ದಾಂಡೇಲಿ ಹೋರಾಟ ಸಮಿತಿಯ ಅಧ್ಯಕ್ಷ ಹಾಗೂ ಹಿರಿಯ ವಕೀಲ ಅಜೀತ ನಾಯಕ ಬರ್ಬರ ಕೊಲೆ

Source: S O News service | By I.G. Bhatkali | Published on 27th July 2018, 11:56 PM | Coastal News |

ದಾಂಡೇಲಿ : ನಗರದ ಹಿರಿಯ ವಕೀಲ, ವಕೀಲರ ಸಂಘದ ಅಧ್ಯಕ್ಷ, ದಾಂಡೇಲಿ ತಾಲೂಕು ರಚನಾ ಹೋರಾಟ ಸಮಿತಿಯ ಅಧ್ಯಕ್ಷರು ಹಾಗೂ ಮಾಜಿ ನಗರ ಸಭಾ ಅಧ್ಯಕ್ಷರು ಆಗಿದ್ದ ಅಜೀತ ನಾಯಕರವರು (ವ:57) ಶುಕ್ರವಾರ ರಾತ್ರಿ 9.15 ಗಂಟೆ ಸುಮಾರಿಗೆ ಬರ್ಬರ ಕೊಲೆಗೀಡದ ಘಟನೆ ನಗರದಲ್ಲಿ ನಡೆದಿದೆ. 

ವಕೀಲ ಅಜೀತ ನಾಯಕರವರು ತನ್ನ ಕಚೇರಿಯಿಂದ ಕೆಲಸ ಮುಗಿಸಿ ಮನೆಗೆ ಮರಳಲು ಕಾರು ಹತ್ತುವ ಮುಂಚೆಯೆ ಮುಸುಕುದಾರಿ ದುಷ್ಕರ್ಮಿಯೊಬ್ಬ ತಲವಾರಿನಿಂತ ಮಾರಣಾಂತಿಕವಾಗಿ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ತಲೆಯ ಎಡ ಭಾಗಕ್ಕೆ ಕಿವಿ ಸೇರಿ ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಜೀತ ನಾಯಕರವರನ್ನು ತಕ್ಷಣವೆ ಸ್ಥಳೀಯರು ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿದರಾದರೂ ಯಾವುದೇ ಪರಿಣಾಮವಾಗಿಲ್ಲ. ಮೂಲಗಳ ಪ್ರಕಾರ ಹೊಡೆತದ ರಭಸಕ್ಕೆ ಸ್ಥಳದಲ್ಲೆ ಸಾವನ್ನಪ್ಪಿರಬಹುದೆಂದು ಅಂದಾಜಿಲಾಗುತ್ತಿದೆ.

ಅಜೀತ ನಾಯಕ ಈ ಹಿಂದೆ ಸಂಸದರಾಗಿದ್ದ ಮಾರ್ಗರೇಟ್ ಆಳ್ವಾ ಮತ್ತು ಮಾಜಿ ಮುಖ್ಯಮಂತ್ರಿ ದಿ.ಎಸ್.ಬಂಗಾರಪ್ಪನವರ ಪ್ರೀತಿಯ ಶಿಷ್ಯರಾಗಿ ಅಂದು ಗಮನ ಸೆಳೆದಿದ್ದ ಅವರು ಅನೇಕ ವರ್ಷಗಳ ಕಾಲ ದಾಂಡೇಲಿ ಬ್ಲಾಕ್ ಕಾಂಗ್ರೆಸ್ಸಿನ ಅಧ್ಯಕ್ಷರಾಗಿದ್ದರು.2007ನೇ ಸಾಲಿನಲ್ಲಿ ದಾಂಡೇಲಿ ಬಚಾವೋ ಸಮಿತಿಯ ಮೂಲಕ ದಾಂಡೇಲಿ ತಾಲೂಕು ರಚನೆಗಾಗಿ ಅಮೂಲಾಗ್ರ ಹೋರಾಟವನ್ನು ನಡೆಸಿ ರಾಜ್ಯ ಮಟ್ಟದ ನಾಯಕರನ್ನು ಕರೆಸಿ ಸಂಚಲನ ಮೂಡಿಸಿದ್ದ ಅವರು, ನಗರಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.ಬಳಿಕ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಪರಾಭವಗೊಂಡಿದ್ದರು. ಅವರಿಗೆ ಪತ್ನಿ ಭಾರತಿ ಮತ್ತು ಇಬ್ಬರು ಪುತ್ರರಿದ್ದಾರೆ‌.

ಅಜೀತ ನಾಯಕರವರ ಭೀಕರ ಕೊಲೆಯೆ ಸುದ್ದಿ ನಗರದಲ್ಲಿ ಕಾಡ್ಗಿಚ್ಚಿನಂತೆ ಹರಡಿ, ನಗರದ ಜನತೆ ತಂಡೊಪತಂಡವಾಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಮಾವಣೆಗೊಂಡು ಕಣ್ಣೀರುಡುತ್ತಿದ್ದ ದೃಶ್ಯ ಮನಕಲುಕುವಂತಿತ್ತು. 

ಆಸ್ಪತ್ರೆಗೆ ಪೊಲೀಸ್ ಡಿವೈಎಸ್ಪಿ ಮೋಹನ ಪ್ರಸಾದ, ಸಿಪಿಐ ಅನೀಶ ಮುಜಾವರ, ಪಿಎಸೈ ಉಲ್ಲಾಸ ಪರಮಾರ ಅವರು ಭೇಟಿ ನೀಡಿ, ಮುಂದಿನ ತನಿಖೆ ಕೈಗೊಂಡಿದ್ದಾರೆ.

ನಗರದ ಇತಿಹಾಸದಲ್ಲೆ ಬರ್ಬರ ಕೊಲೆಯಾಗಿರುವ ಮೊದಲ ಘಟನೆ ಇದಾಗಿದ್ದು, ಆರೋಪಿಯನ್ನು ಹಿಡಿದು ಬಂಧಿಸದಿದ್ದಲ್ಲಿ ಉಗ್ರ ಹೋರಾಟ ನಡೆಯುವ ಸಾಧ್ಯತೆಯಿದೆ. ನಗರದಲ್ಲಿ ಪ್ರಸಕ್ತ ಬಿಗುವಿನ ವಾತವರಣವಿದೆ.

Read These Next