ಗೌರಿ ಲಂಕೇಶ್; ಹಂತಕರ ಗುಂಡಿಗೆ ಬಲಿ

Source: sonews | By Staff Correspondent | Published on 6th September 2017, 1:18 AM | State News | National News | Special Report | Don't Miss |

ಬೆಂಗಳೂರು: ಹಿರಿಯ ಪತ್ರಕರ್ತೆ, ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ಅವರ ಮೇಲೆ ಮಂಗಳವಾರ ರಾತ್ರಿ ದುಷ್ಕರ್ಮಿಗಳ ತಂಡ ಗುಂಡಿನ ದಾಳಿ ಮಾಡಿ ಹತ್ಯೆಗೈದಿದ್ದಾರೆ.

ಮಂಗಳವಾರ ರಾತ್ರಿ 8.15ರ ಸುಮಾರಿಗೆ ರಾಜರಾಜೇಶ್ವರಿ ನಗರದ ಗೌರಿ ಲಂಕೇಶ್ ಅವರ ನಿವಾಸದಲ್ಲಿ ಹತ್ಯೆಯಾಗಿದ್ದು, ಮೂವರು ದುಷ್ಕರ್ಮಿಗಳ ತಂಡದಲ್ಲಿ, ಇಬ್ಬರು ಅವರನ್ನು ಹಿಂಬಾಲಿಸಿ ಬಂದರೆ, ಮನೆಯ ಬಳಿ ಮತ್ತೊಬ್ಬ ಕಾಯುತ್ತಿದ್ದು, ಗೌರಿ ಅವರು ಕಾರು ಇಳಿದು ಬಾಗಿಲ ಬಳಿ ಹೋಗುತ್ತಿದ್ದಂತೆ, ಗೌರಿ ಅವರ ಮೇಲೆ ಏಳು ಸುತ್ತು ಗುಂಡು ಹಾರಿಸಿ ಕೊಲೆಗೈದಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಬೈಕ್‌ನಲ್ಲಿದ್ದ ಬಂದಿದ್ದ ದುಷ್ಕರ್ಮಿಗಳು ಗೌರಿ ಲಂಕೇಶ್ ಅವರ ಎದೆ ಭಾಗಕ್ಕೆ ಎರಡು ಗುಂಡು ಸೇರಿ ಹಣೆ ಮತ್ತು ದೇಹಕ್ಕೆ ನಾಲ್ಕು ಗುಂಡು ಹಾರಿಸಿದ್ದಾರೆ. ಮನೆ ಗೋಡೆಗೆ ಮೂರು ಗುಂಡುಗಳು ತಾಕಿವೆ. ಗುಂಡಿನ ದಾಳಿಯಿಂದ ತೀವ್ರಗಾಯಗೊಂಡ ಗೌರಿ ಸ್ಥಳದಲ್ಲಿಯೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಘಟನೆ ಸಂಬಂಧ ಸ್ಥಳಕ್ಕೆ ಧಾವಿಸಿದ ಆರ್‌ಆರ್‌ ನಗರ ಠಾಣೆ ಪೊಲೀಸರು ಗೌರಿ ಲಂಕೇಶ್ ಅವರ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಗಾಗಿ ನಗರದ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.

ಮನೆಯ ಹೊರಗಡೆ ಕೊಲೆ: ರಾತ್ರಿ 7.30ರ ಸುಮಾರಿಗೆ ಬಸವನಗುಡಿಯಲ್ಲಿರುವ ಪತ್ರಿಕೆ ಕಚೇರಿಯಿಂದ ಮನೆಗೆ ಹೊರಟ ಗೌರಿ ಲಂಕೇಶ್, ಆರ್‌ಆರ್ ನಗರದ ನಿವಾಸಕ್ಕೆ ಕಾರಿನಲ್ಲಿ ಬಂದು, ಮನೆಯ ಬಾಗಿಲು ತೆಗೆಯುವ ವೇಳೆ ಏಕಾಏಕಿ ಮೂವರು ದುಷ್ಕರ್ಮಿಗಳು ಪಿಸ್ತೂಲು ತೆಗೆದು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಅನುಚೇತ್ ತಿಳಿಸಿದ್ದಾರೆ.

ಜೀವ ಬೆದರಿಕೆ: ತಿಂಗಳ ಹಿಂದೆ ಜೀವಬೆದರಿಕೆ ಬಗ್ಗೆ ಆಪ್ತರ ಜೊತೆ ಪತ್ರಕರ್ತೆ ಗೌರಿ ಲಂಕೇಶ್ ಅವರು ಹಂಚಿಕೊಂಡಿದ್ದರು ಎನ್ನಲಾಗಿದ್ದು, ನನಗೆ ಯಾರೋ ಕರೆ ಮಾಡಿ ನಿನ್ನನ್ನು ಉಳಿಸಲ್ಲ ಸಾಯಿಸುತ್ತೇವೆ ಅಂತಾ ಹೇಳ್ತಾನೆ ಇದ್ದಾರೆ ಅಂತ ಬೆದರಿಕೆ ಕರೆ ಬಗ್ಗೆ ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್ ಅವರೊಂದಿಗೆ ಹಂಚಿಕೊಂಡಿದ್ದರು ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಸಚಿವರ ಭೇಟಿ: ಘಟನೆ ನಡೆದ ರಾಜರಾಜೇಶ್ವರಿನಗರದ ಗೌರಿ ಲಂಕೇಶ್ ಅವರ ನಿವಾಸಕ್ಕೆ ಗೃಹ ಸಚಿವ ರಾಮಲಿಂಗಾರೆಡ್ಡಿ, ನಗರ ಪೊಲೀಸ್ ಆಯುಕ್ತ ಟಿ.ಸುನೀಲ್‌ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿ ತಂಡ ಭೇಟಿ ನೀಡಿ, ಗೌರಿ ಲಂಕೇಶ್ ಅವರ ಮನೆಯನ್ನು ತಪಾಸಣೆ ನಡೆಸಿದರು. ಬಳಿಕ ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದರು.

ಸೆ.6 ರಂದು ಮರಣೋತ್ತರ ಪರೀಕ್ಷೆ: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಪಾರ್ಥಿವ ಶರೀರದ ಮರಣೋತ್ತರ ಪರೀಕ್ಷೆ ಸೆ.6 ಬುಧವಾರ ನಡೆಯಲಿದೆ ಎಂದು ನಗರದ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಕೀಯ ಮೂಲಗಳು ತಿಳಿಸಿವೆ.

ತನಿಖೆಗೆ ಮೂರು ತಂಡ ರಚನೆ: ಗೌರಿ ಲಂಕೇಶ್ ಹತ್ಯೆಯಾಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ನಗರ ಪೊಲೀಸ್ ಕಮಿಷನರ್ ಸುನೀಲ್ ಕುಮಾರ್, ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಘಟನೆಯು ಪಕ್ಕದ ಮನೆಯವರಿಗೆ ಪೊಲೀಸರಿಗೆ ತಿಳಿದಿದ್ದು, ತಕ್ಷಣ ಧಾವಿಸಿದ ಪೊಲೀಸರಿಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೃತದೇಹ, ಸುತ್ತ ನಾಲ್ಕು ಗುಂಡುಗಳು ಸಿಕ್ಕಿವೆ. ತನಿಖೆಗಾಗಿ ಪೊಲೀಸ್ ಅಧಿಕಾರಿಗಳ ಮೂರು ತಂಡವನ್ನು ರಚಿಸಲಾಗಿದ್ದು, ಸ್ಥಳಕ್ಕೆ ಬೆರಳಚ್ಚು ತಜ್ಞರು ಆಗಮಿಸಿದ್ದಾರೆ. ಮನೆಯಲ್ಲಿ ಸಿಸಿ ಟಿವಿ ಕ್ಯಾಮರಾವಿದ್ದು, ಅದನ್ನು ತನಿಖೆಯ ವೇಳೆ ಪರಿಶೀಲಿಸಲಾಗುವುದು ಎಂದು ಹೇಳಿದರು.

ವಿಚಾರವಾದಿ, ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ದುಃಖ ತಂದಿದೆ. ಕೊಲೆಗಡುಕರನ್ನು ತೀವ್ರಗತಿಯಲ್ಲಿ ಪತ್ತೆ ಹಚ್ಚಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆರೋಪಿಗಳ ಪತ್ತೆಗೆ ಮೂರು ತಂಡಗಳನ್ನು ಪೊಲೀಸ್ ಇಲಾಖೆ ರಚಿಸಲಾಗಿದೆ. ಪೊಲೀಸರಿಂದ ಪ್ರಥಮ ವರದಿ ಬಂದ ಬಳಿಕ ಸೂಕ್ತ ತನಿಖೆ ನಡೆಸಲು ಸೂಚಿಸಲಾಗುವುದು. ಎಂ.ಎಂ. ಕಲಬುರ್ಗಿ ಮತ್ತು ಗೌರಿ ಲಂಕೇಶ್ ಅವರ ಹತ್ಯೆದಲ್ಲಿ ಸಾಮ್ಯತೆ ಇದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ.
-ಸಿದ್ದರಾಮಯ್ಯ, ಮುಖ್ಯಮಂತ್ರಿ

  ಗೌರಿ ಲಂಕೇಶ್ ಅವರ ಹತ್ಯೆ ಅಪಾರ ನೋವು ತಂದಿದೆ. ಪೈಶಾಚಿಕ, ವಿಕೃತ ಮನಸ್ಸಿನ ಘೋರ ಕೃತ್ಯ. ಅಪರೂಪದ ಮಹಿಳಾ ಹೋರಾಟಗಾರ್ತಿಯನ್ನು ಕೊಲೆಗೈದವರಿಗೆ ಉಗ್ರ ಶಿಕ್ಷೆ ಆಗಬೇಕು.
-ಉಮಾಶ್ರೀ, ಕನ್ನಡ ಮತ್ತು ಸಂಸ್ಕೃತಿ ಸಚಿವೆ
 

ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಲಾದ ಸುದ್ದಿ ಕೇಳಿ ತೀವ ಆಘಾತ ತಂದಿದೆ. ಇದು ಒಪ್ಪಲಾದಂತಹ ನೀಚ, ಖಂಡನೀಯ ಹೇಯಕೃತ್ಯ. ಕೂಡಲೆ ಹಂತಕರನ್ನು ಬಂಧಿಸಲು ಸರಕಾರ ಎಲ್ಲ ಪ್ರಯತ್ನಗಳನ್ನು ಮಾಡಬೇಕು.
-ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

 ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಹತ್ಯೆ ಖಂಡನೀಯ. ಸೈದ್ಧಾಂತಿಕ ಆಧಾರದ ಮೇಲೆ ಅಥವಾ ವೈಯಕ್ತಿಕ ಕಾರಣಗಳಿಂದ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿರಬಹುದು. ಈ ಹಿಂದೆ ಯಾವುದೇ ಬೆದರಿಕೆಗಳು ಬಂದಿರಲಿಲ್ಲ ಎಂಬ ಮಾಹಿತಿ ಇದೆ. ತನಿಖೆ ಬಳಿಕ ಸತ್ಯಾಸತ್ಯತೆ ಹೊರಬೀಳಲಿದೆ.
-ರಾಮಲಿಂಗಾರೆಡ್ಡಿ, ಗೃಹಸಚಿವ
 

ಸಾಹಿತಿ ಕಲಬುರ್ಗಿ ಹತ್ಯೆ ನಡೆದು ಎರಡು ವರ್ಷಗಳಲ್ಲಿ ಮತ್ತೊಂದು ಸಂಗಾತಿಯನ್ನು ಕಳೆದುಕೊಂಡಿದ್ದೇವೆ. ಗೌರಿ ಲಂಕೇಶ್ ಕಣ್ಣಮುಂದೆ ಬೆಳದ ಮಗಳು. ಇದು ವೈಚಾರಿಕತೆಯ ಹಿನ್ನೆಲೆಯಲ್ಲಿ ನಡೆದಿರುವ ಹತ್ಯೆ ಎಂದು ಯಾರಾದರೂ ಊಹೆ ಮಾಡಬಹುದು.-ಚಂದ್ರಶೇಖರ್ ಪಾಟೀಲ್, ಚಿಂತಕ

ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಪ್ರಜಾಪ್ರಭುತ್ವದ ಹತ್ಯೆಯಾಗಿದ್ದು, ಈ ಹತ್ಯೆಯನ್ನು ಮೂಲಭೂತವಾದಿಗಳು ಮಾಡಿದ್ದಾರೆ. ಇದರಿಂದ, ಕರ್ನಾಟಕವೇ ಬೆಚ್ಚಿ ಬೀಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ, ತಪ್ಪಿತಸ್ಥರನ್ನು ಬಂಧಿಸಿ ಶಿಕ್ಷಿಸುವ ಕೆಲಸವಾಗಬೇಕು.

-ಕೆ.ಎಲ್.ಅಶೋಕ್  , ಪ್ರಧಾನ ಕಾರ್ಯದರ್ಶಿ, ಕೋಮು ಸೌಹಾರ್ದ ವೇದಿಕೆ

ಪತ್ರಕರ್ತೆ ಗೌರಿ ಲಂಕೇಶ್ ಅವರು ಸಮಾನತೆಗಾಗಿ ಹೋರಾಡಿದವರು. ಆದರೆ, ಕೋಮುವಾದಿಗಳು ಈ ಹತ್ಯೆಯನ್ನು      ಮಾಡಿದ್ದು, ಕರ್ನಾಟಕ ಸರಕಾರ ಈ ದುಷ್ಕರ್ಮಿಗಳನ್ನು ಬಂಧಿಸಲು ಕ್ರಮ ಕೈಗೊಳ್ಳಬೇಕು. ಎಂ.ಎಂ.ಕಲಬುರ್ಗಿ ಅವರ    ಹತ್ಯೆಯಂತೆಯೇ ಈ ಹತ್ಯೆಯೂ ನಡೆದಿದ್ದು, ಈ ಹತ್ಯೆಯನ್ನು ಪ್ರತಿಯೊಬ್ಬರೂ ಖಂಡಿಸಬೇಕು.

   -ಕೆ.ನೀಲಾ , ಹೋರಾಟಗಾರ್ತಿಗೌರಿ ಲಂಕೇಶ್ ಅವರನ್ನು ಫ್ಯಾಶಿಸ್ಟ್ ಶಕ್ತಿಗಳು ಹತ್ಯೆ ಮಾಡಿದ್ದು, ಫ್ಯಾಶಿಸ್ಟ್‌ಗಳು, ಕೋಮುವಾದಿಗಳು ಈ ದೇಶವನ್ನು ನರಕ ಮಾಡುತ್ತಿದ್ದಾರೆ. ಈ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ, ವೈಚಾರಿಕತೆಗೆ ಬೆಲೆ ಇಲ್ಲದಂತಾಗಿದೆ. ಅಲ್ಲದೆ, ಹೆಣ್ಣು ಮಗಳನ್ನು ಹತ್ಯೆಮಾಡಿರುವುದನ್ನು ಖಂಡಿಸುತ್ತೇನೆ.-ಎಸ್.ಜಿ.ಸಿದ್ದರಾಮಯ್ಯ, ಹಿರಿಯ ಸಾಹಿತಿ

 ಗೌರಿ ಲಂಕೇಶ್ ಅವರು ಪ್ರಾಮಾಣಿಕ ದಿಟ್ಟ ಪತ್ರಕರ್ತೆಯಾಗಿದ್ದರು. ಆದರೆ, ಇವರ ವೈಚಾರಿಕ ಬರಹ, ಚಿಂತನೆಗಳನ್ನು ಒಪ್ಪದ ಕೋಮುವಾದಿಗಳು ಇವರನ್ನು ಹತ್ಯೆಗೈದಿದ್ದಾರೆ. ಅಲ್ಲದೆ, ದುಷ್ಕರ್ಮಿಗಳು ನನ್ನನ್ನು ಕೂಡ ಹತ್ಯೆ ಮಾಡಲು ಯತ್ನಿಸಿದ ಬಳಿಕ ನಾನು ಪೊಲೀಸರ ಭದ್ರತೆಯನ್ನು ಪಡೆದಿದ್ದೆ. ಆದರೆ, ತಮಗಿಂತಲೂ ಚಿಕ್ಕವರಾದ ಗೌರಿ ಅವರನ್ನು ಹತ್ಯೆಗೈದಿರುವುದನ್ನು ತಾವು ಖಂಡಿಸುತ್ತೇವೆ.
-ನರೇಂದ್ರ ನಾಯಕ್ , ವಿಚಾರವಾದಿ

'ಪ್ರೀತಿಯ ಅಮ್ಮ' ನನ್ನ ಕಳಕೊಂಡ ಸಾಮಾಜಿಕ ಚಳವಳಿಗಳು, ಕಾರ್ಯಕರ್ತರು !

ಬೆಂಗಳೂರು, ಸೆ. 5: ಮಂಗಳವಾರ ದುಷ್ಕರ್ಮಿಗಳ ಗುಂಡಿನ ದಾಳಿಗೆ ಬಲಿಯಾದ ಪತ್ರಕರ್ತೆ ಗೌರಿ ಲಂಕೇಶ್ ತಮ್ಮ ತಂದೆ ದಿವಂಗತ ಲಂಕೇಶರ ಪರಂಪರೆಯನ್ನು ಸಮರ್ಥವಾಗಿ ಮುನ್ನಡೆಸಿದ್ದು ಮಾತ್ರವಲ್ಲದೆ ನಿರ್ಭೀತ ಪತ್ರಕರ್ತೆ ಹಾಗೂ ಸಕ್ರಿಯ ಸಾಮಾಜಿಕ ಕಾರ್ಯಕರ್ತೆಯಾಗಿ ರಾಜಿಯಿಲ್ಲದೆ ಕರ್ತವ್ಯ ನಿರ್ವಹಿಸುತ್ತಲೇ ಇಹಲೋಕದಿಂದ ನಿರ್ಗಮಿಸಿದ್ದಾರೆ.

ಈ ಮೂಲಕ ಪತ್ರಿಕೋದ್ಯಮದಲ್ಲಿ ಲಂಕೇಶರು ಸಾಧಿಸಿದ್ದ ಜನಪ್ರಿಯತೆಯನ್ನು ಮೀರಿದ ಸಾಮಾಜಿಕ ಆಂದೋಲನಗಳ ನಾಯಕಿ ಹಾಗೂ ಅಸಂಖ್ಯಾತ ಯುವ ಕಾರ್ಯಕರ್ತರ ಪ್ರೀತಿಯ ಅಮ್ಮನಾಗಿ ಬೆಳೆಯುವ ಮೂಲಕ ಲಂಕೇಶರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ.

2000 ಇಸವಿಯಲ್ಲಿ ಲಂಕೇಶ್ ನಿಧನರಾದರು. ಅಲ್ಲಿಯವರೆಗೆ ರಾಷ್ಟ್ರ ಮಟ್ಟದಲ್ಲಿ ಇಂಗ್ಲಿಷ್ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡಿದ್ದ ಗೌರಿ ಅದನ್ನು ಸಂಪೂರ್ಣವಾಗಿ ಬಿಟ್ಟು ಬಂದು ಲಂಕೇಶ್ ಪತ್ರಿಕೆಯ ಸಾರಥ್ಯ ವಹಿಸಿಕೊಂಡರು. ಆಕೆ ಮೊದಲ ವಿರೋಧ ಎದುರಿಸಿದ್ದು ತಮ್ಮ ಪ್ರೀತಿಯ ಸೋದರನಿಂದಲೇ. ತಮ್ಮ ಇಂದ್ರಜಿತ್ ಲಂಕೇಶ್, ಲಂಕೇಶ್ ಪತ್ರಿಕೆಯ ಮೇಲೆ ಹಕ್ಕು ಸಾಧಿಸಿದಾಗ ತಮ್ಮ ನಿಲುವಿನೊಂದಿಗೆ ರಾಜಿ ಮಾಡಿಕೊಳ್ಳಲು ಒಪ್ಪದ ಗೌರಿ ಆ ಪತ್ರಿಕೆಯನ್ನು ತಮ್ಮನಿಗೆ ಬಿಟ್ಟು 'ಗೌರಿ ಲಂಕೇಶ್' ಹೆಸರಿನಲ್ಲಿ ಹೊಸ ಪತ್ರಿಕೆಯನ್ನು ಪ್ರಾರಂಭಿಸಿದರು.

ಲಂಕೇಶರು ತಮ್ಮ ನೇರ, ನಿಷ್ಠುರ ಅಭಿಪ್ರಾಯ, ಬರಹಗಳು ಹಾಗೂ ಪತ್ರಿಕೆಯಲ್ಲಿ ಪ್ರಕಟಿಸುವ ಕೆಣಕುವ ವರದಿಗಳಿಂದ ರಾಜ್ಯಾದ್ಯಂತ ಹೆಸರು ಗಳಿಸಿದವರು. ಆದರೆ ಗೌರಿ ಕೇವಲ ಪತ್ರಿಕಾ ಮಾಧ್ಯಮಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಳ್ಳಲಿಲ್ಲ. 'ಗೌರಿ ಲಂಕೇಶ್' ಮೂಲಕ ಕೋಮುವಾದಿಗಳು ಹಾಗೂ ಭ್ರಷ್ಟರಿಗೆ ಚಾಟಿ ಬೀಸಿದರು. ಆದರೆ ಅದರ ಜೊತೆ ಜೊತೆಗೆ ಸಕ್ರಿಯವಾಗಿ ಸಾಮಾಜಿಕ ಆಂದೋಲನಗಳಲ್ಲಿ ಕಾರ್ಯಕರ್ತೆಯಾಗಿ, ನಾಯಕಿಯಾಗಿ ಗುರುತಿಸಿಕೊಂಡರು.

ತಾವು ದೃಢವಾಗಿ ನಂಬಿ, ಪಾಲಿಸುವ ಜಾತ್ಯತೀತ ತತ್ವಗಳಿಗೆ ಧಕ್ಕೆ ಬಂದಾಗ ಯಾವುದೇ ಮುಲಾಜಿಲ್ಲದೆ ಅದನ್ನು ಕಟು ಶಬ್ದಗಳಲ್ಲಿ ಖಂಡಿಸುವ ಜೊತೆಗೆ ಬೀದಿಗಿಳಿದು ಅದನ್ನು ವಿರೋಧಿಸುತ್ತಿದ್ದರು. ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಮೂಲಕ ರಾಜ್ಯಾದ್ಯಂತ ವಿವಿಧ ವಿಷಯಗಳಲ್ಲಿ ಪ್ರತಿಭಟನೆ, ಧರಣಿ, ಆಂದೋಲನ, ಅಭಿಯಾನಗಳಲ್ಲಿ ಅವರು ಸದಾ ಮುಂಚೂಣಿಯಲ್ಲಿರುತ್ತಿದ್ದರು. 

ಕೇಂದ್ರದ ನರೇಂದ್ರ ಮೋದಿ ಸರ್ಕಾರದ ನೀತಿಗಳನ್ನು ಅತ್ಯಂತ ಕಟುವಾಗಿ ಟೀಕಿಸುತ್ತಿದ್ದ ಗೌರಿ, ಬಿಜೆಪಿ ಹಾಗೂ ಸಂಘ ಪರಿವಾರಗಳ ಅತ್ಯಂತ ಪ್ರಬಲ ಟೀಕಾಕಾರರಾಗಿದ್ದರು. ಅವುಗಳನ್ನು ವಿರೋಧಿಸುವ ಯಾವುದೇ ಪ್ರಜಾಸತ್ತಾತ್ಮಕ  ವ್ಯಕ್ತಿ ಅಥವಾ ಸಂಘಟನೆಯನ್ನು ಗೌರಿ ಬೆಂಬಲಿಸುತ್ತಿದ್ದರು. ಅದಕ್ಕಾಗಿಯೇ ಜೆ ಎನ್ ಯು ವಿವಾದದಲ್ಲಿ ಸುದ್ದಿಯಾದ ಕನ್ಹಯ್ಯಾ  ಕುಮಾರ್ ಹಾಗೂ ಉಮರ್ ಖಾಲಿದ್ ಮತ್ತು ಗುಜರಾತ್ ದಲಿತ ಚಳವಳಿಯ ನಾಯಕ ಜಿಗ್ನೇಶ್ ಮೇವಾನಿಯವರನ್ನು ತನ್ನ 'ಪುತ್ರರು' ಎಂದೇ ಘೋಷಿಸಿ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಈ ಮೂವರು ಯುವನಾಯಕರ ಜೊತೆ ಅವರು ಆಪ್ತ ಒಡನಾಟವನ್ನು ಹೊಂದಿದ್ದು ಅವರ ಚಳವಳಿಗಳ ಕುರಿತು ಸದಾ ಮೆಚ್ಚುಗೆಯ ಮಾತುಗಳನ್ನಾಡಿ, ಅವರಿಗೆ ಉಡುಗೊರೆಗಳನ್ನು ನೀಡಿ ಸಂಭ್ರಮಿಸುತ್ತಿದ್ದರು.

ಅವರು ದೇಶದ ಭವಿಷ್ಯ ಎಂದು ಆಗಾಗ ಹೇಳುತ್ತಿದ್ದರು. ಅವರು ಮಾತ್ರವಲ್ಲದೆ ರಾಜ್ಯದಲ್ಲೂ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಯುವಜನರಿಗೆ "ನೀವು ನನ್ನ ಮಕ್ಕಳು" ಎಂದೇ ಕರೆದು ಪ್ರೋತ್ಸಾಹಿಸುತ್ತಿದ್ದರು. 

ಬೆಂಗಳೂರಿನ ವಿಜಯ ಹೈ ಸ್ಕೂಲ್ ಹಾಗೂ ಸೆಂಟ್ರಲ್ ಕಾಲೇಜುಗಳಲ್ಲಿ ಅಧ್ಯಯನ ಮಾಡಿರುವ ಗೌರಿ ವಿದೇಶದಲ್ಲಿ ಪತ್ರಿಕೋದ್ಯಮ ತರಬೇತಿ ಪಡೆದಿದ್ದರು. ಇಂಗ್ಲಿಷ್ ಪತ್ರಿಕೋದ್ಯಮದಲ್ಲಿ ಉನ್ನತ ಸ್ಥಾನ ತಲುಪಬಹುದಾಗಿದ್ದ ಗೌರಿ ತಮ್ಮ ತಂದೆಯ ನಿಧನದ ಬಳಿಕ ಅದನ್ನು ಬಿಟ್ಟು ಕನ್ನಡ ಪತ್ರಿಕೋದ್ಯಮ ಪ್ರವೇಶಿಸಿ ಲಂಕೇಶ್ ಪತ್ರಿಕೆಯನ್ನು ಮುನ್ನಡೆಸಿದರು.

ಅವರು ಕೆಲವು ನಕ್ಸಲ್ ನಾಯಕರನ್ನು ಮುಖ್ಯವಾಹಿನಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಗೌರಿ ಲಕೇಶ್ ಕೊಲೆ: ಎಸ್ಐಒಪ್ರತಿಭಟನೆ

ಮಂಗಳೂರು, ಸೆ. 5: ಪ್ರಗತಿಪರ ಚಿಂತಕಿ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯನ್ನು ಖಂಡಿಸಿ ಎಸ್ ಐ ಒ ದ.ಕ. ಜಿಲ್ಲಾ ಘಟಕವು ಇಂದು ರಾತ್ರಿ ದ.ಕ. ಜಿಲ್ಲಾ ಕಚೇರಿ ಮುಂದೆ ಮುಂಬತ್ತಿ ಉರಿಸಿ ಪ್ರತಿಭಟನೆ ನಡೆಸಿತು. 

ಪ್ರಗತಿಪರ ಚಿಂತಕ, ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಹಾಗೂ ನ್ಯಾಯವಾದಿ ನೌಶಾದ್ ಕಾಸಿಮ್ ಜಿ ಹತ್ಯೆಯ ಮಾದರಿಯಲ್ಲೇ ಈ ಕೃತ್ಯವು ನಡೆದಿದ್ದು, ಈ ದುರ್ಘಟನೆಯಿಂದ ಫ್ಯಾಸಿಸ್ಟ್ ಶಕ್ತಿಗಳಿಗೆ ವಿರುದ್ಧವಾಗಿರುವ ಚಿಂತಕರನ್ನು ಗುರಿಯಾಗಿಸಿರುವುದು ಸ್ಪಷ್ಟವಾಗಿದೆ. ಇದು ಮಾನವೀಯತೆಯ ಮೇಲೆ ನಡೆದ ದಾಳಿಯಾಗಿದೆ. ಫಾಸಿಸ್ಟ್ ಶಕ್ತಿಗಳಿಗೆ ವಿರುದ್ಧವಾಗಿರುವವರನ್ನು ದಮನಿಸುವ ಹುನ್ನಾರವಾಗಿ ಎಂದು ಎಸ್ ಐ ಒ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ತಲ್ಹಾ ಇಸ್ಮಾಯಿಲ್ ತಿಳಿಸಿದರು.

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ...

ಲೋಕಸಭಾ ಚುನಾವಣೆ; ಕಾಂಗ್ರೇಸ್ ನ ಎರಡನೇ ಪಟ್ಟಿ ಬಿಡುಗಡೆ; ಉ.ಕ ಕ್ಷೇತ್ರಕ್ಕೆ ಅಂಜಲಿ ನಿಂಬಾಳ್ಕರ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕದ 17, ಅರುಣಾಚಲ ...

ಸಿಎಎ ನಿಯಮಾವಳಿಗಳಿಗೆ ತಡೆ ಕೋರುವ ಅರ್ಜಿಗಳ ವಿಚಾರಣೆ ; ಸು.ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...