ನಿಜಕ್ಕೂ ಸಾದಿಯಾ ಯಾರು?

Source: sonews | By Staff Correspondent | Published on 9th February 2018, 5:32 PM | State News | National News | Special Report | Guest Editorial | Don't Miss |

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. 4ರಂದು ಸದ್ದಿಲ್ಲದೇ ಬಿಡುಗಡೆಗೊಳಿಸಿದ್ದಾರೆ ಮತ್ತು ಪೋಷಕರಿಗೆ ಕೈಯಾರೆ ಒಪ್ಪಿಸಿದ್ದಾರೆ. ಜನವರಿ 24 ಮತ್ತು 25ರ ನಡುವೆ ಬಹುತೇಕ ಎಲ್ಲ ಸುದ್ದಿ ಮಾಧ್ಯಮಗಳು ಸಾದಿಯಾ ಅನ್ವರ್ ಶೇಖ್ ಎಂಬ ಈ 18ರ ಹರೆಯದ ಯುವತಿಯ ಬಗ್ಗೆ ಬ್ರೇಕಿಂಗ್ ನ್ಯೂಸ್ ಪ್ರಕಟಿಸಿದ್ದವು. ‘ಗಣರಾಜೋತ್ಸವ ಪೆರೇಡ್ ಮೇಲೆ ಸಿಡಿಯಲಿದ್ದ ಶಂಕಿತ ಆತ್ಮಹತ್ಯಾ ಬಾಂಬರ್ ಬಂಧನ’ ಎಂಬ ರೀತಿಯ ಶೀರ್ಷಿಕೆಯಲ್ಲಿ ಹೆಚ್ಚಿನ ಇಂಗ್ಲಿಷ್ ಪತ್ರಿಕೆಗಳು ಸುದ್ದಿಗೆ ಭಾರೀ ಮಹತ್ವ ಕೊಟ್ಟು ಮುದ್ರಿಸಿದ್ದುವು. ಡಿಎನ್‍ಎ ಪತ್ರಿಕೆಯಂತೂ ‘How a convent educated girl from Pune became a Suicide bomber idolizing Burhan Wani’ (ಬುರ್‍ಹಾನ್ ವಾನಿಯನ್ನು ಆರಾಧಿಸುತ್ತಿದ್ದ ಕಾನ್ವೆಂಟ್ ಶಿಕ್ಷಿತ ಯುವತಿ ಹೇಗೆ ಆತ್ಮಹತ್ಯಾ ಬಾಂಬರ್ ಆದಳು) ಎಂಬ ಆಕರ್ಷಕ ಶೀರ್ಷಿಕೆಯಲ್ಲಿ ಜನವರಿ 26ರಂದು ವಿಶೇಷ ವರದಿಯನ್ನೇ ಪ್ರಕಟಿಸಿತ್ತು. ಸಾದಿಯಾಳನ್ನು ಬಿಡುಗಡೆಗೊಳಿಸಲಾದ ಈ ಹೊತ್ತಿನಲ್ಲಿ ಮತ್ತೊಮ್ಮೆ ಆ ವರದಿಯನ್ನು ಓದುವಾಗ ನಗು ಬರುತ್ತದೆ. ಕಲ್ಪಿತ ಕತೆಗಳು, ವದಂತಿಗಳು ಮತ್ತು ಪುರಾವೆ ರಹಿತ ಮಾಹಿತಿಗಳ ಆಧಾರದಲ್ಲಿ ಮಾಡಲಾಗುವ ವರದಿಗಳು ಹೇಗೆ ಆತ್ಮಹತ್ಯಾ ಬಾಂಬರ್ ಗಿಂತಲೂ ಅಪಾಯಕಾರಿ ಅನ್ನುವುದನ್ನು ಮತ್ತೆ ಮತ್ತೆ ಅದು ಸ್ಪಷ್ಟಪಡಿಸುತ್ತದೆ. ಆಕೆ ಸಿರಿಯಕ್ಕೆ ಪ್ರಯಾಣಿಸಲು ತಯಾರಿ ನಡೆಸಿದ್ದಳು ಎಂದು ಒಂದು ಪತ್ರಿಕೆ ಬರೆದರೆ, ಇನ್ನೊಂದು, ಐಸಿಸ್‍ಗೆ ಸೇರ್ಪಡೆಗೊಳಿಸುವ ಜಾಲದೊಂದಿಗೆ ಆಕೆ ಸಂಪರ್ಕದಲ್ಲಿದ್ದಳು ಎಂದು ಬರೆಯಿತು. ಆಕೆಯನ್ನು ಮೂಲಭೂತವಾದಿ ಎನ್ನಲಾಯಿತು. ತನ್ನ ಪ್ರಿಯಕರನ ಜೊತೆ ಇದ್ದಾಗಲೇ ಪೊಲೀಸರು ಆಕೆಯನ್ನು ಬಂಧಿಸಿದರು ಎಂದೂ ಹೇಳಲಾಯಿತು.
ಸಾದಿಯಾ ಮಹಾರಾಷ್ಟ್ರದ ಪುಣೆ ಮೂಲದವಳು. ಜನವರಿ 16ರಂದು ಆಕೆ ಶ್ರೀನಗರಕ್ಕೆ ಬಂದಿಳಿದಳು, ಫೇಸ್‍ಬುಕ್ ನಲ್ಲಿ ಪರಿಚಯವಾದ ಶ್ರೀನಗರದ ಲಾಲ್ ಬಝಾರ್ ನಲ್ಲಿರುವ ಯುವಕನನ್ನು ಭೇಟಿಯಾಗುವುದು ಆಕೆಯ ಉದ್ದೇಶವಾಗಿತ್ತು ಎಂದೆಲ್ಲಾ ಹೇಳಲಾಗುತ್ತದೆ. ಶ್ರೀನಗರದ ಬಿಜ್‍ಬೇರಾದಲ್ಲಿ ಆಕೆ ಉಳಿದುಕೊಂಡಿದ್ದಳು. ಆದರೆ ಪೊಲೀಸರು ಹುಡುಕುತ್ತಿರುವ ಸುದ್ದಿಯನ್ನು ಸ್ಥಳೀಯ ಪತ್ರಿಕೆಗಳಲ್ಲಿ ಓದಿ ಸ್ವತಃ ಅವಂತಿಪುರ ಠಾಣೆಯನ್ನು ಆಕೆ ಸಂಪರ್ಕಿಸಿದಳು ಎಂದೂ ಹೇಳಲಾಗುತ್ತದೆ. ಆದರೆ, ಇದೀಗ ಗುಪ್ತಚರ ಮಾಹಿತಿಯನ್ನು ಅರ್ಥೈಸುವಲ್ಲಿ ಕಾಶ್ಮೀರ ಪೊಲೀಸರಿಂದ ಆದ ಎಡವಟ್ಟೇ ಇವೆಲ್ಲಕ್ಕೂ ಕಾರಣ ಎಂದು ಮುಖ್ಯ ವಾಹಿನಿಯ ಪತ್ರಿಕೆಗಳು ಬರೆದಿವೆ. ನಿಜವಾಗಿ ಅನುಮಾನ ಹುಟ್ಟಿಕೊಳ್ಳುವುದೂ ಇಲ್ಲೇ. 18ರ ಹರೆಯದ ಯುವತಿಯನ್ನು ಎರಡು ವಾರಗಳ ತನಕ ಶಂಕೆಯ ಮೊನೆಯಲ್ಲಿರಿಸಿ ವಿಚಾರಣೆಗೆ ಒಳಪಡಿಸಿದ್ದರ ಹಿಂದೆ ಯಾವ ದುರುದ್ದೇಶವೂ ಇದ್ದಿರಲಿಲ್ಲವೇ? ಇದು ಬರೇ ಎಡವಟ್ಟೇ? ಇಂಥ ಎಡವಟ್ಟು ಈ ಹಿಂದೆ ಎಷ್ಟು ಬಾರಿ ಆಗಿದೆ? ಎಷ್ಟು ಮಂದಿ ಇಂಥ ಎಡವಟ್ಟಿನಿಂದ ಎನ್‍ಕೌಂಟರ್‍ ಗೆ ಒಳಗಾಗಿದ್ದಾರೆ? ಎಷ್ಟು ಮಂದಿಯ ಬಂಧನವಾಗಿದೆ? ಎಷ್ಟು ಮಂದಿಯ ಬಿಡುಗಡೆಯಾಗಿದೆ? ಎಡವಟ್ಟನ್ನು ಎಡವಟ್ಟು ಎಂದು ಒಪ್ಪಿಕೊಳ್ಳದೇ ಇರುವ ಪ್ರಕರಣಗಳು ಎಷ್ಟಿವೆ? ಅದರ ಪರಿಣಾಮವನ್ನು ಎದುರಿಸುತ್ತಾ ಜೈಲಲ್ಲಿ ಕೊಳೆಯುತ್ತಿರುವ ಮಂದಿ ಎಷ್ಟಿದ್ದಾರೆ? ಅಷ್ಟಕ್ಕೂ, ಗಣರಾಜ್ಯೋತ್ಸವದ ಸಮಯದಲ್ಲೇ ಈ ಎಡವಟ್ಟು ಸಂಭವಿಸಲು ಕಾರಣಗಳೇನು? ಸಾದಿಯಾ- ಗಣರಾಜೋತ್ಸವ ಪೆರೇಡನ್ನು ಸ್ಫೋಟಿಸುತ್ತಾಳೆ ಎಂಬ ಭಯವನ್ನು ತೇಲಿಸಿಬಿಟ್ಟ ಗುಪ್ತಚರ ಇಲಾಖೆಯ ಎಡವಟ್ಟುದಾರರು ಯಾರು? ಅವರು ಎಲ್ಲಿಂದ ಈ ಎಡವಟ್ಟು ಮಾಹಿತಿ ಪಡೆದುಕೊಂಡರು? ನಿಜಕ್ಕೂ ಕಾಶ್ಮೀರದಲ್ಲಿ ಆತ್ಮಹತ್ಯಾ ಬಾಂಬರ್ ಒಬ್ಬಳು ಇದ್ದಳೇ? ಗಣರಾಜ್ಯೋತ್ಸವ ಪೆರೇಡ್ ಮೇಲೆ ದಾಳಿಯೆಸಗುವ ಉದ್ದೇಶವನ್ನು ಆಕೆ ಹೊಂದಿದ್ದಳೇ? ಗುಪ್ತಚರ ಇಲಾಖೆಗೂ ಆಕೆ ಯಾರೆಂದು ಗೊತ್ತಿತ್ತೇ? ಅನಿವಾರ್ಯ ಕಾರಣದಿಂದಾಗಿ ಆ ಯೋಜನೆಯನ್ನು ಕೈ ಬಿಡಲಾಯಿತೇ ಮತ್ತು ಸಾದಿಯಾ ಎಂಬ ಡಮ್ಮಿ ಬಾಂಬರ್ ಅನ್ನು ಉದ್ದೇಶಪೂರ್ವಕ ತೇಲಿಸಿಬಿಡಲಾಯಿತೇ? ಇನ್ನಾವುದನ್ನೋ ಮುಚ್ಚಿಡುವ ಕಾರ್ಯತಂತ್ರದ ಭಾಗವೇ ಈ ಆತ್ಮಹತ್ಯಾ ಬಾಂಬರ್?
ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಮುಂತಾದ ಸಂದರ್ಭಗಳಲ್ಲಿ ಈ ದೇಶದಲ್ಲಿ ಕಟ್ಟೆಚ್ಚರವನ್ನು ಘೋಷಿಸುವುದು ಇತ್ತೀಚಿನ ವರ್ಷಗಳಲ್ಲಿ ಮಾಮೂಲಾಗಿದೆ. ಸಂಭಾವ್ಯ ಭಯೋತ್ಪಾದನಾ ದಾಳಿಗಳ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆಗಳಾಗುತ್ತವೆ. ಈ ಹಿಂದೆ 2009 ಜನವರಿ 25ರಂದು ನೊಯಿಡಾದಲ್ಲಿ ಇಬ್ಬರನ್ನು ಎನ್‍ಕೌಂಟರ್ ಮಾಡಿ ಕೊಲ್ಲಲಾಗಿತ್ತು. ಮರುದಿನ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪೆರೇಡ್‍ನ ಮೇಲೆ ದಾಳಿ ಎಸಗಲು ಈ ಇಬ್ಬರು ಪಾಕಿಸ್ತಾನಿಗಳು ಸಂಚು ಹೂಡಿದ್ದರು ಎಂದು ಉತ್ತರ ಪ್ರದೇಶದ ಪೊಲೀಸರು ಹೇಳಿಕೊಂಡಿದ್ದರು. ಆದರೆ ಈ ಘಟನೆಯ ಬಳಿಕ ಟೈಮ್ಸ್ ಆಫ್ ಇಂಡಿಯಾ, ದಿ ಟೆಲಿಗ್ರಾಫ್‍ನಂತಹ ಮುಖ್ಯವಾಹಿನಿಯ ಪತ್ರಿಕೆಗಳೇ ಈ ಎನ್‍ಕೌಂಟರ್‍ ನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದುವು. Noida encounter: Many loopholes in Police theory ಎಂಬಂಥ ಶೀರ್ಷಿಕೆಗಳಲ್ಲಿ ಆ ಕುರಿತಂತೆ ವರದಿಗಳನ್ನೂ ಪ್ರಕಟಿಸಿದ್ದುವು. ಇದೀಗ ಸಾದಿಯಾ ಈ ಕುರಿತಾದ ಚರ್ಚೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದ್ದಾಳೆ. ನಮ್ಮ ವ್ಯವಸ್ಥೆಗೆ ಆತ್ಮಹತ್ಯಾ ಬಾಂಬರ್ ಗಳ, ಭಯೋತ್ಪಾದಕರ ಅಗತ್ಯ ಆಗಾಗ ಬೀಳುತ್ತದೆಯೇ? ಜನರ ಗಮನವನ್ನು ಬೇರೆಡೆ ಸೆಳೆಯುವುದಕ್ಕೆ ಇಂಥ ಭೀತಿಗಳನ್ನು ಹುಟ್ಟು ಹಾಕಿ ಸಂದರ್ಭಕ್ಕೆ ತಕ್ಕಂತೆ ಸಾರ್ವಜನಿಕರಿಗೆ ರಸವತ್ತಾಗಿ ಹಂಚಲಾಗುತ್ತದೆಯೇ? ಅಂದಹಾಗೆ, ಭಯೋತ್ಪಾದಕರನ್ನು ತಯಾರಿಸುವ ಜಾಲವೊಂದು ವ್ಯವಸ್ಥೆಯೊಳಗಡೆಯೇ ಇದೆಯೇ? ಅಗತ್ಯ ಕಂಡಾಗಲೆಲ್ಲ ಈ ಜಾಲವನ್ನು ಸಕ್ರಿಯಗೊಳಿಸಿ ಬ್ರೇಕಿಂಗ್ ನ್ಯೂಸ್‍ಗಳನ್ನು ತಯಾರಿಸಲಾಗುತ್ತದೆಯೇ?
ಸಾದಿಯಾ ಸದ್ಯ ಮನೆಗೆ ಹಿಂತಿರುಗಿದ್ದಾಳೆ. ಆಕೆಯನ್ನು ಬಂಧಿಸಿದ್ದೇವೆಂದು ಹೇಳಿಕೊಂಡವರೇ ಕೈಯಾರೆ ಆಕೆಯನ್ನು ಪೋಷಕರಿಗೆ ಒಪ್ಪಿಸಿದ್ದಾರೆ. ಆತ್ಮಹತ್ಯಾ ಬಾಂಬರ್ ಆಗುವ ಯಾವ ಯೋಗ್ಯತೆಯೂ ಆಕೆಗಿಲ್ಲ ಅನ್ನುವುದನ್ನೂ ಅವರು ಸ್ಪಷ್ಟಪಡಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳು ಎರಡು ಮುಖ್ಯ ಪ್ರಶ್ನೆಗಳಿಗೆ ಉತ್ತರವನ್ನು ಬಯಸುತ್ತದೆ. 1. ಹಾಗಿದ್ದರೆ ಆಕೆಯ ಸುತ್ತ ಹುಟ್ಟಿಕೊಂಡ ವದಂತಿಗಳ ಹಿಂದೆ ಯಾರಿದ್ದಾರೆ? ಅವರೇಕೆ ಅಂಥದ್ದೊಂದು ಅಪಾಯಕಾರಿ ವದಂತಿಯನ್ನು ಹುಟ್ಟು ಹಾಕಿದ್ದಾರೆ? ಆತ್ಮಹತ್ಯಾ ಬಾಂಬರ್ ಎಂಬ ಗಂಭೀರ ವದಂತಿ ಹುಟ್ಟು ಹಾಕಲು ಅವರನ್ನು ಪ್ರಚೋದಿಸಿದ್ದು ಯಾರು ಮತ್ತು ಯಾವುದು? 2. ನಿಜಕ್ಕೂ ಆಕೆ ಸ್ವಯಂ ಪ್ರೇರಿತವಾಗಿ ಕಾಶ್ಮೀರಕ್ಕೆ ಬಂದಿದ್ದಳೋ ಅಥವಾ ಆಕೆಯನ್ನು ಅಲ್ಲಿಗೆ ಕರೆ ತರಲಾಗಿತ್ತೋ? ಆತ್ಮಹತ್ಯಾ ಬಾಂಬರ್ ಎಂಬುದು ಸುಳ್ಳಾದಂತೆ ಆಕೆ ಯುವಕರನ್ನು ಭೇಟಿಯಾಗಲು ಕಾಶ್ಮೀರಕ್ಕೆ ಬಂದಿದ್ದಳು ಎಂಬುದೂ ಸುಳ್ಳೇ? ಇದರ ಹಿಂದೆಯೂ ಒಂದು ರೋಚಕ ಕತೆಯಿರಬಹುದೇ?

ಈ ದೇಶವು ಹಲವಾರು ಭಯೋತ್ಪಾದನಾ ಕೃತ್ಯಗಳಿಗೆ ಸಾಕ್ಷಿಯಾಗಿದೆ. ಅಸಂಖ್ಯ ಮಂದಿ ತಮ್ಮ ಬದುಕನ್ನು ಕಳಕೊಂಡಿದ್ದಾರೆ. ಬಸ್ಸು, ರೈಲು, ವಿಮಾನ, ಮಾರುಕಟ್ಟೆ ಎಲ್ಲಕ್ಕೂ ಭಯದಿಂದ ಪ್ರವೇಶಿಸುವ ಸಂದರ್ಭ ಅನೇಕ ಬಾರಿ ಎದುರಾಗಿದೆ. ಅಲ್ಲದೇ ಇದೇ ಹೆಸರಲ್ಲಿ ಅನೇಕರನ್ನು ಬಂಧಿಸಲಾಗಿದೆ. ಶಿಕ್ಷಿಸಲಾಗಿದೆ. ಬಿಡುಗಡೆಯನ್ನೂ ಮಾಡಲಾಗಿದೆ. ಸತ್ತವರಿಗಂತೂ ತಾವು ಯಾವ ಕಾರಣಕ್ಕಾಗಿ ಹತ್ಯೆಗೊಳಗಾದೆವು ಎಂಬುದು ಗೊತ್ತಿರುವುದಿಲ್ಲ. ಜೀವಂತ ಇರುವವರು ವ್ಯವಸ್ಥೆ ತೋರಿಸಿಕೊಟ್ಟವರನ್ನು ಶಪಿಸುತ್ತಾ ದಿನ ದೂಡುತ್ತಿದ್ದಾರೆ. ಆದರೆ ಇದರಾಚೆಗೆ ಏನೋ ಇದೆ ಅನ್ನುವುದನ್ನು ಸಾದಿಯಾ ಪ್ರಕರಣ ಎತ್ತಿ ತೋರಿಸುತ್ತಿದೆ. ಈ ಬಗೆಗಿನ ಗೊಂದಲ ಮುಂದುವರಿದಷ್ಟೂ ವ್ಯವಸ್ಥೆ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಾ ಹೋಗಬಹುದು.

ಕೃಪೆ: ಸನ್ಮಾರ್ಗ ಸಂಪಾದಕೀಯ

Read These Next

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...

ಬೆಂಗಳೂರು: ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗಾಗಿ “ಸಹಾಯವಾಣಿ”

ಎಸ್.ಎಸ್.ಎಲ್.ಸಿ. ಪರೀಕ್ಷೆ ವಿದ್ಯಾರ್ಥಿ ಜೀವನದಲ್ಲಿ ನಿರ್ಣಾಯಕ ಹಂತದ ಪರೀಕ್ಷೆಯಾಗಿರುತ್ತದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅತಿ ...

ಸನ್ನಿ ಅಣೆಕಟ್ಟು ನಿರ್ಮಾಣ ಗುತ್ತಿಗೆಯ ಬೆನ್ನಲ್ಲೇ; 45 ಕೋಟಿ ರೂ.ಗಳ ಚು.ಬಾಂಡ್ ಖರೀದಿಸಿದ್ದ ಬಿಜೆಪಿ ಸಂಸದನ ಕಂಪೆನಿ

ಆಂಧ್ರಪ್ರದೇಶದ ಬಿಜೆಪಿ ರಾಜ್ಯಸಭಾ ಸದಸ್ಯ ಸಿ.ಎಂ.ರಮೇಶ್ ಸ್ಥಾಪಿಸಿದ್ದ ರಿತ್ವಿಕ್ ಪ್ರೊಜೆಕ್ಟ್ ಪ್ರೈ.ಲಿ.(ಆರ್;ಪಿಪಿಎಲ್) ಹಿಮಾಚಲ ...

ಹಾಸ್ಟೆಲ್‌ಗೆ ನುಗ್ಗಿ ನಮಾಝ್ ನಿರತರ ಮೇಲೆ ಗೂಂಡಾಗಳಿಂದ ಹಲೆ; ವಿದೇಶಿ ವಿದ್ಯಾರ್ಥಿಗಳಿಗೆ ಗಾಯ

ಇಲ್ಲಿನ ಗುಜರಾತ್ ವಿಶ್ವವಿದ್ಯಾನಿಲಯದ ಹಾಸ್ಟೆಲ್‌ನಲ್ಲಿ ರಮಝಾನ್ ಪ್ರಯುಕ್ತ ರಾತ್ರಿ ಹೊತ್ತು ನಮಾಝ್ ಮಾಡುತ್ತಿದ್ದ ವಿದೇಶಿ ...

ಲೋಕಸಭಾ ಚುನಾವಣೆ ಘೋಷಣೆ; ಎಪ್ರಿಲ್ 19ರಿಂದ ಜೂನ್ 1ರವರೆಗೆ 7 ಹಂತಗಳಲ್ಲಿ ಮತದಾನ; ಜೂ.4ರಂದು ಫಲಿತಾಂಶ ಪ್ರಕಟ

ದೇಶದ ಜನತೆ ಕಾತರದಿಂದ ಕಾಯುತ್ತಿದ್ದ 18ನೇ ಲೋಕಸಭಾ ಚುನಾವಣೆಯ ವೇಳಾಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗ ಶನಿವಾರ ಪ್ರಕಟಿಸಿದೆ. ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...