ಮಂಗಳೂರಿನ ಜನತೆಯ ಪ್ರೀತಿಯನ್ನು ಬಡ್ಡಿಸಮೇತ ಮರಳಿಸಿವೆ-ಮೋದಿ

Source: sonews | By Staff Correspondent | Published on 6th May 2018, 12:22 AM | Coastal News | State News | National News | Don't Miss |

ಮಂಗಳೂರು: ಮಂಗಳೂರು ಜನತೆ ನನ್ನಲ್ಲಿ ತೋರಿದ ಪ್ರೀತಿ ಅಪಾರವಾಗಿದ್ದು ಈ ಪ್ರೀತಿಯ ಪ್ರತಿಫಲವನ್ನು ನಾನು ಬಡ್ಡಿಸಮೇತ ಹಿಂತಿರುಗಿಸುವೆ ಎಂದು ಪ್ರಧಾನಿ ಮೋದಿ ಹೇಳಿದರು.

ದ.ಕ. ಜಿಲ್ಲಾ ಬಿಜೆಪಿ ವತಿಯಿಂದ ನಗರದ ನೆಹರೂ ಮೈದಾನದಲ್ಲಿ ಆಯೋಜಿಸಲಾದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಆಡಳಿತಕ್ಕೆ ಬರಲಿದೆ ಎಂಬ ಪ್ರಚಾರದ ಮೂಲಕ ಮತದಾರರನ್ನು ನಿರಾಶರನ್ನಾಗಿಸುವ ಪ್ರಯತ್ನ ನಡೆಸಲಾಗುತ್ತಿದೆ. ಆದರೆ ರಾಜ್ಯದಲ್ಲಿ ಬಿಜೆಪಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ದಲ್ಲಿ ಸಮ್ಮಿಶ್ರ ಸರಕಾರ ಆಡಳಿತಕ್ಕೆ ಬರುತ್ತದೆ ಎನ್ನುವ ರಾಜಕೀಯ ವಿಶ್ಲೇಷಕರ ಆತಂಕ, ಬೊಬ್ಬೆಯೂ ಮೇ 15ರ ತೀರ್ಪಿನ ಬಳಿಕ ಬದಲಾಗದಲಿದೆ. ರಾಜ್ಯ ಸರಕಾರದ ಐದು ವರ್ಷದ ಪಾಪದ ಆಡಳಿತಕ್ಕೆ ಶಿಕ್ಷೆ ದೊರೆಯಲಿದೆ ಎಂದವರು ಹೇಳಿದರು.

ಮಹಾರಾಷ್ಟ್ರ, ಗೋವಾ, ಮಧ್ಯ ಪ್ರದೇಶ, ರಾಜಸ್ತಾನ್, ಚತ್ತೀಸ್‌ಗಡ, ಉತ್ತರಾಕಾಂಡ, ಹಿಮಾಚಲ ಪ್ರದೇಶ, ತ್ರಿಪುರಾ ಮೊದಲಾದ ರಾಜ್ಯಗಳಲ್ಲಿ ಬಿಜೆಪಿ ಈಗಾಗಲೇ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಕಾಂಗ್ರೆಸ್ ನೀರಿಲ್ಲದ ಮೀನಿನಂತೆ ಒದ್ದಾಡುತ್ತಿದೆ. ಇನ್ನು ಕರ್ನಾಟಕದ ಸರದಿ. ಒಂದರ ಮೇಲೊಂದರಂತೆ ರಾಜ್ಯಗಳಲ್ಲಿ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ಸಿಗರು ಮಾನಸಿಕ ಸಂತುಲವನ್ನು ಕಳೆದುಕೊಂಡಿದ್ದು, ಇದು ವೈದ್ಯರಿಗೆ ತಪಾಸಣೆಯ ವಿಷಯವಾಗಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ಮಾಡುವುದರೊಂದಿಗೆ ಬಿಜೆಪಿಯ ಮಿಶನ್ ಸುರಕ್ಷಿತ ಕರ್ನಾಟಕ ನಿರ್ಮಾಣ ಎಂದು ಹೇಳಿದ ಅವರು, ಮೇ 12ರ ಚುನಾವಣೆಯಲ್ಲಿ ಕಾಂಗ್ರೆಸ್ ಮಾಡಿರುವ ಪಾಪಕ್ಕೆ ಶಿಕ್ಷೆ ದೊರೆಯಲಿದೆ. ರಾಜ್ಯದಲ್ಲಿ ಹತ್ಯೆಯಾದ ಸಂಘ ಪರಿವಾರದ ಕಾರ್ಯಕರ್ತರ ಹತ್ಯಾಕೋರರಿಗೆ ಮೇ 15ರ ಬಳಿಕ ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ಆಗಲಿದೆ ಎಂದರು.

ಬಡವರ ಉದ್ಧಾರ, ದೀನ ದಲಿತರ ಉದ್ದಾರಕ್ಕೆ ಸರಕಾರ ಬದ್ಧ ಎಂದು ಹೇಳಿದ ಅವರು, ಕೇಂದ್ರ ಸರಕಾರವು ಸಾಗರ್ ಮಾಲಾ ಯೋಜನೆಯನ್ನು ಜಾರಿಗೊಳಿಸಿದ್ದು, ಇದರ ಪ್ರಯೋಜನ ಕಡಲ ನಗರಿಯಾದ ಮಂಗಳೂರಿಗೆ ಸಿಗಲಿದೆ ಎಂದು ಮೋದಿ ನುಡಿದರು. ಹಿಂದೆಲ್ಲಾ ಕರ್ನಾಟಕದಲ್ಲಿ ಶರಾಬು ಮಾಫಿಯ, ಶಿಕ್ಷಣ ಮಾಫಿಯಾ ತಾಂಡವವಾಡುತ್ತಿದ್ದರೆ, ವರ್ತಮಾನದಲ್ಲಿ ಇವೆರಡರ ಜತೆ ಕೇಬಲ್ ಮಾಫಿಯಾ, ಭೂ ಮಾಫಿಯಾ, ಮರಳು ಮಾಫಿಯಾ, ವರ್ಗಾವಣೆ ಮಾಫಿಯ ಜತೆಗೆ ದಲ್ಲಾಳಿಗಳ ಹಾವಳಿ ಮಿತಿ ಮೀರಿದೆ. ನಗರದ ಜನತೆ ಮನೆ ನಿರ್ಮಾಣ, ರಿಪೇರಿಗೆ ಮರಳಿಗಾಗಿ ಒದ್ದಾಡುವ ಸ್ಥಿತಿ ನಿರ್ಮಾಣವಾಗಿದೆ. ಮೇ 12ರಂದು ಬಿಜೆಪಿ ಈ ಎಲ್ಲಾ ಮಾಫಿಯಾಗಳ ಅಂಗಡಿಗಳಿಗೆ ಬೀಗ ಹಾಕಲಿದೆ ಎಂದವರು ಹೇಳಿದರು.

ಸಮುದ್ರ ವ್ಯಾಪಾರಕ್ಕೆ ಹೊಸ ರೂಪು ದೊರೆಯಲಿದ್ದು, ಸಮುದ್ರದ ಮೂಲಕ ನಡೆಯುವ ವ್ಯಾಪಾರ ವಹಿವಾಟು ಹೆಚ್ಚಲಿದೆ. ನಾಲ್ಕು ಹೊಸ ಮೀನುಗಾರಿಕಾ ಬಂದರು, ಆಳ ಸಮುದ್ರದ ಮೀನುಗಾರರಿಗೆ ಬೋಟು ಖರೀದಿಗೆ ಆರ್ಥಿಕ ನೆರವು, ಅಡಿಕೆ ಬೆಳೆಗಾರರು ಸೇರಿದಂತೆ ರೈತರ ರಕ್ಷಣೆಗೆ ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಮುಂದಿನ ಸರಕಾರ ಬದ್ಧವಾಗಲಿದೆ ಎಂದು ಅವರು ಹೇಳಿದರು.

ದೇಶದ ವಿವಿಧ ರಾಜ್ಯಗಳಲ್ಲಿ ಸತತ ಸೋಲಿನಿಂದ ತತ್ತರಿಸಿರುವ ಕಾಂಗ್ರೆಸ್ ಇದೀಗ ತಮ್ಮ ಸೋಲಿಗೆ ಇವಿಎಂ ಕಾರಣ ಎಂದು ಹೇಳುತ್ತಾರೆ. ಸರ್ಜಿಕಲ್ ದಾಳಿ ಆದರೆ ಸೇನೆಯ ಬಗ್ಗೆ ಸವಾಲು, ಚುನಾವಣೆಯಲ್ಲಿ ಸೋತರೆ ಇವಿಎಂ ಬಗ್ಗೆ ಸವಾಲು, ಚುನಾವಣಾ ಆಯೋಗ, ರಿಸರ್ವ್ ಬ್ಯಾಂಕ್ ಸೇರಿದಂತೆ ಎಲ್ಲಾ ಸಂಸ್ಥೆಗಳ ವಿರುದ್ಧ, ಸಾಂಸ್ಥಿಕ ವ್ಯವಸ್ಥೆಗಳ ಬಗ್ಗೆ ಸವಾಲು, ಹಂಗಿಸುವ ಕೆಲಸ ಮಾಡುತ್ತಿದೆ. ತನ್ನೆಲ್ಲಾ ಜವಾಬ್ಧಾರಿಯನ್ನು ಮರೆತಿದೆ. ಕರ್ನಾಟಕದ ಭವಿಷ್ಯ, ಯುವಜನತೆ, ಸಾಮಾನ್ಯ ಜನರ ರಕ್ಷಣೆಯ ಚಿಂತೆ ಇರುವ ಜವಾಬ್ಧಾರಿಯುತ ನಾಗರಿಕ ಸಾಯುವವರೆಗೆ ಕಾಂಗ್ರೆಸ್ ಪಕ್ಷವನ್ನು ಸ್ವೀಕರಿಸುವುದಿಲ್ಲ. ಇಂತಹ ಪಾಪವನ್ನು ಕಾಂಗ್ರೆಸ್ ಮಾಡಿದೆ ಎಂದು ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದರು.

ಸ್ವಚ್ಛತಾ ಅಭಿಯಾನ ಮಾಡಿದರೆ ವಿರೋಧಿಸುತ್ತಾರೆ, ಗೇಲಿ ಮಾಡುತ್ತಾರೆ, ಮಹಿಳೆಯರು ಬಯಲಿನಲ್ಲಿ ಶೌಚಾಲಯ ಮಾಡುವವರಿಗೆ ಗೌರವ ಸಿಗುವುದಾದರೆ ನಾನು ಶೌಚಾಲಯದ ಬಗ್ಗೆ ಮಾತನಾಡಿದರೆ ಕಾಂಗ್ರೆಸ್ಸಿಗರು ತಮಾಷೆ ಮಾಡುತ್ತಾರೆ. ಯೋಗದ ಬಗ್ಗೆ ಮಾತನಾಡಿದರೂ ವಿರೋಧಿಸುತ್ತಾರೆ. ಯಾವುದೇ ವಿಷಯದಲ್ಲಿ ಮೋದಿ ಶಬ್ಧ ಕೇಳಿದಾಕ್ಷಣ ವಿರೋಧ ಮಾಡುವುದು ಕಾಂಗ್ರೆಸ್ಸಿಗರ ಸ್ವಭಾವ. ನೋಟು ಅಮ್ಯಾನೀಕರಣದ ಬಗ್ಗೆ ಇಂದಿಗೂ ಅಳುತ್ತಿದ್ದಾರೆ. ನೋಟು ಅಮಾನ್ಯೀಕರಣದ ಬಳಿಕ ಅದೆಷ್ಟು ಕಾಂಗ್ರೆಸ್ ದಿಗ್ಗಜರ ಬಳಿಯಿಂದ ನೋಟುಗಳ ಬಂಡಲು ಹೊರಬಿದ್ದಿದೆ ಎಂಬುದು ತಮಗೆಲ್ಲಾ ತಿಳಿದಿದೆ. ಅದಕ್ಕಾಗಿ ಅವರ ಸಿಟ್ಟು ಇನ್ನೂ ಕಡಿಮೆಯಾಗಿಲ್ಲ. ಬಡವರನ್ನು ಲೂಟಿ ಮಾಡಿದವರಿಂದ ಬಡವರಿಗೆ ಅದನ್ನು ಹಿಂತಿರಿಸುಗಿಸಲು ನಾನು ನಿರ್ಣಯಿಸಿದ್ದೇನೆ. ಮೋದಿ ವಿರೋಧದ ಹೊರತು ಕಾಂಗ್ರೆಸ್‌ಗೆ ಬೇರೆ ಅಜೆಂಡಾವೇ ಉಳಿದಿಲ್ಲ. ದೇಶದಲ್ಲಿದ್ದರೂ, ಯಾವ ರಾಜ್ಯದಲ್ಲಿದ್ದರೂ, ವಿದೇಶದಲ್ಲಿದ್ದರೂ ವಿರೋಧಿಸುತ್ತಾರೆ ಎಂದು ಮೋದಿ ತಮ್ಮ ಭಾಷಣದುದ್ದಕ್ಕೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ನಾನು ಖರೀದಿ- ಮಾರಾಟ ಮಾಡುವ ವ್ಯಕ್ತಿಯಲ್ಲ. ನಾನು ಕಠಿಣ ಪರಿಶ್ರಮ ಪಡುವವ. ನಾನು ಹಿಂದೂಸ್ತಾನಕ್ಕಾಗಿ ಕೆಲಸ ಮಾಡುತ್ತೇನೆ. ನನಗಾಗಿ ಕೆಲಸ ಮಾಡುತ್ತಿಲ್ಲ. ಕಾಂಗ್ರೆಸ್‌ನವರಿಗೆ ಕುಟುಂಬವೇ ಮುಖ್ಯ. ನನಗೆ ನನ್ನ ದೇಶದ ಜನತೆಯೇ ಪರಿವಾರ. ಕುಟುಂಬ ರಾಜಕಾರಣ ಮಾಡುವವರು ಬೇಕಾ ಅಥವಾ ದೇಶಕ್ಕಾಗಿ ತಮ್ಮ ಪ್ರಾಣ ಅರ್ಪಿಸಸುವರು ಬೇಕಾ ಎಂಬುದನ್ನು ಜನರು ನಿರ್ಧರಿಸುವ ಸಮಯ ಬಂದಿದೆ. ಎಲ್ಲರಿಗೂ ಸೂರು ಎಂಬ ನಿಟ್ಟಿನಲ್ಲಿ ಕೇಂದ್ರ ಸರಕಾರ ನಿರ್ಣಯದೊಂದಿಗೆ 1,58,000 ಮನೆಗಳ ನಿರ್ಮಾಣಕ್ಕೆ 900 ಕೋಟಿ ರೂ. ಹಣ ನೀಡಿದೆ. ಇದರಲ್ಲಿ ಕೇವಲ 30,000 ಮನೆಗಳು ಮಾತ್ರವೇ ಆಗಿದೆ. ಉಳಿದದ್ದು ಇನ್ನೂ ಆಗಿಲ್ಲ. ಮೋದಿಯವರು ಲೆಕ್ಕಪತ್ರ ಕೇಳುವ ಕೆಲಸ ಮಾಡುವ ಬಗ್ಗೆ ರಾಜ್ಯ ಸರಕಾರಕ್ಕೆ ಆಸಕ್ತಿಯೇ ಇಲ್ಲ. ಬಡವರ ಹಣ, ಸರಕಾರದ ಯೋಜನೆ ಇದ್ದರೂ ನಿದ್ರಿಸುತ್ತಿರುವ ಸರಕಾರಕ್ಕೆ ಒಂದು ದಿನವೂ ಅಧಿಕಾರದಲ್ಲಿ ಉಳಿಯುವ ಅರ್ಹತೆ ಇಲ್ಲ ಎಂದು ನರೇಂದ್ರ ಮೋದಿ ಹೇಳಿದರು.

 

ನಿಮ್ಮ ಪ್ರೀತಿಯನ್ನು ಬಡ್ಡಿ ಸಹಿತ ಹಿಂತಿರುಗಿಸುವೆ !

‘‘ಧರ್ಮಸ್ಥಳದ ಸ್ವಾಮಿಗೆ ಎನ್ನ ಭಕ್ತಿದ ನಮನೊಲು, ತುಳುನಾಡ್‌ದ ಜನಕುಲೆಗ್ ಎನ್ನ ಪ್ರೀತಿದ ನಮಸ್ಕಾರೊಲು, ತುಳುನಾಡಿನ ವೀರ ಸಹೋದರರಾದ ಕೋಟಿ ಚನ್ನಯ, ರಾಣಿ ಅಬ್ಬಕ್ಕ, ಸಮಾಜ ಸುಧಾರಕ ನಾರಾಯಣ ಗುರು, ಸ್ವಾತಂತ್ರ ಸೇನಾನಿ ಕಾರ್ನಾಡ್ ಸದಾಶಿವ ರಾವ್ ಎಲ್ಲ ಮಹಾನಿಯರಿಗೆ ಸಾದರ ನಮನಗಳು’’ ಎಂದು ತುಳು ಹಾಗೂ ಕನ್ನಡದೊಂದಿಗೆ ಪ್ರಧಾನಿ ಮೋದಿ ತಮ್ಮ ಮಾತನ್ನು ಆರಂಭಿಸಿದರು.

ಆ ಸಂದರ್ಭ ಮೋದಿ ಮೋದಿ ಎಂಬ ಉದ್ಗಾರ ಸಭಿಕರಿಂದ ವ್ಯಕ್ತವಾದಾಗ, ಮೋದಿಯವರು ಪ್ರತಿಕ್ರಿಯಿಸುತ್ತಾ, ನಿಮ್ಮೆಲ್ಲರ ಉತ್ಸಾಹಕ್ಕೆ ನಾನು ಆಭಾರಿ ಎಂದರು. ಏರ್‌ಪೋರ್ಟ್‌ನಿಂದ ಇಲ್ಲಿಗೆ ಬಂದಾಗ ರಸ್ತೆಯುದ್ದಕ್ಕೂ ಮಾನವ ಸರಪಳಿ, ಮಾನವ ಗೋಡೆಯನ್ನು ಕಂಡೆ ಎಂದರು. ಅವರ ಮಾತನ್ನು ವೇದಿಕೆಯಲ್ಲಿದ್ದವರೊಬ್ಬರು ಭಾಷಾಂತರ ಮಾಡಲು ಮುಂದಾದಾಗ ಸಭಿಕರಿಂದ ಬೇಡ, ಬೇಡ ಎಂಬ ಘೋಷಣೆ ಕೇಳಿ ಬಂತು. ತಕ್ಷಣ ಮೋದಿ ಮಾತನಾಡಿ, ಭಾಷಾಂತರಿಸುವುದು ಬೇಡವೇ? ಅಷ್ಟೊಂದು ಪ್ರೀತಿಯೇ? ಈ ನಿಮ್ಮ ಪ್ರೀತಿಯನ್ನು ಬಡ್ಡಿ ಸಹಿತ ಹಿಂತಿರುಗಿಸುತ್ತೇನೆ. ವಿಕಾಸದ ಮೂಲಕ ಹಿಂತಿರುಗಿ ಸುತ್ತೇನೆ. ಪ್ರತಿ ಬಾರಿ ಮಂಗಳೂರಿಗೆ ಬಂದಾಗಲೂ ನೀವು ತೋರಿಸುವ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ. ತುಳುನಾಡಿನ ಮೂಡೆ, ಸಜ್ಜಿಗೆ ಬಜಿಲ್ ಇದನ್ನು ಎಂದಿಗೂ ಮರೆಯಲಾಗದು ಎಂದು ಪ್ರಧಾನಿ ಮೋದಿ ಹೇಳಿದರು. 

ರಾಜ್ಯ ನಾಯಕರ ಅನುಪಸ್ಥಿತಿ !

ಸಾರ್ವಜನಿಕ ಸಭೆಯ ವೇದಿಕೆಯಲ್ಲಿ ದ.ಕ. ಜಿಲ್ಲೆಯ ಪಕ್ಷದ ವರಿಷ್ಠರು, ಕೊಡಗು ಉಡುಪಿ, ಸೇರಿದಂತೆ ದ.ಕ. ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳು ಹಾಜರಿದ್ದು, ಕರ್ನಾಟಕ ರಾಜ್ಯ ವರಿಷ್ಠರು ಅನುಪಸ್ಥಿತರಾಗಿದ್ದರು.

ಕೇಂದ್ರದ ಸಹಾಯಕ ಸಚಿವ ಉತ್ತರ ಪ್ರದೇಶದ ಡಾ. ಮಹೇಂದ್ರ ಸಿಂಗ್ ಚೌಹಾಣ್, ಕೋಟಾ ಶ್ರೀನಿವಾಸ ಪೂಜಾರಿ, ರುಕ್ಮಯ ಪೂಜಾರಿ, ಅಂಗಾರ, ಬೋಪಯ್ಯ, ರಾಜೇಶ್ ನಾಯ್ಕಿ, ಉಮಾನಾಥ ಕೋಟ್ಯಾನ್, ಹರೀಶ್ ಪೂಂಜಾ, ವೇದವ್ಯಾಸ ಕಾಮತ್, ಸಂತೋಷ್ ಕುಮಾರ್ ರೈ, ಡಾ. ಭರತ್ ಶೆಟ್ಟಿ, ಸಂಜೀವ ಮಠಂದೂರು, ಮೀನಾಕ್ಷಿ ಶಾಂತಿಗೋಡು, ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ವೇದಿಕೆಯಲ್ಲಿದ್ದು ಮಾತನಾಡಿದರು.

ಟಿಪ್ಪು ಖಡ್ಗ ಖರೀದಿಸಿದ ಮಲ್ಯ ಹಾಳಾಗಿ ಹೋಗಿದ್ದಾರೆ. ಟಿಪ್ಪು ಸುಲ್ತಾನ್ ಧಾರವಾಹಿ ಮಾಡಿದ ಸಂಜಯ್ ಖಾನ್ ತಳ ಹಿಡಿದಿದ್ದಾರೆ. ಈಗ ಟಿಪ್ಪು ಜಯಂತಿ ಆಚರಿಸಲು ಆರಂಭಿಸಿದ ಸಿಎಂ ಸಿದ್ದರಾಮಯ್ಯ ಅವರು ಅಧಿಕಾರದಿಂದ ಕೆಳಗೆ ಇಳಿಯಲಿದ್ದಾರೆ. ಟಿಪ್ಪು ಜಯಂತಿ ಹೆಸರಲ್ಲಿ ಧರ್ಮಗಳ ನಡುವೆ ಒಡಕು ಮೂಡಿಸಿದ್ದಾರೆ ಎಂದು ಮಡಕೇರಿ ಶಾಸಕ ಅಪ್ಪಚ್ಚುರಂಜನ್ ರಾಜ್ಯ ಸರಕಾರದ ವಿರುದ್ಧ ಹರಿಹಾಯ್ದರು.

ರಾಹುಲ್ ಗಾಂಧಿ ಅವರನ್ನು ಕಾಂಗ್ರೆಸ್‌ಗೆ ಬೇಕಾದರೆ ಪ್ರಧಾನಿಯನ್ನಾಗಿ ಮಾಡಲಿ. ಆದರೆ ದೇಶಕ್ಕೆ ಪ್ರಧಾನಿಯಾಗಲು ಅವರು ಅರ್ಹತೆ ಹೊಂದಿಲ್ಲ ಎಂದು ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.  24 ವರ್ಷದಿಂದ ಬಿಜೆಪಿಯಿಂದ ನನ್ನನ್ನು ಶಾಸಕನಾಗಿ ಆಯ್ಕೆ ಮಾಡುವ ಕೆಲಸವನ್ನು ಜನತೆ ಮಾಡಿದ್ದಾರೆ. ಈ ಅವಧಿಯಲ್ಲಿ 8 ಮುಖ್ಯಮಂತ್ರಿಗಳನ್ನು ನೋಡಿದ್ದೇನೆ. ಆದರೆ ಸಿದ್ದರಾಮಯ್ಯರಂಥ ಸ್ವಾರ್ಥ ಮತ್ತು ರಾಜಕೀಯ ದ್ವೇಷ ಮಾಡುವವರನ್ನು ಕಂಡಿಲ್ಲ ಎಂದು ಸುಳ್ಯ ಶಾಸಕ ಅಂಗಾರ ಹೇಳಿದರು.

 ಬಾಹುಬಲಿ ಸಾಂಗ್‌ನೊಂದಿಗೆ ಪ್ರಧಾನಿ ಮೋದಿ ಎಂಟ್ರಿ !

ಸಾರ್ವಜನಿಕ ಸಭೆಯಲ್ಲಿ ಸಂಜೆ 4 ಗಂಟೆಯ ವೇಳೆಗೆ ದೇಶ ಭಕ್ತಿ ಗೀತ ಗಾಯನ ಕಾರ್ಯಕ್ರಮ ನಡೆಯಿತು. ಬಳಿಕ ಸುಮಾರು 5.30ರ ವೇಳೆಗೆ ಸಭಾ ಕಾರ್ಯಕ್ರಮ ಆರಂಭಗೊಂಡಿತು. 6.10ರ ಸುಮಾರಿಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, 6.50ರ ವೇಳೆಗೆ ನೆಹರೂ ಮೈದಾನ ಪ್ರವೇಶಿಸಿದ್ದರು. ಬಾಹುಬಲಿ ಹಾಡಿನೊಂದಿಗೆ ವೇದಿಕೆ ಏರಿದ ನರೇಂದ್ರ ಮೋದಿಗೆ ಮಲ್ಲಿಗೆ ಹಾರ, ಸುಪಾರಿ ಮಾಲೆ ಪೇಟದೊಂದಿಗೆ ಸ್ವಾಗತಿಸಲಾಯಿತು. ಮಹಾಲಸಾ ಆರ್ಟ್ಸ್‌ನ ಕಲಾವಿದೆ ಸೌಮ್ಯ ಅವರ ತೆಂಕುತಿಟ್ಟಿನ ಯಕ್ಷಗಾನದ ಬಣ್ಣದ ವೇಷದ ಚಿತ್ರಕಲೆಯನ್ನು ಪ್ರಧಾನಿಗೆ ಈ ಸಂದರ್ಭ ನೀಡಲಾಯಿತು. ಬಳಿಕ 7 ಗಂಟೆ ಸುಮಾರಿಗೆ ನೇರವಾಗಿ ಮಾತು ಆರಂಭಿಸಿದ ಪ್ರಧಾನಿ ಮೋದಿ ಸುಮಾರು 47 ನಿಮಿಷಗಳ ಕಾಲ ನೆರೆದ ಜನಸ್ತೋಮವನ್ನುದ್ದೇಶಿಸಿ ಮಾತನಾಡಿದರು.

Read These Next

ಭಟ್ಕಳ ಬೆಂಗ್ರೆಯಲ್ಲಿ ಕೊಳೆತು ಹೋಗುತ್ತಿರುವ ಭತ್ತದ ಸಶಿ; ದುಡಿಮೆಯ ಹಣವೆಲ್ಲ ಕೈ ಜಾರಿ ರೈತರು ಕಂಗಾಲು

ತಾಲೂಕಿನ ಮಳೆಯ ಸಂಕಷ್ಟಗಳು ನೆರೆ ಬಂದು ಹಿಂದಿರುಗಿದೊಡನೆ ಒಂದೊಂದಾಗಿ ಹೊರಗೆ ಬಂದು ಕಾಣಿಸಿಕೊಳ್ಳಲಾರಂಭಿಸಿವೆ. ಮಳೆಗಾಳಿಗೆ ಉರುಳಿ ...

ಪ್ರವಾಹ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿದ ರಾಜ್ಯಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್

ಕೃಷ್ಣಾ ನದಿಯಿಂದ ಬಂದ ಮಹಾಪ್ರವಾಹದಲ್ಲಿ ವಿವಿಧ ಗ್ರಾಮಗಳ ನಿರಾಶ್ರಿತರ ಶಿಬಿರಗಳಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ...

ಜಮ್ಮು ಮತ್ತು ಕಾಶ್ಮೀರವನ್ನು ಕಳಚಿ ಹಾಕಿರುವ ನಡೆ: ಪ್ರಜಾಪ್ರಭುತ್ವ ಮತ್ತು ಒಕ್ಕೂಟ ತತ್ವದ ಮೇಲೆ ಸರ್ವಾಧಿಕಾರಶಾಹಿ ಪ್ರಹಾರ : ಪ್ರಕಾಶ್ ಕಾರಟ್

ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿ ಜಮ್ಮು ಮತ್ತು ಕಾಶ್ಮೀರವನ್ನು ವಿಲೀನಗೊಳಿಸುವ ಬಿಜೆಪಿ ಸರಕಾರದ ಕ್ರಮಕ್ಕೆ ವಿವಿಧ ಜನ ...

ನಾಲ್ಕು ತಿಂಗಳಿಂದ ವೇತನವಿಲ್ಲದ ಶಿಕ್ಷಕರು ಕಂಗಾಲು; ಡಿಡಿಪಿಐ ಕಚೇರಿ ಮುಂದೆ ಧರಣಿ-ವೇತನ ಬಿಡುಗಡೆಗೆ ಆಗ್ರಹ

ಕೋಲಾರ: ಜಿಲ್ಲೆಯ ವಿವಿಧ ತಾಲ್ಲೂಕುಗಳ ಪ್ರೌಢಶಾಲಾ ಶಿಕ್ಷಕರಿಗೆ ಕಳೆದ ನಾಲ್ಕು ತಿಂಗಳಿಂದ ಸಂಬಳ ಬಂದಿಲ್ಲ,ಕುಟುಂಬ ನಿರ್ವಹಣೆಗೆ ...