ಜಮಾಅತೆ ಇಸ್ಲಾಮಿ ಹಿಂದ್ ಶಿರಸಿ ಘಟಕದಿಂದ ಸೌಹಾರ್ದ ಸ್ನೇಹಾ ಕೂಟ

Source: sonews | By sub editor | Published on 31st August 2018, 10:24 PM | Coastal News | Don't Miss |

ಶಿರಸಿ: ಬಕ್ರೀದ್ ಹಬ್ಬದ ಪ್ರಯುಕ್ತ ಜಮಾಅತೆ ಇಸ್ಲಾಮಿ ಹಿಂದ್ ಶಿರಸಿ ಘಟಕದಿಂದ  ಹೋಟೆಲ್ ಮಧುವನ ದಲ್ಲಿ ಸೌಹಾರ್ದ ಸ್ನೇಹಾ ಕೂಟ ಜರಗಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಮಾಅತೆ ಇಸ್ಲಾಮಿ ಹಿಂದ್ ಉತ್ತರಕನ್ನಡ ಜಿಲ್ಲಾ ಸಂಚಾಲಕ ತಲ್ಹಾ ಸಿದ್ದಿಬಾಪ, ರಾಜಕೀಯ ಕಾರಣಗಳಿಂದಾಗಿ ದೇಶದಲ್ಲಿ ಸೌಹಾರ್ದತೆ ಮಾಯವಾಗುತ್ತಿದೆ. ದೇಶದಲ್ಲಿ ಗಲಭೆ, ಗೊಂದಲಗಳನ್ನು ಸೃಷ್ಟಿಸುವುದರ ಮೂಲಕ ನಮ್ಮಲ್ಲಿ ಪರಸ್ಪರಲ್ಲಿ ದ್ವೇಷ ಹಾಗೂ ತ್ವೇಷಾಮಯ ವಾತವರಣ ನಿರ್ಮಿಸಲಾಗುತ್ತಿದೆ ಎಂದ ಅವರು ಜಮಾಅತೆ ಇಸ್ಲಾಮಿ ಹಿಂದ್ ಸಂಘಟನೆ ದೇಶದಲ್ಲಿ ಸೌಹಾರ್ದತೆಯನ್ನು ಮೂಡಿಸಲು ಶ್ರಮಿಸುತ್ತಿದೆ ಎಂದರು. 

ದಲಿತ ಚಿಂತಕ ಸುಧಾಕರ್ ಜೋಗಳೇಕರ್ ಮಾತನಾಡಿ, ಸೌಹಾರ್ದತೆ ಎನ್ನುವುದು ಮರಿಚಿಕೆಯಾಗುತ್ತಿರುವ ಇಂದಿನ ದಿನಮಾನಗಳಲ್ಲಿ ಸೌಹಾರ್ದ ಕಾರ್ಯಕ್ರಮಗಳ ಅವಶ್ಯಕತೆಯಿದೆ. ದೇಶದಲ್ಲಿ ದಲಿತ ಹಾಗೂ ಮುಸ್ಲಿಮರನ್ನು ಗುರಿಮಾಡಿಕೊಂಡು ಅವರನ್ನು ರಾಜಕೀಯದಿಂದ ದೂರವಿಡುವ ಷಡ್ಯಂತ್ರಗಳು ನಡೆಯುತ್ತಿವೆ ಎಂದರು. 

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಪತ್ರಕರ್ತ ಎಂ.ಆರ್.ಮಾನ್ವಿ ಹಬ್ಬಗಳನ್ನು ಸಂತೋಷ, ಸಡಗರದಿಂದ ಆಚರಿಸಿಕೊಳ್ಳಬೇಕಾದ ನಾವು ಇಂದು ಭಯ ಮತ್ತು ಆತಂಕಗಳಲ್ಲಿ ಹಬ್ಬಗಳನ್ನು ಆಚರಿಸುತ್ತಿದ್ದೇವೆ. ಇದಕ್ಕೆ ಕಾರಣ ಒಂದು ಸಂಸ್ಕೃತಿಯನ್ನು ಬೇರೊಬ್ಬರ ಮೇಲ ಬಲವಂತಾಗಿ ಹೇರುವ ಪ್ರಯತ್ನಗಳೇ ಕಾರಣವಾಗಿದ್ದು, ಆಹಾರ, ಉಡುಗೆ ತೊಡುಗೆ, ಆಚಾರ, ಸಂಸ್ಕೃತಿಯನ್ನು ಬಲವಂತವಾಗಿ ಹೇರುತ್ತಿದ್ದು ಇದರಿಂದಾಗಿ ದೇಶದ ಸೌಹಾರ್ದತೆ ಹಾಳಾಗುತ್ತಿದೆ ಎಂದು ವಿಷಾದಿಸಿದರು. 

ಭಾರತೀಯ ಬೌದ್ಧ ಮಹಾಸಭಾ ಉತ್ತರಕನ್ನಡ ಜಿಲ್ಲಾಧ್ಯಕ್ಷ ಪ್ರದೀಪ ನೇತ್ರಾಕರ್, ನಿವೃತ್ತ ಪೋಸ್ಟ್ ಮಾಸ್ಟರ್ ಮೋಹನ್ ಪಾಲೆಕರ್ ಸಮಾಜ ಸೇವಕ ಸೇವಿಯರ್ ಲೀಮಾ ಮತ್ತಿತರರು ಈ ಸಂದರ್ಭದಲ್ಲಿ ತಮ್ಮ ವಿಚಾರಗಳನ್ನು ವ್ಯಕ್ತಪಡಿಸಿದರು.  ರಾಬಿತಾ ಮಿಲ್ಲಾತ್ ಜಿಲ್ಲಾಧ್ಯಕ್ಷ ನ್ಯಾಯಾವಾದಿ ಎ.ಪಿ.ಮುಜಾವರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. 
ಆಮಾಅತೆ ಇಸ್ಲಾಮಿ ಶಿರಸಿ ಘಟಕದ ಅಧ್ಯಕ್ಷ ಅಬ್ದುಲ್ ಮನ್ನಾನ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಅರ್ಪಿಸಿದರು.

Read These Next