ಶಾಂತಿಯುತವಾಗಿ ಮಾರಿ ಹಬ್ಬ ಆಚರಿಸಲು ಸಹಾಯಕ ಆಯುಕ್ತರು ಕರೆ

Source: sonews | By MV Bhatkal | Published on 5th August 2018, 12:37 PM | Coastal News |

ಭಟ್ಕಳ: ಮಾರಿ ಜಾತ್ರಾ ಮಹೋತ್ಸವಕ್ಕೆ ತನ್ನದೇ ಆದ ಇತಿಹಾಸ ಮಹತ್ವವಿದ್ದು, ಅದರಂತೆ ಜಾತ್ರೆಗಳು ಸಂಪ್ರದಾಯದಂತೆ ವಿಜೃಂಭಣೆಯಿಂದ ನಡೆಯುವ ರೀತಿ ತಾಲೂಕಾಢಳಿತ, ಪೊಲೀಸ್ ಇಲಾಖೆ ಎಲ್ಲಾ ವ್ಯವಸ್ಥೆಯನ್ನು ಮಾಡುತ್ತೇವೆ ಎಂದು ಸಹಾಯಕ ಆಯುಕ್ತ ಸಾಜಿದ ಅಹ್ಮದ ಮುಲ್ಲಾ ಹೇಳಿದರು.
ಅವರು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಅಗಸ್ಟ 7 ರಿಂದ 9 ತನಕ ನಡೆಯಲಿರುವ ಮಾರಿ ಜಾತ್ರಾ ಮಹೋತ್ಸವದ ಹಿನ್ನೆಲೆ ಇಲ್ಲಿನ ನಗರ ಪೊಲೀಸ್ ಠಾಣೆಯಿಂದ ನಡೆಸಲಾದ ಶಾಂತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು. 
ಪ್ರಸಿದ್ಧ ಮಾರಿ ಜಾತ್ರಾ ಮಹೋತ್ಸವೂ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಹೊಸದಾಗಿ ಭಟ್ಕಳಕ್ಕೆ ಬಂದಿದ್ದು ಹಬ್ಬ ವಿಶೇಷತೆಯನ್ನು ಶಾಂತಿ ಸಭೆಯ ಮೂಲಕ ತಿಳಿದುಕೊಂಡಂತಾಯಿತು. 
ರಂಜಾನ್ ಹಬ್ಬವನ್ನು ಶಾಂತಿಯುತವಾಗಿ ನಡೆಯುವಂತೆ ನೋಡಿಕೊಳ್ಳಲಾಗಿದ್ದು, ಈಗ ಮಾರಿ ಜಾತ್ರೆಗೆ ಅವಶ್ಯಕವಾದ ಎಲ್ಲಾ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳಲಾಗಿದೆ.  ಈ ಹಿಂದೆ ಭಟ್ಕಳದ ಎಲ್ಲಾ ಧರ್ಮ ಜನಾಂಗದ ಜನರು ತಾಲೂಕಾಢಳಿತ ಜೊತೆಗೆ ಸಹಕರಿಸಬೇಕು. ಎಲ್ಲಾ ಇಲಾಖೆಯ ಆಧಿಕಾರಿಗಳು ತಮ್ಮ ತಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ನಿರ್ವಹಿಸಬೇಕಾಗಿದೆ’ ಎಂದರು.
ನಂತರ ಸಭೆಯಲ್ಲಿ ಭಟ್ಕಳ ಡಿವೈಎಸ್ಪಿ ವೆಲೆಂಟನ ಡಿಸೋಜಾ ‘ ಹಬ್ಬದ ಸಂಧರ್ಭದಲ್ಲಿ ಸಾರ್ವಜನಿಕರಿಂದ ಒಳ್ಳೆಯ ಸಹಕಾರಿ ಸಿಕ್ಕಿದ್ದು ಮಾರಿ ಹಬ್ಬದಲ್ಲಿಯೂ ಸಹ ಜನರ ಸಹಕಾರ ಅವಶ್ಯವಾಗಿದೆ. ವಿಶೇಷ ಮಾರಿ ಹಬ್ಬವನ್ನು ಸಂಭ್ರಮದಿಂದ ಶಾಂತಿಯುತವಾಗಿ ನಡೆಯುವಂತೆ ಇಲಾಖೆ ಈಗಾಗಲೇ ಸಾಕಷ್ಟು ರೂಪರೇಷಗಳನ್ನು ತಯಾರಿಸಿದ್ದು, ವಿಜೃಂಭಣೆಯ ಹಬ್ಬವೂ ಸುಗಮವಾಗಿ ನಡೆಯಲಿ ಎಂದು ಹೇಳಿದ ಅವರು ಹೆಸ್ಕಾಂ ಇಲಾಖೆಯು ಜಾತ್ರೆಯ ಸಮಯದಲ್ಲಿ ವಿದ್ಯುತ್‍ನಲ್ಲಿ ಯಾವುದೇ ಸಮಸ್ಯೆ ಬಾರದಂತೆ ಪದೇ ಪದೇ ವಿದ್ಯುತ್ ಕಡಿತ ಮಾಡದೇ ಜಾತ್ರೆಯು ಸುಂದರವಾಗಿ ವಿಜೃಂಭಣೆಯಿಂದ ನಡೆಯುವಂತೆ ಅನೂಕೂಲ ಮಾಡಿಕೊಡಬೇಕೆಂಬ ಸಭೆಯಲ್ಲಿ ತಿಳಿಸಿದರು. 
ನಂತರ ಸಭೆಯಲ್ಲಿ ಉಪಸ್ಥಿತರಿದ್ದ ಸಮಾಜದ ಮುಖಂಡರು, ಮಾರಿಕಾಂಬಾ ದೇವಸ್ಥಾನ ಆಡಳಿತ ಕಮಿಟಿ ಪದಾಧಿಕಾರಿಗಳು ಹಾಗೂ ಸಾರ್ವಜನಿಕರಿಂದ ಹಲವು ಸಮಸ್ಯೆಗಳ ಕುರಿತಂತೆ ಚರ್ಚೆ ನಡೆದವು. ವಿಸರ್ಜನೆಗೆ ತೆರಳುವ ರಸ್ತೆಯೂ ಮಳೆಯ ಬಂದರೆ ಕೆಸರಿನಿಂದ ಕೂಡಲಿದ್ದು ಈ ಹಿನ್ನೆಲೆ ಡಾಂಬರೀಕರಣ ಮಾಡಿದ್ದಲ್ಲಿ ಅನೂಕೂಲವಾಗಲಿದೆ ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಖಾರ್ವಿ ಸಮಾಜದ ಮುಖಂಡ ಎನ್.ಡಿ.ಖಾರ್ವಿ ತಿಳಿಸಿದರು. 
ಹಾಗೆಯೇ ಮೂರು ದಿನದ ಜಾತ್ರಾ ಸಂಧರ್ಭದಲ್ಲಿ ಯಾವುದೇ ರೀತಿಯ ಕಾರು, ಬಸ್ ಸಂಚಾರ ನಿಷೇಧಿಸಿ ದೂರದ ಊರಿನಿಂದ ಬರುವಂತಹಾ ಭಕ್ತಾದಿಗಳಿಗೆ ಅನೂಕೂಲ ಮಾಡಿಕೊಡಬೇಕಾಗಿದೆ ಎಂದು ಡಿವೈಎಸ್‍ಪಿ ಹೆಸ್ಕಾಂ ಇಲಾಖೆ ಅಧಿಕಾರಿಗೆ ತಿಳಿಸಿದರು.
ಸಭೆಯಲ್ಲಿ ತಹಸೀಲ್ದಾರ ವಿ.ಎನ್.ಬಾಡಕರ, ಭಟ್ಕಳ ನಗರ ಪೊಲೀಸ್ ಠಾಣೆಯ ವೃತ್ತಾಧಿಕಾರಿ ಕೆ.ಎಲ್.ಗಣೇಶ, ಶ್ರೀ ಮಾರಿಕಾಂಬಾ ದೇವಸ್ಥಾನದ ಆಡಳಿತ ಕಮಿಟಿ ಅಧ್ಯಕ್ಷ ಪರಮೇಶ್ವರ ನಾಯ್ಕ, ಪುರಸಭೆ ಅಧ್ಯಕ್ಷ ಸಾದಿಕ ಮಟ್ಟಾ, ಜಾಲಿ ಪ.ಪಂ.ಅಧ್ಯಕ್ಷ ಸೈಯದ್ ಅದಂ ಪಣಂಬೂರು, ತಂಜೀಂ ಉಪಾಧ್ಯಕ್ಷ ಅಲ್ತಾಪ ಖರೂರಿ, ವಿವಿಧ ಇಲಾಖೆಯ ಅಧಿಕಾರಿಗಳು ಸೇರಿದಂತೆ ಹಿಂದು ಮತ್ತು ಮುಸ್ಲಿಂ ಮುಖಂಡರು, ಉಪಸ್ಥಿತರಿದ್ದರು. 

Read These Next