ಡಿಸೆಂಬರ್ ಆರನ್ನು ನಾವೇಕೆ ಮರೆಯಬಾರದು?

Source: sonews | By sub editor | Published on 7th December 2017, 6:46 PM | National News | Special Report | Don't Miss |

ಬಾಬ್ರಿ ಮಸೀದಿಯ ನಿರ್ನಾಮವು ದೇಶದಲ್ಲಿ ಹುಟ್ಟುಹಾಕಿದ ಘಟನಾವಳಿಗಳು ಇನ್ನೂ ಮುಂದುವರೆಯುತ್ತಲೇ ಇವೆ.

೨೦೧೭ರ ನವಂಬರ್ ೨೪ರಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಅರೆಸ್ಸೆಸ್)ದ ಮುಖ್ಯಸ್ಥರಾದ ಮೋಹನ್ ಭಾಗವತ ಅವರು ಅಯೋಧ್ಯದಲ್ಲಿ ರಾಮ ಮಂದಿರವನ್ನು ಕಟ್ಟೇ ತೀರಲಾಗುವುದೆಂದು ಘೋಷಿಸಿದರು. ಆ ಘೋಷಣೆಯು ಇಡೀ ಹಿಂದೂತ್ವ ಸೇನೆಗೆ ದಾಳಿಗೆ ಸಿದ್ಧವಾಗಿರಲು ಕೊಟ್ಟ ರಣಕಹಳೆಯಂತಿತ್ತು. ಇದೊಂದು ಅಚಲ ಸತ್ಯವಾಗಿದ್ದು ಅದನ್ನು ಯಾರು ಬದಲಿಸಲು ಸಾಧ್ಯವಿಲ್ಲ. ರಾಮಮಂದಿರವು ವಾಸ್ತವವಾಗುವ ಗಳಿಗೆ ಹತ್ತಿರ ಬಂದಿದ್ದು ನಮ್ಮೆಲ್ಲರ ಪ್ರಯತ್ನಗಳು ಅದನ್ನು ಆಗಗೊಳಿಸುವತ್ತ ಇರಬೇಕೆಂದು ಅವರು ಕರೆ ನೀಡಿದ್ದರು.

ಈ ಹೇಳಿಕೆಯಲ್ಲಿ ಆಶ್ಚರ್ಯಪಡುವಂತದ್ದೇನೂ ಇಲ್ಲ. ಅಥವಾ ಆ ಕರೆ ನೀಡಿದ ಜಾಗದ ಬಗ್ಗೆಯೂ ಆಶ್ಚರ್ಯವೇನೂ ಇಲ್ಲ. ಕರ್ನಾಟಕದ ಉಡುಪಿಯಲ್ಲಿ ವಿಶ್ವ ಹಿಂದೂ ಪರಿಷದ್ ಸಂಘಟಿಸಿದ್ದ ಧರ್ಮ ಸಂಸದ್ ನಲ್ಲಿ ಈ ಕರೆಯನ್ನು ನೀಡಲಾಯಿತು. ಗಮನಿಸಬೇಕಾಗಿರುವುದು ಈ ಕರೆ ನೀಡಿರುವ ಸಮಯ. ಇದೇ ಡಿಸೆಂಬರ್ ೬ಕ್ಕೆ ಬಾಬ್ರಿ ಮಸೀದಿಯನ್ನು ನಿರ್ನಾಮ ಮಾಡಿ ೨೫ ವರ್ಷಗಳಾಗುತ್ತದೆ. ಅದಕ್ಕೆ ಸರಿಯಾಗಿ ಎರಡು ವಾರಗಳ ಮುನ್ನ ಈ ಕರೆಯನ್ನು ನೀಡಲಾಗಿದೆ. ಅಷ್ಟು ಮಾತ್ರವಲ್ಲ. ಬಾಬ್ರಿ ಮಸೀದಿ-ರಾಮಜನ್ಮಭೂಮಿ ವಿವಾದದಲ್ಲಿ ಅಲಹಾಬಾದ್ ಹೈಕೋರ್ಟು ನೀಡಿರುವ ತೀರ್ಪಿನ ವಿರುದ್ಧ ಸಲ್ಲಿಸಲಾದ ಅಹವಾಲುಗಳನ್ನು ಸುಪ್ರೀಂ ಕೋರ್ಟು ವಿಚಾರಣೆಗೆ ಕೈಗೆತ್ತಿಕೊಳ್ಳುವ ಕೆಲವೇ ದಿನಗಳ ಮುನ್ನ ಈ ಕರೆಯನ್ನು ನೀಡಲಾಗಿದೆ. ಅಲಹಾಬಾದ್ ಹೈಕೋರ್‍ಟು ತನ್ನ ತೀರ್ಪಿನಲ್ಲಿ ವಿವಾದಕ್ಕೀಡಾಗಿರುವ ಬಾಬ್ರಿ ಮಸೀದಿಯಿದ್ದ ೨.೭೭ ಎಕರೆ ಜಮೀನನ್ನು ಸುನ್ನಿ ವಕ್ಫ್ ಬೋರ್ಡು, ಪ್ರಧಾನ ದೈವವೆಂದು ಪರಿಗಣಿತವಾಗಿರುವ ರಾಮಲಲ್ಲ ಮತ್ತು ನಿರ್ಮೋಹಿ ಅಖಾಡಗಳ ನಡುವೆ ಸಮಾನವಾಗಿ ಹಂಚಬೇಕೆಂದು ತೀರ್ಪನ್ನಿತ್ತಿತ್ತು. ಈ ತೀರ್ಪನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲಾಗಿದೆ.

ಗುಜರಾತ್ ಶಾಸನಾ ಸಭಾ ಚುನಾವಣೆಗಳು ಹೊಸ್ತಿಲಲ್ಲಿರುವ ಹೊತ್ತಿನಲ್ಲಿ ಮೋಹನ್ ಭಾಗವತ್ ಅವರು ರಾಮ ಜನ್ಮಭೂಮಿ ವಿಷಯವನ್ನು ಮುನ್ನೆಲೆಗೆ ತಂದಿದ್ದಾರೆ. ಆ ಮೂಲಕ ಅಧಿಕಾರದಲ್ಲಿರುವ ಸರ್ಕಾರಕ್ಕೆ ಅದರ ಮೊದಮೊದಲ ರಾಜಕೀಯ ಗೆಲುವಿಗೆ  ರಾಮಮಂದಿರದ ಸುತ್ತ ನಡೆದ ರಾಜಕೀಯ ಸಂಘಟನೆಗಳು ಕಾರಣವೆಂದು ನೆನಪಿಸಿದ್ದಾರೆ. ೨೦೧೪ರ ನಂತರ ಭಾರತೀಯ ಜನತಾ ಪಕ್ಷವು (ಬಿಜೆಪಿ) ರಾಮಜನ್ಮಭೂಮಿ ವಿಷಯವನ್ನು ತನ್ನ ಚುನಾವನಾ ರಣತಂತ್ರವನಾಗಿ ಬಳಸಿರಲಿಲ್ಲ. ಆದರೆ  ಒಂದೊಮ್ಮೆ ಅವರ ’ವಿಕಾಸ್’- ಅಭಿವೃದ್ಧಿಯ- ಸುತ್ತಲಿನ ವಿಷಯಗಳು ಮತಗಳನ್ನು ತಂದುಕೊಡದಿದ್ದರೆ ಆಕ್ರಮಣಕಾರಿ ಹಿಂದೂತ್ವದ ರಣತಂತ್ರವನ್ನು ತತ್‌ಕ್ಷಣದ ಆಯ್ಕೆಯಾಗಿ ಕಾದಿರಿಸಿಕೊಂಡಿದ್ದರು. ಇದು ಗುಜರಾತಿನಲ್ಲಿ ಈಗಾಗಲೇ ಸಾಬೀತಾಗಿದೆ. ಭಾಗವತ್ ಅವರ ಕರೆಯಲ್ಲಿರುವ ಸುನಿಶ್ಚಿತ ಧ್ವನಿಯಿಂದ ಆರೆಸ್ಸೆಸ್ಸಾಗಲೀ, ಬಿಜೆಪಿಯಾಗಲೀ, ರಾಮಜನ್ಮಭೂಮಿಯು ಒಂದು ವಿವಾದಕ್ಕೀಡಾಗಿರುವ ವಿಷಯವೆಂದೂ ಸಹ ಪರಿಗಣಿಸುತ್ತಿಲ್ಲ ಎಂಬುದು ಗೊತ್ತಾಗುತ್ತದೆ. ಅವರ ಪ್ರಕಾರ ೧೯೯೨ರ ಡಿಸೆಂಬರ್ ೬ರಂದು ಗುದ್ದಲಿ, ಹಾರೆ, ಪಿಕಾಸಿಗಳಿಂದ ಸಜ್ಜಿತರಾದ ಕರಸೇವಕರು, ಪೊಲೀಸು ಮತ್ತು ಮಾಧ್ಯಮಗಳ ಕಣ್ಣೆದುರಿನಲ್ಲೇ ಆ ೧೬ನೇ ಶತಮಾನದ ಮಸೀದಿಯನ್ನು ಪುಡಿಪುಡಿಮಾಡಿ ಧ್ವಂಸಮಾಡುವುದರೊಂದಿಗೆ ವಿವಾದವು ಬಗೆಹರಿದಾಗಿದೆ. ಐತಿಹಾಸಿಕವಾಗಿ ತಮಗಾದ ಅನ್ಯಾಯವೊಂದಕ್ಕೆ ಪ್ರತೀಕಾರ ತೀರಿಸಿಕೊಳ್ಳುತ್ತಿದ್ದೇವೆಂದು ಅವರು ಆಗ ಘೋಷಿಸಿದ್ದರು. ಆದರೆ ಆ ಮೂಲಕ ಅವರು ಸ್ವತಂತ್ರ ಭಾರತದ ವರ್ತಮಾನದ ಇತಿಹಾಸವನ್ನು ಮತ್ತೊಮ್ಮೆ ಸರಿಪಡಿಸಲು ಸಾಧ್ಯವಾಗದ ರೀತಿಯಲ್ಲಿ ಬದಲಿಸಿಬಿಟ್ಟಿದ್ದರು.

ಇತಿಹಾಸದಲ್ಲಿ ಕೆಲವು ಸೂಕ್ಷ್ಮ ಕ್ಷಣಗ್ಳಿರುತ್ತವೆ. ಅವು ಇತಿಹಾಸದಲ್ಲಿ ಬದಲವಣೆಗಳನ್ನು ಹುಟ್ಟಿಹಾಕಿರುತ್ತವೆ. ಆದರೆ ಅದನ್ನು ನಾವು ಸಾಕಷ್ಟು ಸಮಯವಾದ ನಂತರ ಗುರುತಿಸುತ್ತೇವೆ. ಆ ದಿನ ನಡೆದ ಘಟನೆಗಳನ್ನು ಬಿತ್ತರಿಸಲು ಇಂದಿನ ರೀತಿ ಗದ್ದಲ ಮಾಡುವ ಖಾಸಗಿ ವಾಹಿನಿಗಳಿರಲಿಲ್ಲ. ಅಯೋಧ್ಯೆಯಲ್ಲಿ ನಡೆಯುತ್ತಿರುವ ಧ್ವಂಸದ ಸುದ್ದಿಯು ಬಿಬಿಸಿಯ ಮೂಲಕ ಇಡೀ ದೇಶದ ಜನಕ್ಕೆ ತಿಳಿದುಬರುತ್ತಿದ್ದಂತೆ ಗಲಭೆಗಳು ನಡೆಯಬಹುದೆಂಬ ಆತಂಕ ಜನರನ್ನು ಕಾಡತೊಡಗಿತು. ಆದರೆ ತಾವು ಬಯಸುವ ಇತಿಹಾಸವನ್ನು ದೇಶದ ಮೇಲೆ ಹೇರಬಯಸುವ ಈ ಜನರು ನಡೆಸಿದ ಇಂಥಾ ಬೇಜವಬ್ದಾರಿ ಮತ್ತು ಭೀಭತ್ಸ ಕೃತ್ಯವು ಈ ದೇಶವು ದಶಕಗಳ ಕಾಲ ಕಾಣದಿದ್ದಂಥ ಕ್ರೌರ್ಯ ಮತ್ತು ದ್ವೇಷದ ವಿದ್ಯಮಾನಗಳಿಗೆ ಕಾರಣವಾಯಿತು.

ಆಗ ಬಾಂಬೆ ಎಂಬ ಹೆಸರನ್ನು ಹೊಂದಿದ್ದ ಮುಂಬೈ ಮಹಾನಗರಿಯಂತೂ ಈ ದಳ್ಳುರಿಯಲ್ಲಿ ಮಿಕ್ಕೆಲ್ಲ ಪ್ರದೇಶಗಳಿಗಿಂತ ಹೆಚ್ಚಿಗೆ ಬೇಯುವಂತಾಯಿತು. ಮುಂಬೈ ನಗರವು ಒಂದು ಮಹಾನಗರಿಯಾಗಿದ್ದು ಇಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಪರಸ್ಪರ ಸಹನೆ ಮತ್ತು ಗೌರವಗಳಿಂದ ಬಾಳುತ್ತಾರೆಂಬ ಹಾಗೂ ಇಬ್ಬರೂ ಒಟ್ಟಾಗಿಯೇ ನಗರದ ಕಷ್ಟಕಾರ್ಪಣ್ಯಗಳನ್ನು ಸಹಿಸಿದ್ದಾರೆಂಬ ಭ್ರಾಂತಿಯನ್ನು ಅದು ನಾಶಗೊಳಿಸಿತು. ಡಿಸೆಂಬರ್ ೬ರ ದ್ವೇಷದ ಜ್ವಾಲೆ ಮುಂಬೈನ ಬೀದಿಬೀದಿಗಳಿಗೂ ನೆರೆಹೊರೆಗಳಿಗೂ ಹರಡಿ ಸ್ಥಿತಪ್ರಜ್ನರನ್ನೂ ದಿಗ್ಭ್ರಾಂತಗೊಳಿಸಿತು. ಇದಾದ ೨೫ ವರ್ಷಗಳ ನಂತರವೂ ಈ ಹಿಂಸಾಚಾರ ಮತ್ತು ಕೊಲೆಗೆ ಕಾರಣರಾದವರು ಮತ್ತು ಅದಕ್ಕೆ ಸಂಚುರೂಪಿಸಿದವರು, ಉತ್ತೇಜಿಸಿದವರು ಮತ್ತು ಈ ಕಾಲಾಳುಗಳು ಮಸೀದಿಯನ್ನು ಧಂಸಗೊಳಿಸುತ್ತಿದ್ದಾಗ ಬದಿಯಲ್ಲಿ ನಿಂತು ಸಂಭ್ರಮಿಸಿದವರು ಯಾವ ಶಿಕ್ಷೆಗೂ ಗುರಿಯಾಗದೆ ಗರ್ವದಿಂದ ತಿರುಗಾಡುತ್ತಿದ್ದಾರೆ. ಇದು ಈ ಸಮಸ್ಯೆಯಿನ್ನೂ ಬಾಕಿ ಉಳಿದಿದೆ ಎಂಬುದನ್ನು ಎತ್ತಿತೋರಿಸುತ್ತಿದೆ. ಇದರ ಜೊತೆಗೆ ಯಾವುದೇ ಬಣ್ಣದ ಪಕ್ಷಗಳು ಅಧಿಕಾರಕ್ಕೆ ಬಂದರೂ ಈ ಅಪರಾಧಗಳಿಗೆ ಕಾರಣರಾದವರಿಗೆ ಶಿಕ್ಷೆ ನೀಡುವಂತಾ ರಾಜಕೀಯ ಇಛ್ಛಾಶಕ್ತಿಯನ್ನು ಪ್ರದರ್ಶಿಸದಿರುವುದು ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಿದೆ. ಇವೆಲ್ಲವೂ ಒಟ್ಟು ಸೇರಿ ಕಳೆದ ೨೫ ವರ್ಷದಲ್ಲಿ ದೇಶದಲ್ಲಿ ಬಹುಸಂಖ್ಯಾತ ದುರಭಿಮಾನಿ ಮತ್ತು ವಿಚ್ಚಿಧ್ರಕ ಸಿದ್ಧಾಂತಗಳು ಬೆಳೆಯಲು ಫಲವತ್ತಾದ ಭೂಮಿಕೆಯನ್ನು ಸಿದ್ಧಪಡಿಸಿದವು.

ಕಳೆದ ೨೫ವರ್ಷದಲ್ಲಿ ರಾಜಕೀಯದಲ್ಲಿ ಬಿಜೆಪಿಯು ಗಮನಾರ್ಹವಾಗಿ ಬೆಳದಿದೆ. ಜೊತೆಜೊತೆಗೆ ಸಮಾಜದಲ್ಲಿ ಪರಧರ್ಮದ ಬಗ್ಗೆ ಅಸಹನೆ ಮತ್ತು ವಿದ್ವೇಷಗಳು ಎಂಥಾ ಸ್ಪೋಟಕ ಪ್ರಮಾಣಕ್ಕೆ ಬೆಳೆದುನಿಂತಿದೆಯೆಂದರೆ ಈ ದೇಶದಲ್ಲಿ ಮುಸ್ಲಿಮರು ತಮ್ಮ ಯಾವುದೇ ಧಾರ್ಮಿಕ ಗುರುತುಗಳನ್ನು ಬಹಿರಂಗವಾಗಿ ಧರಿಸಲೂ ಹೆದರುವಂತಾಗಿದೆ. ಕಳೆದ ವಾರವಷ್ಟೆ ಪಶ್ಚಿಮ ಉತ್ತರಪ್ರದೇಶದಲ್ಲಿ ಟ್ರೈನೊಂದರಲ್ಲಿ ಮೂವರು ಮುಸ್ಲಿಮರು ನಮಾಜು ಟೋಪಿ ಮತ್ತು ಹೆಗಲುವಸ್ತ್ರಗಳನ್ನು ಧರಿಸಿದ್ದರೆಂಬ ಕಾರಣಕ್ಕೆ ಮಾರಣಾಂತಿಕವಾದ ಥಳಿತಕ್ಕೆ ಗುರಿಯಾದರು. ಅದೇರೀತಿ ಕೆಲವೇ ತಿಂಗಳ ಹಿಂದೆ ಜುನೈದ್ ಎಂಬ ೧೬ ವರ್ಷದ ಅಮಾಯಕ ಮುಸ್ಲಿಂ ಬಾಲಕನನ್ನು ಕೇವಲ ಮುಸ್ಲಿಂ ಎಂಬ ಕಾರಣಕ್ಕೆ ಹೊಡೆದು ಕೊಂದು ಹಾಕಿದ್ದನ್ನು ಮರೆಯಲಾದೀತೇ? ಒಂದು ಕಟ್ಟಡವನ್ನು ನೆಲಸಮ ಮಾಡುವುದರಿಂದ ಮೊದಲುಗೊಂಡ ಈ ವಿದ್ಯಮಾನಗಳು ಅಲ್ಪಸಂಖ್ಯಾತರನ್ನು ಸದಾ ದಮನ ಮಾಡುವ ಶಾಶ್ವತ ದಮನಕಾರಿ ರಚನೆಗಳ ನಿರ್ಮಾಣದ ಕಡೆಗೆ ಸಾಗಿರುವ ಈ ಪಯಣ ಆಘಾತಕಾರಿಯಾಗಿದೆ.

 

ಸಾಂಸ್ಕೃತಿಕ ನೆನಪು, ಸಂಪ್ರದಾಯ ಮತ್ತು ಐತಿಹಾಸಿಕ ಸತ್ಯಗಳ ನಡುವಿನ ಗೆರೆಗಳೇ ಅಳಿಸಿಹೋಗುತ್ತಾ ಎಲ್ಲಾ ಬಗೆಯ ವಿಚಾರಶೀಲತೆಗಳನ್ನು ನಾಶಮಾಡುತ್ತಿರುವ ಈ ಸಂದರ್ಭದಲ್ಲಿ ಗತದ ಈ ವಿದ್ಯಮಾನಗಳನ್ನು ಸ್ಮರಿಸುವ ಮತ್ತು ಅವುಗಳ ಬಗ್ಗೆ ಚಿಂತಿಸುವ ಅಗತ್ಯವಿದೆ. ಇತಿಹಾಸಕಾರ ಹರ್ಬನ್ಸ್ ಮುಖಿಯಾ ಅವರು ಹೇಳುವಂತೆ ಬಾಬ್ರಿ ಮಸೀಯಿದ್ದ ಕಡೆ ಹಿಂದೊಮ್ಮೆ ರಾಮಮಂದಿರವಿತ್ತೂ ಎಂಬ ನಂಬಿಕೆಯ ಉತ್ಪಾದನೆಯೇ ಸಂಪ್ರದಾಯ ಹಾಗೂ ಐತಿಹಾಸಿಕ ಸತ್ಯಗಳ ನಡುವೆ ಇರುವ ಅಂತರವು ಮಸುಕಾಗುತ್ತಿದ್ದದ್ದನ್ನು ಸೂಚಿಸುತ್ತದೆ.

ರಾಜಕೀಯ ವಿದ್ವಾಂಸರಾದ ಜ಼ೋಯಾ ಹಸನ್ ಅವರು ಹೇಳುವಂತೆ ಡಿಸೆಂಬರ್ ೬ರಂದು ದೇಶದಲ್ಲಿ ಮೊದಲಾದ ವಿದ್ಯಮಾನಗಳು ಹಿಂದೂ ವಿಚಾರಗಳಿಗೆ ಹೊಸ ಬಗೆಯ ಗೌರವವನ್ನು ತಂದುಕೊಡಲು ಪ್ರಾರಂಭಿಸಿತಲ್ಲದೆ ಅಲ್ಪಸಂಖ್ಯಾತರ ನಿಗ್ರಹ ಮತ್ತು ಅಧೀನತೆಗಳಿಗೂ ಕಾರಣವಾಯಿತು. ಇನ್ನು ಮುಂಬೈನ ವಿಷಯಕ್ಕೆ ಬರುವುದಾದರೆ ನ್ಯಾಯಾಂಗ ಅಯೋಗವು ಯಾವ ಪಕ್ಷವನ್ನು ಹಿಂಸಾಚಾರಗಳಿಗೆ ಕಾರಣವೆಂದು ಸ್ಪಷ್ಟವಾಗಿ ಹೆಸರಿಸಿತ್ತೋ ಆ ಪಕ್ಷ ಈಗ ಅಧಿಕಾರದಲ್ಲಿದೆ ಮತ್ತು ಈವರೆಗೆ ಯಾವ ತಪ್ಪಿತಸ್ಥರಿಗೂ ಶಿಕ್ಷೆಯಾಗಿಲ್ಲ. ಡಿಸೆಂಬರ್ ೬ರ ಘಾತುಕ ಪರಿಣಾಮಗಳು ಮುಂದುವರೆದೇ ಇವೆ.

ಕೃಪೆ:       Economic and Political Weekly  ಅನು: ಶಿವಸುಂದರ್ 

(EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: http://www.epw.in/translation )

 

 

                                                                                                               

 

 

 

 

 

Read These Next

ಉಗ್ರನೊಂದಿಗೆ ರಾಹುಲ್ ಫೋಟೊ; ವಿಕೃತ ಮನಸ್ಸಿನ ಕಿಡಿಗೇಡಿಗಳ ಕೃತ್ಯ;ಯೋಧರ ಬಲಿದಾನದಲ್ಲೋ ರಾಜಕೀಯ

ಹೊಸದಿಲ್ಲಿ: ನಿನ್ನೆ ಪುಲ್ವಾಮಾದಲ್ಲಿ ಭಯೋತ್ಪಾದಕ ದಾಳಿ ನಡೆದು 40 ಸೈನಿಕರು ಹುತಾತ್ಮರಾಗಿರುವ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿರುವ ...

ಹವಾಮಾನ ಬದಲಾವಣೆ ಮತ್ತು ಬಡವರು

ಹವಾಮಾನ ಬದಲಾವಣೆಯು ಒಂದು ತುರ್ತುಸ್ಥಿತಿಯನ್ನೇ ಸೃಷ್ಟಿಸಿದ್ದು ಈ ಭೂಮಿಗೆ ಮತ್ತು ಇದರ ಮೇಲೆ ವಾಸಿಸುತ್ತಿರುವ ಮಾನವ, ಸಸ್ಯ ಮತ್ತು ...

ರಾಷ್ಟ್ರೀಯ ಹೆದ್ದಾರಿ ಅಗಲೀಕರಣದಿಂದಾಗಿ ಭಟ್ಕಳದಿಂದ ಕಾಲು ಕೀಳಲು ಸಿದ್ಧವಾಗಿರುವ ದೂರದರ್ಶನ ಕೇಂದ್ರ..?

ಭಟ್ಕಳ: ಪ್ರಸಕ್ತ ಕಾಲಘಟ್ಟದಲ್ಲಿ ಭಟ್ಕಳ ಎಂಬ ಪುಟ್ಟ ಊರು ಬೆಳೆದು ನಿಂತಿದೆ. ಅಂತರಾಷ್ಟ್ರೀಯ ಆವಿಷ್ಕಾರಗಳನ್ನು ಕಾಣುವ ತವಕ ...

ಉತ್ತರಪ್ರದೇಶದಲ್ಲಿ ವಿರೋಧ ಪಕ್ಷಗಳ ಚುನಾವಣಾ ರಣತಂತ್ರಉತ್ತರಪ್ರದೇಶದಲ್ಲಿ ವಿರೋಧ ಪಕ್ಷಗಳ ಚುನಾವಣಾ ರಣತಂತ್ರ

ಇತ್ತೀಚೆಗೆ ಉತ್ತರಪ್ರದೇಶದಲ್ಲಿ ನಡೆದ ಬೆಳವಣಿಗೆಗಳು ಕೇಂದ್ರದಲ್ಲಿ ಹಾಲೀ ಅಧಿಕಾರದಲ್ಲಿರುವ ಪಕ್ಷದ ಆಳ್ವಿಕೆಯ ವಿರುದ್ಧ ...

ಹವಾಮಾನ ಬದಲಾವಣೆ ಮತ್ತು ಬಡವರು

ಹವಾಮಾನ ಬದಲಾವಣೆಯು ಒಂದು ತುರ್ತುಸ್ಥಿತಿಯನ್ನೇ ಸೃಷ್ಟಿಸಿದ್ದು ಈ ಭೂಮಿಗೆ ಮತ್ತು ಇದರ ಮೇಲೆ ವಾಸಿಸುತ್ತಿರುವ ಮಾನವ, ಸಸ್ಯ ಮತ್ತು ...

ಸಾವಿನ ಕೂಪ ದ ಲ್ಲಿ ಗಣಿಗಾರಿಕೆ

ಮೇಘಾಲಯದಲ್ಲಿ ಇತ್ತೀಚೆಗೆ ಸಂಭವಿಸಿದ ಗಣಿಕಾರ್ಮಿಕರ ಸಾವುಗಳು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬ ಘೋಷಣೆಯ ಪ್ರತಿಪಾದಕರಿಗೆ ನಾಚಿಕೆ ...

ಸುಸೂತ್ರವಾಗಿ ಆರಂಭಗೊಂಡ ಐಸಿಎಸ್‍ಇ ಪರೀಕ್ಷೆ; ಮೊದಲ ದಿನ ಎಲ್ಲ ವಿದ್ಯಾರ್ಥಿಗಳು ಹಾಜರು

ಭಟ್ಕಳ: ಇದೇ ಪ್ರಥಮ ಬಾರಿಗೆ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹೆಬಳೆ ಪಂಚಾಯತ್ ವ್ಯಾಪ್ತಿಯಲ್ಲಿರುವ ನ್ಯೂ ಶಮ್ಸ್ ಸ್ಕೂಲ್ ...