ಮೇ 12 ರಂದು ಕರ್ನಾಟಕ ವಿಧಾನಸಭಾ ಚುನಾವಣೆ; ಇಂದಿನಿಂದಲೇ ನೀತಿ ಸಂಹಿತೆ ಜಾರಿ

Source: sonews | By Staff Correspondent | Published on 27th March 2018, 3:52 PM | National News | Don't Miss | State News |

ಹೊಸದಿಲ್ಲಿ: ಕರ್ನಾಟಕ ವಿಧಾನ ಸಭಾ ಚುನಾವಣೆಗೆ ಚುನಾವಣಾ ಆಯೋಗ ಮಂಗಳವಾರ ದಿನಾಂಕ ಘೋಷಣೆ ಮಾಡಿದೆ.

ದಿಲ್ಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಚುನಾವಣಾ ಆಯುಕ್ತ ಓಂಪ್ರಕಾಶ್ ರಾವತ್, ಕರ್ನಾಟಕದ 224 ವಿಧಾನ ಸಭಾ ಕ್ಷೇತ್ರಗಳಲ್ಲಿ ಮೇ 12 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಮೇ 15 ರಂದು ಫಲಿತಾಂಶ ಪ್ರಕಟವಾಗಲಿದೆ. ಇಂದಿನಿಂದಲೇ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾಗಲಿದೆ ಎಂದು ಹೇಳಿದ್ದಾರೆ.

 ಎ.17 ರಂದು ಚುನಾವಣಾ ಅಧಿ ಸೂಚನೆ ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಕೆಗೆ ಎ.24 ಕೊನೆಯ ದಿನ ಹಾಗೂ ಎ.25 ರಂದು ನಾಮಪತ್ರ ಪರಿಶೀಲನೆ ಹಾಗೂ ಎ.27 ರಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ ಎಂದು ಚುನಾವಣಾ ಆಯುಕ್ತ ರಾವತ್ ಹೇಳಿದ್ದಾರೆ.

ರಾಜ್ಯದಲ್ಲಿ 4 ಕೋಟಿ 96 ಲಕ್ಷ ಮತದಾರರಿದ್ದಾರೆ. 56,696 ಮತಗಟ್ಟೆಗಳು, 56,000 ವೋಟಿಂಗ್ ಬೂತ್‌ಗಳಿರುತ್ತವೆ. ಇವಿಎಂ ಜೊತೆಗೆ ವಿವಿಪ್ಯಾಟ್ ವ್ಯವಸ್ಥೆ ಬಳಕೆಯಲ್ಲಿರುತ್ತದೆ. ಪಕ್ಷದ ಚುನಾವಣಾ ವೆಚ್ಚಕ್ಕೆ ಇತಿಮಿತಿಯಿಲ್ಲ. ಪ್ರತಿ ಅಭ್ಯರ್ಥಿಯ ಚುನಾವಣಾ ವೆಚ್ಚ 28 ಲಕ್ಷ ರೂ.ನಿಗದಿಪಡಿಸಲಾಗಿದೆ ಎಂದು ಚುನಾವಣಾ ಆಯುಕ್ತರು ತಿಳಿಸಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣೆ ಘೋಷಣೆ:

ಮೇ 12ರಂದು ಮತದಾನ; 15 ರಂದು ಮತ ಎಣಿಕೆ

ಬೆಂಗಳೂರು-ಭಾರತ ಚುನಾವಣಾ ಆಯೋಗವು ಕರ್ನಾಟಕ ವಿಧಾನಸಭೆಗೆ ಚುನಾವಣೆ ಘೋಷಣೆ ಮಾಡಿದ್ದು, ಮೇ 12 ರಂದು ಮತದಾನ ನಡೆಯಲಿದೆ; ಮೇ 15 ರಂದು ಮತ ಎಣಿಕೆ ನಡೆಯಲಿದೆ.

ಇಂದು ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಕರ್ನಾಟಕ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರು ಚುನಾವಣೆಯ ಮಾದರಿ ನೀತಿ ಸಂಹಿತೆಯು ಇಂದಿನಿಂದಲೇ ಜಾರಿಗೆ ಬಂದಿದ್ದು, ಏಪ್ರಿಲ್ 17 ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗುವುದು, ನಾಮಪತ್ರ ಸಲ್ಲಿಸಲು ಏಪ್ರಿಲ್ 24 ಕೊನೆಯ ದಿನವಾಗಿದೆ. ಏಪ್ರಿಲ್ 25 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಏಪ್ರಿಲ್ 27 ಕೊನೆಯ ದಿನವಾಗಿದೆ. ಮೇ 12 ರಂದು ಮತದಾನ ನಡೆಯಲಿದ್ದು, ಮೇ 15 ರಂದು ಮತ ಎಣಿಕೆ ನಡೆಯಲಿದೆ.  ಚುನಾವಣಾ ಪ್ರಕ್ರಿಯೆಯು ಮೇ 18 ರಂದು ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.

ಮತದಾರರ ಸಂಖ್ಯೆ:

ರಾಜ್ಯದಲ್ಲಿ ಕಳೆದ 2013 ನೇ ಸಾಲಿನ ವಿಧಾನಸಭೆ ಚುನಾವಣೆ ಸಮಯದಲ್ಲಿ ಒಟ್ಟು 4,36,85,739 ಮತದಾರರಿದ್ದರು ಇದರಲ್ಲಿ 2,23,15,727 ಪುರುಷರು ಹಾಗೂ 2,13,67,912 ಮಹಿಳೆಯರು ಮತ್ತು 2,100 ತೃತೀಯ ಲಿಂಗೀಯ ಮತದಾರರಿದ್ದರು.  ಪ್ರಸ್ತುತ 2018 ನೇ ಸಾಲಿನಲ್ಲಿ ಒಟ್ಟು 4,96,82,351 ಮತದಾರರಿದ್ದು  ಇದರಲ್ಲಿ 2,52,05,820 ಪುರುಷರು ಹಾಗೂ 2,44,71,979 ಮಹಿಳೆಯರು ಮತ್ತು 4,552 ತೃತೀಯ ಲಿಂಗಿಗಳು ಒಳಗೊಂಡಿರುತ್ತಾರೆ.   ಕಳೆದ ರಾಜ್ಯ ವಿಧಾನಸಭೆ ಚುನಾವಣೆಗೆ ಹೋಲಿಸಿದ್ದಲ್ಲಿ ಶೇ. 9 ರಷ್ಟು ಮತದಾರರು ಹೆಚ್ಚಾಗಿದ್ದಾರೆ. 

2013 ರ ಚುನಾವಣೆಯಲ್ಲಿ 7,18,000 ಹೊಸ ಯುವ ಮತದಾರರು ಮತ ಚಲಾಯಿಸುವ ಹಕ್ಕನ್ನು ಪಡೆದಿದ್ದರು.  ಅದೇ ರೀತಿ ಪ್ರಸ್ತುತ 2018 ರ ಚುನಾವಣೆಗಾಗಿ 15,42,000 ಹೊಸ ಯುವ ಮತದಾರರು ನೋಂದಾಣಿಯಾಗಿದ್ದಾರೆ.   ಕಳೆದ ಚುನಾವಣೆ ಹೋಲಿಸಿಕೊಂಡಲ್ಲಿ ಶೇ. 1.16 ರಿಂದ 2.20 ಏರಿಕೆ ಕಂಡಿದ್ದು ಇದರಲ್ಲಿ ಲಿಂಗಾನುಪಾತ ಸಹ ಸಾವಿರ ಪುರುಷರಿಗೆ 958 ರಿಂದ 972 ಏರಿಕೆ ಕಂಡು ಬಂದಿದೆ.   

2013 ರ ವಿಧಾನಸಭಾ ಚುನಾವಣೆಯ ಮತದಾನದ ವಿವರ:

ರಾಜ್ಯದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 3,13,81,136 ಮತದಾರರು ಮತದಾನ ಮಾಡಿದ್ದರು.  ಅದರಲ್ಲಿ 1,61,55,714 ಪುರುಷ ಮತದಾರರು ಹಾಗೂ 1,50,57,361 ಮಹಿಳಾ ಮತದಾರರು ಮತ ಚಲಾಯಿಸಿದ್ದರು.   ಒಟ್ಟು ಶೇ. 71.45 ಮತದಾನವಾಗಿತ್ತು.  ಅದರಲ್ಲಿ ಶೇ. 72.40 ಪುರುಷರು ಹಾಗೂ ಶೇ 70.4 ಮಹಿಳೆಯುರು ಮತ್ತು ಶೇ 2 ತೃತೀಯ ಲಿಂಗಿಗಳು ಮತ ಚಲಾಯಿಸಿದ್ದರು.

ಮತಗಟ್ಟೆಗಳ ವಿವರ:

ರಾಜ್ಯದಲ್ಲಿ ಕಳೆದ ವಿಧಾನಸಭಾ ಚುನಾವಣಾ ಸಮಯದಲ್ಲಿ ಒಟ್ಟು 52,034 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು.  ಪ್ರಸ್ತುತ ಚುನಾವಣೆಗಾಗಿ 56,696 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು ಇದೇ ಸಂಖ್ಯೆಯ ಮತಗಟ್ಟೆ ಅಧಿಕಾರಿಗಳನ್ನು ಸಹ ನೇಮಿಸಲಾಗುತ್ತದೆ. ಒಟ್ಟು 1,850 ಹೆಚ್ಚು ಮತಗಟ್ಟೆಗಳನ್ನು ಈ ಚುನಾವಣೆಯಲ್ಲಿ ಸ್ಥಾಪಿಸಲಾಗುತ್ತಿದೆ  

 

ಚುನಾವಣೆಗಾಗಿ ಪೂರ್ವಸಿದ್ದತೆ:

ಪ್ರಸ್ತುತ ಚುನಾವಣೆ ರಾಜ್ಯದಲ್ಲಿ ಒಂದೇ ಹಂತದಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಕಾರ್ಯಕ್ಕಾಗಿ 3,56,552 ಅಧಿಕಾರಿ/ಸಿಬ್ಬಂದಿಗಳ ಅವಶ್ಯಕವಿರುತ್ತದೆ.  ನೀತಿ ಸಂಹಿತೆ ಉಲ್ಲಂಘನೆ ನಿಗಾವಹಿಸಲು 1361 ತಂಡಗಳನ್ನು ರಚಿಸಲಾಗುವುದು.  ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮೇಲೆ ನಿಗಾವಹಿಸಲು 1503 ತಂಡಗಳು ಹಾಗೂ 1542 ಸಂಚಾರಿ ನಿಗಾ ತಂಡಗಳು ಮತ್ತು 2018 ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಲಾಗುವುದು.

ಈ ಬಾರಿ ಚುನಾವಣೆಯಲ್ಲಿ ಹೊಸ ಉಪಕ್ರಮಗಳು:

• ಸಂಚಾರಿ ನಿಗಾ ತಂಡಗಳ ವಾಹನಗಳ ಜಿ.ಪಿ.ಎಸ್. ಆಧಾರಿತ ಟ್ರ್ಯಾಕಿಂಗ್ ವ್ಯವಸ್ಥೆ.

• ಮತಗಟ್ಟೆಗಳ ಜಿ.ಐ.ಎಸ್. ಆಧಾರಿತ ದತ್ತಾಂಶ ಹಾಗೂ ಡಿಜಿಟಲ್ ಮ್ಯಾಪ್‍ಗಳ ಲಭ್ಯತೆ.

• ಮತಗಟ್ಟೆಗಳ ಪ್ರದೇಶ ಹಾಗೂ ವಿಧಾನಸಭಾ ಕ್ಷೇತ್ರಗಳ ಡಿಜಿಟಲ್ ಅಟ್ಲಾಸ್

• ವಿಕಲಚೇತನರನ್ನು ಗುರುತಿಸಿ ಅವರಿಗೆ ಅಗತ್ಯ ಸೌಲಭ್ಯ ಒದಗಿಸಲು ಕ್ರಮ

• ಮತಗಟ್ಟೆಗಳನ್ನು ಗುರುತಿಸಲು ಎಸ್‍ಎಂಎಸ್ ಆಧಾರಿತ ಸೇವೆ.

• ಮತಗಟ್ಟೆಗಳನ್ನು ಗುರುತಿಸಲು ಆಪ್ ಸೇವೆ.

• ಅತಿ ಹೆಚ್ಚು ಮತದಾರರನ್ನು ಹೊಂದಿರುವ ಮತಗಟ್ಟೆಗಳಲ್ಲಿ ಕ್ಯೂ ಸ್ಟೇಟಸ್  ಸೌಲಭ್ಯ

• ಲಭ್ಯ ಸೌಲಭ್ಯವನ್ನು ಆಧರಿಸಿ 3000 ದಿಂದ 6000 ಮತಗಟ್ಟೆಗಳ ಮತದಾನ ಪ್ರಕ್ರಿಯೆಯ ವೆಬ್‍ಕಾಸ್ಟಿಂಗ್ ವ್ಯವಸ್ಥೆ

• ಚುನಾವಣಾ ಪ್ರಕ್ರಿಯೆಯ ಉಸ್ತುವಾರಿ ಸೌಲಭ್ಯಗಳ ಏಕೀಕೃತ ವ್ಯವಸ್ಥೆ

• ಗಂಭೀರ ಸ್ವರೂಪದ ದೂರುಗಳ ತ್ವರಿತ ಪರಿಶೀಲನೆಗೆ ಜಿಐಎಸ್ ಆಧಾರಿತ ಟ್ರಾಕಿಂಗ್ ವ್ಯವಸ್ಥೇ

• ಮುಖ್ಯವಾಹಿನಿಯಿಂದ ಹೊರಗೆ ಉಳಿದಿರುವ ಆದಿವಾಸಿ ಬುಡಕಟ್ಟು ಜನಾಂಗದವರು, ಅಲೆಮಾರಿ ಜನಾಂಗದವರ ನೋಂದಣಿಗೆ ವಿಶೇಷ ಅಭಿಯಾನ. ಪ್ರಾಯೋಗಿಕವಾಗಿ ಬುಡಕಟ್ಟು ಜನಾಂಗದವರ ಸಾಂಪ್ರದಾಯಿಕ ಶೈಲಿಯ ಮತಗಟ್ಟೆಗಳ ಸ್ಥಾಪನೆ.

• ರಾಜ್ಯಾದ್ಯಂತ ವಿದ್ಯುನ್ಮಾನ ಮತಯಂತ್ರ, ವಿವಿಪ್ಯಾಟ್ ಯಂತ್ರಗಳ ಕುರಿತು ಮಾಧ್ಯಮದವರು, ರಾಜಕೀಯ ಪಕ್ಷಗಳು ಹಾಗೂ ನ್ಯಾಯಾಂಗದವರಿಗೆ ತರಬೇತಿ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮಗಳು

• ಯುವ ಮತದಾರರಲ್ಲಿ ಜಾಗೃತಿ ಮೂಡಿಸಲು ಹೆಚ್ಚಿನ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಹಿನ್ನೆಲೆಯಲ್ಲಿ ಯುವ ಮತದಾರರ ಸಂಖ್ಯೆ ದ್ವಿಗುಣ. 2013ರಲ್ಲಿ ಯುವ ಮತದಾರರ ಸಂಖ್ಯೆ 7.18 ಲಕ್ಷ ಇದ್ದು, 2018ರಲ್ಲಿ 15.42 ಲಕ್ಷಕ್ಕೆ ಹೆಚ್ಚಳವಾಗಿದೆ.

• ವ್ಯಾಪಕ ಜಾಗೃತಿ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಲಿಂಗಾನುಪಾತವು 2013ಕ್ಕೆ ಹೋಲಿಸಿದರೆ 2018ರಲ್ಲಿ ಪ್ರತಿ ಸಾವಿರ ಪುರುಷ ಮತದಾರರಿಗೆ ಮಹಿಳಾ ಮತದಾರರ ಸಂಖ್ಯೆ 958 ರಿಂದ 972ಕ್ಕೆ ಹೆಚ್ಚಳವಾಗಿದೆ.

• ನಗರ ಪ್ರದೇಶದಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಆದ್ಯತೆ. ಈ ನಿಟ್ಟಿನಲ್ಲಿ ವ್ಯಾಪಕವಾಗಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.

• ರಾಹುಲ್ ದ್ರಾವಿಡ್ ಅವರನ್ನು ರಾಜ್ಯ ವಿಧಾನ ಸಭಾ ಚುನಾವಣೆಗೆ ರಾಯಭಾರಿಯಾಗಿ ಆಯ್ಕೆ ಮಾಡಲಾಗಿದೆ.

• ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಅವರಿಂದ ಕರ್ನಾಟಕ ಚುನಾವಣಾ ಗೀತೆ ರಚನೆ

• ಆಯ್ದ ಮತಗಟ್ಟೆಗಳಲ್ಲಿ ಕೆಲವು ವಿಕಲಚೇತನ ಸರ್ಕಾರಿ ನೌಕರರೂ ಚುನಾವಣಾ ಕರ್ತವ್ಯ ನಿರ್ವಹಿಸಲಿದ್ದಾರೆ.

• ನಗರ ಪ್ರದೇಶದ ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 4 ಹಾಗೂ ಗ್ರಾಮೀಣ ಪ್ರದೇಶದ ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 1 ಮತಗಟ್ಟೆಗಳಲ್ಲಿ ಮಹಿಳಾ ಸಿಬ್ಬಂದಿ ಮಾತ್ರ ಕರ್ತವ್ಯ ನಿರ್ವಹಿಸಲಿದ್ದಾರೆ.

ಮಾದರಿ ನೀತಿ ಸಂಹಿತೆ:

ಇದೇ ಸಂದರ್ಭದಲ್ಲಿ ಮಾದರಿ ನೀತಿ ಸಂಹಿತೆ ಜಾರಿ ಕುರಿತು ಮಾಹಿತಿ ನೀಡಿದ ಅಪರ ಮುಖ್ಯ ಚುನಾವಣಾಧಿಕಾರಿ-1 ಡಾ. ಕೆ.ಜಿ. ಜಗದೀಶ್ ಅವರು ಆಡಳಿತ ಪಕ್ಷವು ಹೊಸ ಕಾರ್ಯಕ್ರಮಗಳನ್ನು ಘೋಷಿಸುವಂತಿಲ್ಲ. ಮುಂದುವರಿದ ಕಾಮಗಾರಿಗಳನ್ನು ನಡೆಸಲು ಅವಕಾಶವಿದೆ. ಆದರೆ ಹೊಸ ಕಾಮಗಾರಿಗಳನ್ನು ಪ್ರಾರಂಭಿಸುವಂತಿಲ್ಲ ಎಂದು ತಿಳಿಸಿದರು.

ಯಾವುದೇ ಯೋಜನೆಗಳಡಿ ಹೊಸ ಫಲಾನುಭವಿಗಳನ್ನು ಆಯ್ಕೆ ಮಾಡುವಂತಿಲ್ಲ; ಶಾಸಕರು, ಸಂಸದರ ಪ್ರದೇಶಾಭಿವೃದ್ಧಿ ನಿಧಿಯಡಿ ಅನುದಾನ ಬಿಡುಗಡೆ ಮಾಡುವಂತಿಲ್ಲ. ಆದರೆ ಬರ, ನೆರೆಯಂತಹ ತುರ್ತು ಸಂದರ್ಭದಲ್ಲಿ ಪರಿಹಾರ ವಿತರಿಸಲು ಅವಕಾಶವಿಲ್ಲ. ಯಾವುದೇ ಹೊಸ ನೇಮಕಾತಿ ನಡೆಸುವಂತಿಲ್ಲ, ಸಚಿವರು, ಜನಪ್ರತಿನಿಧಿಗಳು ಸರ್ಕಾರಿ ವಾಹನವನ್ನು ಚುನಾವಣಾ ಪ್ರಚಾರಕ್ಕೆ, ಖಾಸಗಿ ಓಡಾಟಕ್ಕೆ ಬಳಸುವಂತಿಲ್ಲ ಎಂದು ವಿವರಿಸಿದರು.

ಅಪರ ಪೊಲೀಸ್ ಮಹಾನಿರ್ದೇಶಕ ಕಮಲ್ ಪಂತ್ ಅವರು ಮಾತನಾಡಿ, ಪೊಲೀಸ್ ಇಲಾಖೆಯ ಸೈಬರ್ ಠಾಣೆಯ ಘಟಕಗಳು ಈಗಾಗಲೇ ಸಾಮಾಜಿಕ ಜಾಲತಾಣಗಳ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸುತ್ತಿದ್ದಾರೆ. ಇದಲ್ಲದೆ ಕಾನೂನು ಉಲ್ಲಂಘನೆ ಮಾಡಿದವರ ಮೇಲೆ ಐಪಿಸಿ ಹಾಗೂ ಪ್ರಜಾ ಪ್ರತಿನಿಧಿ ಕಾಯ್ದೆಯನ್ವಯ, ಮಾಹಿತಿ ತಂತ್ರಜ್ಞಾನ ಕಾಯ್ದೆಯನ್ವಯ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಅಭ್ಯರ್ಥಿಗಳ ಸಾಮಾಜಿಕ ಜಾಲತಾಣಗಳ ಬಳಕೆ ಕುರಿತು ಚುನಾವಣಾ ಆಯೋಗವು ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಅದರಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Read These Next

ಕೇರಳದ ಎರಡು ಕೆ ಎಸ್ ಆರ್ ಟಿ ಸಿ ಬಸ್ಸುಗಳಿಗೆ ಕಲ್ಲೆಸೆತ:ಬದಿಯಡ್ಕ ಪೊಲೀಸರಿಂದ  ಆರು ಮಂದಿ ವಿರುದ್ಧ ಕೇಸು ದಾಖಲು

ಕೇರಳದ ಎರಡು ಕೆ ಎಸ್ ಆರ್ ಟಿ ಸಿ ಬಸ್ಸುಗಳಿಗೆ ಕಲ್ಲೆಸೆತ:ಬದಿಯಡ್ಕ ಪೊಲೀಸರಿಂದ  ಆರು ಮಂದಿ ವಿರುದ್ಧ ಕೇಸು ದಾಖಲು

ಮೋದಿ ಸಂಪುಟದಲ್ಲಿ ರಾಜ್ಯಕ್ಕೆ ಮೂವರು ಸಚಿವ ಖಾತೆ, ಜೋಷಿ, ಡಿವಿಎಸ್, ಸುರೇಶ್ ಅಂಗಡಿಗೆ ಖಾತೆ ಹಂಚಿಕೆ

ಪ್ರಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ  ಸಚಿವ ಸಂಪುಟದ ಖಾತೆ ಹಂಚಿಕೆ ತೀರ್ಮಾನವಾಗಿದ್ದು ರಾಜ್ಯದ ಮೂವರು ...