ಬಂಡಾಯ ಸಾಹಿತ್ಯ ಮತ್ತು ಪತ್ರಿಕೋದ್ಯಮ ಕುರಿತು ಕಾರ್ಯಾಗಾರ

Source: sonews | By Staff Correspondent | Published on 9th December 2018, 11:08 PM | State News | Don't Miss |

ತುಮಕೂರು: ಪತ್ರಿಕೆಗಳು ಓದುಗರನ್ನು ಗ್ರಾಹಕರನ್ನಾಗಿ ಕಾಣಬಾರದು. ಆಗ ಗ್ರಾಹಕ ಪತ್ರಿಕೆ ಕೊಳ್ಳುವುದನ್ನು ನಿಲ್ಲಿಸುತ್ತಾನೆ. ಇದು ಈ ಕ್ಷೇತ್ರದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಲಿದೆ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ‍ಮಟ್ಟು ತಿಳಿಸಿದ್ದಾರೆ.

ನಗರದ ಮಾಕಂ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಬಂಡಾಯ ಸಾಹಿತ್ಯ ಸಂಘಟನೆ ಆಯೋಜಿಸಿದ್ದ 2 ದಿನಗಳ ಬಂಡಾಯ ಸಾಹಿತ್ಯ ಮತ್ತು ಪತ್ರಿಕೋದ್ಯಮ ಕುರಿತು ಕಾರ್ಯಾಗಾರದ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತಿದ್ದ ಅವರು, ನಾವು ನೈತಿಕವಾಗಿ ಸರಿಯಿರಬೇಕು. ಆಗ ಪ್ರಶ್ನಿಸಲು ಹಕ್ಕಿರುತ್ತದೆ. ಹೀಗೆ ಮಾಡುವುದರಿಂದ ಪತ್ರಿಕೆಗಳು ಮತ್ತು ಪತ್ರಕರ್ತರು ಸರಿದಾರಿಯಲ್ಲಿ ನಡೆಯಬಹುದು. ಅದು ಬಿಟ್ಟು ದೂರುವುದರಿಂದ ಪ್ರಯೋಜನವಿಲ್ಲ ಎಂದರು.

ಇತ್ತೀಚಿನ ದಿನಗಳಲ್ಲಿ ವೈದ್ಯರು, ಸಾಹಿತಿಗಳು, ಸೇರಿದಂತೆ ಎಲ್ಲ ರಂಗವು ಕಲುಷಿತವಾಗಿದೆ. ಹಾಗೆಯೇ ಪತ್ರಕರ್ತನೂ ಕೂಡ ಭ್ರಷ್ಟನಾಗಿದ್ದಾನೆ. ಇದು ಹೋಗಬೇಕಾದ ನಾವು ಮೊದಲು ಸರಿಯಾಗಿರಬೇಕು. ಪತ್ರಿಕೆಯಲ್ಲಿ ಜಾಹಿರಾತು ಜಾಸ್ತಿಯಿದ್ದು, ಬಲಪಂಥೀಯವಾಗಿ ಬರೆಯುತ್ತಿದೆ. ಸಮರ್ಥವಾಗಿ ಬರುತ್ತಿಲ್ಲ, ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ ಎಂದು ಪತ್ರಿಕೆಗಳನ್ನು ದೂರುವ ಬದಲು ಓದುಗರಾದ ನಾವು ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ಜಾಹೀರಾತು ಬೇಡವೆಂದು ಪತ್ರಿಕೆಗಳ ಬೆಲೆ 10 ರೂಪಾಯಿ ಮಾಡಿದರೆ ಕೊಂಡುಕೊಳ್ಳಲು ಸಾಧ್ಯವಿಲ್ಲ. ಕಡಿಮೆ ಬೆಲೆ ಇಟ್ಟಿರುವ ಪತ್ರಿಕೆಯನ್ನೇ ಎಲ್ಲರೂ ಕೊಳ್ಳುತ್ತಾರೆ. ಆಗ ಪತ್ರಿಕೆಗಳು ಅನಿವಾರ್ಯವಾಗಿ ಜಾಹೀರಾತು ಮೊರೆಹೋಗುತ್ತವೆ. ಅಂದರೆ ಕಾರ್ಪೊರೇಟ್ ಪರವಾಗಿ ಕೆಲಸ ಮಾಡುತ್ತವೆ. ಇಲ್ಲಿ ಪತ್ರಿಕೆಗಳನ್ನು ದೂರುವ ಜನರೇ ನಾಳೆ ಬೆಳಗ್ಗೆ ಯಾವ ಪತ್ರಿಕೆ ದರ ಇಳಿಸುತ್ತದೋ ಅದನ್ನು ಕೊಳ್ಳುವ ಪ್ರವೃತ್ತಿಯನ್ನು ಬಿಡಬೇಕು. ಅದೇ ಪತ್ರಿಕೆ ಓದುಗರ ಋಣದಲ್ಲಿದ್ದರೆ ನಾವು ನಿರೀಕ್ಷಿಸಬಹುದಾದ ಸುದ್ದಿಯನ್ನು ನೋಡಲು ಸಾಧ್ಯವಿದೆ. ಇಲ್ಲದಿದ್ದರೆ ನಾವು ಪತ್ರಿಕೆಗಳ ಕುರಿತು ಮಾತನಾಡುವ ನೈತಿಕತೆ ಇಲ್ಲವಾಗುತ್ತದೆ. ಜಾಹಿರಾತುಗಳು ಹೆಚ್ಚುತ್ತಿರುವ ಬಗ್ಗೆ ಮಾಲಕರನ್ನು ದೂರಿದರೆ ಪ್ರಯೋಜನವಿಲ್ಲ. ಮಾಲಕರಿಗೂ ಸಮಸ್ಯೆಗಳು, ಕಷ್ಟಗಳು ಇವೆ. ಹೀಗಾಗಿ ಅವರ ಸಮಸ್ಯೆಗಳನ್ನು ಓದುಗರಾದ ನಾವು ಕೇಳಿಸಿಕೊಳ್ಳಬೇಕು. ಓದುಗ ಮತ್ತು ಮಾಲಕ ಪರಸ್ಪರ ಕುಳಿತು ಚರ್ಚಿಸುವುದರಿಂದ ಹಲವು ಸಮಸ್ಯೆಗಳು ಬಗೆಹರಿಯುತ್ತವೆ. ಒಂದು ಪತ್ರಿಕೆಗೆ 10 ರೂಪಾಯಿ ವೆಚ್ಚವಾಗುತ್ತದೆ. ಅಷ್ಟು ಹಣವನ್ನು ಓದುಗರು ಮಾಲಕರಿಗೆ ನೀಡಿದರೆ ನಾವು ನಮ್ಮ ಸುದ್ದಿಗಳನ್ನು ನಿರೀಕ್ಷಿಸಲು ಅವಕಾಶವಿರುತ್ತದೆ ಎಂದು ದಿನೇಶ್ ಅಮೀನ್ ಮಟ್ಟು ತಿಳಿಸಿದರು.

ಸೂಟ್ ಕೇಸ್ ‍ಗಳು ಕೇವಲ ವಿಧಾನಸೌಧದಲ್ಲಿ ಮಾತ್ರ ಪೂರೈಕೆಯಾಗುತ್ತಿಲ್ಲ. ರಾಜಭವನಕ್ಕೂ ಹೋಗುತ್ತಿವೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮನೆಗೂ ಹೋಗುತ್ತಿವೆ. ನಾನು ಮಾಧ್ಯಮ ಸಲಹೆಗಾರನಾಗಿದ್ದಾಗ, ಯಾವ್ಯಾವ ವಿಸಿಗಳು ಸೂಟ್‍ಕೇಸ್‍ಗಳನ್ನು ಎಲ್ಲಿಗೆ ಕೊಟ್ಟುಬಂದರು ಎಂಬುದು ಗೊತ್ತಿದೆ ಎಂದು ಮಾರ್ಮಿಕವಾಗಿ ನುಡಿದ ಅವರು, ಮಾಧ್ಯಮಲೋಕದಲ್ಲಿ ಮೀಟೂ ನಡೆಯತ್ತಿದೆ. ಯಾರ್ಯಾರು ‘ಮೀಟೂ’ಗೆ ಒಳಗಾಗಿದ್ದಾರೆ ಎಂಬುದು ಗೊತ್ತಿದೆ. ಅದ್ಯಾಕೆ ಬಯಲಿಗೆ ಬರುತ್ತಿಲ್ಲ. ಮಾಧ್ಯಮದಲ್ಲೂ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಆದರೆ ಹೊರಬರುತ್ತಿಲ್ಲ. ಇದನ್ನು ಎಲ್ಲರೂ ಪ್ರಶ್ನಿಸಬೇಕು. ಇದಕ್ಕೆ ನೈತಿಕತೆ ಇರಬೇಕು ಎಂದರು.

ಮುಂದಿನ ದಿನಗಳಲ್ಲಿ ಕೇಬಲ್ ‍ಗಳು ಬಿದ್ದು ಹೋಗಲಿವೆ. ಕಾರ್ಪೊರೇಟ್ ಸಂಸ್ಥೆಯೊಂದು ಈ ಕ್ಷೇತ್ರಕ್ಕೆ ಈಗಾಗಲೇ ಧುಮುಕಿದೆ. ಅನಿಲ್ ಅಂಬಾನಿ ಕೇಬಲ್ ಲೋಕಕ್ಕೆ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿದ್ದಾರೆ. ಇನ್ನು ಮುಂದಿ ಇಂಟರ್ ನೆಟ್‍ನಲ್ಲಿ ನಾವು ಟಿವಿಗಳನ್ನು ನೋಡಬಹುದಾಗಿದ್ದು, ಇದು ಅಪಾಯದ ಸಂಗತಿ ಎಂದು ದಿನೇಶ್ ಅಮೀನ್ ಮಟ್ಟು ಎಚ್ಚರಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಚಂದ್ರಶೇಖರ ಪಾಟೀಲ್ ಮಾತನಾಡಿ, ಬಂಡಾಯ ಕೋಮಾದಲ್ಲಿದೆ ಎಂದು ಕೆಲವರು ಹೇಳುತ್ತಿದ್ದು, ಇದು ಅರ್ಧ ಸತ್ಯ. ಬಂಡಾಯದ ಆಶಯಗಳು ಇಂದಿಗೂ ಬತ್ತಿಲ್ಲ. ಅದು ಕೆರೆಯಿದ್ದಂತೆ. ಸೆಲೆಗಳು ಹಾಗೆಯೇ ಇವೆ. ಹಿಂದಿನ ಹೋರಾಟದ ಬಿರುಸು ಇಂದು ಇಲ್ಲ ಎಂಬುದು ಸತ್ಯ. ಇವತ್ತಿನ ಸಮಸ್ಯೆಗಳು ಭೀಕರವಾಗಿವೆ ಎಂದು ತಿಳಿಸಿದರು.

ಸಾಹಿತಿ ಕೆ.ಬಿ.ಸಿದ್ದಯ್ಯ ಮಾತನಾಡಿ, ಬಂಡಾಯ ಸಾಹಿತ್ಯ ಸಂಘಟನೆ ದಲಿತರು, ರೈತರು ಮತ್ತು ಸ್ತ್ರೀ ಚಳವಳಿಯನ್ನು ಒಳಗೊಳ್ಳಬೇಕು. ಆ ಮೂಲಕ ಮರುಹುಟ್ಟು ಪಡೆಯಬೇಕು. ಬಂಡಾಯ ಸಂಘಟನೆ ಏಕಕಾಲದಲ್ಲಿ ಏಕವಾಗಿಯೂ ಬಹುತ್ವ ಚಳವಳಿ ಆಗಿಯೂ ಮುನ್ನಡೆಯಬೇಕು. ದಲಿತ ಚಳವಳಿಯ ವಿಶಾಲ ತಳಹದಿಯೂ ಬಂಡಾಯದಲ್ಲಿ ನೆಲೆಗೊಳ್ಳಬೇಕು. ಆಗ ಬಂಡಾಯ ಸಾಹಿತ್ಯ ಸಂಘಟನೆಗೆ ಬಲ ಬರುತ್ತದೆ ಎಂದರು.

ಸಮಾರೋಪ ಸಮಾರಂಭದಲ್ಲಿ ವಕೀಲ ಎಸ್.ರಮೇಶ್, ಭೂಮಿ ಬಳಗದ ಅಧ್ಯಕ್ಷ ಜಿ.ಎಸ್.ಸೋಮಶೇಖರ್ ಮಾತನಾಡಿದರು. ರಾಮಕೃಷ್ಣ ಬೂದಿಹಾಳ, ಎಚ್.ಆರ್.ದೇವರಾಜು, ಭಕ್ತರಹಳ್ಳಿ ಕಾಮರಾಜ್ ಮತ್ತಿತರರು ಉಪಸ್ಥಿತರಿದ್ದರು

ವಾರ್ತಾ ಭಾರತಿ ಪತ್ರಿಕೆ ಪ್ರಗತಿಪರವಾಗಿ ಆಲೋಚಿಸುತ್ತಿದೆ. ಅದನ್ನು ತನ್ನ ಎಲ್ಲಾ ಪುಟಗಳಲ್ಲಿ ಪ್ರಕಟಿಸುತ್ತಿದೆ. ಎಷ್ಟು ಜನ ಆ ಪತ್ರಿಕೆಯನ್ನು ಕೊಂಡು ಓದುತ್ತಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ನಮ್ಮ ಪರವಾಗಿ ಆಲೋಚಿಸುವಂತಹ ಪತ್ರಿಕೆಗಳು ಹೆಚ್ಚಿನ ಪ್ರಸಾರ ಸಂಖ್ಯೆ ಹೊಂದಬೇಕೆಂದರೆ, ನಾವು ಅದರ ಭಾಗವಾಗಬೇಕು. ಪ್ರಸರಣದ ಸಂಖ್ಯೆ ಹೆಚ್ಚಿಲ್ಲ ಎಂಬ ಕಾರಣಕ್ಕೆ ನಮ್ಮ ಧ್ವನಿಯನ್ನು ನಿರ್ಲಕ್ಷಿಸುವುದು ಸರಿಯಲ್ಲ.

-ದಿನೇಶ್ ಅಮೀನ್ ಮಟ್ಟು

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...