸ್ಟರ್ ಅಭಯ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರೈಂ ಬ್ರಾಂಚ್   ನ ನಿವೃತ್ತ ಪೊಲೀಸ್ ವರಿಷ್ಟಾಧಿಕಾರಿ ಕೆ.ಟಿ ಮೈಕಲ್ ಅವರನ್ನು ಸಾಕ್ಷ್ಯಾಧಾರ ನಾಶಗೊಳಿಸಿದ ಆರೋಪದಲ್ಲಿ ವಿಚಾರಣೆ ನಡೆಸಬೇಕು ಎಂದು ಸಿಬಿಐ ನ್ಯಾಯಾಲಯ ತನಿಖಾ ಸಂಸ್ಥೆಗೆ ಸೋಮವಾರ ಆದೇಶಿಸಿದೆ.
1992ರ ಮಾರ್ಚ್ 27ರಂದು ಸಿಸ್ಟರ್ ಅಭಯ ಅವರ ಮೃತದೇಹ ಕೊಟ್ಟಾಯಂನ ಪಾಯಸ್ ಟೆನ್ ಕಾನ್ವೆಂಟ್ ನ ಬಾವಿಯಲ್ಲಿ ಪತ್ತೆಯಾಗಿತ್ತು. ಮೊದಲಿಗೆ ಈ ಪ್ರಕರಣವನ್ನು ಆತ್ಮಹತ್ಯೆ ಎಂದು ತಿಳಿಯಲಾಗಿದ್ದರೂ ನಂತರ ಇದೊಂದು ಕೊಲೆ ಎಂದು ದೃಢಪಟ್ಟ ಹಿನ್ನೆಲೆಯಲ್ಲಿ 2008ರಲ್ಲಿ ಸಿಬಿಐ ಇಬ್ಬರು ಪಾದ್ರಿಗಳು ಮತ್ತು ಒಬ್ಬರು ನನ್ ವಿರುದ್ಧ ದೋಷಾರೋಪ ಪಟ್ಟಿ ಸಿದ್ಧಪಡಿಸಿತ್ತು.
ಸಾಮಾಜಿಕ ಕಾರ್ಯಕರ್ತರಾದ ಜೊಮೊನ್ ಪುತನ್ ಪುರಕ್ಕಳ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ವೇಳೆ ನ್ಯಾಯಾಲಯವು ನಿವೃತ್ತ ಎಸ್ ಪಿ ಕೆ.ಟಿ ಮೈಕಲ್ ಅವರನ್ನು ಪ್ರಕರಣದ ಸಾಕ್ಷ್ಯನಾಶಕ್ಕೆ ಸಂಬಂಧಿಸಿದಂತೆ ಆರೋಪಿಯೆಂದು ಹೆಸರಿಸಬೇಕೆಂದು ತನಿಖಾ ಸಂಸ್ಥೆಗೆ ಸೂಚಿಸಿದೆ.
ಆರಂಭದಲ್ಲಿ ಈ ಪ್ರಕರಣದ ತನಿಖೆ ನಡೆಸಿದ ಕೆ.ಟಿ ಮೈಕಲ್ ಇದೊಂದು ಆತ್ಮಹತ್ಯೆ ಎಂದು ವರದಿ ಸಲ್ಲಿಸಿದ್ದರು. ಆದರೆ ನಂತರ ಸ್ಥಳೀಯ ನ್ಯಾಯಾಲಯಕ್ಕೆ ಸಿಸ್ಟರ್ ಅಭಯ ಅವರ ಬಟ್ಟೆ ಮತ್ತು ಡೈರಿಯನ್ನು ಒಪ್ಪಿಸಲಾಗಿತ್ತು. ಆದರೆ ನಂತರ ಸಿಬಿಐ ಈ ಪ್ರಕರಣವನ್ನು ಕೈಗೆತ್ತಿಕೊಳ್ಳುವುದಕ್ಕೂ ಮುನ್ನ ಈ ವಸ್ತುಗಳನ್ನು ನಾಶಗೊಳಿಸಲಾಗಿತ್ತು. ಇದೀಗ ನ್ಯಾಯಾಲಯವು ಕೆ.ಟಿ ಮೈಕಲ್ ಅವರನ್ನು ಆರೋಪಿಯೆಂದು ಪರಿಗಣಿಸಿ ಫೆಬ್ರವರಿ ಒಂದರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ಶವದ ಮಹಜರು ನಡೆಸಿದ್ದ ಹೆಚ್ಚುವರಿ ಉಪನಿರೀಕ್ಷಕರಾದ ವಿ.ವಿ ಆಗಸ್ಟೀನ್ ಅವರ ಮೃತದೇಹ 2008ರಲ್ಲಿ ಅವರ ಮನೆಯಲ್ಲಿ ಮಣಿಗಂಟಿನ ನರ ತುಂಡರಿಸಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಸಿಬಿಐ ದೋಷಾರೋಪ ಪಟ್ಟಿಯಲ್ಲಿ ದಾಖಲಾಗಿರುವ ಪ್ರಕಾರ, 1992ರ ಮಾರ್ಚ್ 27ರಂದು ಅಭಯ ಓದಲೆಂದು ಮುಂಜಾನೆ ಬೇಗ ಎದ್ದಿದ್ದರು. ಆಕೆ ಅಡುಗೆ ಕೋಣೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಇಬ್ಬರು ಪಾದ್ರಿಗಳು ಮತ್ತು ಒಬ್ಬ ನನ್ ಜೊತೆಯಾಗಿ ಮಲಗಿರುವುದನ್ನು ಕಂಡಿದ್ದರು. ಇದರಿಂದ ತಮ್ಮ ರಹಸ್ಯ ಬಯಲಾಗುತ್ತದೆ ಎಂಬ ಭೀತಿಯಿಂದ ಆರೋಪಿತ ಪಾದ್ರಿಗಳು ಮತ್ತು ನನ್ ಸೇರಿ ಅಭಯರನ್ನು ಕತ್ತಿಯಿಂದ ಕಡಿದು ಹತ್ಯೆ ಮಾಡಿ ನಂತರ ಮೃತದೇಹವನ್ನು ಬಾವಿಗೆ ಎಸೆದಿದ್ದರು.
ಈ ಪ್ರಕರಣ ರಾಜ್ಯದಲ್ಲಿ ಕೋಲಾಹಲವನ್ನೇ ಎಬ್ಬಿಸಿದರೂ ಚರ್ಚ್ ಮಾತ್ರ ಆರೋಪಿಗಳ ಪರವಾಗಿ ನಿಂತು ಅವರೆಲ್ಲರೂ ಅಮಾಯಕರು ಎಂದು ಘೋಷಿಸಿತ್ತು. ಕಾಂಗ್ರೆಸ್ ನ ಓರ್ವ ಹಿರಿಯ ಮುಖಂಡ ಮತ್ತು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರೊಬ್ಬರು ಈ ಪ್ರಕರಣದ ತನಿಖೆಯನ್ನು ವಜಾಗೊಳಿಸಲು ಪ್ರಯತ್ನಿಸಿದ್ದರು ಎಂಬ ಆರೋಪವೂ ಕೇಳಿಬಂದಿತ್ತು.

Read These Next

ಆಂಧ್ರಪ್ರದೇಶದಲ್ಲಿ ಹಿಂಸಾಚಾರಕ್ಕೆ ತಿರುಗಿದ ಚುನಾವಣೆ: ಟಿಡಿಪಿ, ವೈಎಸ್​ಆರ್​ ಪಕ್ಷಗಳ ಇಬ್ಬರು ಕಾರ್ಯಕರ್ತರ ಸಾವು

ಆಂಧ್ರಪ್ರದೇಶದಲ್ಲಿ ಹಿಂಸಾಚಾರಕ್ಕೆ ತಿರುಗಿದ ಚುನಾವಣೆ: ಟಿಡಿಪಿ, ವೈಎಸ್​ಆರ್​ ಪಕ್ಷಗಳ ಇಬ್ಬರು ಕಾರ್ಯಕರ್ತರ ಸಾವು