ಹೊಸ ವರ್ಷದ ಮೊದಲ ದಿನ ಐದು ಹೆಣ್ಣುಮಕ್ಕಳ ಜನನ; ಪಿಂಕ್ ಬೇಬಿ ಯೋಜನೆಯಡಿ ಪ್ರತಿ ಮಗುವಿಗೆ ೫.ಲಕ್ಷ ರೂ ಠೇವಣಿ-ಬಿಬಿಎಂ

Source: sonews | By Staff Correspondent | Published on 1st January 2019, 11:12 PM | State News | Don't Miss |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ 24 ಆಸ್ಪತ್ರೆಗಳಲ್ಲಿ ಹೊಸ ವರ್ಷದ ಮೊದಲ ದಿನ ಐದು ಹೆಣ್ಣುಮಕ್ಕಳು ಜನಿಸಿದ್ದು, ‘ಪಿಂಕ್ ಬೇಬಿ’ ಯೋಜನೆಯಡಿ ಪಾಲಿಕೆ ತಲಾ 5 ಲಕ್ಷ ರೂ. ಮಗುವಿನ ಹೆಸರಿನಲ್ಲಿ ಠೇವಣಿ ಇಡಲಾಗಿದೆ.

ಬಿಬಿಎಂಪಿಯು ಕಳೆದ ವರ್ಷದಿಂದ ಪಾಲಿಕೆ ಆಸ್ಪತ್ರೆಯಲ್ಲಿ ಜನಿಸುವ ಮೊದಲ ಹೆಣ್ಣುಮಗುವಿನ ವಿದ್ಯಾಭ್ಯಾಸಕ್ಕಾಗಿ ವೈದ್ಯಾಧಿಕಾರಿ ಹಾಗೂ ಮಗುವಿನ ತಾಯಿಯ ಹೆಸರಿನಲ್ಲಿ 5 ಲಕ್ಷ ರೂ. ಠೇವಣಿ ಇಡುವುದಾಗಿ ಮಾಜಿ ಮೇಯರ್ ಆರ್.ಸಂಪತ್‌ರಾಜ್ ಘೋಷಣೆ ಮಾಡಿದ್ದರು. ಅದನ್ನು ಮುಂದುವರಿಸಿರುವ ಇಂದಿನ ಮೇಯರ್, ಜನವರಿ 1 ರಂದು ಹುಟ್ಟಿದ್ದ ಮೊದಲ ಹೆಣ್ಣು ಮಗುವಿನ ಪೋಷಕರಿಗೆ 5 ಲಕ್ಷ ರೂ.ಗಳ ಚೆಕ್ ವಿತರಣೆ ಮಾಡಿದರು.

ಪಾಲಿಕೆ ವ್ಯಾಪ್ತಿಯಲ್ಲಿರುವ 24 ಆಸ್ಪತ್ರೆಗಳಲ್ಲಿ ಮೊದಲು ಜನಿಸುವ ಹೆಣ್ಣುಮಗುವಿನ ವಿದ್ಯಾಭ್ಯಾಸಕ್ಕೆ ತಲಾ 5 ಲಕ್ಷ ರೂ.ಗಳಷ್ಟು ಠೇವಣಿ ಇಡಲು ಕಳೆದ ಬಜೆಟ್‌ನಲ್ಲಿ 1.20 ಕೋಟಿ ರು.ಗಳನ್ನು ಮೀಸಲಿಟ್ಟಿದೆ.

ಎಲ್ಲೆಲ್ಲಿ ಮಕ್ಕಳ ಜನನ: ನಗರದ ತಾವರೆಕೆರೆ, ಗಂಗಾನಗರ, ರಾಜಾಜಿನಗರ, ನಂದಿನಿ ಲೇಔಟ್, ತಿಮ್ಮಯ್ಯ ರಸ್ತೆ ಹೆರಿಗೆ ಆಸ್ಪತ್ರೆಗಳಲ್ಲಿ ಮಂಗಳವಾರ ಒಟ್ಟು ಐದು ಹೆಣ್ಣುಮಕ್ಕಳು ಜನಿಸಿವೆ. ಬಿಬಿಎಂಪಿ ಆರೋಗ್ಯ ವೈದ್ಯಾಧಿಕಾರಿಗಳ ತಂಡ ಈ ಆಸ್ಪತ್ರೆಗಳಿಗೆ ಭೇಟಿ ನೀಡಿ ಹೆಣ್ಣು ಶಿಶುಗಳು ಸಹಜವಾಗಿ ಹುಟ್ಟಿವೆಯೇ ಎಂಬುದನ್ನು ಖಚಿತಪಡಿಸಿಕೊಂಡು, ಪಿಂಕ್ ಬೇಬಿ ಯೋಜನೆಗೆ ಅರ್ಹ ಶಿಶುಗಳು ಎಂದು ಘೋಷಿಸಿದ್ದಾರೆ.

ತಾವರೆಕೆರೆ ಹೆರಿಗೆ ಆಸ್ಪತ್ರೆಯಲ್ಲಿ 12.50ಕ್ಕೆ ತಾಯಿ ಲಕ್ಷ್ಮೀ ಬುದ್ಧ ಮತ್ತು ಆಕಾಶ್ ಬುದ್ಧದಂಪತಿಗಳಿಗೆ ಹುಟ್ಟಿದ ಹೆಣ್ಣು ಮಗು ಪಿಂಕ್ ಬೇಬಿ ಯೋಜನೆಗೆ ಅರ್ಹವಾದ ಮೊದಲ ಹೆಣ್ಣುಶಿಶುವಾಗಿದೆ. ಗಂಗಾನಗರ ಹೆರಿಗೆ ಆಸ್ಪತ್ರೆಯಲ್ಲಿ ಉದಯಕುಮಾರ್ ಮತ್ತು ಆಶಾ ದಂಪತಿಗಳಿಗೆ 1.12 ನಿಮಿಷಕ್ಕೆ, ರಾಜಾಜಿನಗರ ಹೆರಿಗೆ ಆಸ್ಪತ್ರೆಯಲ್ಲಿ ಶಶಿಕಲಾ ಮತ್ತು ಶಿವ ದಂಪತಿಗಳಿಗೆ 4.08ಕ್ಕೆ, ನಂದಿನಿ ಲೇಔಟ್ ಹೆರಿಗೆ ಆಸ್ಪತ್ರೆಯಲ್ಲಿ ಮುಜಾಕೀರ ಬಾನು ಮತ್ತು ಸೈಯದ್ ಸೈಮನ್ ದಂಪತಿಗಳಿಗೆ 5.36 ನಿಮಿಷಕ್ಕೆ ಹಾಗೂ ತಿಮ್ಮಯ್ಯ ರಸ್ತೆಯ ಹೆರಿಗೆ ಆಸ್ಪತ್ರೆಯಲ್ಲಿ ನೂರ್ ಪಾತೀಮಾ ಮತ್ತು ಸೈಯದ್ ವಸೀಮ್ ದಂಪತಿಗಳಿ ಬೆಳಗ್ಗೆ 8. 22ಕ್ಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಾರ್ಚ್‌ವೆರೆಗೂ ಕಾಲಾವಕಾಶ: ಬಿಬಿಎಂಪಿ 24 ಆಸ್ಪತ್ರೆಗಳಲ್ಲಿ ಜನಿಸುವ ಮೊದಲ ಹೆಣ್ಣು ಮಗುವಿಗೆ ಕಳೆದ ಬಾರಿಯ ಬಜೆಟ್‌ನಲ್ಲಿ 1.20 ಕೋಟಿ ಮೀಸಲಿರಿಸಲಾಗಿದೆ. ಆದರೆ, ಒಂದು ದಿನಕ್ಕೆ ಅಷ್ಟೇ ಸೀಮಿತಗೊಳಿಸದೇ ಮೀಸಲಿಟ್ಟ ಹಣವನ್ನು ಆ ಬಜೆಟ್ ಅವಧಿ ಮುಗಿಯುವವರೆಗೂ (ಮಾರ್ಚ್ ಅಂತ್ಯದವರೆಗೂ) ಉಳಿದ 19 ಆಸ್ಪತ್ರೆಗಳಲ್ಲಿ ಜನಿಸುವ ಮೊದಲ ಹೆಣ್ಣು ಮಗುವಿಗೆ ಐದು ಲಕ್ಷ ಠೇವಣಿಯಿಡಲಾಗುತ್ತದೆ ಎಂದು ವೈದ್ಯಾಧಿಕಾರಿ ಹೇಳಿದ್ದಾರೆ.

ಹೆಣ್ಣು ಮಕ್ಕಳು ಹುಟ್ಟುವುದೇ ತಪ್ಪು ಎನ್ನುವ ಸಂದರ್ಭದಲ್ಲಿ ನಾವಿದ್ದೇವೆ. ಇಂತಹ ಸಂದರ್ಭದಲ್ಲಿ ಮಕ್ಕಳ ಶಿಕ್ಷಣಕ್ಕೆ ಅಗತ್ಯವಾಗುವ ನಿಟ್ಟಿನಲ್ಲಿ ಸಹಾಯ ಮಾಡುವ ಉದ್ದೇಶದಿಂದ ಹಿಂದಿನ ಮೇಯರ್ ಬಜೆಟ್‌ನಲ್ಲಿ ಪಿಂಕ್ ಬೇಬಿ ಯೋಜನೆ ಘೋಷಿಸಿದ್ದು, ಅದಕ್ಕೆ 1.20 ಕೋಟಿ ರೂ. ಮೀಸಲಿಟ್ಟಿದ್ದರು. ಅದರಂತೆ ಈ ವರ್ಷದ ಮೊದಲ ದಿನ ಜನಿಸಿದ 5 ಹೆಣ್ಣು ಶಿಶುಗಳಿಗೆ, ತಲಾ 5 ಲಕ್ಷ ರೂ. ಠೇವಣಿ ಇಡಲಾಗುವುದು. ಮಗುವಿನ ವಿದ್ಯಾಭ್ಯಾಸಕ್ಕಾಗಿ ಮಾತ್ರ ಈ ಹಣ ಬಳಕೆ ಮಾಡಬೇಕು.

-ಗಂಗಾಂಬಿಕೆ ಮಲ್ಲಿಕಾರ್ಜುನ್, ಬಿಬಿಎಂಪಿ ಮೇಯರ್

Read These Next