ಮುರ್ಡೇಶ್ವರ; ಆರ್.ಎನ್.ಎಸ್. ವಿದ್ಯಾನಿಕೇತನ ಶಾಲೆಯ ವಾರ್ಷಿಕೋತ್ಸವ ಸಮಾರಂಭ

Source: sonews | By Staff Correspondent | Published on 17th December 2018, 10:31 PM | Coastal News |

ಭಟ್ಕಳ: ನಮ್ಮಲ್ಲಿ ಸಕಾರಾತ್ಮಕ ಮನೋಭಾವವಿದ್ದಲ್ಲಿ ನಮಗೆ ಸುತ್ತ ಮುತ್ತ ಸ್ಪೂರ್ತಿ ದೊರಕುವುದು ಕಷ್ಟವಾಗಲಾರದು ಎಂದು ಆರ್. ಎನ್. ಎಸ್. ಆಸ್ಪತ್ರೆಯ ಮೂಳೆ ತಜ್ಞ ಡಾ. ಭಾಸ್ಕರ ರಾವ್ ಹೇಳಿದರು. 

ಅವರು ಮುರ್ಡೇಶ್ವರದ ಆರ್.ಎನ್.ಎಸ್. ವಿದ್ಯಾನಿಕೇತನ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡುತ್ತಿದ್ದರು. 

ಹಲವಾರು ಬಾರಿ ನಮ್ಮ ಕಾರ್ಯಕ್ಷೇತ್ರಗಳಲ್ಲಿ ಸೋಲು ಗೆಲುವು ಇರುತ್ತದೆ.  ಹಲವಾರು ಬಾರಿ ಸೋಲುಂಡ ನಂತರ ಭಾರೀ ಯಶಸ್ಸನ್ನು ಗಳಿಸಿದವರನ್ನೂ ನಾವು ನೋಡಿದ್ದೇವೆ. ಯಶಸ್ಸು ದೊರೆಯದೇ ಇದ್ದಾಗ ನಮಗೆ ಯಶಸ್ಸಿನೆಡೆಗೆ ಹೋಗಲು ಸ್ಪೂರ್ತಿ ದೊರೆಯಬೇಕಾಗುತ್ತದೆ ಎಂದೂ ಹೇಳಿದರು. ಆತ್ಮವಿಶ್ವಾಸದಿಂದ ಮುನ್ನುಗ್ಗಿದಾಗ ಗುರಿ ತಲುಪುವುದು ಕಷ್ಟವಾಗುವುದಿಲ್ಲ ಎಂದ ಅವರು ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಮುನ್ನೆಡೆಯಿರಿ ಎಂದ ಕರೆ ನೀಡಿದರು. 

ಸಮಾರಂಭದ ಅಧ್ಯಕ್ಷತೆಯನ್ನು  ಆರ್.ಎನ್.ಎಸ್. ಸಮೂಹ ಸಂಸ್ಥೆಗಳ ನಿರ್ದೇಶಕ ಎಂ.ವಿ. ಹೆಗಡೆ ವಹಿಸಿದ್ದರು. ಅತಿಥಿಗಳಾಗಿ ಸಾಲಿಗ್ರಾಮ ಪ್ಲೈಯಿಂಗ್ ಕೈಟ್ಸ್ ಶಾಲೆಯ ಪ್ರಾಂಶುಪಾಲೆ ವರ್ಷಿಣಿ ಸಂದೇಶ್ ಪೈ, ಆರ್.ಎನ್.ಎಸ್. ಸಮೂಹ ಸಂಸ್ಥೆಗಳ ಜನರಲ್ ಮೇನೆಜರ್(ಆಡಿಟ್ & ಅಕೌಂಟ್ಸ್) ಮಂಜುನಾಥ್ ಶೆಟ್ಟಿ, ಆರ್.ಎನ್.ಎಸ್. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಾಧವ್ ಪಿ, ಆರ್.ಎನ್.ಎಸ್. ವಿದ್ಯಾನಿಕೇತನದ ಪ್ರಾಂಶುಪಾಲ ಡಾ. ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು.

ವಂದನಾ ರಾಣೆ ಸ್ವಾಗತಿಸಿದರು, ಗೌತಮಿ ಶೇಟ್ ವಂದಿಸಿ, ಸುಪ್ರೀಯ ಮತ್ತು ಶ್ರುತಿ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು.
 

Read These Next