ಹಿಂದುತ್ವದ ಮಾತನಾಡುವ ಬಿಜೆಪಿ ನಾಯಕರಿಗೆ ನಾಗೇಂದ್ರ ನಾಯ್ಕ ಅವರ 11 ಪ್ರಶ್ನೆಗಳು

Source: sonews | By Staff Correspondent | Published on 20th December 2017, 11:37 PM | Coastal News | State News | Special Report | Don't Miss |

 

►ಸಂಘ ಪರಿವಾರದ ಪರವಾಗಿ ವಾದಿಸಿರುವ ಹಿರಿಯ ನ್ಯಾಯವಾದಿ ಜಿಲ್ಲೆಯ ಜನರಲ್ಲಿ ಮಾಡಿರುವ ಮನವಿಯನ್ನೊಮ್ಮೆ ಓದಿ 

►ಹಿಂದುತ್ವದ ಭ್ರಮೆ ಇಳಿದ ಮೇಲೆ ಅವರು ಕಂಡ ಕಟು ವಾಸ್ತವವೇನು ?

►ಹಿಂದುತ್ವಕ್ಕಾಗಿ ಬಲಿಯಾದವರಿಗೆ, ಅವರ ಕುಟುಂಬಗಳಿಗೆ ಬಿಜೆಪಿ ನೀಡಿದ್ದೇನು ?

►ಸ್ವತಃ ಅಡ್ವಾಣಿಯೇ ಬಂದು ನೀಡಿ ಹೋದ ಭರವಸೆ ಏನಾಯಿತು ?

►ಉತ್ತರ ಕನ್ನಡದ ಎಲ್ಲೆಡೆ ಘರ್ಷಣೆ ನಡೆದರೂ ಭಟ್ಕಳ ಶಾಂತ ಏಕಿದೆ ?

►ಭಟ್ಕಳ, ಉತ್ತರ ಕನ್ನಡಕ್ಕೆ ಬಿಜೆಪಿ ಶಾಸಕ, ಸಂಸದ ಆಯ್ಕೆಯಾಗಿದ್ದು ಹೇಗೆ ?

►ಗಲಭೆಯಲ್ಲಿ ಭಾಗಿಯಾದ ಯುವಕರಿಗೆ ಗಲಭೆಗಳ ಇತಿಹಾಸ ಗೊತ್ತಿಲ್ಲ...

ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದ ಕೋಮುಗಲಭೆಯ ಹಿಂದೆ ವ್ಯವಸ್ಥಿತ ರಾಜಕೀಯ ತಂತ್ರ ಅಡಗಿದ್ದು, ಇದನ್ನು ಯುವಜನರು ಅರ್ಥ ಮಾಡಿಕೊಳ್ಳಲು ವಿಫಲರಾಗುತ್ತಿದ್ದಾರೆ ಎಂದು ಬೆಂಗಳೂರು ಹೈಕೋರ್ಟ್ ವಕೀಲರಾದ ನಾಗೇಂದ್ರ ನಾಯ್ಕ ಪ್ರಕಟನೆಯೊಂದರ ಮೂಲಕ ಹೇಳಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದ ಕೋಮು ಗಲಭೆಯ ಹಿನ್ನೆಲೆ, ಭಟ್ಕಳದ ಕೋಮು ಗಲಭೆಯ ಇತಿಹಾಸ, ಅದನ್ನು ಲಾಭವನ್ನು ಪಡೆದುಕೊಂಡ ಬಿಜೆಪಿ ಹಾಗು ಒಂದು ಕಾಲದಲ್ಲಿ ಹಿಂದುತ್ವದ ಪರವಾಗಿದ್ದ ತಾನೂ ನಿಧಾನವಾಗಿ ಇದರ ಹಿಂದಿನ ರಾಜಕೀಯವನ್ನು ಅರ್ಥ ಮಾಡಿಕೊಂಡದ್ದು ಹೇಗೆ ಎನ್ನುವುದನ್ನು ನರೇಂದ್ರ ನಾಯ್ಕ ವಿವರಿಸಿದ್ದಾರೆ.

ಈ ಬಗ್ಗೆ ವಾರ್ತಾ ಭಾರತಿಗೆ ಪ್ರತಿಕ್ರಿಯೆ ನೀಡಿದ ನಾಗೇಂದ್ರ ನಾಯ್ಕ, “1991ನೆ ಇಸವಿಯಲ್ಲಿ ನಾನು ಮೊದಲ ವರ್ಷದ ಎಲ್ ಎಲ್ ಬಿ ಮಾಡುತ್ತಿದ್ದೆ. ಆ ಸಂದರ್ಭ ಭಟ್ಕಳದಲ್ಲಿ ಗಲಭೆಯೊಂದು ನಡೆಯಿತು. ಆಗ ನನಗೆ ಸುಮಾರು 24-25 ವರ್ಷವಿದ್ದಿರಬಹುದು. ನಾನು ಕೂಡ ಹಿಂದುತ್ವದ ಹಿಂದೆ ಬಿದ್ದಿದ್ದೆ. ಗಲಭೆಯಲ್ಲಿ ಹಲವರು ಪ್ರಾಣ ಕಳೆದುಕೊಂಡರು. ಆಗ ನನಗೇನೂ ಅರ್ಥವಾಗಿರಲಿಲ್ಲ. ಆದರೆ ಇದೀಗ ಎಲ್ಲವೂ ಅರ್ಥವಾಗುತ್ತಿದೆ. ಸತ್ಯವನ್ನು ಧೈರ್ಯದಿಂದ ಎಲ್ಲರೆದುರು ಹೇಳಲು ನಾನು ಮುಂದೆ ಬಂದಿದ್ದೇನೆ” ಎಂದರು.

“ಉತ್ತರ ಕನ್ನಡದ ಹೊನ್ನಾವರ,  ಶಿರಸಿಯಲ್ಲಿ ಗಲಭೆಯಲ್ಲಿ ಭಾಗಿಯಾದ ಯುವಕರಿಗೆ ಗಲಭೆಗಳ ಇತಿಹಾಸ ಗೊತ್ತಿಲ್ಲ. ಹಿಂದುತ್ವ ಎನ್ನುವುದು ಸುಮ್ಮನೆ. ಎಲೆಕ್ಷನ್ ಹತ್ತಿರ ಬಂದಾಗ ಇವರಿಗೆ ಹಿಂದುತ್ವದ ನೆನಪಾಗುತ್ತದೆ. ಭಟ್ಕಳದಲ್ಲಿ ಇದೀಗ ಕೋಮು ಗಲಭೆಗಳು ನಡೆಯುತ್ತಿಲ್ಲ. ಏಕೆಂದರೆ ಅಲ್ಲಿನವರಿಗೆ ಗಲಭೆಯ ಇತಿಹಾಸ, ಅದರಿಂದಾದ ನಷ್ಟ ಎಲ್ಲವೂ ಗೊತ್ತಿದೆ. ಯಾವ ಹಿಂದುತ್ವದ ಕಾರ್ಡ್ ಹೊಡೆದರೂ ಭಟ್ಕಳದಲ್ಲಿ ಯಾವ ಆಟವೂ ನಡೆಯುವುದಿಲ್ಲ. ಅದಕ್ಕಾಗಿ ಇತರ ಕಡೆಗಳಲ್ಲಿ ಭಟ್ಕಳದ ಆಸುಪಾಸಿನಲ್ಲಿ ಗಲಭೆ ನಡೆಸುತ್ತಿದ್ದಾರೆ.”

“ಹೊನ್ನಾವರದಲ್ಲಿ ಪರೇಶ್ ಮೇಸ್ತಾ ಸಾವು ಹೇಗೆ ನಡೆಯಿತು ಎನ್ನುವುದು ಯಾರಿಗೂ ಗೊತ್ತಿಲ್ಲ. ಮುಸ್ಲಿಮರು ಅವನನ್ನು ಕೊಂದಿದ್ದಾರೋ, ಅಥವಾ ಬೇರೆ ಹೇಗೋ ಅವನು ಮೃತಪಟ್ಟಿದ್ದಾನೋ ಎನ್ನುವುದು ಯಾವೊಬ್ಬನಿಗೂ ಗೊತ್ತಿಲ್ಲ. ಆದರೂ ಗಲಭೆ ನಡೆಸಿದರು. ರಾಜಕಾರಣಿಗಳೂ ಸಹ ನೀವು ಹಾಗೆ ಮಾಡಬೇಡಿ ಎಂದು ಹೇಳಲು ಮುಂದಾಗಿಲ್ಲ. ಸಮಾಜದಲ್ಲಿ ತಪ್ಪುಗಳು ನಡೆಯುತ್ತಿದ್ದರೂ ಅದನ್ನು ಹೇಳುವ ಧೈರ್ಯ ಯಾರಿಗೂ ಇಲ್ಲ. ಇವೆಲ್ಲವನ್ನು ನೋಡಿಕೊಂಡು ನನಗೆ ಸುಮ್ಮನೆ ಕೂರಲು ಸಾಧ್ಯವಿಲ್ಲ. ಅದಕ್ಕಾಗಿ ಕೋಮುಗಲಭೆಗಳ ಇತಿಹಾಸ, ಅವುಗಳ ಹಿಂದಿನ ಪಿತೂರಿ, ಭಟ್ಕಳ ಗಲಭೆಯ ಲಾಭವನ್ನು ಬಿಜೆಪಿ ಪಡೆದುಕೊಂಡದ್ದು ಹೇಗೆ ಎನ್ನುವ ಬಗ್ಗೆ ಬರೆದಿದ್ದೇನೆ” ಎಂದು ನಾಗೇಂದ್ರ ನಾಯ್ಕ ಹೇಳಿದ್ದಾರೆ.

ಹಿಂದುತ್ವದ ಮಾತನಾಡುವ ಬಿಜೆಪಿ ನಾಯಕರಿಗೆ ನಾಗೇಂದ್ರ ನಾಯ್ಕ ಅವರ  11 ಪ್ರಶ್ನೆಗಳು ಹೀಗಿವೆ.

"ಉತ್ತರ ಕನ್ನಡ ಜಿಲ್ಲೆಯ ಜನತೆಯಲ್ಲಿ ನನ್ನ ಒಂದು ಸವಿನಯ ಮನವಿ"

"ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಕಂಡು ಕಳೆದ ಸುಮಾರು 25 ವರ್ಷಗಳ ಘಟನಾವಳಿಗಳು ಒಂದು ಕ್ಷಣ ನನ್ನ ಮನದಲ್ಲಿ ಮಿಂಚಿನಂತೆ ಸಂಚರಿಸಿತು. ಇದನ್ನು ನನ್ನ ಸ್ನೇಹಿತರೊಬ್ಬರಲ್ಲಿ ಹಂಚಿಕೊಂಡಾಗ ನಮಗ್ಯಾಕೆ ಊರಿನ ಉಸಾಬರಿ ಎಂದು ಪ್ರತಿಕ್ರಿಯಿಸಿದರು. ಆದರೆ ಹಿರಿಯರಾದ ನಾವುಗಳು ನಮ್ಮ ಜವಾಬ್ದಾರಿಯನ್ನು ನಿರ್ವಹಿಸದಿದ್ದಲ್ಲಿ ಅದು ಸಮಾಜದ ಅಶಾಂತಿಗೆ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಕೆಲವು ವಿಚಾರ, ಅನುಭವ, ಪ್ರಶ್ನೆಗಳನ್ನು ಹಂಚಿಕೊಳ್ಳೋಣ ಎಂದು ತಿರ್ಮಾನಿಸಿದೆ".

"1991ರಲ್ಲಿ ಕೊಲಾಕೋ ಆಸ್ಪತ್ರೆಯ ಮುಂಭಾಗದಲ್ಲಿ ಆರಂಭವಾದ ಹಿಂದೂ-ಮುಸ್ಲಿಂ ಗಲಭೆಗೆ ಕಾರಣ ಹಿಂದೂ ಚಾಲಕನ ಆಟೋ ರಿಕ್ಷಾ ಮುಸ್ಲಿಮರೊಬ್ಬರಿಗೆ ತಗುಲಿರುವ ಘಟನೆ. ಅದೊಂದು ಚಿಕ್ಕ ಅಪಘಾತ ಆಗ ನಾನು ಭಟ್ಕಳದಲ್ಲಿದ್ದೆ. ಇಲ್ಲಿಂದ ಆರಂಭವಾದ ಗಲಭೆ 1993ರ ರಾಮನವಮಿಯ ದಿನದವರೆಗೂ ಮರುಕಳಿಸಿತು. ಕಾರಣ ಏನೇ ಇರಬಹುದು, ಗೋಲಿಬಾರ್‌ನಲ್ಲಿ ಇಬ್ಬರು ಪ್ರಾಣ ಕಳೆದುಕೊಳ್ಳುವರೆಗೂ ತೀವ್ರತೆ ಪಡೆದು ಗಲಭೆ ಕೊನೆಗೊಂಡಿತು. 1993ರ ಗಲಭೆಯಲ್ಲಿ ಹಲವಾರು ಹಿಂದೂಗಳು ಮತ್ತು ಮುಸ್ಲಿಮರು ಪ್ರಾಣ ಕಳೆದುಕೊಂಡರು. ಸತ್ತವರಾರು ಗಲಭೆಯಲ್ಲಿ ಭಾಗೀದಾರರಲ್ಲ. ಮನೆಯಲ್ಲಿ ಮಲಗಿದವರು, ಕೆಲಸಕ್ಕೆ ಹೋಗುತ್ತಿದ್ದವರು, ಕೂಲಿನಾಲಿ ಮಾಡಿ ಬದುಕುವವರು ಪ್ರಾಣ ಕಳೆದುಕೊಂಡರು. ಸತ್ತವರು ಸತ್ತರು. ಪರಿಣಾಮ 1994ರಲ್ಲಿ ಡಾ. ಚಿತ್ತರಂಜನ್ ಶಾಸಕರಾಗುವುದರೊಂದಿಗೆ ಬಿಜೆಪಿ ಖಾತೆ ತೆರೆಯಿತು".

"ನ್ಯಾ. ಜಗನ್ನಾಥ ಶೆಟ್ಟಿ ಆಯೋಗ ನೇಮಕವಾಯಿತು. ಬಹಳ ಆಸಕ್ತಿಯಿಂದ ನಾನು ಕೂಡಾ ಈ ಆಯೋಗದ ಮುಂದೆ ಅಫಿದಾವಿತ್ ಸಲ್ಲಿಸುವ ಕೆಲಸದಲ್ಲಿ ಡಾ. ಚಿತ್ತರಂಜನ್, ಕೊಲ್ಲೆಯವರೊಂದಿಗೆ ಭಾಗವಹಿಸಿದೆ. ಆಗ ನನಗೆ ಹಿಂದುತ್ವದ ಭ್ರಮೆ ಇತ್ತು. ತಪ್ಪು ಒಪ್ಪುಗಳ ಅರಿವಿರಲಿಲ್ಲ. ಆ ಸಂದರ್ಭ ಸಾಮಾಜಿಕ ಜಾಲತಾಣವಿರಲಿಲ್ಲ. ಯಾವುದೇ ಘಟನೆ ಈಗಿನ ತೀವ್ರತೆಯ ವದಂತಿಯೊಂದಿಗೆ ಹರಡುತಿರಲಿಲ್ಲ. ಯಾರೂ ಬುದ್ಧಿವಾದವನ್ನು ಹೇಳುತ್ತಿರಲಿಲ್ಲ. ಹೇಳಿದರೆ ಕೇಳುವ ವ್ಯವಧಾನವೂ ನನಗಿರಲಿಲ್ಲ. ಯಾಕೆಂದರೆ ನಾನು ಬಿಸಿ ರಕ್ತದದ ಯುವಕನಾಗಿದ್ದೆ. ಯುವಕರು ಸೂಕ್ಷ್ಮ ಮನೋಭಾವನೆಯವರಾಗಿದ್ದು, ಅವರ ಭಾವನೆಯನ್ನು ಕೆರಳಿಸುವುದು ಸುಲಭ. ಆದ್ದರಿಂದ ಯುವಜನತೆ ರೊಚ್ಚಿಗೇಳುತ್ತಾರೆ".

"1993ರ ನಂತರ ಭಟ್ಕಳದಲ್ಲಿ ಹಿಂದೂ ಮುಸ್ಲಿಂ ಗಲಭೆ ಮರುಕಳಿಸಲಿಲ್ಲ. 10-04-1996ರಂದು ಅಂದಿನ ಶಾಸಕ ಡಾ. ಚಿತ್ತರಂಜನ್ ರನ್ನು ಗುಂಡಿಟ್ಟು ಕೊಲ್ಲಲಾಯಿತು. ಅಂದಿನ ಭಾಜಪದ ರಾಷ್ಟ್ರೀಯ ಅಧ್ಯಕ್ಷರಾದ ಅಡ್ವಾಣಿಯವರು ಅಂತ್ಯಕ್ರಿಯೆ ದಿನ ಭಟ್ಕಳಕ್ಕೆ ಬಂದು ರೋಷಭರಿತರಾಗಿ ಮಾತನಾಡಿ ನ್ಯಾಯ ದೊರಕಿಸುವುದಾಗಿ ಭರವಸೆ ಇತ್ತರು. ಇದರ ಅನುಕಂಪದ ಅಲೆ 27-04-1996ರಂದು ಹಾಲಿ ಲೋಕಸಭಾ ಸದಸ್ಯ ಅನಂತ್ ಕುಮಾರ್ ಹೆಗಡೆಯವರನ್ನು ಪ್ರಥಮ ಬಾರಿಗೆ ಲೋಕಸಭೆಗೆ ಪ್ರವೇಶಿಸಿಸುವಂತೆ ಮಾಡಿತು. ಅಂದಿನಿಂದ ಇಂದಿನವರೆಗೆ ಒಂದು ಅವಧಿಯನ್ನು ಹೊರತು ಪಡಿಸಿ ಇವರು ನಮ್ಮನ್ನು ಪ್ರತಿನಿಧಿಸುತ್ತಾ ಬಂದಿದ್ದಾರೆ".

"1991ರ ಗಲಭೆಯಿಂದ ರಾಜ್ಯದ ಕರಾವಾಳಿಯಾದ್ಯಂತ ಮತಗಳ ಧ್ರುವೀಕರಣ ಆರಂಭವಾಯಿತು. ಕರಾವಳಿಯಾದ್ಯಂತ ಭಾರತೀಯ ಜನತಾ ಪಾರ್ಟಿ ನೆಲೆಕಂಡಿತು. ನಾವೆಲ್ಲರೂ ಒಂದು ಭ್ರಮೆಯಲ್ಲಿದ್ದೆವು. ಹಿಂದೂಗಳ ರಕ್ಷಣೆಯಾಗುತ್ತದೆ, ಅಭಿವೃದ್ಧಿಯಾಗುತ್ತದೆ ಎಂದು ತಿಳಿದುಕೊಂಡಿದ್ದೆವು. 1991ರಿಂದ 1997ರ ಹೊತ್ತಿಗೆ 7 ವರ್ಷಗಳು ಕಳೆದಿತ್ತು. ನಮ್ಮ ಸಹನೆಯೂ ಮುಗಿದಿತ್ತು. ನನ್ನಂತ ಹಲವಾರು ಯುವಕರಿಗೆ ಇದು  ರಾಜಕೀಯ ಎಂದು ಅರ್ಥವಾಯಿತು. 1998ರಲ್ಲಿ ಡಾಕ್ಟರ್ ಚಿತ್ತರಂಜನ್ ಕೊಲೆಯ ತನಿಖೆಯನ್ನು ನ್ಯಾಯಾಲಯದ ಪರಿವೀಕ್ಷಣೆಯಲ್ಲಿ ನಡೆಸಬೇಕೆಂದು ನಾನು ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದೆ. ಸಿಬಿಐಗೆ ನಿರ್ದೇಶನವನ್ನು ಮಾನ್ಯ ಉಚ್ಚ ನ್ಯಾಯಾಲಯ ನೀಡಿತು. ಆಗ ಅಧಿಕಾರದಲ್ಲಿ ಭಾರತೀಯ ಜನತಾ ಪಾರ್ಟಿ ಉಚ್ಛ ನ್ಯಾಯಾಲಯದಲ್ಲಿ ನಮ್ಮ ರಿಟ್ ಅರ್ಜಿಗೆ ತಕರಾರನ್ನು ಸಲ್ಲಿಸಿತು. ಉತ್ತರ ಕನ್ನಡ ಬಿಜೆಪಿ ಘಟಕ ತನಿಖೆ ನಡೆಸಬೇಕೆಂದು ರಾಸ್ತಾರೋಕೊ ನಡೆಸಿತು. ನೀವೇ ಅಧಿಕಾರದಲ್ಲಿದ್ದು ಕೊಲೆಗಾರನನ್ನು ಹಿಡಿಯಲು ಲಾರಿ ಚಾಲಕನ ಅನುಮತಿ ಬೇಕೇ? ಎಂದು ನಾನು ಪ್ರಶ್ನಿಸಿರುವುದು ಹಿರಿಯರಾದ ಕೆಲವರಿಗೆ ನೆನಪಿರಬಹುದು. ಈ ಮಧ್ಯೆ ಅಂದಿನ ಭಾಜಪ ಧುರೀಣ ತಿಮ್ಮಪ್ಪ ನಾಯ್ಕರ ಹತ್ಯೆಯಾಯಿತು. ಅವರ ಮನೆಗೆ ಭೇಟಿ ನೀಡಿದ ಯಡಿಯೂರಪ್ಪನವರು ನ್ಯಾಯ ದೊರಕಿಸುವುದಾಗಿ ಭರವಸೆ ಇತ್ತರು. ಕೇಂದ್ರದಲ್ಲಿ ಅಡ್ವಾಣಿ ಗೃಹ ಖಾತೆ ಸಚಿವರಾಗಿದ್ದರು. ನಮ್ಮ ಜಿಲ್ಲೆಯನ್ನು ಬಿಜೆಪಿ 5 ಬಾರಿ ಸಂಸತ್ತಿನಲ್ಲಿ ಪ್ರತಿನಿಧಿಸಿದೆ. ಕರ್ನಾಟಕದಲ್ಲಿ ಸತತ 5 ವರ್ಷಗಳ ಕಾಲ ಬಿಜೆಪಿ ಆಡಳಿತ ನಡೆಸಿದೆ. 2 ವರ್ಷಗಳ ಸಮ್ಮಿಶ್ರ ಸರ್ಕಾರ ಇತ್ತು".

"ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರವನ್ನು ಬಿಜೆಪಿ ಪ್ರತಿನಿಧಿಸಿದೆ. ಸೌಜನ್ಯಕ್ಕೆ ಒಂದು ಬಾರಿಯೂ ಹಿಂದೆ ನಡೆದ ಕೊಲೆಯ ತನಿಖೆ ವಿಚಾರವನ್ನು ಎತ್ತಲಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ತಿಮ್ಮಪ್ಪ ನಾಯ್ಕರವರ ಮಗ ಖುದ್ದಾಗಿ ಭೇಟಿಯಾಗಿ ಮನವಿಯನ್ನು ಸಲ್ಲಿಸಿದ್ದಾರೆ. ಅದಕ್ಕೆ ಸ್ಪಂದಿಸದ ಯಡಿಯೂರಪ್ಪ ಪರಿವರ್ತನಾ ಯಾತ್ರೆಯಲ್ಲಿ ಅವರನ್ನು ಸ್ಮರಿಸಲೇ ಇಲ್ಲ. ತಿಮ್ಮಪ್ಪ ನಾಯ್ಕ ಇವತ್ತು ಯಾರ ನೆನಪಿನಲ್ಲೂ ಇಲ್ಲದ ವ್ಯಕ್ತಿ. ಅವರನ್ನು ಕಳೆದುಕೊಂಡ ನೋವು ಅವರ ಕುಟುಂಬಕ್ಕೆ ಮಾತ್ರ. ಚಿತ್ತರಂಜನ್ ಹತ್ಯೆ ಮತ್ತು ತಿಮ್ಮಪ್ಪ ನಾಯ್ಕ ಹತ್ಯೆ ತನಿಖೆ ಮುಗಿದ ಅಧ್ಯಾಯ. ಅವರನ್ನು ಕಳೆದುಕೊಂಡ ನೋವು ಆ ಕುಟುಂಬಕ್ಕೆ ಮಾತ್ರ. ಆ ಪಕ್ಷಕ್ಕೆ ಅವರ ನೆನಪಾಗುವುದು ಚುನಾವಣೆ ಬಂದಾಗ".

"ನ್ಯಾ.ರಾಮಚಂದ್ರಯ್ಯ ಆಯೋಗದ ವರದಿ, ನ್ಯಾ. ಜಗನ್ನಾಥ ಶೆಟ್ಟಿ ವರದಿ ವಿಧಾನ ಸೌಧದ ರೆಕಾರ್ಡ್ ರೂಮಿನಲ್ಲಿ ಧೂಳು ತಿನ್ನುತ್ತಿದೆ. ಈ ವರದಿಗಳ ನೆನಪು ಚುನಾವಣೆಗೆ ಮಾತ್ರ ಸೀಮಿತ".

"ಯಾವುದೇ ವ್ಯಕ್ತಿಯ ಮರಣ ಅವರ ಕುಟುಂಬಕ್ಕೆ ತುಂಬಲಾರದ ನಷ್ಟ ಎನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ. ಇದರ ತನಿಖೆ ಆಗಲೇಬೇಕು, ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು. ಈ ನಿಟ್ಟಿನಲ್ಲಿ ನಾವು ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ಮಾಡುವುದು, ಅದನ್ನು ಪ್ರಚೋದಿಸುವುದು ಯಾವ ನ್ಯಾಯ?, ಪೊಲೀಸ್ ವ್ಯವಸ್ಥೆ ನಾವೇ ನಮ್ಮನ್ನು ಕಾಯಲು ತಯಾರಿಸಿದ ಸಾಂವಿಧಾನಿಕ ಭಾಗ. ಪೊಲೀಸರೇನು ಬೇರೆ ದೇಶದವರೇ?, ಅವರಿಗೂ ಸಂಸಾರ, ಕುಟುಂಬವಿದೆ. ಪೊಲೀಸ್ ವ್ಯವಸ್ಥೆ ಇಲ್ಲದ ಸಮಾಜವನ್ನು ಊಹಿಸಲು ಸಾಧ್ಯವೇ?, ಪೆಟ್ಟು ತಿಂದ ಪೊಲೀಸರು ಸಂಯಮ ಕಳೆದುಕೊಂಡು ಗೋಲಿಬಾರ್ ಮಾಡಿದ್ದರೆ ಒಂದೆರಡು ಹೆಣ ಬೀಳುತ್ತಿತ್ತು. ಅಮಾಯಕ ಸಾಯುತ್ತಿದ್ದ. ಗಲಭೆಯ ಪ್ರಚೋದಕರು ಅಥವಾ ನಾಯಕರಾರೂ ಸಾಯುತ್ತಿರಲಿಲ್ಲ".

"ಒಂದು ನಿಮಿಷ ಆಲೋಚಿಸಿ ನೀವು ಮಾಡುವ ಕೆಲಸದ ಪರಿಣಾಮ ಏನು ಎನ್ನುವುದು?, ದುರದೃಷ್ಟವೆಂದರೆ ಈ ಗಲಭೆಯಲ್ಲಿ ಭಾಗಿಯಾಗುವ ಹೆಚ್ಚಿನವರು ಎಲ್ಲ ಜಾತಿಗೆ ಸೇರಿದ ಬಡವರು, ಹಿಂದುಳಿದವರು. ಈ ಸಂದರ್ಭ ಉಪಯೋಗಿಸಿ ನಿಮ್ಮನ್ನು ಆಳುವವರಾರು ಎಂದು ನೀವೇ ಆಲೋಚಿಸಿ, ನಿಮ್ಮ ಮೆದುಳು ಬೇರೆಯವರ ಕಮಾಂಡ್ ಗೆ ಚಲಿಸುವ ಬದಲು ನಿಮ್ಮ ಕಮಾಂಡ್ ಗೆ ಚಲಿಸಿದರೆ ನಿಮ್ಮ ಹಿತ".

"ನಿಮಗೆಲ್ಲ ಆಶ್ಚರ್ಯ ಎನಿಸಬಹುದು. ಹೊನ್ನಾವರದಲ್ಲಿ ಗಲಭೆ ಆಯಿತು. ಕುಮಟಾದಲ್ಲಿ ಗಲಭೆ ಆಯಿತು ಆದರೆ ಭಟ್ಕಳದಲ್ಲಿ ಅತಿ ಸೂಕ್ಷ ಪ್ರದೇಶವಾದರೂ ಯಾರು ಪ್ರತಿಕ್ರಿಯಿಸಲಿಲ್ಲ. ಯಾಕೆ ಗೊತ್ತೇ? ಇದರ ಹಿಂದೆ ದೊಡ್ಡ ಅನುಭವವಿದೆ. 1991ರಂದು ಕೇಸ್‌ನಲ್ಲಿ ಸಿಕ್ಕಿಬಿದ್ದವರ ಕೇಸ್‌ಗಳು ಇನ್ನೂ ಮುಗಿದಿಲ್ಲ. ಇಡೀ ಜೀವನವನ್ನು ಕಳೆದುಕೊಂಡಿದ್ದಾರೆ. ಯಾರೋ ಎಂಎಲ್‌ಎ ಆದರು, ಯಾರೋ ಎಂಪಿ ಆದರು, ಕೆಲವರು ಮಂತ್ರಿಗಳಾದರು. ಸತ್ತವರು ಸತ್ತರು, ಸತ್ತವರ ಕುಟುಂಬದವರು ಪ್ರೀತಿಸಿದವರನ್ನು ಕಳೆದುಕೊಂಡರು. ಕೆಲವರು ರೌಡಿಶೀಟ್ ಸೇರಿದರು, ಕೆಲವರು ಜೈಲು ವಾಸ ಅನುವಿಸಿದರು, ಕೆಲವರು ಕೆಲಸ ಕಳೆದುಕೊಂಡರು.

ಕುಮಟಾದಲ್ಲಿ ಹಲವಾರು ಅಮಾಯಕರ ಮೇಲೆ ಕೇಸು ದಾಖಲಾಗಿದೆ. ಈ ದೊಂಬಿಯೇ ಹೀಗೆ..!. ಪೊಲೀಸರಿಗೂ ದೊಂಬಿಯನ್ನು ನಿಭಾಯಿಸಲು ಅನಿವಾರ್ಯವಾಗಿ ಕೇಸು ದಾಖಲಿಸಬೇಕಾಗುತ್ತದೆ. ನಮ್ಮನ್ನು ನಾವು ನಿಯಂತ್ರಿಸಿದಲ್ಲಿ ಸಂಭಾವ್ಯ ಪರಿಣಾಮವನ್ನು ತಪ್ಪಿಸಬಹುದು.

ರಾಜಕೀಯ ಪಕ್ಷಗಳ ಈ ನೀತಿಯನ್ನು ವಿರೋಧಿಸಿದಲ್ಲಿ ನಿಮಗೆ ನೀಡುವ ಬಿರುದು ಏನೆಂದರೆ ನೀವು ದೇಶದ್ರೋಹಿಗಳು, ಹಿಂದೂ ವಿರೋಧಿಗಳು, ಅಶ್ಲೀಲ ಶಬ್ಧ ಪ್ರಯೋಗ, ಮೂದಲಿಕೆ ಇತ್ಯಾದಿ. ಆದರೆ ಇದು ನನ್ನನ್ನು ಬಾಧಿಸುವುದಿಲ್ಲ.

ಹಿಂದುತ್ವದ ಬಗ್ಗೆ ಮಾತನಾಡುವ ಬಿಜೆಪಿ ನಾಯಕರಿಗೆ ನೀವುಗಳು ಕೇಳಲೇ ಬೇಕಾದ ಕೆಲವು ಪ್ರಶ್ನೆಗಳು...

       1)ನೀವು ಅಧಿಕಾರಕ್ಕೆ ಬಂದು ಇಷ್ಟೆಲ್ಲ ವರ್ಷಗಳು ಕಳೆದರೂ ಈ ಹಿಂದೆ ಸತ್ತವರ ಕುಟುಂಬಕ್ಕೆ ಯಾಕೆ ನ್ಯಾಯ ದೊರಕಿಲ್ಲ?

       2)ಚಿತ್ತರಂಜನ್ ಹತ್ಯೆ ತನಿಖೆ ಮುಗಿದ ಅಧ್ಯಾಯವಾದರೂ ಈ ಕುರಿತು ನೀವು ಮಾಡಿದ ಪ್ರಯತ್ನವೇನು?

        3)ತಿಮ್ಮಪ್ಪ ನಾಯ್ಕ ಕುಟುಂಬಕ್ಕೆ ಯಾವ ನ್ಯಾಯ ದೊರಕಿದೆ?, ಕಿಂಚಿತ್ತೂ ಪರಿಹಾರವಾದರೂ ದೊರಕಿದೆಯೇ?

       4)ನ್ಯಾ.ರಾಮಚಂದ್ರಯ್ಯ ಆಯೋಗದ ವರದಿ ನಿಮ್ಮ ಅವಧಿಯಲ್ಲಿ ಯಾಕೆ ಜಾರಿಯಾಗಿಲ್ಲ?

       5)ನ್ಯಾ. ಜಗನ್ನಾಥ ಶೆಟ್ಟಿ ವರದಿ ಏನಾಯಿತು?

       6)ಹಿಂದುತ್ವದ ಬಗ್ಗೆ ಮಾತನಾಡುವ ನೀವು, ನೀವೇ ಹೇಳಿದ ಕಾಶ್ಮೀರದ ಉಗ್ರಗಾಮಿ ಪಕ್ಷ ಪಿಡಿಪಿ ಜೊತೆ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ಹಂಚಿಕೊಳ್ಳಬಹುದಾದರೆ ನಾವು ನಮ್ಮ ನೆರೆಯ ಮುಸ್ಲಿಂ ಬಾಂಧವರೊಂದಿಗೆ ಸೌಹಾರ್ದಯುತವಾಗಿ ಬದುಕುವಂತಾದರೆ ಏನು ತಪ್ಪು?

       7)ಉತ್ತರ ಕನ್ನಡವನ್ನು ಸುಧೀರ್ಘ ಕಾಲದಿಂದ ಅಂದರೆ 1994ನೇ ಇಸವಿಯಿಂದ (23 ವರ್ಷಗಳು) ಬಿಜೆಪಿ ಪ್ರತಿನಿಧಿಸುತ್ತಿದೆ. ನೀವು ನೀಡಿದ ಕೊಡುಗೆ ಏನು?

       8)ವರ್ಗ ಸಂಘರ್ಷವನ್ನು ಹೊರತು ಪಡಿಸಿ ಯಾವ ಸಾಧನೆಗೈದಿದ್ದೀರಿ?

       9)ಈ ಗಲಭೆಯಿಂದ ಎಷ್ಟು ವ್ಯವಹಾರ ಹಾಳಾಗಿದೆ ಎನ್ನುವುದು ಗೊತ್ತೇ?

       10)ಎಷ್ಟು ಜನ ದಿನಗೂಲಿ ಮಾಡುವವರು ಕೆಲಸ ಕಳೆದುಕೊಂಡಿದ್ದಾರೆ ಗೊತ್ತೇ?

       11)ಸಮಾಜದಲ್ಲಿ ಅಶಾಂತಿ ನೆಲೆಸಿದರೆ ಅದು ಯಾರಿಗೆ ಹಿತವಾಗುವ ವಿಚಾರ, ಇಂತಹ ವಿಚಾರಗಳಿಗೆ ನಾವೇಕೇ ಭಾಗಿದಾರರಾಗಬೇಕು.

       ಇದು ಕೇವಲ ವಸ್ತು ಸ್ಥಿತಿಯನ್ನು ನಿಮ್ಮ ಮುಂದಿಡುವ ಪ್ರಯತ್ನವಷ್ಟೇ.

       ನಾಗೇಂದ್ರ ನಾಯ್ಕ

       ಹೈಕೋರ್ಟ್ ವಕೀಲರು, ಬೆಂಗಳೂರು

        Email:[email protected]

ಕೃಪೆ:vbnewsonlie

Read These Next

ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ...

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...