ಮೋಸ್ಟ್ ಡೇಂಜರ್ ಮೋದಿ; ಹೆಗಡೆ ರಾಕ್ಷಸ ಎಂದ ರೈ

Source: sonews | By Staff Correspondent | Published on 26th February 2018, 11:03 PM | State News | Don't Miss |

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರ ನಡೆಯನ್ನು ನಾನು ವಿರೋಧಿಸುತ್ತೇನೆ, ದೇಶದಲ್ಲಿ ಭ್ರಷ್ಟಾಚಾರಕ್ಕಿಂತ ಅಪಾಯಕಾರಿ ಕೋಮುವಾದ. ಅಂತಹ ಕೋಮುವಾದವನ್ನು ಬಿಜೆಪಿ ಬೆಂಬಲಿಸುತ್ತಿದೆ. ಹಾಗಾಗಿ ನರೇಂದ್ರ ಮೋದಿ ಮೋಸ್ಟ್ ಡೇಂಜರಸ್ ಎಂದು ಖ್ಯಾತ ನಟ ಪ್ರಕಾಶ್ ರೈ ವಾಗ್ದಾಳಿ ನಡೆಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ದೇಶದ ಪ್ರಧಾನಿಗೆ ನಾನು ಪ್ರಶ್ನೆಯನ್ನು ಕೇಳಿದ್ದೇನೆ. ಆದರೆ ಇದುವರೆಗೂ ಉತ್ತರ ನೀಡಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಕೋಮುವಾದವನ್ನು ಬೆಂಬಲಿಸುತ್ತಿದ್ದಾರೆ. ಅವರ ಸಂಪುಟದ ಸಚಿವ ಅನಂತಕುಮಾರ್ ಹೆಗಡೆ ಒಂದು ಜಾತಿಯನ್ನು ಗುರಿಯಾಗಿಸಿಕೊಂಡು ಮಾತನಾಡುತ್ತಾರೆ. ಒಂದು ಧರ್ಮದ ಜನ ದೇಶದಿಂದ ತೊಲಗಿದರೆ ಶಾಂತಿ ನೆಲೆಸುತ್ತದೆ ಎಂದು ಹೇಳುತ್ತಾರೆ. ಇದ್ಯಾವುದರ ಬಗ್ಗೆಯೂ ಪ್ರಧಾನಿ ಮಾತನಾಡುವುದಿಲ್ಲ. ಇನ್ನು ಗೌರಿ ಹತ್ಯೆ ನಡೆದ ಸಂದರ್ಭದಲ್ಲಿ ಇವರ ಬೆಂಬಲಿಗರು ಸಂಭ್ರಮಿಸಿದರೂ ಕೂಡಾ ಅದರ ಬಗ್ಗೆಯೂ ಒಂದೇ ಒಂದು ಮಾತನಾಡಲಿಲ್ಲ. ಇವರ ಮನಸ್ಥಿತಿ ಏನು ಎಂದು ಇದರಿಂದಲೇ ತಿಳಿಯುತ್ತದೆ. ಇವರಿಗೆ ದೇಶದ ಜನರ ಹಿತಕ್ಕಿಂತ ತಮ್ಮ ಬದುಕು ಮುಖ್ಯವಾಗಿದೆ ಎಂದು ಕಿಡಿಕಾರಿದರು.

ನಾನು ಯಾವ ಪಕ್ಷದ ಪರ ಇರುವವನಲ್ಲ. ಎಲ್ಲಿ ತಪ್ಪು ಕಾಣುತ್ತದೋ ಅದರ ಬಗ್ಗೆ ಮಾತನಾಡುತ್ತೇನೆ. ಗೌರಿ ಹತ್ಯೆ ನಂತರ ನಾನು ಹೆಚ್ಚು ಮಾತನಾಡಲು ಶುರುಮಾಡಿದ್ದೇನೆ. ಭಾರತದಲ್ಲಿ ಎಲ್ಲ ಪತ್ರಕರ್ತರು ಜನರು ನನಗೆ ಸೇತುವೆಯಾಗಿದ್ದಾರೆ. ಸಾಮಾನ್ಯ ಜನರಂತೆಯೇ ಪತ್ರಕರ್ತರಿಗೂ ಗೊಂದಲಗಳಿವೆ. ಪತ್ರಕರ್ತರ ಜೊತೆ ಮಾತನಾಡಬೇಕು, ಪತ್ರಕರ್ತರ ಪ್ರಶ್ನೆ ಗಳಿಗೆ ಉತ್ತರ ಕೊಡುತ್ತೇನೆ ಎಂದರು.

ನಾನು ಸಿನಿಮಾದಲ್ಲಿ ಮಾತ್ರವೇ ವಿಲನ್. ಇತ್ತೀಚಿನ ದಿನಗಳಲ್ಲಿ ಪತ್ರಕರ್ತರಿಗೂ ವಿಲನ್ ಆಗಿದ್ದೇನೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಕಳಕಳಿ ಇಟ್ಟು ಮಾತನಾಡಿದ ಮಾತು ವಿವಾದಗಳನ್ನ ಸೃಷ್ಟಿಸುತ್ತಿವೆ. ಒಂದು ಕಡೆ ಮಾತನಾಡಿ ನಾನೇ ಸರಿ ಅಂತ ಹೇಳುತ್ತಿಲ್ಲ. ನನ್ನ ಭಿನ್ನಾಭಿಪ್ರಾಯಗಳ ಜೊತೆ ನಾನು ಬದುಕಬಲ್ಲೆ. ಈಗಾಗಿಯೇ ಭಾರತದ ಎಲ್ಲಾ ಪತ್ರಕರ್ತರ ಜೊತೆ ಸಂವಾದ ಮಾಡಬೇಕಂದುಕೊಂಡು ಇಲ್ಲಿ ಬಂದಿದ್ದೇನೆ ಎಂದು ಹೇಳಿದರು.

ನಾನು ರಾಜಕೀಯಕ್ಕೆ ಬರುವುದಿಲ್ಲ. ಸಾಮಾನ್ಯ ಪ್ರಜೆಯಾಗಿಯೇ ಉಳಿಯುತ್ತೇನೆ. ಜಸ್ಟ್ ಆಸ್ಕಿಂಗ್ ಅಭಿಯಾನದ ಮೂಲಕ ಎಲ್ಲರನ್ನೂ ಮುಟ್ಟುವ ಪ್ರಯತ್ನ ಮಾಡುತ್ತಿದ್ದೇನೆ. ಪ್ರಶ್ನಿಸುವ ಮನೋಭಾವ ಎಲ್ಲರಿಗೂ ಬರಬೇಕಿದೆ. ನನಗೆ ಪ್ರಜೆಗಳೇ ಬಹುಸಂಖ್ಯಾತರು, ಪ್ರಜಾಪ್ರತಿನಿಧಿಗಳು ಅಲ್ಪಸಂಖ್ಯಾತರು. ಎಲ್ಲರೂ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಎಲ್ಲರಿಗೂ ಪ್ರಶ್ನೆ ಮಾಡುವ ಅಧಿಕಾರ ಇದೆ. ಉತ್ತರವನ್ನು ಕೂಡ ಪಡೆದುಕೊಳ್ಳಬೇಕು. ಇದೇ ಜಸ್ಟ್ ಆಸ್ಕಿಂಗ್ ಅಭಿಯಾನದ ಉದ್ದೇಶ ಎಂದು ಪ್ರಕಾಶ್ ರೈ ಹೇಳಿದರು.

ನಾನು ಯಾವುದೇ ಸಮುದಾಯದ ವಿರುದ್ಧ ಅಲ್ಲ. ನಾನು ಎಡಪಂಥೀಯರನ್ನು ಬಲಿಷ್ಠರನ್ನಾಗಿ ಮಾಡಲು ಹೊರಟಿದ್ದೇನೆ ಎನ್ನುವುದು ಸುಳ್ಳು. ಮೋದಿಯ ವಿರುದ್ಧ ನಾನು ಇರೋದು ನಿಜ. ಈಗ ಯಾವುದು ದೊಡ್ಡ ತಪ್ಪು ಅದನ್ನ ವಿರೋಧಿಸಲು ಹೊರಟಿದ್ದೇನೆ. ನಾನು ಎಡವೂ ಅಲ್ಲ, ಬಲನೂ ಅಲ್ಲ. ನಾನೊಬ್ಬ ಮನುಷ್ಯ. ಬಲಪಂಥಿಯ ವಿರೋಧಿ ಅಂತ ಯಾಕೆ ತಿಳಿದುಕೊಳ್ಳುತ್ತೀರ? ಎಡಪಂಥೀಯ ಪರ ಅಂತ ತಿಳಿದುಕೊಂಡರೆ ನಿಮಗೆ ಬಲಪಂಥೀಯ ವಿರೋಧಿ ಅನಿಸುತ್ತದೆ ಎಂದರು.

'ಕೇಂದ್ರದ ಬಿಜೆಪಿ ಸರಕಾರದ ವಿರುದ್ಧ ಮಾತನಾಡುವ ನೀವು ಸಿದ್ಧರಾಮಯ್ಯ ಸರಕಾರದ ವಿರುದ್ಧ ಏನನ್ನೂ ಮಾತನಾಡುವುದಿಲ್ಲ. ಹಾಗಾದರೆ ರಾಜ್ಯ ಸರಕಾರ ತಪ್ಪೇ ಮಾಡಿಲ್ಲವೇ'? ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಪ್ರಕಾಶ್ ರೈ, ದೇಹಕ್ಕೆ ದೊಡ್ಡ ರೋಗ ಬಂದಾಗ ಅದರ ಬಗ್ಗೆ ಯೋಚನೆ ಮಾಡುತ್ತೇನೆ. ಕೆಮ್ಮು, ನೆಗಡಿ ಬಗ್ಗೆ ಆಮೇಲೆ ಯೋಚನೆ ಮಾಡುತ್ತೇನೆ ಎಂದು ಹೇಳುವ ಮೂಲಕ ಬಿಜೆಪಿ ದೇಶಕ್ಕೆ ದೊಡ್ಡ ರೋಗವನ್ನು ತಂದೊಡ್ಡಿದೆ ಎಂದು ಹೇಳಿದರು.

ಬಿಜೆಪಿ ಪಕ್ಷದ ರಾಜ್ಯದ ನಾಯಕರ ಮಾತು ಕೇಳಿ ಭಯ ಆಗುತ್ತದೆ. ದೇಶದಲ್ಲಿ ಕೋಮುವಾದ ಬೆಳೆಸಲು ನಾನು ಎಂ.ಎಲ್.ಎ ಆಗಬೇಕಿಲ್ಲ. ಎಲ್ಲ ರೀತಿಯ ಕೋಮುವಾದವೂ ತಪ್ಪು. ಹಿಂದು ಕೋಮುವಾದ, ಮುಸ್ಲಿಂ ಕೋಮುವಾದದ ಬಗ್ಗೆ ಮಾತನಾಡಬೇಡಿ. ಯಾವುದೇ ಧರ್ಮದಲ್ಲಿ ರಾಕ್ಷಸರು ಇದ್ದರೆ ಅದು ಕೋಮುವಾದವೇ ಎಂದು ಹೇಳಿದರು.

ಅನಂತಕುಮಾರ್ ಹೆಗಡೆ ರಾಕ್ಷಸ: ಅನಂತ ಕುಮಾರ್ ಹೆಗಡೆ ಒಬ್ಬ ರಾಕ್ಷಸ. ಇಂತಹ ರಾಕ್ಷಸರನ್ನು ಬಿಡಬೇಡಿ ಅಂತ ನಾನು ಹೇಳುತ್ತೇನೆ. ಅನಂತ್ ಕುಮಾರ್ ಹೆಗಟೆ, ಪ್ರತಾಪ್ ಸಿಂಹರ ಹೇಳಿಕೆಗಳನ್ನು ಅವರ ಪಕ್ಷದ ನಾಯಕರೇ ಖಂಡಿಸುತ್ತಿಲ್ಲ. ಅವರು ವಿಚಾರಗಳ ಬಗ್ಗೆ ಸೊಂಟದ ಕೆಳಗೆ ಮಾತನಾಡುತ್ತಾರೆ. ಪ್ರತಾಪ್ ಸಿಂಹ ನನ್ನ ಮಗನ ಸಾವಿನ ಸಂದರ್ಭದಲ್ಲೂ ನನ್ನ ಬಗ್ಗೆ ಸೊಂಟದ ಕೆಳಗೆ ಮಾತನಾಡಿದರು. ಈಗಾಗಿಯೇ ಅವರನ್ನು ನಾನು ಪ್ರಶ್ನೆ ಮಾಡುತ್ತಿದ್ದೇನೆ. ಬಿಜೆಪಿಗೆ ಮತ ಹಾಕಬೇಡಿ ಅಂತ ಹೇಳುವುದಿಲ್ಲ. ಆದರೆ ಬಿಜೆಪಿ ವಿರುದ್ಧ ಎಚ್ಚೆತ್ತುಕೊಳ್ಳಿ ಎಂದು ಹೇಳುತ್ತಿದ್ದೇನೆ. ಇಂತಹ ಹೇಳಿಕೆಗಳನ್ನು ನೀಡುವ ನಾಯಕರು ಬೇಕೆ ಎಂದು ಪ್ರಶ್ನಿಸುತ್ತಿದ್ದೇನೆ. ಇಂತಹವರನ್ನು ಬಿಡಬೇಡಿ ಎಂದು ಕರೆ ನೀಡಿದರು.

ನನಗೆ ಭ್ರಷ್ಟಾಚಾರಕ್ಕಿಂದ ಕೋಮು ಸೌಹಾರ್ದತೆ ಮುಖ್ಯ. ಗುಜರಾತ್ ಚುನಾವಣೆ, ಈ ರಾಜ್ಯದ ಚುನಾವಣೆಗೆ ಬಿಜೆಪಿ ಮಂದಿ ಕಪ್ಪು ಹಣ ತಂದಿಲ್ಲವೇ? ನನಗೆ ಭ್ರಷ್ಟಾಚಾರಕ್ಕಿಂತ ಕೋಮುವಾದವೇ ಡೇಂಜರ್, ನನ್ನ ಗ್ರಹಿಕೆಗೆ ಕೋಮುವಾದವೇ ಮೋಸ್ಟ್ ಡೆಂಜರ್. 15 ಲಕ್ಷ ಹಣ ಅಕೌಂಟ್ ಗೆ ಹಾಕ್ತೇನೆ ಎಂದು ಸುಳ್ಳು ಹೇಳಿದ್ದಾರೆ. ಜಿಎಸ್ ಟಿ ತಂದ ಕಾರಣದಿಂದಾಗಿ ಗುಡಿಕೈಗಾರಿಕೆಗಳು ಮುಚ್ಚಿವೆ ಎಂದು ಕಿಡಿಕಾರಿದರು.

ನನ್ನ ಮಾರ್ಕೆಟ್ ಕುಸಿದಿಲ್ಲ: ಇತ್ತೀಚಿನ ಬೆಳವಣಿಗೆಗಳ ಬೆನ್ನಲ್ಲೇ ಮಾರ್ಕೆಟ್ ಬಿದ್ದಿದೆಯೇ ಅನ್ನುವ ಪ್ರಶ್ನೆಗೆ ಉತ್ತರ ನೀಡಿದ ಅವರು, ಇನ್ನೂ 20 ಸಿನಿಮಾಗಳಿಗೆ ಡೆಟ್ ಕೇಳಿದ್ದಾರೆ. ಸಾಕಷ್ಟು ಸಿನಿಮಾಗಳ ಚಿತ್ರೀಕರಣ ನಡೆಯುತ್ತಿವೆ. ಇನ್ನೊಂದು ವರ್ಷ ನನ್ನ ಕಾಲ್ ಶೀಟ್ ಬ್ಯೂಸಿಯಾಗಿದೆ' ಎಂದು ಹೇಳಿದರು.
 

ಪೂರ್ವಾಪರ ನೋಡಿ ಮಾತನಾಡುತ್ತೇನೆ: ನಲಪಾಡ್ ಹಾರಿಸ್ ಒಬ್ಬ ರಾಕ್ಷಸ ಮನೋಭಾವದ ವ್ಯಕ್ತಿ ಎಂದು ತಿಳಿದಿರಲಿಲ್ಲ. ಶಾಂತಿನಗರದ ಕಾರ್ಯಕ್ರಮವೊಂದರಲ್ಲಿ ನಾನು ದತ್ತು ಪಡೆದಿರುವ ಗ್ರಾಮದ ಅಭಿವೃದ್ಧಿಗೆ ಸಹಾಯ ಕೇಳಿದೆ. ಆಗ ತಕ್ಷಣ ನಲಪಾಡ್ ಎರಡು ಲಕ್ಷ ರೂ. ಕೊಡುವುದಾಗಿ ಹೇಳಿದ. ಇದರಿಂದ ನಾನು ಸಾಮಾಜಿಕ ಕಳಕಳಿ ಹೊಂದಿರುವ ಇಂತಹ ಹುಡುಗರು ಬೇಕು ಎಂದು ಹೇಳಿದ್ದೆ. ಆದರೆ ಈತನ ವರ್ತನೆ ಈ ಮಟ್ಟಕ್ಕೆ ಇದೆ ಎಂದು ಗೊತ್ತಿರಲಿಲ್ಲ. ಈತನ ರಾಕ್ಷಸ ವೃತ್ತಿ ನೋಡಿ ನನಗೆ ಬೇಸರವಾಯಿತು. ತಕ್ಷಣ ಆತ ನೀಡಿದ್ದ ಹಣವನ್ನು ವಾಪಸ್ ಕಳುಹಿಸಿದೆ ಎಂದು ಹೇಳಿದರು.

ಸಂವಾದದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಪ್ರಧಾನ ಕಾರ್ಯದರ್ಶಿ ಕೆ.ಜೆ.ಲೋಕೇಶ್ ಬಾಬು, ನಗರ ಉಪಾಧ್ಯಕ್ಷ ಸುಬ್ರಮಣೈ, ನಗರ ಕಾರ್ಯದರ್ಶಿ ಬಿ.ರಾಘವೇಂದ್ರ ಉಪಸ್ಥಿತರಿದ್ದರು.

Read These Next

ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದಲ್ಲಿ ಬಿಜೆಪಿ ಶಾಮಿಲು; ತೀರ್ಥಹಳ್ಳಿಯಲ್ಲಿ ಬಿಜೆಪಿ ಸದಸ್ಯನನ್ನು ಬಂಧಿಸಿದ NIA

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (NIA) ...

ಕುಂದಾಪುರ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ – ಓರ್ವ ಮಹಿಳೆ ಮೃತ್ಯು, ಇಬ್ಬರ ಸ್ಥಿತಿ ಗಂಭೀರ!

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಇಂದು ಮಧ್ಯಾಹ್ನ ನಡೆದ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಓರ್ವ ಮಹಿಳೆ ಮೃತಪಟ್ಟು, ಇಬ್ಬರು ಗಂಭೀರ ...