ಡಿಸಿಸಿಬ್ಯಾಂಕಿನಿಂದ 4ಕೋ.ರೂ ಸಾಲ ವಿತರಿಸಿದ ಶಾಸಕ ಶ್ರೀನಿವಾಸಗೌಡ;  ಸಿಬಿ ಸ್ಮರಣಾರ್ಥ ಕೋಟಿರೂ ವೆಚ್ಚದಲ್ಲಿ ಚೌಡದೇನಹಳ್ಳಿ ಅಭಿವೃದ್ದಿ

Source: sonews | By Staff Correspondent | Published on 29th January 2019, 11:20 PM | State News |

ಕೋಲಾರ:- ದಿವಂಗತ ಸಿ.ಬೈರೇಗೌಡರ ಸ್ಮರಣಾರ್ಥ ಅವರ ಹುಟ್ಟೂರಾದ ಚೌಡದೇನಹಳ್ಳಿಯನ್ನು ಮಾದರಿ ಗ್ರಾಮವಾಗಿಸಲು ತಮ್ಮ ನಿಧಿಯಿಂದ 1ಕೋಟಿ ರೂ ವೆಚ್ಚದ ವಿವಿಧ ಕಾಮಗಾರಿಗಳನ್ನು ಆದ್ಯತೆ ಮೇಲೆ ಕೈಗೊಳ್ಳುವುದಾಗಿ ಶಾಸಕ ಕೆ.ಶ್ರೀನಿವಾಸಗೌಡ ಘೋಷಿಸಿದರು.

ಮಂಗಳವಾರ ಕೋಲಾರ ಡಿಸಿಸಿ ಬ್ಯಾಂಕ್ ಆಶ್ರಯದಲ್ಲಿ ನರಸಾಪುರ ಎಸ್‍ಎಫ್‍ಸಿಎಸ್ ವತಿಯಿಂದ ಈ ಭಾಗದ ಮಹಿಳಾ ಸಂಘಗಳಿಗೆ 4 ಕೋಟಿ ರೂಗಳ ಶೂನ್ಯ ಬಡ್ಡಿ ಸಾಲವನ್ನು ವಿತರಿಸಿ ಅವರು ಮಾತನಾಡುತ್ತಿದ್ದರು.

ಭ್ರಷ್ಟತೆಯ ವಿರುದ್ದ ಧ್ವನಿಯೆತ್ತುವ ಮೂಲಕ ಹಿಂದಿನ ವೇಮಗಲ್ ವಿಧಾನಸಭಾ ಕ್ಷೇತ್ರಕ್ಕೆ ಮಾತ್ರವಲ್ಲದೇ ಇಡೀ ರಾಜ್ಯಕ್ಕೆ ದಿವಂಗತ ಸಿ.ಬೈರೈಗೌಡರು ನೀಡಿರುವ ಕೊಡುಗೆ ಅಪಾರವಾದುದು ಎಂದ ಅವರು, ಅವರ ಸ್ಮರಣಾರ್ಥ ಚೌಡದೇನಹಳ್ಳಿ ಗ್ರಾಮದ ಸಮಗ್ರ ಅಭಿವೃದ್ದಿಗೆ  ತಾವು ಆದ್ಯತೆ ನೀಡುತ್ತಿರುವುದಾಗಿ ತಿಳಿಸಿದರು.

ಮಹಿಳಾ ಸ್ವಾವಲಂಬನೆಗೆ ಗೋವಿಂದಗೌಡರ ಕೊಡುಗೆ

ದಿವಾಳಿಯಾಗಿದ್ದ ಡಿಸಿಸಿ ಬ್ಯಾಂಕ್‍ಗೆ ಗೋವಿಂದಗೌಡರು ಅಧ್ಯಕ್ಷರಾದ ಮೇಲೆ ಜೀವಕಳೆ ಬಂತು, ಇಂದು ಸಾವಿರಾರು ಕೋಟಿ ರೂ ಸಾಲವನ್ನು ಕೋಲಾರ,ಚಿಕ್ಕಬಳ್ಳಾಪುರ ಎರಡೂ ಜಿಲ್ಲೆಗಳಲ್ಲೂ ವಿತರಿಸುತ್ತಿದ್ದು, ತಾಯಂದಿರು ಸ್ವಾವಲಂಬನೆಯಿಂದ ಜೀವನ ನಡೆಸಲು ಕಾರಣರಾಗಿದ್ದಾರೆ ಎಂದು ಶ್ಲಾಘಿಸಿದರು.

ಮಹಿಳೆಯರು ಸಮರ್ಪಕ ಸಾಲ ಮರುಪಾವತಿಯಲ್ಲಿ ನಂಬಿಕೆ ಉಳಿಸಿಕೊಂಡಿದ್ದಾರೆ, ಇದೇ ರೀತಿ ಪುರುಷರು ಪಡೆದ ಸಾಲ ವಾಪಸ್ಸಾತಿಗೆ ಬದ್ದತೆ ತೋರಬೇಕು ಎಂದು ಕೋರಿ, ಕುಡುಕ ಗಂಡನಿದ್ದರೆ ಅವರಿಗೆ ಸಾಲದ ಹಣ ನೀಡದಿರಿ ಎಂದು ಸಲಹೆ ನೀಡಿದರು.

ಸಹಕಾರಿ ವ್ಯವಸ್ಥೆ ಬಗ್ಗೆ ಅಪಪ್ರಚಾರ ಖಂಡನೀಯ

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ,ಸಹಕಾರಿ ವ್ಯವಸ್ಥೆ ಕುರಿತು ಅಪಪ್ರಚಾರ ನಡೆಸುವುದು ಖಂಡನೀಯ ಎಂದು ತಿಳಿಸಿ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ಸುಸ್ಥಿತಿಯಲ್ಲಿ ನಡೆಯುತ್ತಿರುವ ನರಸಾಪುರ ಎಸ್‍ಎಫ್‍ಸಿಎಸ್ ಕುರಿತು ಮಾಡಿರುವ ಆರೋಪಗಳ ಕುರಿತು ಆಕ್ರೋಶ ವ್ಯಕ್ತಪಡಿಸಿದರು.
ಸೊಸೈಟಿ ಈ ವರ್ಷ 12 ಲಕ್ಷ ಲಾಭ ಮಾಡಿದೆ,ಇಂತಹ ಒಳ್ಳೆಯ ಕೆಲಸ ಮಾಡಿದರೆ ಕೆಲವರು ಸಹಿಸೋದಿಲ್ಲ, ಅನಾವಶ್ಯಕ ಟೀಕೆ ಮಾಡುವುದು ಶೋಭೆ ತರೋದಿಲ್ಲ, ಇಂತಹ ಆಧಾರರಹಿತ ಟೀಕೆಗಳ ಮೂಲಕ ಸಹಕಾರಿ ವ್ಯವಸ್ಥೆಯಲ್ಲಿ ಗೊಂದಲವುಂಟು ಮಾಡಿ ಸಂಸ್ಥೆಗಳನ್ನು ನಾಶ ಮಾಡುವವರಿಗೆ ತಾಯಂದಿರೇ ಬುದ್ದಿ ಕಲಿಸಬೇಕು ಎಂದರು.

ನರಸಾಪುರ ಸೊಸೈಟಿ ವ್ಯಾಪ್ತಿಯಲ್ಲಿ ನೀಡಲಾದ 8 ಕೋಟಿ ಸಾಲದಲ್ಲಿ ಸಾಲಮನ್ನಾ ಯೋಜನೆಯಡಿ 5.75 ಕೋಟಿ ರೂ ಮನ್ನಾ ಆಗಿ ರೈತರಿಗೆ ಲಾಭವಾಗಿದೆ ಇದರ ಅರಿವಿಲ್ಲದೇ ವ್ಯವಸ್ಥೆಯನ್ನು ಬುಡಮೇಲು ಮಾಡುವ ಕೀಳುಮಟ್ಟದ ಪ್ರಯತ್ನವನ್ನು ಯಾರೂ ನಂಬದಿರಿ ಎಂದರು.

ಸಾಲ ಮನ್ನಾದಿಂದ500 ಕೋ.ಲಾಭ

ಕೋಲಾರ ಜಿಲ್ಲೆಯ ರೈತರಿಗೆ ಡಿಸಿಸಿ ಬ್ಯಾಂಕ್ ಸದೃಢಗೊಂಡು ಸಾಲ ನೀಡಿದ್ದರಿಂದಾಗಿ ಸಿದ್ದರಾಮಯ್ಯ ಸರ್ಕಾರದ ಸಾಲ ಮನ್ನಾದಿಂದ 150 ಕೋಟಿ ಹಾಗೂ ಕುಮಾರಸ್ವಾಮಿ ಸರ್ಕಾರದ ಸಾಲ ಮನ್ನಾದಿಂದ 250 ಕೋಟಿ ರೂ ಮನ್ನಾ ಆಗಿದ್ದು ರೈತರಿಗೆ ಲಾಭವಾಗಿದೆ ಎಂದರು.

ಸ್ವೀಕರ್ ರಮೇಶ್‍ಕುಮಾರ್, ಶಾಸಕ ಶ್ರೀನಿವಾಸಗೌಡ ಮತ್ತಿತರರು ಬ್ಯಾಂಕ್‍ಗೆ ಬೆನ್ನೆಲುಬಾಗಿ ನಿಂತಿದ್ದಾರೆ, ತಾಯಂದಿರಗೆ 1 ಲಕ್ಷದವರೆಗೂ ಬಡ್ಡಿರಹಿತ ಸಾಲ ನೀಡಲಾಗುವುದು ಎಂದರು.

ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ, ಡಿಸಿಸಿ ಬ್ಯಾಂಕ್ ನರಸಾಪುರ ಎಸ್‍ಎಫ್‍ಸಿಎಸ್ ಮೂಲಕ ಕೋಟ್ಯಾಂತರ ರೂ ಸಾಲ ವಿತರಿಸುವ ಮೂಲಕ ಈ ಭಾಗದಲ್ಲಿ ಕ್ರಾಂತಿ ಮಾಡಿದೆ, ಸೊಸೈಟಿ ಅತ್ಯಂತ ಉತ್ತಮವಾಗಿ ನಡೆಯುತ್ತಿದ್ದು, ಆಧಾರವಿಲ್ಲದ ಟೀಕೆಗಳಿಗೆ ಉತ್ತರ ನಾವೂ ನೀಡುವ ಅಗತ್ಯವಿಲ್ಲ ಜನರೇ ನೀಡುತ್ತಾರೆ ಎಂದರು.

ಎಸ್‍ಎಫ್‍ಸಿಎಸ್ ಅಧ್ಯಕ್ಷ ಮುನಿರಾಜು ಪ್ರಾಸ್ತಾವಿಕವಾಗಿ ಮಾತನಾಡಿ, ಸಹಕಾರಿ ಯೂನಿಯನ್ ನಿರ್ದೇಶಕ ಪೆಮ್ಮಶೆಟ್ಟಿಹಳ್ಳಿ ಸುರೇಶ್ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಮುಖಂಡ ಬೆಳಮಾರನಳ್ಳಿ ಆನಂದ್, ಕೆಂಬೋಡಿ ನಾರಾಯಣಗೌಡ,ಎಸ್‍ಎಫ್‍ಸಿಎಸ್ ಉಪಾಧ್ಯಕ್ಷ ವಾಸುದೇವ್, ನಿರ್ದೇಶಕರಾದ ಕೆಇಬಿ ಚಂದ್ರು, ರತ್ನಮ್ಮ ಚನ್ನರಾಯಪ್ಪ,  ಮುಖಂಡರಾದ ಕೆಂದಟ್ಟಿ ರಮೇಶ್, ಶಾಮಣ್ಣ, ರಾಜಪ್ಪ, ವೀರಪ್ಪ,ಎಸ್‍ಎಫ್‍ಸಿಎಸ್ ಮಾಜಿ ಅಧ್ಯಕ್ಷ ವೆಂಕಟೇಶಪ್ಪ, ಪ್ರಾಣೇಶರಾವ್,ಚಂದ್ರೇಗೌಡ, ಸೊಣ್ಣೇಗೌಡ ಸೋಮಣ್ಣ,ತಾಪಂ ಮಾಜಿ ಅಧ್ಯಕ್ಷ ಎಂಟಿಬಿ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.


 

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!