ಹಿಂದೂ, ಮುಸ್ಲಿಮರ ಕೊಲೆ ಎನ್ನುವುದಕ್ಕಿಂತ ಮನುಷ್ಯರ ಕೊಲೆಯಾಗುತ್ತಿದೆ: ಪ್ರಕಾಶ್ ರೈ

Source: sonews | By Staff Correspondent | Published on 7th April 2018, 12:39 AM | State News | Don't Miss |

ಶಿವಮೊಗ್ಗ: ಇವತ್ತಿನ ರಾಜಕೀಯ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರೂ ಪ್ರಶ್ನಿಸುವುದು ಅಗತ್ಯವಿದೆ. ಮುಸ್ಲಿಮರು ಕೊಲೆಯಾಗುತ್ತಿದ್ದಾರೆ, ಹಿಂದೂಗಳು ಕೊಲೆಯಾಗುತ್ತಿದ್ದಾರೆ ಎನ್ನುವುದಕ್ಕಿಂತ ಮನುಷ್ಯರ ಕೊಲೆಯಾಗುತ್ತಿದೆ ಎಂದು ಹೇಳಬೇಕಾಗಿದೆ ಎಂದು ಪ್ರಗತಿಪರ ಚಿಂತಕ, ಖ್ಯಾತ ನಟ ಪ್ರಕಾಶ್ ರೈ ಹೇಳಿದರು.

 

ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಗುರುವಾರ ನಗರದಲ್ಲಿ ಆಯೋಜಿಸಲಾಗಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಜಾತಿವಾದ ಮತ್ತು ಕೋಮುವಾದಗಳು ಈ ದೇಶದ ದೊಡ್ಡ ರೋಗಗಳಾಗಿದ್ದು, ಮೊದಲು ಇದನ್ನು ನಿರ್ಮೂಲನೆ ಮಾಡುವುದು ಆದ್ಯತೆಯ ಕೆಲಸವಾಗಿದೆ ಎಂದರು. ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಜಾತಿವಾದ ಮತ್ತು ಕೋಮುವಾದದ ಬಗ್ಗೆ ಪ್ರಶ್ನಿಸುತ್ತೇನೆ. ಈ ದೇಶದ ದೊಡ್ಡ ರೋಗವಾಗಿರುವ ಇವುಗಳಿಗೆ ಮೊದಲು ಮದ್ದು ಕೊಡಬೇಕಾಗಿದೆ. ಆ ನಂತರ ಇತರೆ ಸಣ್ಣ ಪುಟ್ಟ ಕಾಯಿಲೆಗಳಿಗೆ ಚಿಕಿತ್ಸೆ ಕೊಡೋಣ ಎಂದರು. 

ಗೋ ಮಾಂಸ ಮುಖ್ಯನಾ ? ಮನುಷ್ಯರು ಮುಖ್ಯನಾ ? ಆಹಾರವನ್ನು ತೀರ್ಮಾನಿಸುವವರು ಯಾರು? ಎಂದು ಪ್ರಶ್ನಿಸಿದ ಅವರು, ಹೊಡೆಯುವುದು, ಮೆರವಣಿಗೆ ಮೇಲೆ ಕಲ್ಲು ಎಸೆಯುವುದು, ನೈತಿಕ ಪೊಲಿಸ್ ಗಿರಿ ನಡೆಸುವುದೆಲ್ಲಾ ಕಣ್ಣಿಗೆ ಕಾಣಿಸುತ್ತಿದೆ ಎಂದು ಕೋಮುವಾದಿಗಳ ಶಕ್ತಿಗಳ ವಿರುದ್ದ ಕಿಡಿಕಾರಿದರು.

ಫೇಕ್ ನ್ಯೂಸ್ ನೆಪದಲ್ಲಿ ಹೊರಡಿಸಿದ್ದ ಆದೇಶಕ್ಕೆ ಪತ್ರಕರ್ತ ಸಮುದಾಯದಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು. ದುಡ್ಡಿರುವವರು ಹಾಗೂ ಪ್ರಬಲ ರಾಜಕೀಯ ಪಕ್ಷಗಳು ಕೆಲವು ಮಾಧ್ಯಮ ಸಂಸ್ಥೆಗಳನ್ನು ಕೊಂಡುಕೊಳ್ಳಬಹುದು. ಆದರೆ ಎಲ್ಲಾ ಪತ್ರಕರ್ತರನ್ನು ಕೊಂಡುಕೊಳ್ಳಲಾಗದು ಎಂಬುದನ್ನು ಮೊನ್ನೆಯ ಘಟನೆಯಿಂದ ಸ್ಪಷ್ಟವಾಗಿದೆ ಎಂದರು. 

ಇಂದು ಎಲ್ಲರೂ ಪ್ರಶ್ನಿಸುವ ಧೈರ್ಯ ಮಾಡಬೇಕು. ಪ್ರಶ್ನಿಸುವುದು ನಮ್ಮ ಹಕ್ಕು. ಆದರೆ ಪ್ರಶ್ನೆ ಕೇಳುವುದಕ್ಕೆ ನೀವ್ಯಾರು ಎಂದು ಕೇಳುವ, ಯಾರೂ ಕೂಡಾ ಪ್ರಶ್ನಿಸಲೇಬಾರದು ಎಂದು ಹೇಳುವ ದಮನಕಾರಿ ಸಂಗತಿಗಳು ಇತ್ತೀಚೆಗೆ ಬಹಳ ನಡೆಯುತ್ತಿವೆ. ಒಂದು ಸರ್ಕಾರ ಜನಾಡಳಿತವನ್ನು ಬಿಟ್ಟು ತನ್ನ ಸಿದ್ದಾಂತವನ್ನು ಹೇರುವ ಕೆಲಸ ಮಾಡುತ್ತಿದೆ. ಸರ್ಕಾರ ಮಾಡಬೇಕಾಗಿರುವುದು ಯುವಕರಿಗೆ ಕೆಲಸ ಕೊಡುವುದು, ರೈತರ ಸಮಸ್ಯೆಗಳನ್ನು ಕೇಳುವುದು, ವಿದ್ಯಾರ್ಥಿಗಳ, ಮಕ್ಕಳ ಶಿಕ್ಷಣ, ಆರೋಗ್ಯ ಬಗ್ಗೆ ಮಾತನಾಡುವುದೇ ಹೊರತು, ತನ್ನ ಸಿದ್ದಾಂತದ ಅಜೆಂಡಾಗಳನ್ನಲ್ಲ ಎಂದು ಹೇಳಿದ ಅವರು, ಇದನ್ನು ಪ್ರಶ್ನಿಸಿದರೆ ನೀನು ಯಾವ ಜಾತಿ, ಯಾವ ಪಕ್ಷದವನು ಎಂದು ಕೇಳುತ್ತಾ, ನನ್ನ ಹೆಂಡತಿ, ಮಗನ ವಿಚಾರ ಎತ್ತುತ್ತಾರೆ. ನನ್ನ ಪ್ರಶ್ನೆಗೆ ಇದು ಉತ್ತರವಲ್ಲ. ಈ ದೇಶದ ಸಾಮಾನ್ಯ ಪ್ರಜೆಯಾಗಿ ಪ್ರಶ್ನೆ ಕೇಳುವ ಹಕ್ಕಿದೆ. ಆದರೆ ಅದನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ ಎಂದರು.    

ಅನಂತಕುಮಾರ್ ಹೆಗಡೆ ಹಾಗೂ ಇಡೀ ದೇಶದ ಕೇಂದ್ರ ಮಂತ್ರಿಗಳು ಎಲ್ಲರನ್ನೂ ಸಮಾನವಾಗಿ ಕಾಣುವುದಾಗಿ ಪ್ರಮಾಣ ಮಾಡಿದವರು. ಅದರೆ ಇಂದು ಇಡೀ ದೇಶದಲ್ಲಿ ಒಂದು ಜಾತಿಯನ್ನೆ, ಧರ್ಮವನ್ನೇ ಇಲ್ಲವಾಗಿಸಬೇಕು ಎನ್ನುತ್ತಾರೆಂದರೆ ನಮಗೆ ಕೋಪ ಬರಬಾರದೇಕೆ ? ಅವರು ಇಡೀ ದೇಶದ ಮಂತ್ರಿ ಎಂಬುವುದರ ಅರಿವಿಲ್ಲವೇ? ಎಲ್ಲರನ್ನೂ ಸಮಾನವಾಗಿ ನೋಡಬೇಕು. ದಲಿತರು, ಹೋರಾಟಗಾರರನ್ನು ನಾಯಿಗಳು ಎಂದು ಹೇಳುತ್ತೀರಿ. ಜನರ ಪ್ರೀತಿಯಿಂದ ಗೆದ್ದ ಮೇಲೆ ಜನರಲ್ಲಿ ವಿಷ ತುಂಬುವ ಕೆಲಸ ಮಾಡುತ್ತಿದ್ದೀರಿ. ಇದನ್ನು ಪ್ರಶ್ನೆ ಮಾಡಿದರೆ ನನ್ನ ತಾಯಿಯ ಜಾತಿ ಯಾಕೆ ಕೇಳುತ್ತೀರಿ ಎಂದು ಪ್ರಶ್ನಿಸಿದರು.

ಇಂದು ಪ್ರಗತಿ ಬಗ್ಗೆ ಮಾತನಾಡುತ್ತಿಲ್ಲ. ರೈತರ ಬಗ್ಗೆ ಮಾತನಾಡುತ್ತಿಲ್ಲ. ಎರಡು ಸಾವಿರ ಕೆಲಸ ಕೊಡುತ್ತೇನೆ ಎಂದವರು ಇನ್ನೂ ಯಾಕೆ ಕೊಟ್ಟಿಲ್ಲ? ಕಪ್ಪು ಹಣ ಎಂದಿರಿ, ಸಾಮಾನ್ಯರು ಲೈನಲ್ಲಿ ನಿಂತಿದ್ದಷ್ಟೆ ಬಂತು. 50 ದಿನಕೊಡಿ, ನಿಮ್ಮ ಖಾತೆಗೆ 15 ಲಕ್ಷ  ಹಾಕುತ್ತೇನೆ ಅಂದಿದ್ದರು. 15 ಪೈಸೆ ಕೂಡ ಬಂದಿಲ್ಲ. 
ಜಿಎಸ್ ಟಿ ಎಂದು ಗಾಂಧಿ ಪೋಟೋ ಜೊತೆ ನಿಲ್ಲುತ್ತೀರಿ. ಆದರೆ ಕೈಮಗ್ಗದ ಮೇಲೂ ಟ್ಯಾಕ್ಸ್ ಹಾಕ್ತಿರ. ಇದು ಯಾವ ದೇಶದ ನ್ಯಾಯ? ಇದನ್ನು ಕೇಳಿದರೆ ನಿಮಗೇನು ಗೊತ್ತು ಎಂದು ಕೇಳುತ್ತಾರೆ. ನಾನು ಸಾಮಾನ್ಯ ಪ್ರಜೆ. ನ್ಯಾಯಕ್ಕಾಗಿ ಪ್ರಶ್ನೆಯನ್ನೇ ಮಾಡಬಾರದು ಎಂದರೆ ಹೇಗೆ ? ಸಾಮಾನ್ಯರಿಗೆ ಅರ್ಥವಾಗುತ್ತಿಲ್ಲ ಎಂದು ಕೇಂದ್ರದ ಆಡಳಿತವನ್ನು ಪ್ರಕಾಶ್ ರೈ ತರಾಟೆಗೆ ತೆಗೆದುಕೊಂಡರು.

ಸಂವಾದದ ಅಧ್ಯಕ್ಷತೆಯನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಎನ್.ರವಿಕುಮಾರ್ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ವೈದ್ಯ, ನಗರ ಕಾರ್ಯದರ್ಶಿ ನಿಂಗನಗೌಡ, ಉಪಾಧ್ಯಕ್ಷ ರವಿ ಬಿದನೂರು ಉಪಸ್ಥಿತರಿದ್ದರು. ಜಗದೀಶ್ ಸಂಪಳ್ಳಿ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಸಂಘದ ವತಿಯಿಂದ ಪ್ರಕಾಶ್ ರೈ ಅವರನ್ನು ಗೌರವಿಸಲಾಯಿತು. 

'ಜನರ ಮಧ್ಯೆ ಇರುತ್ತೇನೆ...'
ಸಿನಿಮಾ ಒಂದು ಮನರಂಜನೆ ಮಾತ್ರ. ನಾವೇನಾಗಿದ್ದೇವೋ ಅದರಂತೆ ಬದುಕಬೇಕು. ಪ್ರಜಾಪ್ರಭುತ್ವದಲ್ಲಿ ಎಲ್ಲರೂ ರಾಜಕೀಯಕ್ಕೆ ಬರಲು ಹಕ್ಕಿದೆ. ಆದರೆ ನೀವು ನಟರು. ಜನಪ್ರಿಯರು ಎಂಬ ಕಾರಣಕ್ಕೆ ಓಟು ಹಾಕಲು ಸಾಧ್ಯವಿಲ್ಲ. ಕೇವಲ ಒಳ್ಳೆಯವರಾಗಿರುವುದರಿಂದ, ಜನಪ್ರಿಯರಾಗಿರುವುದರಿಂದ ಪ್ರಯೋಜನವಿಲ್ಲ. ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತೀರ, ಸಮಸ್ಯೆಗಳಿಗೆ ಸ್ಪಂದಿಸುತ್ತೀರ ಎಂಬುದು ಮುಖ್ಯ. ಇದನ್ನು ನೋಡಿದಾಗ ನಾನು ಜನರ ಮಧ್ಯೆ ಇದ್ದು ಪ್ರಾಮಾಣಿಕವಾಗಿ ಉಳಿಯಲು ಇಷ್ಟಪಡುತ್ತೇನೆ' ಎಂದರು

ಯಾವುದೆ ಸರ್ಕಾರ ಬಂದರೂ ನಾನು ಮತ್ತೆ ಮತ್ತೆ ಪ್ರಶ್ನಿಸುವವನೇ. ಬ್ಯಾಲೆನ್ಸ್ ಮಾಡೋ ಅವಶ್ಯಕತೆ ಇಲ್ಲ. ನೇರವಾಗಿ ದೇಶದ ಜನರಲ್ಲಿ ಪ್ರಜ್ಞೆ ಮೂಡಿಸುವ, ಪ್ರಶ್ನಿಸುವ ಪ್ರವೃತ್ತಿಯನ್ನು ಬೆಳೆಸುವುದು ನನ್ನ ಉದ್ದೇಶ. ಅದಕ್ಕಾಗಿ 'ಜಸ್ಟ್ ಆಸ್ಕಿಂಗ್' ಆಂದೋಲವನ್ನು ಆರಂಭಿಸಿದ್ದೇನೆ. 'ಜಸ್ಟ್ ಆಸ್ಕಿಂಗ್' ಒಂದು ಫೌಂಡೇಷನ್ ಆಗಿದೆ. ಐಎಎಸ್. ಐಆರ್ ಎಸ್, ನಿವೃತ್ತ ನ್ಯಾಯಾಧೀಶರನ್ನೊಳಗೊಂಡಂತೆ ಪ್ರಶ್ನಿಸುವ ಮನೋಭಾವದವರು ಇರುವ ಪಬ್ಲಿಕ್ ವೇದಿಕೆ ಸಿದ್ದವಾಗುತ್ತಿದೆ. ರಂಗಭೂಮಿ ಮೂಲಕ, ರೀಡಿಂಗ್ ಕ್ಲಬ್, ಸೇರಿದಂತೆ ಮೀಡಿಯಾ ಬಳಸಿಕೊಂಡು ಎಲ್ಲಾ ಜಿಲ್ಲೆಗಳಲ್ಲೂ ಪ್ರಶ್ನಿಸುವವರ ವೇದಿಕೆಯೊಂದನ್ನು ಕಟ್ಟಲಾಗುವುದು. ಇದಕ್ಕಾಗಿ ಈಗಾಗಲೆ 200 ಜನ ಕೆಲಸ ಮಾಡುತ್ತಿದ್ದಾರೆ. ಕಾರ್ಮಿಕರ, ವಿದ್ಯಾರ್ಥಿಗಳ, ರೈತರ, ಎಲ್ಲಾ ರೀತಿಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ, ಆಡಳಿತಗಾರರನ್ನು ಪ್ರಶ್ನಿಸುವ ಕೆಲಸ ನಡೆಯಲಿದೆ ಎಂದರು.

Read These Next

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...