ಭಾರತ, ಇಸ್ರೇಲ್ ಮತ್ತು ದಮನದ ರಾಜಕೀಯ

Source: sonews | By sub editor | Published on 17th July 2017, 3:46 PM | Global News | Special Report |

ಸೇನಾಬಲದ ಮೂಲಕ ಪ್ಯಾಲೆಸ್ತೇನನ್ನು ವಶಪಡಿಸಿಕೊಂಡಿರುವುದನ್ನು ಸಮರ್ಥಿಸಿಕೊಳ್ಳಲು ಇಸ್ರೇಲ್ ಮುಂದಿಡುತ್ತಿರುವ ಅಮಾನವೀಯ ಸಿದ್ಧಾಂತಗಳನ್ನು ಭಾರತವು ಸಹ ಆಮದು ಮಾಡಿಕೊಳ್ಳಲಿದೆಯೇ?

ಸುಕುಮಾರ್ ಮುರಳೀಧರನ್ ಬರೆಯುತ್ತಾರೆ:

ಇಸ್ರೇಲಿನ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರು ನೈತಿಕತೆ ಮತ್ತು ವಿವೇಕಗಳ ಮೇಲೆ ತಮಗಿರುವ ಏಕಸ್ವಾಮ್ಯವನ್ನು ಪ್ರಶ್ನಿಸುವವರ ವಿರುದ್ಧ ಬಹಿರಂಗವಾಗಿ ಹರಿಹಾಯುವುದನ್ನು ಒಂದು ಹವ್ಯಾಸವನ್ನಾಗಿಯೇ ಬೆಳೆಸಿಕೊಂಡಿದ್ದಾರೆ. ಗಾಜಾ ಪಟ್ಟಿಯಲ್ಲಿ ಇಸ್ರೇಲಿನಿಂದ ತುಳಿತಕ್ಕೆ ಒಳಗಾಗಿರುವ ಪ್ಯಾಲೆಸ್ತೇನ್ ಜನರಿಗೆ ಐರ್‌ಲ್ಯಾಂಡ್ ಸರ್ಕಾರ ಸಹಕಾರವನ್ನು ನೀಡಿದ ಪಾಪದಿಂದಾಗಿ ಇತ್ತೀಚೆಗೆ ಆ ದೇಶದ ಪ್ರಧಾನಿ ನೇತನ್ಯಾಹು ಅವರಿಂದ ಉಪದೇಶಾಮೃತಗಳನ್ನು ಕೇಳಬೇಕಾಗಿ ಬಂತು. ಇದಕ್ಕೆ ಮುನ್ನ ಇಸ್ರೇಲ್‌ಗೆ ಭೇಟಿ ನೀಡಿದ್ದ ಜರ್ಮನಿಯ ವಿದೇಶಾಂಗ ಮಂತ್ರಿಯನ್ನು ಅವರು ಕಟುವಾಗಿ ವಿಮರ್ಶಿಸಿದ್ದು ಮಾತ್ರವಲ್ಲದೆ ಭೇಟಿಯನ್ನೂ ನಿರಾಕರಿಸಿದ್ದರು. ಅದಕ್ಕೆ ಕಾರಣವೇನೆಂದರೆ ಆಕ್ರಮಿಸಲ್ಪಟ್ಟ ಪ್ಯಾಲೆಸ್ತೀನ್ ಪ್ರದೇಶದಲ್ಲಿ ನಿರಂತರವಾಗಿ ಮುಂದುವರೆಯುತ್ತಿರುವ ಅಪರಾಧಗಳನ್ನು ಪಟ್ಟಿ ಮಾಡುತ್ತಿರುವ ಬ್ರೇಕಿಂಗ್ ಸೈಲೆನ್ಸ್ (ಮೌನ ಮುರಿಯೋಣ) ಎಂಬ ಇಸ್ರೇಲಿ ಸೈನಿಕರ ಗುಂಪೊಂದನ್ನು ಜರ್ಮನಿಯ ವಿದೇಶಾಂಗ ಮಂತ್ರಿಯು ಭೇಟಿಯಾಗಬಯಸಿದ್ದು.

ಆದರೆ ಜುಲೈನ ಪ್ರಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇಸ್ರೇಲಿಗೆ ಭೇಟಿ ನೀಡಿದಾಗ ಮಾತ್ರ ಅಂಥ ಯಾವುದೇ ಉಪದೇಶಗಳನ್ನು ನೀಡುವ ಅಗತ್ಯವೇ ಉದ್ಭವಿಸಲಿಲ್ಲ. ಇಸ್ರೇಲಿನ ರಾಜಧಾನಿ ಟೆಲ್ ಅವೀವ್‌ನ ವಿಮಾನ ನಿಲ್ದಾಣದಲ್ಲಿನ ಮೊದಲ ಆಲಿಂಗನದಿಂದ ಮೊದಲುಗೊಂಡು ಇಡೀ ಭೇಟಿಯುದ್ದಕ್ಕೂ ಇಬ್ಬರೂ ಪ್ರಧಾನಿಗಳು ಅತ್ಯಂತ ಸ್ನೇಹ-ಸೌಹಾರ್ದದಿಂದ ಇದ್ದರು. ನಂತರದಲ್ಲಿ ನಡೆದ ಅಧಿಕೃತ ಸಂಭ್ರಮಾಚರಣೆಗಳಲ್ಲಿ ಪ್ಯಾಲೇಸ್ತೀನ್ ಎಂಬ ಪದವು ಅಪ್ಪಿತಪ್ಪಿಯೂ ಸುಳಿಯಲಿಲ್ಲ. ಹಾಗೂ ಇಸ್ರೇಲ್ ವಶದಲ್ಲೇ ಅಳಿದುಳಿದಿರುವ ಪ್ಯಾಲೇಸ್ತೀನಿ ಪ್ರದೇಶಗಳಾದ ಗಾಜಾ ಪಟ್ಟಿ ಮತ್ತು ವೆಸ್ಟ್ ಬ್ಯಾಂಕ್ (ಪ್ರಶಿಮ ದಂಡೆ) ಇರುವ ದಿಕ್ಕಿನೆಡೆ ಈ ನಾಯಕರು ಕತ್ತು ಸಹ ತಿರುಗಿಸಲಿಲ್ಲ. ನಂತರ ಇಬ್ಬರೂ ನಾಯಕರು ಜಂಟಿಯಾಗಿ ನೀಡಿದ ೨೨ ಪ್ಯಾರಾಗಳ ಹೇಳಿಕೆಯಲ್ಲಿ ೨೦ನೇ ಪ್ಯಾರಾದಲ್ಲಿ ಪ್ಯಾಲೆಸ್ತೀನ್ ಬಗ್ಗೆ ಸಾಂಪ್ರದಾಯಿಕವಾಗಿ ಒಂದೇ ಒಂದೇ ಸಾಲಿನ ಉಲ್ಲೇಖ ಮಾಡಲಾಗಿತ್ತು.

ತನ್ನ ಈ ವರ್ತನೆಯನ್ನು ಸಮರ್ಥಿಸಿಕೊಳ್ಳಲು ಭಾರತದ ಬಳಿ ಹಲವಾರು ವಾದಗಳಿವೆ. ಮೇಲಾಗಿ ಕಳೆದ ಮೇ ತಿಂಗಳಲ್ಲಿ ಭಾರತವು ಪ್ಯಾಲೆಸ್ತೀನ್ ಅಥಾರಿಟಿ (ಪ್ಯೇಲಿಸ್ತೀನ್ ಪ್ರಾಧಿಕಾರ)ಯ ಅಧ್ಯಕ್ಷ ಮೊಹಮ್ಮದ್ ಅಬ್ಬಾಸ್ ಅವರ ಭೇಟಿಗೂ ಆತಿಥ್ಯ ವಹಿಸಿತ್ತು. ಸುದೀರ್ಘ ಆಕ್ರ,ಮಣಕ್ಕೆ ಒಳಗಾಗಿರುವ ಪ್ಯಾಲೆಸ್ತೀನರ ಹಕ್ಕಿನ ಮರುಸ್ವಾಧೀನದ ವಿಷಯವೇ ಈ ಭೇಟಿಯ ಪ್ರಮುಖ ಕಾರ್ಯಸೂಚಿಯಾಗಿತ್ತು. ಆದರೆ ಭಾರತದೊಂದಿಗಿನ ಭೇಟಿಯಿಂದ ಸಂತೃಪ್ತರಾಗಿ ಮರಳಿದ ಅಬ್ಬಾಸರಿಗೆ ತವರಿನಲ್ಲಿ ಕೆಟ್ಟ ಸುದ್ದಿ ಕಾಯುತ್ತಿತ್ತು. ವೆಸ್ಟ್ ಬ್ಯಾಂಕ್ ಪ್ರದೇಶದಲ್ಲಿ ಕಾನೂನುಬಾಹಿರವಾಗಿ ನೆಲೆಗೊಂಡಿರುವ ಇಸ್ರೇಲಿ ಪ್ರದೇಶಗಳನ್ನು ಅತ್ಯಂತ ದೊಡ್ಡ ಮಟ್ಟದಲ್ಲಿ ಇನ್ನಷ್ಟು ವಿಸ್ತರಿಸುವ ಘೋಷಣೆಯನ್ನು ಇಸ್ರೇಲ್ ಮಾಡಿತ್ತು. ಇದರಿಂದ ಆಕ್ರೋಶಿತರಾದ ಅಬ್ಬಾಸ್ ಅವರು ತಮ್ಮ ಅಸಮಾಧಾನವನ್ನು ಒಂದು ವಿಚಿತ್ರ ರೀತಿಯಲ್ಲಿ ಇಸ್ರೇಲಿ ಸರ್ಕಾರಕ್ಕೆ ತಿಳಿಯಪಡಿಸಿದರು: ಇಸ್ರೇಲ್ ಕ್ರಮಕ್ಕೆ ಪ್ರತಿಯಾಗಿ ಇನ್ನು ಮುಂದೆ ಪ್ಯಾಲೆಸ್ತೀನ್ ಪ್ರಾಧಿಕಾರವು ಗಾಜಾ ಪ್ರದೇಶದ ವಿದ್ಯುತ್ ಬಿಲ್ಲನ್ನು ಕಟ್ಟುವುದಿಲ್ಲವೆಂದು ಅವರು ಘೋಷಿಸಿದರು. ಕೂಡಲೇ ಇಸ್ರೇಲ್ ಆ ಪ್ರದೇಶಕ್ಕೆ ವಿದ್ಯುತ್ ಸರಬರಾಜನ್ನು ಕಡಿತಗೊಳಿಸಿತು. ಪರಿಣಾಮವಾಗಿ ಆ ಸಣ್ಣ ಪ್ರದೇಶದಲ್ಲಿ ವಾಸಿಸುವ ಜನತೆ ಶಾಶ್ವತ ಹಾನಿಯುಂಟುಮಾಡುವ ಅಮಾನವೀಯ ಸಂಕಷ್ಟಗಳಿಗೆ ಗುರಿಯಾದರು.

ಮೋದಿ ಭೇಟಿಯ ನಂತರದಲ್ಲಿ ನೀಡಲಾದ ಜಂಟಿ ಹೇಳಿಕೆಯಲ್ಲಿ ಪ್ಯಾಲೆಸ್ತೀನ್‌ನ ಪ್ರಸ್ತಾಪವು ಅತ್ಯಂತ ನಗಣ್ಯ ಸ್ಥಾನಕ್ಕೆ ದೂಡಲ್ಪಟ್ಟಿದ್ದು ಒಂದಾದರೆ ಆ ಹೇಳಿಕೆಯ ಪ್ರಥಮ ಪ್ಯಾರಾದಲ್ಲಿ ಇಸ್ರೇಲ್ ಹಾಗೂ ಭಾರತದ ದ್ವಿಪಕ್ಷೀಯ ಸಂಬಂಧಗಳು ಇದೀಗ ವ್ಯೂಹಾತ್ಮಕ ಪಾಲುದಾರಿಕೆಯ ಮಟ್ಟಕ್ಕೆ ಎತ್ತರಿಸಲ್ಪಟ್ಟಿದೆ ಎಂದು ಘೋಷಿಸಲಾಗಿತ್ತು. ಆ ಮುಂಜಾನೆ ಭಾರತ ಮತ್ತು ಇಸ್ರೇಲ್ ಸರ್ಕಾರಗಳು ಪ್ರತ್ಯೇಕವಾಗಿ ತಮ್ಮ ಕರಡು ಹೇಳಿಕೆಗಳನ್ನು ವಿತರಿಸಿದ್ದರು. ಆದರೆ ಮೇಲಿನ ಹೇಳಿಕೆ ಭಾರತದ ಕರಡಿನಲ್ಲೇ ಇತ್ತೇ ವಿನಃ ಇಸ್ರೇಲಿನ ಕರಡಿನಲ್ಲಿ ಇರಲಿಲ್ಲ. ಈ ವಿಷಯದ ಬಗ್ಗೆ ಸಣ್ಣ ಗೊಂದಲವೇ ಸೃಷಿಯಾಯಿತು. ಅಂತಿಮವಾಗಿ ವ್ಯೂಹಾತ್ಮಕ ಪಾಲುದಾರಿಕೆ ಎಂಬ ಪರಿಕಲ್ಪನೆ ಭಾರತದ್ದೇ ಹೊರತು ಇಸ್ರೇಲಿನದ್ದಲ್ಲ ಎಂಬ ಸ್ಪಷ್ಟನೆಯನ್ನು ನೀಡಲಾಯಿತು!

ಒಂದು ದೇಶದಿಂದ ದೊಡ್ಡ ಪ್ರಮಾಣದಲ್ಲಿ ಸೈನಿಕ ಸಾಮಗ್ರಿಗಳನ್ನು ಕೊಳ್ಳುವ ಒಪ್ಪಂದವನ್ನು ಮಾಡಿಕೊಳ್ಳುವ ಮೂಲಕ ಅದರೊಡನೆ   ಒಂದು ವ್ಯೂಹಾತ್ಮಕ ಪಾಲುದಾರಿಕೆಗೆ ಮುಂದಾಗುವುದೆಂದರೆ ಆಯಾ ದೇಶಗಳ ಭೌಗೋಳಿಕ-ರಾಜಕೀಯ ಆಸಕ್ತಿಗಳಿಗೂ ಸಮ್ಮತಿ ಸೂಚಿಸುವುದೆಂದೇ ಅರ್ಥ. ತನ್ನ ಪ್ರದೇಶದಲ್ಲಿನ ಪ್ರಾದೇಶಿಕ ವಿಭಜನೆಯನ್ನು ತಾರಕಕ್ಕೇರಿಸುವ ಉದ್ದೇಶ ಹೊಂದಿರುವ ಇಸ್ರೇಲಿನ ಜೊತೆ ಭಾರತಕ್ಕೆ ಯಾವ ಸಾಮ್ಯತೆಗಳಿರಬಹುದೆಂಬುದು ಸ್ಪಷ್ಟವಿಲ್ಲ. ಅತ್ಯಂತ ವಿಶಾಲವಾದ ನಿರ್ವಚನವನ್ನು ಹೊಂದಿರುವ ವ್ಯೂಹಾತ್ಮಕ ಗಡಿ ಪ್ರದೇಶಗಳೊಳಗೆ ಯಾವುದೇ ಬಗೆಯ ಅಂತರರಾಷ್ಟ್ರೀಯ ದಂಡನೆ ಅಥವಾ ನಿಂದನೆಯ ಭಯವಿಲ್ಲದೆ ಎಂಥಾ ನೀತಿಯನ್ನಾದರೂ ಅನುಸರಿಸುವ ಸ್ವೇಚ್ಚೆಯನ್ನು ಇಸ್ರೇಲ್ ದಕ್ಕಿಸಿಕೊಂಡಿದೆ. ಭಾರತವು ಅದೇ ಬಗೆಯ ನೀತಿಯನ್ನು ಅನುಸರಿಸುವುದು ಮುಠಾಳತನವೇ ಆದೀತು.

ಹಾಗೆಂದ ಮೇಲೆ ಇಸ್ರೇಲಿನೊಡನೆ ವ್ಯೂಹಾತ್ಮಕ ಪಾಲುದಾರಿಕೆ ಎಂಬುದರ ಅರ್ಥವೇನಾಗುತ್ತದೆ? ಅದರ ಅರ್ಥವಿಷ್ಟೆ. ಇಸ್ರೇಲ್ ಪ್ಯಾಲೆಸ್ತೀನ್ ಮೇಲೆ ನಡೆಸುತ್ತಿರುವ ಸೈನಿಕ ದುರಾಕ್ರಮಣಗಳ ಸಮರ್ಥನೆಗೆ ಮುಂದೊಡ್ಡುತ್ತಿರುವ ದ್ವೇಷಪೂರಿತ ತತ್ವ ಸಿದ್ಧಾಂತಗಳನ್ನು ತನ್ನ  ರಾಜಕೀಯ ಕಾರ್ಯಾಚರಣೆಗಳ ಸಮರ್ಥನೆಗೂ ಭಾರತವು ಆಮದು ಮಾಡಿಕೊಳ್ಳಲಿದೆ. ಅದಕ್ಕೆ ಈ ವ್ಯೂಹಾತ್ಮಕ ಪಾಲುದಾರಿಕೆ ಎಂಬುದು ಒಂದು ಮುಖವಾಡವನ್ನು ಒದಗಿಸುತ್ತದೆ. ಇಸ್ರೇಲಿನ ಪ್ರಧಾನಿಗಳು ತಮ್ಮ ಉದ್ದೇಶವನ್ನಂತೂ ಅತ್ಯಂತ ಸ್ಪಷ್ಟವಾದ ಮಾತುಗಳಲ್ಲಿ ಬಹಿರಂಗ ಪಡಿಸಿದ್ದಾರೆ. ಪ್ರಾಚೀನ ಜುಡಾಯಿಸಂನ ವೈಭವದ ದಿನಗಳಿಂದ ಮೊದಲುಗೊಂಡು ಇಂದಿನ ಯೆಹೂದಿ ಆಕ್ರಮಣದ ಅವಧಿಯವರೆಗೆ ಹರಡಿಕೊಂಡಿರುವ ಪ್ಯಾಲೆಸ್ತೀನಿಯರ ಇಡೀ ಇತಿಹಾಸವನ್ನೇ ಸಂಪೂರ್ಣವಾಗಿ ನಿರ್ನಾಮ ಮಾಡುವುದು ಇಸ್ರೇಲಿನ ಸೈದ್ಧಾಂತಿಕ ಕಾರ್ಯತಂತ್ರ. ಯೆಹೂದಿಗಳ ಪ್ರಾಧಾನ್ಯತೆ ಮತ್ತು ಆ ಭೂ ಪ್ರದೇಶದ ಮೇಲೆ ಯೆಹೂದಿಗಳ ಹಕ್ಕಿನ ಪ್ರತಿಪಾದನೆಯ ಮುಂದೆ ಸಣ್ಣ ಪುಟ್ಟ ಜನರ ಇತಿಹಾಸಗಳೆಲ್ಲವೂ ತಲೆಬಾಗಲೇ ಬೇಕೆಂಬುದು ಅವರ ಉದ್ದೇಶ.

ಭಾರತದಲ್ಲಿ ಆಕ್ರಮಣಶೀಲವಾಗಿ ಮುನ್ನುಗ್ಗುತ್ತಿರುವ ಹಿಂದೂತ್ವ ಸಿದ್ಧಾಂತದಲ್ಲೂ ಇದೇ ಬಗೆಯ ಉದ್ದೇಶಗಳನ್ನು ಕಾಣಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಕಾಲು ಶತಮಾನದಷ್ಟು ಹಳೆಯದಾಗಿರುವ ಕಾಶ್ಮೀರಿ ಜನತೆಯ ಬಂಡಾಯವನ್ನು ಹತ್ತಿಕ್ಕಲು ಭಾರತವು ಅನುಸರಿಸುತ್ತಿರುವ ವ್ಯೂಹತಂತ್ರದ ಮೇಲೆ ಇಸ್ರೇಲಿನಿಂದ ಕಡತಂದಿರುವ ಧೋರಣೆಗಳು ತೀವ್ರ ಪ್ರಭಾವ ಬೀರುತ್ತಿವೆ. ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಹೆಸರಿನಲ್ಲಿ ಚಾಲ್ತಿಯಲ್ಲಿರುವ ದೋವಲ್ ಡಾಕ್ಟ್ರೀನ್ (ದೋವಲ್ ನೀತಿಧೋರಣೆ) ಈ ಹಿನ್ನೆಲೆಯಲ್ಲೇ ರೂಪುಗೊಂಡಿದೆ. ಅದನ್ನು ಈ ಹಿಂದೆ ಕಾಶ್ಮೀರದ ಬಗ್ಗೆ ಅನುಸರಿಸಲಾಗುತ್ತಿದ್ದ ನೀತಿಗಳಿಗಿಂತ ಭಿನ್ನವಾದ ಆಕ್ರಮಣಶೀಲ ಮತ್ತು ಕಠೋರ ನೀತಿ ಯೆಂದು ಬಣ್ಣಿಸಲಾಗುತ್ತದೆ. ಈ ನೀತಿಯು ಕಾಶ್ಮೀರ ಸಮಸ್ಯೆಯ ಪರಿಹಾರದ ಬಗ್ಗೆ ಯಾವುದೇ ಬಗೆಯ ರಾಜಕೀಯ ಸ್ವರೂಪದ ಚರ್ಚೆಯನ್ನೇ ಹತ್ತಿಕ್ಕಬೇಕೆಂದೂ ಮತ್ತು ಎಲ್ಲಾ ಬಗೆಯ ಪ್ರತಿರೋಧಗಳನ್ನು ಭೀಭತ್ಸವಾಗಿ ಅಣಗಿಸಲು ಎಲ್ಲಾ ಬಗೆಯ ದಮನಕಾರಿ ಶಕ್ತಿಗಳನ್ನು ಬಳಸಬೇಕೆಂದೂ ಪ್ರತಿಪಾದಿಸುತ್ತದೆ.

ದೋವಲ್ ಅವರು ೨೦೧೦ರಲ್ಲಿ ಭಾರತದ ಬೇಹುಗಾರಿಕಾ ಸೇವೆಯಿಂದ ನಿವೃತ್ತರಾದರು. ಅವರು ಮೋದಿ ಸರ್ಕಾರದಲ್ಲಿ  ಈಗಿರುವ ಹುದ್ದೆಯನ್ನು ಸ್ವೀಕರಿಸುವ ಮೊದಲು ಹೈದರಾಬಾದಿನಲ್ಲಿ ಒಂದು ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು. ಅಲ್ಲಿ ಕಾಶ್ಮೀರದ ಬಗ್ಗೆ ಮಾತನಾಡುತ್ತಾ ಕಾಶ್ಮೀರದ ಪಂಡಿತರೇ ಕಾಶ್ಮೀರದ ನಾಗರಿಕ ಪರಂಪರೆಯ ನಿಜವಾದ ಹಕ್ಕುದಾರರು ಎಂದು ಪ್ರತಿಪಾದಿಸಿದ್ದರು.  ಕಾಶ್ಮೀರಿ ಮನಸ್ಸತ್ವವೆಂಬುದು ಒಂದು ಅಪಾಯಕಾರಿ ವಿದ್ಯಮಾನವಾಗಿದ್ದು ಪಾಕಿಸ್ತಾನವನ್ನು ಮುಗಿಸುವ ಮೂಲಕ ಮಾತ್ರ ಈ ಮನಸ್ಸತ್ವವನ್ನು ಸೋಲಿಸಬಹುದು. ಹಾಗೂ ಭಾರತವು ತಾನು ಬಯಸಿದಾಗ ಮತ್ತು ಬಯಸಿದ ಕ್ಷಣದಲ್ಲಿ ಪಾಕಿಸ್ತಾನವನ್ನು ಇಲ್ಲವಾಗಿಸಬಹುದು ಎಂದೂ ಸಹ ಅವರು ವಾದಿಸಿದ್ದರು. ಹೀಗಾಗಿ ಕಾಶ್ಮೀರದ ವಿಷಯದಲ್ಲಿ ಮಾತುಕತೆ ಎಂಬುದು ಅರ್ಥಹೀನ; ಹಾಗೂ ಮಾತುಕತೆಯೇ ಅನಿವಾರ್ಯವಾದಲ್ಲಿ ಕಾಶ್ಮೀರಿ ಪಂಡಿತರ ಜೊತೆ ಮಾತ್ರ ಮಾತನಾಡಬೇಕು ಎಂಬುದು ಅವರ ವಾದಸರಣಿಯಾಗಿತ್ತು.

ತಮ್ಮೆರಡೂ ದೇಶಗಳ ಪ್ರಜಾತಾಂತ್ರಿಕ ಪರಂಪರಯೇ ತಮ್ಮ ನಡುವಿನ ಬಾಂಧವ್ಯವನ್ನು ಗಟ್ಟಿ ಮಾಡುವ ಸಾಮ್ಯತೆಯೆಂದು ಎರಡು ದೇಶಗಳೂ ಹೇಳಿಕೊಂಡಿವೆ. ಆದರೆ ವಾಸ್ತವವೆಂದರೆ ಮೋದಿಯವರ ಇಸ್ರೇಲ್ ಭೇಟಿಯಲ್ಲಿ ಪ್ರತಿಪಾದನೆಯಾದ ಮೌಲ್ಯಗಳು ಆಕ್ರಮಣಶೀಲ ಜನಾಂಗೀಯವಾದವೇ ವಿನಃ ಪ್ರಜಾತಂತ್ರವಲ್ಲ. ಒಂದು ಜನಾಂಗೀಯವಾದಿ ಪ್ರಭುತ್ವದಲ್ಲಿ ರಾಜಕೀಯದ ಜಾಗದಲ್ಲಿ ಸೇನೆಯ ಕ್ರೂರ ಆಡಳಿತವಿರುತ್ತದೆ. ಎಲ್ಲಾ ಬಗೆಯ ಹಕ್ಕುಗಳ ಹರಣ ಮತ್ತು ದಮನ ದಿನನಿತ್ಯದ ವಿದ್ಯಮಾನವಾಗಿರುತ್ತದೆ.

ಕೃಪೆ: Economic and Political Weekly

 July 15, 2017. Vol.52. No. 28

ಅನು: ಶಿವಸುಂದರ್

 

         

 

Read These Next

ಯಾರ ಸಮುದ್ರ? ಯಾರ ಕರಾವಳಿ?

ಕಳೆದ ಐದು ವರ್ಷಗಳಿಂದ ಮುಂಬೈನ ಸ್ಥಳೀಯ ಮೀನುಗಾರ ಸಮುದಾಯವು ವಿವಾದಾಸ್ಪದವಾದ ಕರಾವಳಿ ರಸ್ತೆ ಯೋಜನೆಯನ್ನು ತಾವು ಹಲವು ...