ಮಳೆ ಅವಘಡಕ್ಕೆ ರಾಜ್ಯದಲ್ಲಿ ಒಂಬತ್ತು ಮಂದಿ ಸಾವು l ಕೊಡಗಿನ ಬೆಟ್ಟದಲ್ಲಿ ಸಿಲುಕಿಕೊಂಡ 200 ಮಂದಿ l ನೆಲೆ ಕಳೆದುಕೊಂಡ ಸಾವಿರಾರು ಜನರು

Source: S.O. News Service | By Manju Naik | Published on 17th August 2018, 12:21 PM | State News | Don't Miss |

ಬೆಂಗಳೂರು: ಮಳೆಯ ಆರ್ಭಟ ಮುಂದುವರಿದಿದ್ದು, ಕೊಡಗು ಜಿಲ್ಲೆಯಲ್ಲಿ ಎಲ್ಲೆಂದರಲ್ಲಿ ಬೆಟ್ಟಗುಡ್ಡಗಳು ಕುಸಿಯುತ್ತಿದ್ದು, ಸಾವಿರಾರು ಮಂದಿ ನೆಲೆ ಕಳೆದು
ಕೊಂಡಿದ್ದಾರೆ.‌ ಮಳೆಯಿಂದ ಆದ ಅವಘಡಕ್ಕೆ ಒಂಬತ್ತು ಮಂದಿ ಬಲಿಯಾಗಿದ್ದಾರೆ.

ಮಡಿಕೇರಿ ಸಮೀಪದ ಕಾಟಕೇರಿ ಬಳಿ ಗುಡ್ಡ ಕುಸಿದು, ಮೂವರು ಮಣ್ಣಿನ ಅಡಿ ಸಿಲುಕಿ ಸಾವನ್ನಪ್ಪಿದ್ದಾರೆ. ಆಳಂದ ತಾಲ್ಲೂಕು ಹಿತ್ತಲ ಶಿರೂರ ಗ್ರಾಮದಲ್ಲಿ ಗುರುವಾರ ನಸುಕಿನಲ್ಲಿ ಗೋಡೆ ಕುಸಿದು ತಾಯಿ, ಇಬ್ಬರು ಹೆಣ್ಣು ಮಕ್ಕಳು, ತೀರ್ಥಹಳ್ಳಿ ತಾಲ್ಲೂಕು ಕೋಣಂದೂರಿನಲ್ಲಿ ಮನೆಯ ಗೋಡೆ ಕುಸಿದು ನಾಲ್ಕೂವರೆ ವರ್ಷದ ಮಗು ಮೃತಪಟ್ಟಿದೆ. ಹಾವೇರಿ ಜಿಲ್ಲೆಯ ಕುಮಾರಪಟ್ಟಣದ ಸಮೀಪ ಯುವಕನೊಬ್ಬ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ರಟ್ಟೀಹಳ್ಳಿ ತಾಲ್ಲೂಕಿನ ಮಕರಿ ಗ್ರಾಮದ ಬಳಿ ಎತ್ತಿನಬಂಡಿ ಆಯತಪ್ಪಿ ತುಂಗಾ ಮೇಲ್ದಂಡೆ ಮುಖ್ಯ ಕಾಲುವೆಗೆ ಬಿದ್ದಿದ್ದು, 14 ವರ್ಷದ ಬಾಲಕ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ. ಒಂದು ಎತ್ತು ನೀರಿನಲ್ಲಿ ಮುಳುಗಿ ಮೃತಪಟ್ಟಿದೆ. 

ಕೊಡಗು ಜಿಲ್ಲೆಯ ಹಲವೆಡೆ ಭೂಮಿಯೇ ಬಾಯ್ತೆರೆದ ಅನುಭವ ಉಂಟಾಗುತ್ತಿದೆ. ಕೆದಕಲ್‌ ಸಮೀಪದ ಕಾಂಡನಕೊಲ್ಲಿ ಬೆಟ್ಟದ ಹಾಲೇರಿಯಲ್ಲಿ 200 ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಮಕ್ಕಂದೂರು ಬಳಿ 150ರಿಂದ 200 ಮಂದಿ ಬೆಟ್ಟದಲ್ಲಿ ಸಿಲುಕಿಕೊಂಡಿರುವ ಮಾಹಿತಿ ಸಿಕ್ಕಿದೆ ಎಂದು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ  ತಿಳಿಸಿದ್ದಾರೆ.

ಹಟ್ಟಿಹೊಳೆಯ ನೀರು ಮಕ್ಕಂದೂರು, ತಂತಿಪಾಲ, ಹೆಮ್ಮತ್ತಾಳು, ಮೇಘತ್ತಾಳ್‌ ಸುತ್ತಲೂ ಪ್ರವಾಹದಂತೆ ಆವರಿಸಿದ್ದು ಇಡೀ ಬೆಟ್ಟವೇ ಕುಸಿಯುತ್ತಿದೆ. ತಂತಿಪಾಲ ಎಂಬಲ್ಲಿ ಬೆಟ್ಟದಲ್ಲಿ ವಾಸವಾಗಿದ್ದ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದು, ಹೊಳೆ ಉಕ್ಕಿ ಹರಿಯುತ್ತಿರುವುದರಿಂದ ರಕ್ಷಣಾ ಕಾರ್ಯ ಸಾಧ್ಯವಾಗುತ್ತಿಲ್ಲ.

ಮಡಿಕೇರಿ ಹಾಗೂ ಮಾದಾಪುರದಲ್ಲಿ ಸುರಿಯುತ್ತಿರುವ ಮಳೆಯಿಂದ ಸೋಮವಾರಪೇಟೆ ರಸ್ತೆಯಲ್ಲಿರುವ ಹಟ್ಟಿಹೊಳೆಯ ನೀರು ಪ್ರವಾಹದ ರೀತಿಯಲ್ಲಿ ಉಕ್ಕಿ ಹರಿಯುತ್ತಿದೆ. ಮಡಿಕೇರಿಯ ಮುತ್ತಪ್ಪ ದೇವಾಲಯದ ಬಳಿ ಮಣ್ಣು ಕುಸಿದು ಮನೆಯೊಂದು ರಸ್ತೆಗೆ ಬಂದು ನಿಂತಿದೆ. ಮೊದಲೇ ಅಪಾಯ ತಿಳಿದು ಮನೆಯವರನ್ನು ಗಂಜಿಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

ಭಾಗಮಂಡಲ, ನಾಪೋಕ್ಲು, ಕೊಟ್ಟಮುಡಿ, ಅಯ್ಯಂಗೇರಿ, ಬೆಟ್ಟಗೇರಿ, ಆವಂದೂರು, ಯರವನಾಡು, ಗಾಳಿಬೀಡು ಸಂಪರ್ಕ ಕಡಿತಗೊಂಡಿವೆ. ಹಾರಂಗಿ ಜಲಾಶ
ಯಕ್ಕೆ 75,000 ಸಾವಿರ ಕ್ಯುಸೆಕ್‌ ನೀರು ಬರುತ್ತಿದ್ದು, ನದಿಗೆ 90,000 ಸಾವಿರ ಕ್ಯುಸೆಕ್‌ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ. ಇದ
ರಿಂದ ಕುಶಾಲನಗರ ಅರ್ಧಭಾಗ ಜಲಾವೃತಗೊಂಡಿದೆ.

ಗಂಜಿಕೇಂದ್ರಕ್ಕೂ ನುಗ್ಗಿದ ನೀರು: ಹಾಸನ ಜಿಲ್ಲೆಯಲ್ಲೂ ಮಳೆ ಆರ್ಭಟ ಮುಂದುವರಿದಿದ್ದು, ಅನೇಕ ಕಡೆ ಪ್ರವಾಹದ ಭೀತಿ ಎದುರಾಗಿದೆ. ರಾಮನಾಥಪುರ–ಮೈಸೂರು ರಸ್ತೆ ಮಾರ್ಗ ಬಂದ್‌ ಆಗಿದ್ದು, ಕೊಣನೂರು–ಮಡಿಕೇರಿ ಸಂಪರ್ಕ ಸೇತುವೆ ಮುಳುಗಿದೆ. ಗಂಜಿಕೇಂದ್ರದ ಸಮುದಾಯ ಭವನಕ್ಕೂ ನೀರು ನುಗ್ಗಿದ ಕಾರಣ ನಿರಾಶ್ರಿತರನ್ನು ಯಾತ್ರಿನಿವಾಸ, ಹಾಸ್ಟೆಲ್‌ಗಳಿಗೆ ಸ್ಥಳಾಂತರ ಮಾಡಲಾಯಿತು. ಶಿರಾಡಿಘಾಟ್‌ನಲ್ಲಿ ಸಂಚಾರ ಬಂದ್ ಆಗಿದ್ದು, ಭೂ ಕುಸಿತ ಮುಂದುವರಿದಿದೆ.

ಅರಕಲಗೂಡು ರಾಮನಾಥಪುರ ಮಾರ್ಗವಾಗಿ ಹರಿಯುವ ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಮನೆಗಳು, ಶಾಲೆಗಳು, ಹೊಲ, ಗದ್ದೆಗಳು ಜಲಾವೃತಗೊಂಡಿವೆ. ತಗ್ಗು ಪ್ರದೇಶದಲ್ಲಿದ್ದ 20ಕ್ಕೂ ಹೆಚ್ಚು ಮನೆಗಳು ಮುಳುಗಡೆಯಾಗಿವೆ.

ಮುಳುಗಿದ ಸುತ್ತೂರು ಸೇತುವೆ: ಕೆಆರ್‌ಎಸ್‌, ಕಬಿನಿ ಜಲಾಶಯಗಳಿಂದ ಭಾರಿ ಪ್ರಮಾಣದಲ್ಲಿ ನೀರು ಹೊರ ಬಿಡಲಾಗಿದೆ. ನಂಜನಗೂಡು ತಾಲ್ಲೂಕಿನ ಸುತ್ತೂರು ಸೇತುವೆ ಮುಳುಗಡೆಯಾಗಿದ್ದು, ಬುಧವಾರ ರಾತ್ರಿಯಿಂದಲೇ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ಪಿರಿಯಾಪಟ್ಟಣ ತಾಲ್ಲೂಕಿನ ಕೆಲವು ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ. ಹಲವು ಮನೆಗಳು ಕುಸಿದು ಬಿದ್ದಿವೆ. ತಾಲ್ಲೂಕಿನ ಕೊಪ್ಪ ಗ್ರಾಮದ ಬಳಿ ಕಾವೇರಿ ನದಿ ಅಪಾಯದ ಮಟ್ಟ ತಲುಪಿದ್ದು, ಕೊಪ್ಪ ಮತ್ತು ಆವರ್ತಿ ರಸ್ತೆಯಲ್ಲಿ 4-5 ಅಡಿ ನೀರು ಹರಿಯುತ್ತಿದೆ. ಕೊಪ್ಪ ಮತ್ತು ಗೋಲ್ಡನ್ ಟೆಂಪಲ್ ರಸ್ತೆಯಲ್ಲಿ ಸಂಚಾರ ಬಂದ್ ಮಾಡಲಾಗಿದೆ.

ಎಚ್‌.ಡಿ.ಕೋಟೆ ತಾಲ್ಲೂಕಿನ ಕೇರಳ ಗಡಿ ಭಾಗವಾದ ಡಿ.ಬಿ.ಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವು ಮನೆಗಳು ಜಲಾವೃತಗೊಂಡಿವೆ. ಕೆ.ಆರ್‌.ನಗರ ತಾಲ್ಲೂಕಿನ ಕಪ್ಪಡಿ ಕ್ಷೇತ್ರ ಜಲಾವೃತಗೊಂಡಿದೆ. ಚಾಮರಾಜನಗರ ಜಿಲ್ಲೆ ಹೊಗೆನಕಲ್‌ ಜಲಪಾತದ ಪಾಲಮಡು ಸೇತುವೆ, ಗೋಪಿನಾಥಂ–ಹೊಗೆನಕಲ್‌ ಮಾರ್ಗ ಮಧ್ಯೆ ಇರುವ ಪುಗೊಂಬು ಸೇತುವೆ ಮುಳುಗಡೆಯಾಗಿವೆ.

ಕಾವೇರಿ ಕಣಿವೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕೆಆರ್‌ಎಸ್‌ ಹಾಗೂ ಕಬಿನಿ ಜಲಾಶಯಗಳು ಅಪಾಯದ ಮಟ್ಟ ತಲುಪಿದ್ದು, ಗುರುವಾರ ಸುಮಾರು 2 ಲಕ್ಷ ಕ್ಯುಸೆಕ್‌ ನೀರನ್ನು ನದಿಗೆ ಹರಿಸಲಾಗಿದೆ. ಜಲಾಶಯ ಒಳಹರಿವು ಹೆಚ್ಚುತ್ತಲೇ ಇದ್ದು, ಹೊರಹರಿವನ್ನು 1.50 ಲಕ್ಷ ಕ್ಯುಸೆಕ್‌ಗೆ ಹೆಚ್ಚಿಸುವ ಸಾಧ್ಯತೆ ಇದೆ. ಅದಕ್ಕೂ ಮೊದಲು ಹೈಅಲರ್ಟ್‌ ಘೋಷಿಸುವುದಾಗಿ ಜಿಲ್ಲಾಡಳಿತ ಹೇಳಿದೆ.

ಶಿವಮೊಗ್ಗ ಜಿಲ್ಲೆಯ ಹಲವೆಡೆ ಮಳೆಯ ಅರ್ಭಟ ಮುಂದುವರಿದಿದ್ದು, ಹೊಸನಗರದಲ್ಲಿ ಸತತ ಮಳೆಗೆ ಕೆಲವೆಡೆ ರಸ್ತೆಯ ಅಂಚು ಕುಸಿದಿದೆ. ತೀರ್ಥಹಳ್ಳಿ ತಾಲ್ಲೂಕಿನಲ್ಲೂ ಭಾರಿ ಮಳೆಯಾಗುತ್ತಿದೆ. ಶಿಕಾರಿಪುರ, ಸೊರಬ, ಶಿವಮೊಗ್ಗದಲ್ಲಿ ಮಳೆಯ ಪ್ರಮಾಣ ಸ್ವಲ್ಪಮಟ್ಟಿಗೆ ತಗ್ಗಿದೆ.

ಭದ್ರಾ ಜಲಾಶಯದಿಂದ ಮಧ್ಯಾಹ್ನ 60 ಸಾವಿರ ಕ್ಯುಸೆಕ್‌ ನೀರು ನದಿಗೆ ಹರಿಸುತ್ತಿರುವ ಕಾರಣ ಭದ್ರಾ ನದಿಪಾತ್ರದ ಹಲವು ಗ್ರಾಮಗಳಿಗೆ ನೀರು ನುಗ್ಗಿದೆ. ಭದ್ರಾವತಿ ಹೊಸ ಸೇತುವೆ ಮುಳುಗಿದ್ದು, ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಎರಡು ದಿನಗಳಿಂದ ಆಗುಂಬೆ ಘಾಟಿಯಲ್ಲಿ ವಾಹನಗಳ ಸಂಚಾರಕ್ಕೆ ಹೇರಿದ್ದ ನಿರ್ಬಂಧ ಸಡಿಲಿಸಲಾಗಿದೆ. 

ಹೆದ್ದಾರಿ ಸಂಚಾರ ಸ್ಥಗಿತ: ಸಂಪಾಜೆ ಘಾಟಿಯಲ್ಲಿ ಸತತ 4ನೇ ದಿನದಿಂದ ಸಂಚಾರ ಬಂದ್‌ ಆಗಿದ್ದರೆ, ಶಿರಾಡಿ ಘಾಟಿಯಲ್ಲಿ 3 ದಿನದಿಂದ ಸಂಚಾರ ಬಂದ್ ಆಗಿದೆ.

ಉಕ್ಕಿ ಹರಿಯುತ್ತಿರುವ ತುಂಗಭದ್ರಾ, ಕೃಷ್ಣೆ: ಬಳ್ಳಾರಿ, ಹಾವೇರಿ, ಗದಗ ಜಿಲ್ಲೆಯಲ್ಲಿ ತುಂಗಭದ್ರಾ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಕೃಷ್ಣಾ ನದಿ ಗುರುವಾರವೂ ಉಕ್ಕಿ ಹರಿಯುತ್ತಿದ್ದು, ಹಲವು ಗ್ರಾಮಗಳು ಜಲಾವೃತಗೊಂಡಿವೆ. ತುಂಗಭದ್ರಾ ನದಿ ಪ್ರವಾಹದಿಂದ ಕಂಪ್ಲಿ– ಸಿರುಗುಪ್ಪ ರಾಜ್ಯ ಹೆದ್ದಾರಿ–49ರ ಸಂಪರ್ಕ ಕಡಿತಗೊಂಡಿದೆ. ತಾಲ್ಲೂಕಿನ ಇಟಿಗಿ ನಾರಿಹಳ್ಳ ಸೇತುವೆ, ಕಂಪ್ಲಿ– ಗಂಗಾವತಿ ಸೇತುವೆಗಳು ಮುಳುಗಿವೆ.

ಮಣ್ಣು ತೆರವು ಕಾರ್ಯಾಚರಣೆ

ಮೈಸೂರು: ಬೆಂಗಳೂರು–ಮಂಗಳೂರು ರೈಲು ಸಂಚಾರ ಪುನರಾರಂಭವಾಗಲು ಇನ್ನೂ 6–7 ದಿನಗಳು ಬೇಕಾಗಬಹುದು ಎಂದು ನೈರುತ್ಯ ರೈಲ್ವೆ ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಅಪರ್ಣಾ ಗಾರ್ಗ್‌ ತಿಳಿಸಿದರು.

ಸಕಲೇಶಪುರ–ಸುಬ್ರಮಣ್ಯ ಮಾರ್ಗದ ಮಧ್ಯೆ 55 ಕಿ.ಮೀ. ವ್ಯಾಪ್ತಿಯಲ್ಲಿ 42 ಕಡೆಗಳಲ್ಲಿ ಗುಡ್ಡ ಕುಸಿದಿದೆ. ಕೆಲವೆಡೆ ಮರಗಳು ಉರುಳಿವೆ. ಹಳಿ ಮೇಲೆ ಬಿದ್ದಿರುವ ಮಣ್ಣು ಹಾಗೂ ಕಲ್ಲುಗಳ ತೆರವು ಕಾರ್ಯ ನಡೆಯುತ್ತಿದೆ ಎಂದು  ತಿಳಿಸಿದರು.

10 ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, 45 ಸಹಾಯಕ ಅಧಿಕಾರಿಗಳು ಮತ್ತು 180 ಕಾರ್ಮಿಕರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. 

ಮಳೆಯಿಂದ ಬಾಧಿತ ಜಿಲ್ಲೆಗಳಿಗೆ ₹ 200 ಕೋಟಿ ಬಿಡುಗಡೆ

ಬೆಂಗಳೂರು: ಭಾರಿ ಮಳೆಯಿಂದ ಪ್ರವಾಹ, ಭೂಕುಸಿತದಿಂದ ತೊಂದರೆಗೆ ಸಿಲುಕಿರುವ ಕೊಡಗು, ದಕ್ಷಿಣ–ಕನ್ನಡ, ಉಡುಪಿ, ಹಾಸನ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ತಕ್ಷಣವೇ ₹ 200 ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.

ಪ್ರವಾಹ ಮತ್ತು ಭೂಕುಸಿತದಿಂದ ತೊಂದರೆಗೀಡಾಗಿರುವ ಜಿಲ್ಲೆಗಳ ವಸ್ತು ಸ್ಥಿತಿ ಕುರಿತು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದರು.

ಈ ಜಿಲ್ಲೆಗಳಲ್ಲಿ ಆಗಿರುವ ನಷ್ಟದ ಕುರಿತು ಎರಡು ದಿನಗಳಲ್ಲಿ ಸಮಗ್ರ ವರದಿ ಸಲ್ಲಿಸುವಂತೆಯೂ ಜಿಲ್ಲಾಧಿಕಾರಿಗಳಿಗೂ ಕುಮಾರಸ್ವಾಮಿ ಸೂಚಿಸಿದರು.

Read These Next