ಭಟ್ಕಳದಲ್ಲಿ ನೆಲ ಮುಗಿಲನ್ನು ಮುಚ್ಚಿದ ಮುಸಲಧಾರೆ ನದಿ ತಟದಲ್ಲಿ ಕಟ್ಟೆಚ್ಚರ; 163ಮಿಮೀ ಮಳೆ ದಾಖಲು

Source: S.O. News Service | By MV Bhatkal | Published on 15th August 2018, 9:11 PM | Coastal News |

ಭಟ್ಕಳ: ಕಳೆದ 2 ದಿನಗಳ ಧಾರಾಕಾರ ಮಳೆ ತಾಲೂಕಿನಾದ್ಯಂತ ಹೊಳೆ ಹಳ್ಳಗಳನ್ನು ಸೃಷ್ಟಿಸಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. 
ಗಾಳಿ ಮಳೆಗೆ ಅಲ್ಲಲ್ಲಿ ಮರಗಳು ಧರೆಗುರುಳಿರುವ ಬಗ್ಗೆ ಮಾಹಿತಿ ಲಭಿಸಿದೆ. ರಸ್ತೆಯ ತುಂಬೆಲ್ಲ ನೀರು ಹೊಳೆಯಾಗಿ ಹರಿದು ಹೋಗಲಾರಂಭಿಸಿದೆ. ಮುರುಡೇಶ್ವರ, ಬೆಂಗ್ರೆ ಶಸಿಹಿತ್ತಲ್ ಸೇರಿದಂತೆ ವಿವಿದೆಡೆ ತಗ್ಗು ಪ್ರದೇಶಗಳ ಕೃಷಿ ಭೂಮಿ ಸಂಪೂರ್ಣವಾಗಿ ಜಲಾವೃತಗೊಂಡಿದೆ. ತಾಲೂಕಿನ ವೆಂಕಟಾಪುರ ಹೊಳೆ ದಂಡೆಯಲ್ಲಿರುವ ಮನೆಗಳಿಗೆ ನೀರು ಹರಿದಿರುವ ಬಗ್ಗೆ ಮಾಹಿತಿ ಲಭಿಸಿದೆ. ತಾಲೂಕಿನಾದ್ಯಂತ ಎಲ್ಲಿ ನೋಡಿದರಲ್ಲಿ ನೀರು ತುಂಬಿಕೊಂಡಿದ್ದು, ನೆರೆಯ ಆತಂಕವನ್ನು ಹುಟ್ಟು ಹಾಕಿದೆ. ಇಲ್ಲಿನ ಚೌಥನಿಯ ಹೊಳೆ ಅಪಾಯದ ಮಟ್ಟವನ್ನು ತಲುಪಿದ್ದು, ಕಟ್ಟೆಚ್ಚರ ವಹಿಸಲಾಗಿದೆ. ದಂಡೆಯ ಮೇಲಿರುವ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ತಾಲೂಕಾಡಳಿತ ಈಗಾಗಲೇ ಹೊಳೆಯ ದಂಡೆಯ ನಿವಾಸಿಗಳಿಗೆ ಸೂಚನೆ ನೀಡಿದೆ.

ಇನ್ನೂ ಒಂದೆರಡು ದಿನ ಇದೇ ರೀತಿ ಮಳೆ ಸುರಿದರೆ ಅಲ್ಲಿಯೂ ಹೊಳೆಯ ನೀರು ಊರು ಕೇರಿಗೆ ನುಗ್ಗುವ ಸಾಧ್ಯತೆ ಕಂಡು ಬಂದಿದೆ. ಕಡಲ ತಡಿಯಲ್ಲಿ ಸಮುದ್ರ ಭೋರ್ಗರೆತ ಮಿತಿಮೀರಿದ್ದು, ತಟದ ನಿವಾಸಿಗಳು ಬೆಚ್ಚಿ ಬೀಳುವಂತೆ ಮಾಡಿದೆ. ಮೀನುಗಾರರು ದಡದಲ್ಲಿಯೇ ಕುಳಿತು ಕಡಲು ಶಾಂತವಾಗುವುದನ್ನೇ ಕಾಯುತ್ತಿದ್ದಾರೆ. ನಿರಂತರ ಮಳೆಯಿಂದಾಗಿ ತಾಲೂಕಿನ ಬಹುತೇಕ ಪ್ರದೇಶಗಳಲ್ಲಿನ ರಸ್ತೆಗಳಲ್ಲಿ ಹೊಂಡ ಬಿದ್ದಿದ್ದು, ಸಂಚಾರ ವ್ಯವಸ್ಥೆ ಹದಗೆಟ್ಟಿದೆ. ಸೋಮವಾರ ಬೆಳಿಗ್ಗೆಯಿಂದ ಮಂಗಳವಾರ ಬೆಳಿಗ್ಗೆಯವರೆಗೆ 163ಮಿಮೀ ಮಳೆ ದಾಖಲಾಗಿದ್ದು, ಒಟ್ಟೂ ಮಳೆಯ ಪ್ರಮಾಣ 2673.5ಮಿಮೀ.ಗೆ ಏರಿಕೆಯಾಗಿದೆ. ಮಳೆಯ ಆತಂಕದ ಬಗ್ಗೆ ಮಾತನಾಡಿರುವ ತಹಸೀಲ್ದಾರ ವಿ.ಎನ್.ಬಾಡ್ಕರ್, ಮಳೆಯ ಕಾರಣ ಹೆಚ್ಚಿನ ಅನಾಹುತವನ್ನು ತಪ್ಪಿಸುವ ನಿಟ್ಟಿನಲ್ಲಿ ಗ್ರಾಮ ಲೆಕ್ಕಿಗರು, ಸಿಬ್ಬಂದಿಗಳಿಗೆ ತಮ್ಮ ಕೇಂದ್ರವನ್ನು ಬಿಟ್ಟು ಎಲ್ಲಿಗೂ ತೆರಳದಂತೆ ಆದೇಶ ನೀಡಲಾಗಿದೆ. ತಾಲೂಕಿನ ಯಾವುದೇ ಪ್ರದೇಶಗಳಲ್ಲಿ ಹಾನಿ ಸಂಭವಿಸಿದರೆ ತತ್‍ಕ್ಷಣವೇ ತಹಸೀಲ್ದಾರ ಕಚೇರಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದ್ದು, ಅಗತ್ಯ ಬಿದ್ದಲ್ಲಿ ಗಂಜಿ ಕೇಂದ್ರವನ್ನು ತೆರೆಯಲು ಎಲ್ಲ ಸಿದ್ಧತೆಯನ್ನು ಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ.
  ಜಾಲಿಯಲ್ಲಿ ಮನೆ ಹಾನಿ: ಮಳೆ ಗಾಳಿಗೆ ಮರವೊಂದು ಮನೆಯ ಮೇಲೆ ಬಿದ್ದು ಹಾನಿ ಸಂಭವಿಸಿದ ಘಟನೆ ತಾಲೂಕಿನ ಜಾಲಿಯಲ್ಲಿ ನಡೆದಿದೆ. ಹಾನಿಗೀಡಾದವರನ್ನು ಮಾದೇವ ಹೊನ್ನಪ್ಪ ನಾಯ್ಕ ಎಂದು ಹೆಸರಿಲಾಗಿದೆ. ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪಂಚನಾಮೆ ನಡೆಸಿದ್ದಾರೆ. 
         

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...