ಅಪಘಾತದಲ್ಲಿ ಮೃತಪಟ್ಟ ತೆಲುಗು ಚಿತ್ರನಟ ನಂದಮೂರಿ ಹರಿಕೃಷ್ಣ

Source: sonews | By sub editor | Published on 30th August 2018, 12:14 AM | National News |

ಹೈದರಾಬಾದ್: ತೆಲುಗು ಚಿತ್ರರಂಗದ ಖ್ಯಾತ ನಟ ಎನ್‌.ಟಿ ರಾಮರಾವ್ ಅವರ ಮಗ, ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಬಾಮೈದ ನಂದಮೂರಿ ಹರಿಕೃಷ್ಣ (61) ಬುಧವಾರ ನಸುಕಿನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಅಭಿಮಾನಿಯ ಮದುವೆಯಲ್ಲಿ ಭಾಗವಹಿಸಲು 4.30ರ ಸಮಯದಲ್ಲಿ ಅವರು ಮನೆಯಿಂದ ಹೊರಟಿದ್ದರು. ನೆಲ್ಲೂರು ಜಿಲ್ಲೆಯ ಕಾವಲಿಗೆ ತೆರಳುತ್ತಿದ್ದಾಗ ತೆಲಂಗಾಣದ ನಲ್ಗೊಂಡ ಬಳಿಯ ಅನ್ನೆಪರ್ತಿಯಲ್ಲಿ ಈ ಅಪಘಾತ ಸಂಭವಿಸಿದೆ. ತಲೆಗೆ ತೀವ್ರವಾಗಿ ಗಾಯಗೊಂಡಿದ್ದ ಹರಿಕೃಷ್ಣ ಅವರನ್ನು ಕಾಮಿನೇನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸ್ವಯಂ ಕಾರುಚಾಲನೆ ಮಾಡುತ್ತಿದ್ದ ಹರಿಕೃಷ್ಣ, ಅತಿ ವೇಗದಿಂದ ಚಲಾಯಿಸುತ್ತಿದ್ದರು. ಆಗ ಡಿವೈಡರ್‌ಗೆ ಡಿಕ್ಕಿಯಾಗಿ ಪಲ್ಟಿಯಾಗಿದೆ ಎನ್ನಲಾಗಿದೆ. ಅವರ ಜತೆಗಿದ್ದ ಇನ್ನೂ ಇಬ್ಬರಿಗೆ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಹರಿಕೃಷ್ಣ ಅವರಿಗೆ ಮೊದಲ ಪತ್ನಿಯಿಂದ ಜಾನಕಿ ರಾಮ್, ಕಲ್ಯಾಣ ರಾಮ್ ಮತ್ತು ಸುಹಾಸಿನಿ ಎಂಬ ಮಕ್ಕಳಿದ್ದಾರೆ. ಬಳಿಕ ಮತ್ತೊಂದು ಮದುವೆಯಾಗಿದ್ದ ಅವರಿಗೆ ಜೂನಿಯರ್ ಎನ್‌ಟಿಆರ್ ಎಂದೇ ಖ್ಯಾತರಾದ ತಾರಕ ರಾಮರಾವ್ ಜನಿಸಿದ್ದರು. ಹರಿಕೃಷ್ಣ ಅವರ ಮೊದಲ ಮಗ ನಂದಮೂರಿ ಜಾನಕಿರಾಮ್ 2014ರಲ್ಲಿ ಕಾರು ಅಪಘಾತದಲ್ಲಿ ಮೃತಪಟ್ಟಿದ್ದರು. ಜೂನಿಯರ್ ಎನ್‌ಟಿಆರ್ ಕೂಡ 2009ರಲ್ಲಿ ಕಾರು ಅಪಘಾತದಲ್ಲಿ ಗಾಯಗೊಂಡಿದ್ದರು. 1956ರ ಸೆಪ್ಟೆಂಬರ್ 2ರಂದು ಆಂಧ್ರಪ್ರದೇಶದ ನಿಮ್ಮಕರುದಲ್ಲಿ ಜನಿಸಿದ್ದ ಹರಿಕೃಷ್ಣ ಬಾಲನಟನಾಗಿ ಕಾಣಿಸಿಕೊಂಡಿದ್ದರು. ತೆಲುಗು ಚಿತ್ರರಂಗದ ಖ್ಯಾತ ನಟ, ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ನಂದಮೂರಿ ತಾರಕ ರಾಮರಾವ್ (ಎನ್‌ಟಿಆರ್) ಅವರ ನಾಲ್ಕನೆಯ ಮಗನಾಗಿದ್ದ ಹರಿಕೃಷ್ಣ, ತೆಲುಗು ದೇಶಂ ಪಾರ್ಟಿಯಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಶ್ರೀ ಕೃಷ್ಣಾವತಾರಂ ಚಿತ್ರದ ಮೂಲಕ 1964ರಲ್ಲಿ ಬಾಲ ಕೃಷ್ಣನ ಪಾತ್ರದಲ್ಲಿ ಮೊದಲ ಬಾರಿಗೆ ತೆರೆ ಮೇಲೆ ಕಾಣಿಸಿದ್ದಕೊಂಡಿದ್ದ ಹರಿಕೃಷ್ಣ, ತಲ್ಲ ಪೆಲ್ಲಮಾ, ತಾತಮ್ಮ ಕಾಲ, ರಾಮ್ ರಹೀಮ್, ದಾನ ವೀರ ಶೂರ ಕರ್ಣ ಸಿನಿಮಾಗಳಲ್ಲಿ ನಟಿಸಿದ್ದರು. 1977ರಿಂದ 1998ರವರೆಗೂ ಅವರು ಮತ್ತೆ ಬಣ್ಣಹಚ್ಚಿರಲಿಲ್ಲ. ಶ್ರೀ ರಾಮುಲಯ್ಯಾ ಸಿನಿಮಾದ ಮೂಲಕ ಮತ್ತೆ ಬೆಳ್ಳಿತೆರೆಗೆ ಪ್ರವೇಶಿಸಿದ್ದರು. ಸೀತಾರಾಮ ರಾಜು, ಲಹಿರಿ ಲಹಿರಿ ಲಹಿರಿಲೊ, ಶಿವರಾಮ ರಾಜು, ಸೀತಯ್ಯಾ, ಟೈಗರ್ ಹರಿಶ್ಚಂದ್ರ ಪ್ರಸಾದ್, ಸ್ವಾಮಿ ಚಿತ್ರಗಳಲ್ಲಿ ನಟಿಸಿದ್ದರು. 2005ರಲ್ಲಿ ನಟಿಸಿದ್ದ ಶ್ರಾವಣಮಾಸಂ ಅವರ ಕೊನೆಯ ಚಿತ್ರ.

 

Read These Next

ಮೋದಿ ಸಂಪುಟದಲ್ಲಿ ರಾಜ್ಯಕ್ಕೆ ಮೂವರು ಸಚಿವ ಖಾತೆ, ಜೋಷಿ, ಡಿವಿಎಸ್, ಸುರೇಶ್ ಅಂಗಡಿಗೆ ಖಾತೆ ಹಂಚಿಕೆ

ಪ್ರಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ  ಸಚಿವ ಸಂಪುಟದ ಖಾತೆ ಹಂಚಿಕೆ ತೀರ್ಮಾನವಾಗಿದ್ದು ರಾಜ್ಯದ ಮೂವರು ...

ಅಮಿತ್ ಶಾಗೆ ಗೃಹ ಖಾತೆ, ರಾಜನಾಥ್ ಸಿಂಗ್ ಗೆ ರಕ್ಷಣೆ; ಮೋದಿ ಹೊಸ ಸರ್ಕಾರದ ಸಚಿವರ ಖಾತೆ ಹಂಚಿಕೆ ಪಟ್ಟಿ ಇಲ್ಲಿದೆ

2ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದು, ...