ಮೋದಿಗೆ ಮುಂಬೈ ಐಐಟಿ ಬೆಂಬಲ’: ನಕಲಿ ಟಾಕ್ ಶೋ ನಡೆಸಿದ ಎಬಿಪಿ ನ್ಯೂಸ್‍!

Source: sonews | By Staff Correspondent | Published on 8th March 2019, 10:46 PM | National News | Special Report | Don't Miss |

ದೇಶದ ಅಗ್ರಗಣ್ಯ ಹಿಂದಿ ಸುದ್ದಿವಾಹಿನಿಗಳಲ್ಲೊಂದಾದ ಎಬಿಪಿ ನ್ಯೂಸ್, ಕಾಲೇಜೊಂದರಿಂದ ಲೈವ್ ಟಾಕ್‍ ಶೋ ಮೂಲಕ ಮೋದಿ ಪರ ಪ್ರಸಾರ ಮಾಡಲು ಸಾಧ್ಯವಾಗದಿದ್ದಾಗ ಏನು ಮಾಡುತ್ತದೆ?..  ಉತ್ತರ ಸರಳ. ನಕಲಿ ಶೋ ನಡೆಸಿಕೊಡುತ್ತದೆ. ಇಲ್ಲಿ ವಿದ್ಯಾರ್ಥಿಗಳೂ ನಕಲಿ.

ಇತ್ತೀಚಿನ ‘2019 ಕೆ ಜೋಶಿಲೆ’ (2019ರ ಉತ್ಸಾಹ) ಕಾರ್ಯಕ್ರಮವನ್ನು ಎಬಿಪಿ ನ್ಯೂಸ್ ಮುಂಬೈನ ಐಐಟಿ ಕ್ಯಾಂಪಸ್‍ ನಲ್ಲಿ ಹಮ್ಮಿಕೊಂಡಿತ್ತು. ಆದರೆ ಎಬಿಪಿ ನ್ಯೂಸ್ ಕ್ಯಾಂಪಸ್‍ ನ ಹೊರಗಿನ ಯುವಜನರನ್ನು ಕರೆತಂದು ಮೋದಿ ಪರವಾಗಿ ಮಾತನಾಡಿಸಿದೆ ಎಂಬ ಆರೋಪ ಕೇಳಿಬಂದಿದೆ. ಮಾರ್ಚ್ 2ರಂದು ಸಂಜೆ 4ರಿಂದ 5 ಗಂಟೆವರೆಗೆ ಈ ಕಾರ್ಯಕ್ರಮ ನೇರ ಪ್ರಸಾರವಾಗಿದ್ದು, ಮರುದಿನ ಬೆಳಗ್ಗೆ 10ಕ್ಕೆ ‘ಐಐಟಿ ಮುಂಬೈ ಮೋದಿಯನ್ನು ಬೆಂಬಲಿಸುತ್ತದೆ’ ಎಂಬ ಶೀರ್ಷಿಕೆಯೊಂದಿಗೆ ಮರುಪ್ರಸಾರವಾಗಿದೆ.

ಮುಂಬೈ ಐಐಟಿ ವಿದ್ಯಾರ್ಥಿಗಳ ಪ್ರಕಾರ, ಕಾಲೇಜು ಇ-ಮೇಲ್ ಐಡಿಗೆ ಇ-ಮೇಲ್ ಸಂದೇಶ ಬಂದಿದ್ದು, ಎಬಿಪಿ ನ್ಯೂಸ್ ಮುಂಬರುವ ಚುನಾವಣೆ ಬಗ್ಗೆ ಚರ್ಚಿಸಲು ಕಾರ್ಯಕ್ರಮವೊಂದನ್ನು ಆಯೋಜಿಸಿದೆ. ವಿದ್ಯಾರ್ಥಿ ಪಾಲ್ಗೊಳ್ಳುವಿಕೆ ಐಚ್ಛಿಕವಾಗಿರುತ್ತದೆ ಎಂದು ಮಾಹಿತಿ ನೀಡಲಾಗಿತ್ತು. ಆದರೆ ವಿದ್ಯಾರ್ಥಿಗಳು ಸ್ಥಳಕ್ಕೆ ಆಗಮಿಸಿದಾಗ, ಆ ಗುಂಪಿನಲ್ಲಿ ಈಗಾಗಲೇ ಹಲವು ಹೊಸ ಮುಖಗಳು ಇರುವುದು ವಿದ್ಯಾರ್ಥಿಗಳಿಗೆ ಮನವರಿಕೆಯಾಯಿತು.

"ಇದು ದೊಡ್ಡ ಕ್ಯಾಂಪಸ್ ಮತ್ತು ಹಲವು ವಿಭಾಗಗಳಿವೆ. ಆದ್ದರಿಂದ ನಿರ್ದಿಷ್ಟ ವಿದ್ಯಾರ್ಥಿ ಈ ಕ್ಯಾಂಪಸ್‍ ನವನೇ ಅಥವಾ ಹೊರಗಿನವನೇ ಎಂದು ಹೇಳುವುದು ಕಷ್ಟ. ಆದಾಗ್ಯೂ ಈ ಟಾಕ್ ಶೋದಲ್ಲಿ ಹಲವು ಹೊಸ ಮುಖಗಳನ್ನು ದಿಢೀರನೇ ನೋಡಿದಾಗ ನಮಗೆ ಅನುಮಾನ ಬಂತು. ಎಲ್ಲಕ್ಕಿಂತ ಹೆಚ್ಚಾಗಿ ಪಾಲ್ಗೊಂಡ ಈ ಎಲ್ಲರೂ ಮೋದಿ ಸರ್ಕಾರದ ಪರವಾಗಿ ಮಾತನಾಡಿದರು" ಎಂದು ಶೋದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಯೊಬ್ಬರು ಹೇಳಿದರು.

ನಕಲಿ ಅಭಿಪ್ರಾಯವನ್ನು ಸೃಷ್ಟಿಸಿದ ವಿಚಾರವನ್ನು ಮುಂಬೈ ಐಐಟಿಯ ಅಂಬೇಡ್ಕರ್ ಪೆರಿಯಾರ್ ಫುಲೆ ಅಧ್ಯಯನ ವೃತ್ತ (ಎಪಿಪಿಎಸ್‍ಸಿ) ಮೊದಲ ಬಾರಿಗೆ ಪ್ರಸ್ತಾಪಿಸಿತು. ಕಾರ್ಯಕ್ರದಲ್ಲಿ ಭಾಗವಹಿಸಿದ್ದ 50 ವಿದ್ಯಾರ್ಥಿಗಳ ಪೈಕಿ ಕನಿಷ್ಠ 11 ಮಂದಿ ಹೊರಗಿನವರು ಎನ್ನುವುದನ್ನು ಇದೀಗ ವಿದ್ಯಾರ್ಥಿಗಳು ಪತ್ತೆ ಮಾಡಿದ್ದಾರೆ. ಇವರಲ್ಲಿ ಒಬ್ಬ ಹಿಂದೂ ಯುವ ವಾಹಿನಿ ಎಂಬ ಸಂಘಟನೆಯ ಕಾರ್ಯಕರ್ತ ಎಂದು ಪತ್ತೆ ಹಚ್ಚಲಾಗಿದೆ.

‘ಮುಂಬೈ ಐಐಟಿ ಮೋದಿಯನ್ನು ಬೆಂಬಲಿಸುತ್ತಿದೆ’ ಮತ್ತು ‘2019 ಕೆ ಜೋಶಿಲ್: ಐಐಟಿ ಮುಂಬೈ ವಿದ್ಯಾರ್ಥಿಗಳು ಮೋದಿ ಸರ್ಕಾರದ ಪರ’ ಎಂಬ ಶೀರ್ಷಿಕೆಯೊಂದಿಗೆ ಕಾರ್ಯಕ್ರಮ ಪ್ರಸಾರ ಮಾಡಿದ್ದು, ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ನೀಡಲಾಗಿದೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.

"ಈ ಕಾರ್ಯಕ್ರಮ ಐಐಟಿ ವಿದ್ಯಾರ್ಥಿಗಳದ್ದು ಮಾತ್ರವಾಗಿದ್ದರೆ, ಈ ಸುದ್ದಿವಾಹಿನಿ ಹೊರಗಿನವರನ್ನು ಏಕೆ ಸೇರಿಸಿಕೊಂಡಿದೆ?, ಅದು ಎಷ್ಟು ಕಾಕತಾಳೀಯವೆಂದರೆ ಈ ವ್ಯಕ್ತಿಗಳಲ್ಲಿ ಪ್ರತಿಯೊಬ್ಬರೂ ಬಿಜೆಪಿ ಪರವಾಗಿ ಮಾತನಾಡಿದ್ದಾರೆ” ಎಂದು ವಿದ್ಯಾರ್ಥಿಯೊಬ್ಬರು ಹೇಳುತ್ತಾರೆ. ಆದರೆ ಸಂಸ್ಥೆಯಿಂದ ಕ್ರಮ ಕೈಗೊಳ್ಳಬಹುದು ಎಂಬ ಭೀತಿಯಿಂದ, ‘ದ ವೈರ್’ ಭೇಟಿ ಮಾಡಿದ ವಿದ್ಯಾರ್ಥಿಗಳು ತಮ್ಮ ಹೆಸರು ಬಹಿರಂಗಪಡಿಸಲು ನಿರಾಕರಿಸಿದರು.

ಈ ಕಾರ್ಯಕ್ರಮಕ್ಕೆ ಬಿಜೆಪಿ ಶಾಸಕ ಮತ್ತು ಮುಂಬೈ ಘಟಕದ ಮುಖ್ಯಸ್ಥ ಆಶೀಶ್ ಶೆಲಾರ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರರಾದ ಪ್ರಿಯಾಂಕಾ ಚತುರ್ವೇದಿಯವರನ್ನು ಕೂಡಾ ಆಹ್ವಾನಿಸಲಾಗಿತ್ತು. ನಿರುದ್ಯೋಗ, ರೈತರ ಆತ್ಮಹತ್ಯೆ, ರಫೇಲ್ ವಿವಾದ ಮತ್ತು ಪುಲ್ವಾಮದಲ್ಲಿ ಸಿಆರ್‍ ಪಿಎಫ್ ಯೋಧರ ಮೇಲೆ ನಡೆದ ದಾಳಿಯಂತಹ ಹಲವು ವಿಚಾರಗಳನ್ನು ಕಾರ್ಯಕ್ರಮದಲ್ಲಿ ಚರ್ಚಿಸಲಾಯಿತು. 38 ನಿಮಿಷಗಳ ಅವಧಿಯ ಈ ಕಾರ್ಯಕ್ರಮದಲ್ಲಿ ಮೊದಲ 18 ನಿಮಿಷಗಳನ್ನು ಎರಡು ಪಕ್ಷಗಳ ವಕ್ತಾರರಿಗೆ ನೀಡಲಾಗಿತ್ತು. ಅವರು ಈ ವೇಳೆ ತಮ್ಮ ಪಕ್ಷದ ನಿಲುವುಗಳನ್ನು ತಿಳಿಸಿದರು ಮತ್ತು ಅಧಿಕಾರದಲ್ಲಿರುವಾಗ ನಿಮ್ಮ ಪಕ್ಷ ಏನೂ ಮಾಡಿಲ್ಲ ಎಂದು ಆಗೊಮ್ಮೆ ಈಗೊಮ್ಮೆ ಪರಸ್ಪರ ದೋಷಾರೋಪವನ್ನೂ ಮಾಡಿಕೊಂಡರು.

ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮತ್ತೊಬ್ಬ ವಿದ್ಯಾರ್ಥಿ ಹೇಳುವಂತೆ, ತನಗೆ ಮೈಕ್ರೋಫೋನ್ ನೀಡುವಂತೆ ಪದೇ ಪದೇ ಸಂಘಟಕರನ್ನು ವಿನಂತಿಸಿಕೊಂಡರೂ ಅವಕಾಶ ನೀಡಲಿಲ್ಲ. "ಸಂಘಟಕರು ತಮ್ಮದೇ ಜನರೊಂದಿಗೆ ಆಗಮಿಸಿದ್ದರು. ಅವರೇ ಮುಂದಿನ ಆಸನಗಳನ್ನು ಆಕ್ರಮಿಸಿಕೊಂಡಿದ್ದರು. ನಿರೂಪಕ ಅವರ ಬಳಿಗೆ ಆಗಮಿಸಿ, ಚರ್ಚೆಯಲ್ಲಿ ಪಾಲ್ಗೊಂಡವರಿಗೆ ಅವರಷ್ಟೇ ಪ್ರಶ್ನೆಗಳನ್ನು ಕೇಳುವಂತೆ ಮಾಡಿದ್ದರು. ಕ್ಯಾಂಪಸ್ ‍ನ ಇಬ್ಬರು ವಿದ್ಯಾರ್ಥಿಗಳು, ಕಾಲೇಜು ನೇಮಕಾತಿ ಸಂಬಂಧ ಹೊಸದಾಗಿ ಆರಂಭಿಸಿದ 13 ಅಂಶಗಳ ರೊಸ್ಟರ್ ವ್ಯವಸ್ಥೆಗೆ ಸಂಬಂಧಿಸಿದಂತೆ ಮತ್ತು ಕೃಷಿ ಸಮಸ್ಯೆ ಬಗ್ಗೆ ಪ್ರಮುಖ ವಿಚಾರಗಳನ್ನು ಎತ್ತಿದರೂ, ಅರ್ಧದಲ್ಲೇ ಅವರ ಬಾಯಿ ಮುಚ್ಚಿಸಲಾಯಿತು. ಅವರ ಪ್ರಶ್ನೆಗಳನ್ನು ಚರ್ಚೆಯಲ್ಲಿ ಭಾಗವಹಿಸಿದವರು ತೆಗೆದುಕೊಳ್ಳಲೇ ಇಲ್ಲ" ಎಂದು ಕೆಮಿಕಲ್ ಎಂಜಿನಿಯರಿಂಗ್ ವಿಭಾಗದ ಪಿಎಚ್ ಡಿ ವಿದ್ಯಾರ್ಥಿಯೊಬ್ಬರು ಹೇಳಿದರು.

ಚರ್ಚೆಯ ವೇಳೆ ಮೊದಲ ಪ್ರಶ್ನೆ ಎತ್ತಿದವರು ಅನಿಲ್ ಯಾದವ್ ಎಂಬ ವ್ಯಕ್ತಿ. 1971ರ ಭಾರತ- ಪಾಕಿಸ್ತಾನ ಯುದ್ಧದ ಬಗ್ಗೆ ಅವರು ಚತುರ್ವೇದಿಯನ್ನು ಪ್ರಶ್ನಿಸಿದರು ಮತ್ತು ಸರಬ್ ಜೀತ್ ಸಿಂಗ್ ದೇಶಕ್ಕೆ ಕರೆತರಲು ಭಾರತ ಏಕೆ ವಿಫಲವಾಯಿತು ಎಂದು ಪ್ರಶ್ನಿಸಿದರು. ಸಿಂಗ್ ಅವರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ಅವರ ಪ್ರಶ್ನೆಯಲ್ಲಿ ಯಾವ ತಪ್ಪೂ ಇರಲಿಲ್ಲ. ಆದರೆ ಯಾದವ್ ಐಐಟಿ ವಿದ್ಯಾರ್ಥಿಯಲ್ಲ. ಆತನ ಫೇಸ್‍ ಬುಕ್ ಪ್ರೊಫೈಲ್ ಪ್ರಕಾರ ಆತ ಹಿಂದೂ ಯುವ ವಾಹಿನಿಯ ಕಾರ್ಯಕರ್ತ!.

ಮುಂಬೈ ಐಐಟಿ ವಕ್ತಾರರಾದ ಫಲ್ಗುಣಿ ಬ್ಯಾನರ್ಜಿ ನಾಹಾ ‘ದ ವೈರ್’ ಜತೆ ಮಾತನಾಡಿ, "ಕ್ಯಾಂಪಸ್‍ನಲ್ಲಿ ಸ್ಥಳಾವಕಾಶ ನೀಡುವಂತೆ ಸುದ್ದಿವಾಹಿನಿ ಸಂಸ್ಥೆಯನ್ನು ಕೋರಿತ್ತು. ನಾವು ಕಾರ್ಯಕ್ರಮ ಆಯೋಜಿಸುತ್ತೇವೆಯೇ ವಿನಃ ಕಾರ್ಯಕ್ರಮ ಕೈಗೊಳ್ಳುವ ನಿರ್ಧಾರದಲ್ಲಿ ಯಾವ ಪಾತ್ರವನ್ನೂ ವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಹೊರಗಿನಿಂದ ಜನರನ್ನು ಕರೆ ತರಲು ಸಂಸ್ಥೆ ಅವಕಾಶ ನೀಡಿರಲಿಲ್ಲ. ಅಂಥದ್ದು ಸಂಭವಿಸಿದೆ ಎನ್ನುವುದೂ ನನಗೆ ಅಚ್ಚರಿಯ ವಿಚಾರ" ಎಂದು ಹೇಳಿದರು.

ಈ ಕಾರ್ಯಕ್ರಮ ತಪ್ಪುದಾರಿಗೆ ಎಳೆಯುವಂತಹದ್ದು ಎಂಬ ಕಾರಣಕ್ಕಾಗಿ ಬದಲಾವಣೆ ಮಾಡಿಕೊಳ್ಳುವಂತೆ ವಾಹಿನಿಯ ಸಂಪಾದಕರಿಗೆ ಪತ್ರ ಬರೆಯಲು ಸಂಸ್ಥೆ ನಿರ್ಧರಿಸಿದೆ. "ನಾನು ಆ ಕಾರ್ಯಕ್ರಮ ವೀಕ್ಷಿಸಿದ್ದು, ಮುಂಬೈ ಐಐಟಿ ಮೋದಿ ಪರವಾಗಿದೆ ಎಂದು ಚಾನಲ್ ಹೇಳಿದೆ. ಇಂಥ ಪ್ರತಿಪಾದನೆಯನ್ನು ಅವರು ಹೇಗೆ ಮಾಡಲು ಸಾಧ್ಯ?, ಆ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಕೆಲ ವಿದ್ಯಾರ್ಥಿಗಳು ಮಾತ್ರ. ಅವರಲ್ಲೂ ಭಿನ್ನ ಧ್ವನಿಗಳು ಕೇಳಿಬಂದಿದ್ದವು. ಸೂಕ್ತ ಬದಲಾವಣೆ ಮಾಡಿಕೊಳ್ಳುವಂತೆ ಕೋರಿ ಚಾನಲ್‍ ಗೆ ಪತ್ರ ಬರೆಯಲಾಗುವುದು" ಎಂದು ನಹಾ ಹೇಳಿದರು.

ಎಪಿಪಿಎಸ್‍ ಸಿ ಈಗಾಗಲೇ, ವಾಸ್ತವವಾಗಿ ನಡೆದದ್ದೇನು ಎಂದು ಐಐಟಿಯ ಸಾರ್ವಜನಿಕ ಸಂಪರ್ಕ ಕಚೇರಿಯಿಂದ ಸ್ಪಷ್ಟನೆ ಬಯಸಿದೆ. ಆದರೆ ಇದುವರೆಗೂ ಯಾವುದೇ ಉತ್ತರ ಸಿಕ್ಕಿಲ್ಲ ಎಂದು ಗುಂಪಿನ ಸದಸ್ಯರು ಹೇಳಿದ್ದಾರೆ.

ಅದು ಐಐಟಿ ವಿದ್ಯಾರ್ಥಿಗಳ ಕಾರ್ಯಕ್ರಮ ಎಂಬ ಕಾರಣಕ್ಕಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗಿ ಚತುರ್ವೇದಿ ಸ್ಪಷ್ಟಪಡಿಸಿದರು.

"ಮೊದಲು ಚಾನಲ್ ನನ್ನನ್ನು ಸಂಪರ್ಕಿಸಿದಾಗ ನಾನು ಒಪ್ಪಿಕೊಳ್ಳಲಿಲ್ಲ. ಪ್ರೇಕ್ಷಕರು ಇರುವ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಲು ಇಚ್ಛಿಸುವುದಿಲ್ಲ. ಏಕೆಂದರೆ, ಪ್ರೇಕ್ಷಕರಲ್ಲಿ ಬಹುತೇಕ ಮಂದಿ ಒಂದು ಬಗೆಯ ರಾಜಕೀಯ ನಿಲುವು ಹೊಂದಿರುತ್ತಾರೆ. ಆದ್ದರಿಂದ ಆರೋಗ್ಯಕರ ಚರ್ಚೆ ಅಸಾಧ್ಯವಾಗುತ್ತದೆ. ಆದರೆ ಕೇವಲ ಮುಂಬೈ ಐಐಟಿ ವಿದ್ಯಾರ್ಥಿಗಳಷ್ಟೇ ಭಾಗವಹಿಸುತ್ತಾರೆ ಎಂದು ನನಗೆ ಹೇಳಿದ ಬಳಿಕ ನಾನು ಒಪ್ಪಿಕೊಂಡೆ. ಈ ಸಂವಾದ ಅರ್ಥಪೂರ್ಣವಾಗಿರುತ್ತದೆ ಎಂದು ನಾನು ಭಾವಿಸಿದ್ದೆ. ಆದರೆ ಅಚ್ಚರಿ ಎಂಬಂತೆ ಅದು ಏಕಪಕ್ಷೀಯ ತಿರುವು ಪಡೆದುಕೊಂಡಿತು" ಎಂದು ಚತುರ್ವೇದಿ ವಾದಿಸುತ್ತಾರೆ.

ಕೆಲ ಪ್ರಶ್ನೆಗಳನ್ನು ನನಗೆ ಉದ್ದೇಶಪೂರ್ವಕವಾಗಿ ಕೇಳಲಾಗಿದೆ ಮತ್ತು ಪಾಲ್ಗೊಂಡವರ ನೈಜತೆ ಬಗ್ಗೆಯೇ ಅಚ್ಚರಿ ಇದೆ ಎಂದು ಅವರು ಹೇಳುತ್ತಾರೆ.

ಎಬಿಪಿ ನ್ಯೂಸ್‍ ನ ಮುಂಬೈ ಬ್ಯೂರೊ ಕಚೇರಿಯನ್ನು ಸಂಪರ್ಕಿಸಲು’ ದ ವೈರ್’ ಪ್ರಯತ್ನಿಸಿದರೂ, ಈ ಬಗ್ಗೆ ಮಾತನಾಡುವ ಅಧಿಕಾರ ತಮಗೆ ಇಲ್ಲ. ದೆಹಲಿ ಸಂಪಾದಕ ರಜನೀಶ್ ಅಹುಜಾ ಅವರನ್ನು ಸಂಪರ್ಕಿಸಬೇಕು ಎಂದು ಹೇಳಿದರು. ಹಲವು ಬಾರಿ ಪ್ರಯತ್ನಿಸಿದರೂ, ಅಹುಜಾ ಅವರಿಗೆ ಇ-ಮೇಲ್ ಮೂಲಕ ಮತ್ತು ಎಸ್‍ಎಂಎಸ್ ಸಂದೇಶದ ಮೂಲಕ ಕಳುಹಿಸಿದ ಪ್ರಶ್ನೆಗೆ ಉತ್ತರ ಸಿಗಲಿಲ್ಲ. ಚಾನಲ್ ಪ್ರತಿಕ್ರಿಯೆ ನೀಡಿದ ಬಳಿಕ ಲೇಖನ ಪರಿಷ್ಕರಿಸಲಾಗುತ್ತದೆ.

https://youtu.be/buyV16E0NN4

ಕೃಪೆ:varthabharati.in

Read These Next

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ...

ಲೋಕಸಭಾ ಚುನಾವಣೆ; ಕಾಂಗ್ರೇಸ್ ನ ಎರಡನೇ ಪಟ್ಟಿ ಬಿಡುಗಡೆ; ಉ.ಕ ಕ್ಷೇತ್ರಕ್ಕೆ ಅಂಜಲಿ ನಿಂಬಾಳ್ಕರ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕದ 17, ಅರುಣಾಚಲ ...

ಸಿಎಎ ನಿಯಮಾವಳಿಗಳಿಗೆ ತಡೆ ಕೋರುವ ಅರ್ಜಿಗಳ ವಿಚಾರಣೆ ; ಸು.ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...