ಭಟ್ಕಳದಲ್ಲಿ ಹಸುಳೆಗೆ ಬೆಂಕಿ ಇಕ್ಕಿದ ಬಾಣಂತಿ!

Source: S O New service | By I.G. Bhatkali | Published on 13th March 2018, 1:47 AM | Coastal News |

ಭಟ್ಕಳ: ಕಳೆದ 12 ದಿನಗಳ ಹಿಂದೆಯಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆಯೋರ್ವಳು, ಮಗುವನ್ನು ನೋಡಲು ಗಂಡ ಅಥವಾ ಗಂಡನ ಮನೆಯವರು ಬರಲಿಲ್ಲ ಎಂದು ಕೊರಗುತ್ತಲೇ ಮಾನಸಿಕ ಸ್ಥಿಮಿತ ಕಳೆದುಕೊಂಡು ಹಸುಳೆಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಸಾಯಿಸಿರುವ ಹೃದಯ ವಿದ್ರಾವಕ ಘಟನೆ ತಾಲೂಕಿನ ವೆಂಕಟಾಪುರದಲ್ಲಿ ಬೆಳಕಿಗೆ ಬಂದಿದೆ.

 ಆರೋಪಿ ಮಹಿಳೆಯನ್ನು ಯಶೋಧಾ ಗೋಪಾಲ ಮೊಗೇರ (24) ಎಂದು ಗುರುತಿಸಲಾಗಿದ್ದು, ಆಕೆಯನ್ನು ಬಂಧಿಸಿ ಕಾರವಾರ ರಿಮಾಂಡ್ ರೂಮ್‍ಗೆ ಕಳುಹಿಸಲಾಗಿದೆ. ಈಕೆ 3 ವರ್ಷಗಳ ಹಿಂದೆ ತಾಲೂಕಿನ ಮಾವಿನಕುರ್ವೆ ಗ್ರಾಮ ಪಂಚಾಯತ ಬೆಳ್ನಿ ವ್ಯಾಪ್ತಿಯ ನಿವಾಸಿ ಗೋಪಾಲ ಮೊಗೇರ ಎಂಬುವವರನ್ನು ವರಿಸಿದ್ದು, ಕಳೆದ 1 ವರ್ಷದಿಂದ ದಂಪತಿಗಳು ಭಟ್ಕಳ ಪಟ್ಟಣ ಪ್ರದೇಶದ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ. ಈಕೆ ಕಳೆದ ಫೆ.27ರಂದು ಮುರುಡೇಶ್ವರ ಆರ್.ಎನ್.ಎಸ್. ಆಸ್ಪತ್ರೆಯಲ್ಲಿ ಹೆಣ್ಣು ಶಿಶುವಿಗೆ ಜನ್ಮ ನೀಡಿದ್ದು, ನಂತರ ಅಲ್ಲಿಂದ ವೆಂಕಟಾಪುರದ ತಾಯಿ ಮನೆಯಲ್ಲಿ ಆಶ್ರಯ ಪಡೆದುಕೊಂಡಿದ್ದಳು. ಮಗುವನ್ನು ನೋಡಲು ಯಾರೂ ಬರಲಿಲ್ಲ ಎಂದು ಚಡಪಡಿಸುತ್ತಿದ್ದ ಈಕೆ, ತೀವೃ ಮಾನಸಿಕ ಒತ್ತಡಕ್ಕೆ ಸಿಲುಕಿದ್ದಳು ಎಂಬ ಮಾಹಿತಿ ಲಭ್ಯವಾಗಿದೆ.

ಕಳೆದ ಮಾ.9ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಹಸುಳೆಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದು, ತೀವೃ ಗಾಯಗೊಂಡ ಮಗುವನ್ನು ಆರೋಪಿ ಮಹಿಳೆಯ ತಾಯಿ ಹಾಗೂ ಸಹೋದರನ ಸಹಾಯದಿಂದ ಇಲ್ಲಿನ ಮುರುಡೇಶ್ವರ ಆರ್.ಎನ್.ಎಸ್. ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಗೆ ಸಾಗಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ.

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Read These Next