ಭಟ್ಕಳ ಮಂಗಳೂರು ಪ್ರಯಾಣ ದರ ಕಡಿತಕ್ಕೆ ಆಗ್ರಹ

Source: S O News Service | By I.G. Bhatkali | Published on 14th June 2018, 3:15 PM | Coastal News |

ಭಟ್ಕಳ: ಭಟ್ಕಳದಿಂದ ಮಂಗಳೂರಿಗೆ ನಿತ್ಯ ಪ್ರಯಾಣಿಸುವ ವೋಲ್ವೋ ಬಸ್ಸಿನ ಪ್ರಯಾಣ ದರವನ್ನು ದಿಢೀರ್ ಏರಿಕೆ ಮಾಡಿರುವುದು ಖಂಡನೀಯವಾಗಿದ್ದು, ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ಸ್ವಾಭಿಮಾನಿ ಕ್ರಾಂತಿ ಸಂಘ ಭಟ್ಕಳ ಘಟಕದ ಸದಸ್ಯರು ಬುಧವಾರ ಭಟ್ಕಳ ಡಿಪೋ ವ್ಯವಸ್ಥಾಪಕ ಮೂಲಕ ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

 ಭಟ್ಕಳದಿಂದ ಮಂಗಳೂರಿಗೆ ಪ್ರಯಾಣ ದರವನ್ನು ರು.200 ನಿಗದಿಪಡಿಸಲಾಗಿದ್ದು, ಜೂ.12ರಿಂದ  ದರ ರು.250ಕ್ಕೆ ಏರಿಕೆಯಾಗಿದೆ. ಇದರಿಂದ ವೈದ್ಯಕೀಯ ಕಾರಣಗಳಿಗಾಗಿ ಕುಂದಾಪುರ, ಉಡುಪಿ, ಮಂಗಳೂರಿಗೆ ನಿಯಮಿತವಾಗಿ ಪ್ರಯಾಣಿಸುವ ಇಲ್ಲಿನ ಬಡ ಜನರಿಗೆ ತೊಂದರೆಯಾಗಿದೆ.

ಹೆಚ್ಚಿದ ದರದಿಂದ ಪ್ರಯಾಣಿಕರು ಸರಕಾರಿ ವೋಲ್ವೋ ಬಸ್ ಬಿಟ್ಟು ಇಲ್ಲಿಂದ ಹತ್ತಾರು ಸಂಖ್ಯೆಯಲ್ಲಿ ಪ್ರಯಾಣಿಸುವ ಖಾಸಗಿ ಬಸ್ಸುಗಳತ್ತ ಮುಖ ಮಾಡಿದರೆ ಕೆಎಸ್ಸಾರ್ಟಿಸಿ ಸಂಸ್ಥೆಗೆ ದೊಡ್ಡ ಮಟ್ಟದ ನಷ್ಟ ಉಂಟಾಗುವ ಸಾಧ್ಯತೆ ಇದೆ. ಇದರಿಂದ ಸಮಸ್ಯೆಯನ್ನು ಕೂಲಂಕುಷವಾಗಿ ಪರಿಶೀಲಿಸಿ ಪ್ರಯಾಣ ದರವನ್ನು ಕಡಿತಗೊಳಿಸಬೇಕು ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಈ ಸಂದರ್ಭದಲ್ಲಿ ಕರ್ನಾಟಕ ಸ್ವಾಭಿಮಾನಿ ಕ್ರಾಂತಿ ಸಂಘದ ಜಿಲ್ಲಾಧ್ಯಕ್ಷ ಕುಮಾರ ನಾಯ್ಕ, ಉಪಾಧ್ಯಕ್ಷ ಕೆ.ಎಮ್.ಷರೀಫ್, ಪ್ರಧಾನ ಕಾರ್ಯದರ್ಶಿ ಅಲಿ ಮಲ್ಲಿಕ್, ತಾಲೂಕು ಘಟಕದ ಅಧ್ಯಕ್ಷ ಅಶೋಕ ನಾಯ್ಕ, ವೆಂಕಟೇಶ ನಾಯ್ಕ, ರಾಮಚಂದ್ರ ಗೊಂಡ, ಬಾಲಚಂದ್ರ ನಾಯ್ಕ, ದೇವೇಂದ್ರ ನಾಯ್ಕ, ಸುರೇಶ ನಾಯ್ಕ, ಶಿವರಾಮ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.

Read These Next