ನಬಾರ್ಡ್ ಯೋಜನೆಯಲ್ಲಿ 10 ಲಕ್ಷ ರೂ. ಸಬ್ಸೀಡಿ

Source: sonews | By Staff Correspondent | Published on 12th January 2019, 11:50 PM | State News | Don't Miss |

         
* ಹೈನುಗಾರಿಕೆ ಮಾದರಿಯಲ್ಲಿ ಕುಕ್ಕುಟ ಕ್ಷೇತ್ರದಲ್ಲಿ ಕ್ರಾಂತಿಗೆ ಮುಂದಾಗಲು ಸಲಹೆ 
* ಡಿಸಿಸಿ ಬ್ಯಾಂಕ್‍ನಿಂದ ಪೌಲ್ಟ್ರಿ ಸಾಲ: ಬ್ಯಾಲಹಳ್ಳಿ ಗೋವಿಂದಗೌಡ      

ಕೋಲಾರ: ಅವಳಿ ಜಿಲ್ಲೆಯ ಯುವಜನತೆಗೆ ವರದಾನವಾಗಿ ಬಂದಿರುವ ನಬಾರ್ಡ್ ಪ್ರಾಯೋಜಿತ ಪೌಲ್ಟ್ರಿ ಸಾಲಯೋಜನೆಯನ್ನು ನಿರುದ್ಯೋಗಿಗಳಿಗೆ ಸಮರ್ಪಕವಾಗಿ ತಲುಪಿಸುವ ಮೂಲಕ ಹೈನುಗಾರಿಕೆ ಮಾದರಿಯಲ್ಲಿ ಕುಕ್ಕುಟ ಉದ್ಯಮದಲ್ಲಿ ಕ್ರಾಂತಿ ಮಾಡುವುದರೊಂದಿಗೆ ಇತಿಹಾಸ ನಿರ್ಮಾಣ ಮಾಡಬೇಕೆಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಹೇಳಿದರು.

ಇಲ್ಲಿನ ಸಹಕಾರಿ ಯೂನಿಯನ್‍ನಲ್ಲಿ ನಡೆದ ಬ್ಯಾಂಕಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಪೌಲ್ಟ್ರಿ ಯೋಜನೆಗೆ ನಬಾರ್ಡ್ 150 ಕೋಟಿ ರೂ. ಸಹಾಯಧನವನ್ನು ಡಿಸಿಸಿ ಬ್ಯಾಂಕ್‍ಗೆ ಮೀಸಲಿರಿಸಿದ್ದು ಕನಿಷ್ಠ 10 ರಿಂದ ಗರಿಷ್ಠ 40 ಲಕ್ಷ ರೂ.ವರೆಗೆ ತಲಾ ಸಾಲ ವಿತರಣೆ ಆಗಲಿದ್ದು ಶೇ.25 ಸಬ್ಸೀಡಿ ಸಿಕ್ಕಲಿದೆ ಎಂದರು.

10 ಲಕ್ಷ ರೂ.ಗೆ 2.5 ಲಕ್ಷ ರೂ, 40 ಲಕ್ಷಕ್ಕೆ 10 ಲಕ್ಷ ರೂ. ಸಹಾಯಧನ ಫಲಾನುಭವಿಯ ಖಾತೆಗೆ ತಕ್ಷಣ ಜಮಾ ಆಗುವುದರಿಂದಾಗಿ ಅವಳಿ ಜಿಲ್ಲೆಗೆ ಸಂಬಂಧಿಸಿದಂತೆ 600 ಕೋಟಿ ರೂ. ಸಾಲ ವಿತರಣೆ ಆಗಬೇಕಿದ್ದು ಯೋಜನೆಯಲ್ಲಿ ಏಜೆಂಟರು ಹುಟ್ಟಿಕೊಳ್ಳದಂತೆ ನೇರವಾಗಿ ವಿದ್ಯಾವಂತ ನಿರುದ್ಯೋಗಿಗಳಿಗೆ ಸೌಲಭ್ಯ ದೊರಕಿಸಲು ಬ್ಯಾಂಕ್ ಸಿಬ್ಬಂದಿ ಮುಂದಾಗಬೇಕೆಂದು ತಿಳಿಸಿದರು.

ಸಾಲಕ್ಕೆ ಮಿತಿಯಿಲ್ಲ, ವಸೂಲಿಗೆ ಮುಲಾಜಿಲ್ಲ: ಸ್ತ್ರೀಶಕ್ತಿ ಸಾಲ ಸೇರಿದಂತೆ ಬ್ಯಾಂಕಿನಲ್ಲಿ ಯಾವುದೇ ಸಾಲ ವಿತರಣೆಗೆ ಮಿತಿಯಿಲ್ಲವಾದರೂ ಅದೇ ರೀತಿ ವಸೂಲಾತಿಯಲ್ಲೂ ಮುಲಾಜಿಲ್ಲ. ಬುಧವಾರದ ಒಳಗೆ ಮಹಿಳಾ ಸಂಘಗಳಿಗೆ ಸಾಲ ವಿತರಣೆ ಮಾಡಬೇಕು ಎಂದು ಗಡುವು ನೀಡಿದ ಅಧ್ಯಕ್ಷರು ಸಾಲ ಮನ್ನಾ ಹಣ ದುರುಪಯೋಗ ಆಗದಂತೆ ಸಿಬ್ಬಂದಿ ಎಚ್ಚರಿಕೆ ವಹಿಸಬೇಕಿದ್ದು ಸಂಬಂಧಿಸಿದ ರೈತರಿಗೆ ಚೆಕ್ ಅಥವಾ ಎಟಿಎಂ ಕಾರ್ಡ್ ಮೂಲಕ ಮಾತ್ರವೇ ವ್ಯವಹರಿಸಲು ಅನುಮತಿಸಬೇಕು. ಯಾವುದೇ ಕಾರಣಕ್ಕೂ ಸೊಸೈಟಿ ಕಾರ್ಯದರ್ಶಿಗಳು ಸಾಲ ಮನ್ನಾ ಹಣ ಪಡೆಯದಂತೆ ನಿಗಾ ವಹಿಸಬೇಕೆಂದು ಎಂದು ಸೂಚಿಸಿದರಲ್ಲದೆ ದೂರುಗಳು ಬಂದಲ್ಲಿ ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.

ಸಿಡಿಒಗಳು ಸಾಲ ಮನ್ನಾ ಬಿಲ್ ಮಾಡಲು ತಲಾ ಒಂದು ಸಾವಿರ ರೂ.ಗಳನ್ನು ರೈತರಿಂದ ಸಂಗ್ರಹಿಸುತ್ತಿರುವ ಬಗ್ಗೆ ದೂರುಗಳು ಬಂದಿದ್ದು ತಕ್ಷಣ ಸಹಕಾರಿ ಇಲಾಖೆಯ ಅಧಿಕಾರಿಗಳ ಉನ್ನತ ಮಟ್ಟದ ಸಭೆಯನ್ನು ಜ.14 ರಂದು ನಡೆಸುವ ಮೂಲಕ ಜಾಯಿಂಟ್ ರಿಜಿಸ್ಟ್ರಾರ್ ಸಮ್ಮುಖದಲ್ಲಿ ಕೃಷಿಕರಿಂದ ಹಣ ಪಡೆಯದಂತೆ ತಾಕೀತು ಮಾಡುವುದಾಗಿ ತಿಳಿಸಿದರು.
ಹಳೇ ನಿರ್ದೇಶಕರಿಗೆ ಗೌರವ ತೋರಿಸುವ ಕೆಲಸ ಆಗಬೇಕಿದ್ದು ಸೋತಿದ್ದಾರೆಂಬ ಕಾರಣಕ್ಕಾಗಿ ಅಗೌರವ ತೋರಿಸುವುದು ಸರಿಯಲ್ಲ, ಬ್ಯಾಂಕ್ ವ್ಯವಹಾರದಲ್ಲಿ ರಾಜಕೀಯ ಬೆರೆಸುವುದು ಬೇಡ ಎಂದು ಸಿಬ್ಬಂದಿಗೆ ಕಿವಿಮಾತು ಹೇಳಿದರು. ಮಹಿಳೆಯರಿಂದ ಹಣ ವಸೂಲಿ ಮಾಡಿಕೊಂಡು ಬ್ಯಾಂಕಿಗೆ ಹಣ ಕಟ್ಟದೇ ವಂಚಿಸುತ್ತಿರುವ ಪ್ರತಿನಿಧಿಗಳು ಮತ್ತು ಏಜೆಂಟರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಬೇಕೆಂದು ಸೂಚಿಸಿದರಲ್ಲದೆ ವಂಚಕರಿಂದ ಮಹಿಳಾ ಸಂಘಗಳು ಬಲಿ ಆಗದಂತೆ ಮುಂಜಾಗ್ರತೆ ವಹಿಸಬೇಕೆಂದು ಸೂಚಿಸಿದರು.
ಬ್ಯಾಂಕಿನಿರ್ದೇಶಕರಾದ ಬಂಗಾರಪೇಟೆ ಗೋವಿಂದರಾಜು, ದಯಾನಂದ್, ಅನಿಲ್‍ಕುಮಾರ್, ಮೋಹನ್‍ರೆಡ್ಡಿ, ದ್ಯಾವಣ್ಣ, ಚಂದ್ರಾರೆಡ್ಡಿ, ನಾಗಿರೆಡ್ಡಿ, ಚನ್ನರಾಯಪ್ಪ, ಮ್ಯಾನೇಜರ್‍ಗಳಾದ ಶಿವಕುಮಾರ್, ಕಲೀಮುಲ್ಲಾ, ಬೈರೇಗೌಡ, ಚೌಡಪ್ಪ, ನಾಗೇಶ್ ಇದ್ದರು.

ಮುಳಬಾಗಲು ತಾಲೂಕಿನ ರೈತ ಸುಬ್ರಮಣ್ಯರೆಡ್ಡಿ ನನ್ನ ಮನೆಗೆ ಬಂದು 2 ಲಕ್ಷ ರೂ. ಲಂಚದ ಮೂಲಕ 40 ಲಕ್ಷ ರೂ. ಸಾಲ ಪಡೆಯಲು ನಡೆಸಿದ ಪ್ರಯತ್ನಕ್ಕೆ ಕಡಿವಾಣ ಹಾಕಿ ತಕ್ಕ ಪಾಠ ಕಲಿಸಿದ್ದೇನೆ. ಈಗಾಗಲೇ 10 ಲಕ್ಷ ರೂ. ಸಾಲ ಪಡೆದಿರುವ ಫಲಾನುಭವಿ ಮತ್ತೊಮ್ಮೆ 40 ಲಕ್ಷ ಸಾಲ ಪಡೆಯಲು ಲಂಚ ಕೊಡಲು ಬಂದಿದ್ದು ಮೊದಲು ಕಾಂಪೌಂಡ್‍ನಿಂದ ಹೊರಗೆ ನಡೆ ಎಂದು ಆಚೆ ತಳ್ಳಿದ್ದೇನೆ. ನಾವ್ಯಾರು ಇಲ್ಲಿ ವ್ಯಾಪಾರಕಿಲ್ಲ, ಅಂತಹವರನ್ನು ಬ್ಯಾಂಕ್ ಒಳಗೂ ಸೇರಿಸದೆ ಸಿಬ್ಬಂದಿ ಸಂಸ್ಥೆಯ ಪಾವಿತ್ರ್ಯತೆಯನ್ನು ಕಾಪಾಡಬೇಕು.
- ಬ್ಯಾಲಹಳ್ಳಿ ಗೋವಿಂದಗೌಡ, ಅಧ್ಯಕ್ಷರು,ಡಿಸಿಸಿ ಬ್ಯಾಂಕ್ 

Read These Next

ಸರ್ಕಾರಿ ಆಸ್ಪತ್ರೆಗಳಿಗೆ ಔಷಧಿ ವಿತರಣೆ ಮಾಡುವುದರಲ್ಲಿ ನಿರ್ಲಕ್ಷ್ಯ ವಹಿಸಿದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ-ಸ್ಪೀಕರ್ ರಮೇಶ್ ಕುಮಾರ್ ಎಚ್ಚರಿಕೆ

ರಾಜಿನಾಮೆಯಿಂದ ಉಂಟಾಗಿರುವ ಬಿಕ್ಕಟ್ಟಿನ ಬೆಳವಣಿಗೆಗಳ ಬಗ್ಗೆ ತೀವ್ರವಾಗಿ ತಲೆ ಕೆಡಿಸಿಕೊಂಡಿದ್ದ ಸ್ಪೀಕರ್ ರಮೇಶ್ ಕುಮಾರ್ ...

ಜಲಶಕ್ತಿ ಅಭಿಯಾನವನ್ನು ಸಾಕಾರಗೊಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಲಿ -ಜೆ.ಮಂಜುನಾಥ್

ಇಂದು ಕೋಲಾರ ತಾಲ್ಲೂಕಿನ ಮುದುವಾಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ...

ಮಾದಕ ದ್ರವ್ಯ ಮಾಫಿಯಾ, ಅನಿಯಂತ್ರಿತ ಅಶ್ಲೀಲತೆಯ ವಿರುದ್ದ ಕ್ರಮಕ್ಕೆ ಆಗ್ರಹಿಸಿ ವುಮೆನ್ ಇಂಡಿಯಾ ಮೂವ್‍ಮೆಂಟ್ ಪ್ರತಿಭಟನೆ

ಮಾದಕ ದ್ರವ್ಯ ಮಾಫಿಯಾ, ಅನಿಯಂತ್ರಿತ ಅಶ್ಲೀಲತೆಯ ವಿರುದ್ದ ಕ್ರಮಕ್ಕೆ ಆಗ್ರಹಿಸಿ ವುಮೆನ್ ಇಂಡಿಯಾ ಮೂವ್‍ಮೆಂಟ್ ಪ್ರತಿಭಟನೆ