ಭಟ್ಕಳ ಪುರಸಭೆಯ ೨೦೧೭-೧೮ನೇ ಸಾಲಿನ ಆಯವ್ಯಯಕ್ಕೆ ಅನುಮೋದನೆಗೆ ಸದಸ್ಯರ ಆಕ್ಷೇಪ

Source: sonews | By Staff Correspondent | Published on 10th January 2019, 11:05 PM | Coastal News | Don't Miss |

ಭಟ್ಕಳ: ಇಲ್ಲಿನ ಪುರಸಭೆಯ ಮಾಸಿಕ ಸಾಮಾನ್ಯ ಸಭೆಯೂ ಪುರಸಭಾ ಸಭಾಂಗಣದಲ್ಲಿ ಬುಧವಾರದಂದು ಅಧ್ಯಕ್ಷ ಮಹ್ಮದ್ ಸಾದಿಕ್ ಮಟ್ಟಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಪುರಸಭೆಯ 2017-18 ನೇ ಸಾಲಿನ ಆಯ ವ್ಯಯವನ್ನು ಸಭೆಯಲ್ಲಿ ಇಟ್ಟು ಅನುಮೋದನೆ ಪಡೆಯಲಾಯಿತು. 

ಸಭೆಯಲ್ಲಿ ಉಪಸ್ಥಿತರಿದ್ದ ಸದಸ್ಯ ಡಾ. ಸಲೀಂ ಅವರು ನಗರದ ಸರದಾರ ವಲ್ಲಭಬಾಯಿ ಪಟೇಲ್ ಉದ್ಯಾನವನಕ್ಕೆ ಅಗತ್ಯಕ್ಕಿಂತ ಹೆಚ್ಚು ಖರ್ಚು ಮಾಡಿದ್ದ ಹಣದ ಬಗ್ಗೆ ವಿವರ ನೀಡಬೇಕೆಂದು ಸಭೆಯಲ್ಲಿದ್ದ ಇಂಜನೀಯರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಸಮಿತಿ ಸದಸ್ಯರಿಗೆ ಕೆಲವು ಕಾಮಗಾರಿಗಳ ಬಗ್ಗೆ ವಿವರ ನೀಡದೇ ಟೆಂಡರ ಪ್ರಕ್ರಿಯೆಗೆ ಅನುಮೋದನೆ ನೀಡುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಇದಕ್ಕೆ ಸ್ಥಾಯಿ ಸಮಿತಿ ಅಧ್ಯಕ್ಷ ಕೈಸರ ಮೊತೇಶಾಮ್ ಇನ್ನು ಹೀಗಾಗದಂತೆ ನಡೆದುಕೊಳ್ಳುವೆ ಎಂದು ಸಭೆಯಲ್ಲಿ ವಿವರಿಸಿದರು. 

ಇಲ್ಲಿನ ಪುರಸಭೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಹಸ್ತಾಂತರಗೊಂಡ ಹೊಸ ಮೀನು ಮಾರುಕಟ್ಟೆಗೆ ಮೀನು ವ್ಯಾಪಾರಿಗಳನ್ನು ಹಳೆ ಮೀನು ಮಾರುಕಟ್ಟೆಯಿಂದ ಸ್ಥಳಾಂತರಿಸುವ ವಿಚಾರವಾಗಿ ಸಾಕಷ್ಟು ಚರ್ಚೆಗಳಾಗಿದ್ದು ಈ ಬಗ್ಗೆ ಮುಖ್ಯಾಧಿಕಾರಿಗಳ ಬಳಿ ಸ್ಥಳಾಂತರಕ್ಕೆ ಯಾವೆಲ್ಲ ಸೂಚನೆ ನೀಡಿರುವ ಬಗ್ಗೆ ಕೇಳಿದರು. ಇದಕ್ಕೆ ಮುಖ್ಯಾಧಿಕಾರಿ ದೇವರಾಜ ಈಗಾಗಲೇ ಮೊದಲ ಹಂತದಲ್ಲಿ ಸ್ಥಳಾಂತರದ ಬಗ್ಗೆ ಮಾಹಿತಿ ನೀಡಿ ಬರಲಾಗಿದ್ದು, ಇದಕ್ಕೆ ಅವರು ಅವರದ್ದೇ ರೀತಿಯ ಸಮಸ್ಯೆಯನ್ನು ತಿಳಿಸಿದ್ದಾರೆ. ಇನ್ನು ಕೆಲ ದಿನದ ಬಳಿಕ ಮತ್ತೆ ಹಳೆ ಮೀನುಮಾರುಕಟ್ಟೆ ವ್ಯಾಪಾರಿಗಳಿಗೆ ನಿಗದಿತ ದಿನಾಂಕ ನೀಡಿ ಸ್ಥಳಾಂತರಕ್ಕೆ ಗಡುವು ನೀಡಿ ಬರುವ ಬಗ್ಗೆ ಸಭೆಯಲ್ಲಿ ತಿಳಿಸಿದರು. ಈ ವೇಳೆ ಮೀನುವ್ಯಾಪಾರಿಗಳಿಗೆ ಅನೂಕೂಲವಾಗುವಂತೆ ಹೊಸ ಮಾರುಕಟ್ಟೆಯಲ್ಲಿ ಎಲ್ಲಾ ವ್ಯವಸ್ಥೆಗಳಿದ್ದು, ಈಗಿರುವ ಹಳೆ ಮೀನು ಮರುಕಟ್ಟೆಯಲ್ಲಿನ ಮೂಲಭೂತ ವ್ಯವಸ್ಥೆಯನ್ನು ಸ್ಥಗಿತಗೊಳಿಸಿದ್ದಲ್ಲಿ ತಕ್ಷಣಕ್ಕೆ ಎಲ್ಲರು ಹೊಸ ಮಾರುಕಟ್ಟೆಗೆ ತೆರಳಿ ಅಲ್ಲಿ ತಮ್ಮ ವ್ಯಾಪಾರವನ್ನು ಮುಂದುವರೆಸುತ್ತಾರೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಕೈಸರ ಮೊತೇಶಾಮ್ ತಿಳಿಸಿದರು. 

ಪುರಸಭೆಯ ಇನ್ನೋರ್ವ ಸದಸ್ಯ ವೆಂಕಟೇಶ ನಾಯ್ಕ ಪುರಸಭೆ ವ್ಯಾಪ್ತಿಯ ಅಂಗಡಿಕಾರರಿಗೆ ಪುರಸಭೆ ಹೆಚ್ಚಿನ ಹಣ ಭರಣಿಸುವಂತೆ ನೋಟೀಸು ನೀಡುತ್ತಿದ್ದು ಅಂಗಡಿಕಾರರು ಈ ಹಿಂದೆ ನೀಡಿದ್ದ ಠೇವಣಿ ಹಣವನ್ನು ವಜಾ ಮಾಡದೇ ಅಧಿಕ ಹಣ ನೀಡಬೇಕೆಂದು ನೊಟೀಸು ನೀಡುವುದು ಸರಿಯಲ್ಲ. ಬಡ ಅಂಗಡಿಕಾರರಿಗೆ ಸ್ವಲ್ಪ ಮಟ್ಟಿಗೆ ಬಾಡಿಗೆಯನ್ನು ಹೆಚ್ಚಿಸಿ ಪುನಃ ಟೆಂಡರನ್ನು ಮಾಡಿ ಅವರವರ ಅಂಗಡಿ ಅವರಿಗೆ ಮಾಡಿಕೊಡಬೇಕೆಂದು ಸಭೆಯಲ್ಲಿ ತಿಳಿಸಿದರು. ಇದಕ್ಕೆ ಪುರಸಭೆಯ ಅಧ್ಯಕ್ಷ ಮಟ್ಟಾ ಸಾಧೀಕ ಇನ್ನೊಮ್ಮೆ ಚರ್ಚಿಸಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಈ ಹಿಂದೆ ಇದ್ದ ಅಂಗಡಿಕಾರರ ಸಮಸ್ಯೆಯನ್ನು ಬಗೆಹರಿಸೋಣ ಎಂದು ಹೇಳಿದರು.  

ಸಭೆಯಲ್ಲಿದ್ದ ಸದಸ್ಯ ಪಾಸ್ಕಲ್ ಗೋಮ್ಸ ಮಾತನಾಡಿ ಕಾರವಾರದ ಹಿರಿಯ ಅಧಿಕಾರಿಗಳು ಭಟ್ಕಳಕ್ಕೆ  ಬಂದಾಗ ಪುರಸಭೆಯಲ್ಲಿ ಯಾವ ಸಿಬ್ಬಂದಿಗಳು ಪುರಸಭೆಯಲ್ಲಿ ಇರದೇ ಹಿರಿಯ ಅಧಿಕಾರಿಗಳ ಹಿಂದೆ ಅಲೆದಾಡುತ್ತಾರೆ ಇದರಿಂದ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ತೊಂದರೆಯಾಗುತ್ತದೆ ಎಂದು ದೂರಿದವರು. ಇದಕ್ಕೆ ಪುರಸಭೆಯ ಮುಖ್ಯಾಧಿಕಾರಿ ದೇವರಾಜ್ ಮಾತನಾಡಿ ಮುಂದೆ ಹೀಗಾಗದಂತೆ ಸಿಬ್ಬಂದಿಗಳಿಗೆ ಸೂಚನೆ ನೀಡುತ್ತೇನೆ ಎಂದು ಹೇಳಿದರು.

ಇನ್ನು ಅಧ್ಯಕ್ಷ ಮಹ್ಮದ್ ಸಾದಿಕ್ ಮಟ್ಟಾ ಮಾತನಾಡಿ ‘ಸರಕಾರದಿಂದ ಜಾಲಿ ಪಟ್ಟಣ ಪಂಚಾಯತ ಹಾಗೂ ಮುಂಡಳ್ಳಿ ಗ್ರಾಮ ಪಂಚಾಯತಗೆ ಯು.ಜಿಡಿ. ಯೋಜನೆಗೆ 200 ಕೋಟಿ ರೂ ಹಣ ಬಂದಿದ್ದು ಅದು ಖರ್ಚಾಗದೇ ಉಳಿದಿದ್ದು ಅದನ್ನು ಹಾಗೆಯೇ ಬಿಟ್ಟರೆ ಸರಕಾರಕ್ಕೆ ಈ ಹಣ ವಾಪಸ್ಸು ಹೋಗುತ್ತದೆ ಆದ್ದರಿಂದ ಈ ಹಣವನ್ನು ಸದುಪಯೋಗಪಡಿಸಿಕೊಳ್ಳಲು ಸಭೆಯಲ್ಲಿದ್ದ ಸದಸ್ಯರಿಗೆ ತಿಳಿಸಿದರು. ಈ ಸಂದರ್ಭ ಕೆಲವು ಸದಸ್ಯರು ಈಗಾಗಲೇ ಯು.ಜಿ.ಡಿ ಯೋಜನೆಯಿಂದ ಗೌಸಿಯಾ ಸ್ಟ್ರೀಟ ಸೇರಿದಂತೆ ಹಲವು ಕಡೆ ಸಾವಿರಾರು ಬಾವಿಗಳಿಗೆ ಕೊಳಚೆ ನೀರು ಸೇರಿ ಕುಡಿಯುವ ನೀರು ಹಾಳಾಗಿದ್ದು ಸರಿಯಾದ ಪ್ಲಾನ್ ಇಲ್ಲದೇ ಹೊಸ ಯುಜಿಡಿ ಯೋಜನೆ ಕಾರ್ಯ ಕೈಗೆತ್ತಿಕೊಳ್ಳಬಾರದೆಂದು ಆಗ್ರಹಿಸಿದರು. 

ಸಭೆಯಲ್ಲಿ ಉಪಾಧ್ಯಕ್ಷ ಮೊಹಿದ್ದಿನ್ ಮಹ್ಮದ ಅಶ್ಪಾಕ್ ಸಾಬ್, ಸ್ಥಾಯಿ ಸಮಿತಿ ಅಧ್ಯಕ್ಷ  ಕೈಸರ್ ಅಹ್ಮದ್, ಸದಸ್ಯರಾದ ಪದ್ಮನಾಭ ಪೈ, ವೆಂಕಟೇಶ ನಾಯ್ಕ, ಅಬ್ದುಲ್ ರವೂಫ, ಅಲ್ತಾಫ ಕರೂರಿ, ಡಾ. ಸಲೀಂ, ಕೃಷ್ಣಾನಂದ ಪೈ, ಫಯಾಜ್ ಅಹಮ್ಮದ್ ಸೇರಿದಂತೆ ಇನ್ನುಳಿದ ಸದಸ್ಯರು ಹಾಗೂ ಮುಖ್ಯಾಧಿಕಾರಿ ದೇವರಾಜ್, ಆರೋಗ್ಯಾಧಿಕಾರಿ ಸೋಜಿಯಾ ಸೋಮನ್ ಮತ್ತಿತರರು ಉಪಸ್ಥಿತರಿದ್ದರು.


 

Read These Next