ನಾನು ಸತ್ತಿಲ್ಲ: ಅಶೋಕ್ ಪೂಜಾರಿ

Source: sonews | By Staff Correspondent | Published on 18th July 2017, 11:48 PM | Coastal News | State News | Special Report | Don't Miss |

ಕೇಂದ್ರ ಸಚಿವ ರಾಜ್‌ನಾಥ್ ಸಿಂಗ್‌ಗೆ ಬರೆದ ಪತ್ರದಲ್ಲಿ ಬದುಕಿರುವವರನ್ನೇ ಕೊಂದು ಬಿಟ್ಟ ಶೋಭಾ  

ಆತ್ಮ ಹತ್ಯೆ ಮಾಡಿಕೊಂಡವರೂ ಕೊಲೆಯಾದವರ ಪಟ್ಟಿ ಸೇರಿದರು !

ಶೋಭಾ ಪಟ್ಟಿಯಲ್ಲಿ ಹಿಂಜಾವೇಯಿಂದ ಕೊಲೆಯಾದ ಬಿಜೆಪಿ ಮುಖಂಡನ ಹೆಸರೇ ಇಲ್ಲ  

ಸಂಘ ಪರಿವಾರದ ಕಾರ್ಯಕರ್ತನಿಂದಲೇ ಕೊಲೆಯಾದ ಹಿಂದೂ ಯುವಕನ ಹೆಸರೂ ನಾಪತ್ತೆ  

​ನಮೋ ಬ್ರಿಗೇಡ್ ನಾಯಕನೇ ಆರೋಪಿಯಾಗಿರುವ ಆರ್ ಟಿ ಐ ಕಾರ್ಯಕರ್ತನ ಕೊಲೆ ಪಟ್ಟಿಯಲ್ಲಿಲ್ಲ 

ಮದ್ರಸ ವಿದ್ಯಾರ್ಥಿಗಳ ಮೇಲೆ ಬಾಂಗ್ಲಾದೇಶೀಯರೆಂದು ಸುಳ್ಳಾರೋಪ ಮಾಡಿದ ಸಂಸದೆ

ಮಂಗಳೂರು, ಜು.18: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ಇತ್ತೀಚೆಗೆ ನಡೆದ ಕೆಲವು ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ನಿರ್ಮಾಣವಾಗಿದ್ದ ಉದ್ವಿಗ್ನ ವಾತಾವರಣವನ್ನು ಶಮನಗೊಳಿಸುವ ಶತಪ್ರಯತ್ನಗಳು ಎಲ್ಲೆಡೆಯಿಂದ ನಡೆಯುತ್ತಿವೆ. ಆದರೆ ಇದರ ನಡುವೆ ರಾಜ್ಯದಲ್ಲಿ ಹಿಂದೂಗಳು / ಸಂಘ ಪರಿವಾರ ಕಾರ್ಯಕರ್ತರ ಕೊಲೆ ಅವ್ಯಾಹತವಾಗಿ ನಡೆಯುತ್ತಿವೆ ಎಂದು ಆರೋಪಿಸಿ ಇವುಗಳ ಬಗ್ಗೆ ಎನ್ ಐ ಎ ತನಿಖೆಗೆ ಆಗ್ರಹಿಸಿ ಉಡುಪಿ-ಚಿಕ್ಕಮ ಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರು ಕೇಂದ್ರ ಗೃಹ ಸಚಿವರಿಗೆ ಬರೆದಿರುವ ಪತ್ರ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಕಾರಣ- ಪಿಎಫ್ ಐ ಸಂಘಟನೆಯಿಂದ ಕೊಲೆಯಾಗಿದ್ದಾರೆಂದು ಈ ಪಟ್ಟಿಯಲ್ಲಿ ಶೋಭಾ ಹೆಸರಿಸಿರುವ ವ್ಯಕ್ತಿಯೊಬ್ಬರು ಜೀವಂತವಾಗಿದ್ದು, ಉದ್ಯೋಗ ಮಾಡಿಕೊಂಡಿದ್ದಾರೆ !

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರಕಾರದ ಕಳೆದ ನಾಲ್ಕು ವರ್ಷಗಳ ಆಡಳಿತಾವಧಿಯಲ್ಲಿ ರಾಜ್ಯದಲ್ಲಿ 23 ಮಂದಿ ಹಿಂದೂ, ಆರೆಸೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಹತ್ಯೆ ನಡೆಸಲಾಗಿದೆ. 'ಪಿಎಫ್ ಐ, ಕೆ ಎಫ್ ಡಿ ಸಂಘಟನೆಗಳ ಜಿಹಾದಿ ಶಕ್ತಿಗಳಿಂದ’ ಈ ಕೊಲೆಗಳು ನಡೆದಿವೆ. ಈ ಬಗ್ಗೆ ಕಾಂಗ್ರೆಸ್ ಸರ್ಕಾರ ನ್ಯಾಯ ಒದಗಿಸದೇ ಇರುವುದರಿಂದ ಇವುಗಳ ಬಗ್ಗೆ ಎನ್ ಐ ಎ ತನಿಖೆ ನಡೆಸಬೇಕು, ಪಿಎಫ್ ಐ, ಕೆ ಎಫ್ ಡಿ ಸಂಘಟನೆಗಳನ್ನು ನಿಷೇಧಿಸಬೇಕು ಹಾಗು ಅವರಿಗೆ ಸಹಕಾರ ನೀಡುವವರನ್ನು ಬಂಧಿಸಬೇಕು ಎಂದು ಕೇಂದ್ರ ಸಚಿವ ರಾಜ್‌ನಾಥ್ ಸಿಂಗ್ ಅವರಿಗೆ ಜು.8ರಂದು ಬರೆದಿರುವ ಈ ಪತ್ರದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ. ಪತ್ರದ ಜೊತೆ ಕೊಲೆಯಾಗಿದ್ದಾರೆಂದು ಶೋಭಾ ಹೆಸರಿಸಿರುವ 23 ಮಂದಿಯ ಪಟ್ಟಿಯನ್ನೂ ನೀಡಲಾಗಿದೆ. ಇದನ್ನು ಸಂಸದೆಯ ಕಚೇರಿ ಮೂಲಗಳು ಖಚಿತಪಡಿಸಿವೆ.

 ಸಂಸದೆ ನೀಡಿರುವ 'ಕೊಲೆಗೀಡಾದ 23 ಮಂದಿಯಲ್ಲಿ’ ಮೂಡಬಿದ್ರೆಯ ಅಶೋಕ್ ಪೂಜಾರಿ ಎಂಬ ವ್ಯಕ್ತಿಯ ಹೆಸರು ಉಲ್ಲೇಖ ಮಾಡಲಾಗಿದೆ. ಆದರೆ, ಅಶೋಕ್ ಪೂಜಾರಿ ಇನ್ನೂ ಬದುಕಿದ್ದಾರೆ !

ಅಶೋಕ್ ಪೂಜಾರಿಯವರ ಮೇಲೆ 2015ರ ಸೆಪ್ಟಂಬರ್ 20ರಂದು ತಂಡವೊಂದು ಮೂಡಬಿದ್ರೆಯ ಹಂಡೇಲ್ ನಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿತ್ತು. ಗಂಭೀರ ಗಾಯಗೊಂಡಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರು ಚೇತರಿಸಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರು. ಅಶೋಕ್ ಪೂಜಾರಿ ಅವರ ಮೇಲಿನ ಹಲ್ಲೆಯ ವರದಿಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ಆದರೆ, ಶೋಭಾ ಕರಂದ್ಲಾಜೆ ಅವರು ಸಿದ್ಧಪಡಿಸಿರುವ ಈ ಪತ್ರದಲ್ಲಿ ಕೊಲೆಗೀಡಾದವರಲ್ಲಿ ಅಶೋಕ್ ಪೂಜಾರಿ ಮೊದಲ ಸ್ಥಾನದಲ್ಲಿದ್ದಾರೆ. ಬದುಕಿರುವ ಅಶೋಕ್ ಪೂಜಾರಿಯವರನ್ನು ಸಾವನ್ನಪ್ಪಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸುವ ಮೂಲಕ ಕೇಂದ್ರ ಸಚಿವರಿಗೆ ಶೋಭಾ ಕರಂದ್ಲಾಜೆ ಅವರು ಸುಳ್ಳು ಮಾಹಿತಿಯನ್ನು ರವಾನಿಸಿದ್ದಾರೆ.

ಅಶೋಕ್ ಪೂಜಾರಿ ಪ್ರಕರಣ ಮಾತ್ರವಲ್ಲದೆ, ದ.ಕ. ಮತ್ತು ಕೊಡಗು ಜಿಲ್ಲೆಗಳಲ್ಲಿ ನಡೆದಿರುವ ಕೆಲವು ಆತ್ಮಹತ್ಯೆ ಮತ್ತು ಕೆಲವು ಅಸಹಜ ಸಾವುಗಳನ್ನು ಕೂಡ ಕೊಲೆ ಎಂದು ಸಂಸದೆ ಶೋಭಾ ಹೆಸರಿಸಿದ್ದಾರೆ.

ವಾಮನ ಪೂಜಾರಿ

ಶೋಭಾ ನೀಡಿರುವ 'ಕೊಲೆಗೀಡಾದ 23 ಮಂದಿಯಲ್ಲಿ’ ಮೂಡಬಿದ್ರೆಯ ವಾಮನ ಪೂಜಾರಿ ಎಂಬವರ ಹೆಸರು ಉಲ್ಲೇಖವಾಗಿದೆ. ಆದರೆ, ವಾಮನ ಪೂಜಾರಿಯ ಹತ್ಯೆಯಾಗಿಲ್ಲ . 2015ರ ಅಕ್ಟೋಬರ್ 15ರಂದು ಅವರು ಮೂಡಬಿದ್ರೆಯ ಬನ್ನಡ್ಕದಲ್ಲಿರುವ ತನ್ನ ಮಗಳ ಮನೆಯ ಶೆಡ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ಮೂಡಬಿದ್ರೆ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.

ರಾಜು

2015ರ ನ.10ರಂದು ಮಡಿಕೇರಿಯಲ್ಲಿ ನಡೆದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಉಂಟಾದ ಹಿಂಸಾಚಾರದ ಸಂದರ್ಭದಲ್ಲಿ ರಾಜು ಅವರು ಆಸ್ಪತ್ರೆಯ ಛಾವಣಿಯಿಂದ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದರು. ಈ ವಿಷಯವನ್ನು ಆಗಿನ ಜಿಲ್ಲಾ ಪೊಲೀಸ್ ಅಧಿಕಾರಿಗಳೂ ಸ್ಪಷ್ಟಪಡಿಸಿದ್ದರು. ಆದರೆ ಶೋಭಾ ನೀಡಿರುವ ಪಟ್ಟಿಯಲ್ಲಿ ರಾಜು ಪೂಜಾರಿಯವರು ಕೊಲೆಯಾಗಿದ್ದಾರೆ !

ಡಿ.ಕೆ.ಕುಟ್ಟಪ್ಪ

ಮಡಿಕೇರಿಯಲ್ಲಿ ಟಿಪ್ಪು ಜಯಂತಿ ಸಂದರ್ಭದಲ್ಲಿ ಉಂಟಾದ ಕಲ್ಲು ತೂರಾಟ ನಡೆದಾಗ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಆಯತಪ್ಪಿ ಎತ್ತರದಿಂದ ಬಿದ್ದು ಸಾವಿಗೀಡಾಗಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿದೆ. ಆದರೆ ರಾಜು ಜೊತೆ ಡಿ.ಕೆ.ಕುಟ್ಟಪ್ಪ ಅವರ ಸಾವನ್ನು ಶೋಭಾ ಕರಂದ್ಲಾಜೆ ಅವರು ತಮ್ಮ ಪತ್ರದಲ್ಲಿ ಕೊಲೆ ಎಂದು ಉಲ್ಲೇಖ ಮಾಡಿದ್ದಾರೆ.

ಕಾರ್ತಿಕ್‌ ರಾಜ್

2016ರ ಅಕ್ಟೋಬರ್ 22ರಂದು ನಡೆದ ಕಾರ್ತಿಕ್‌ ರಾಜ್ ಕೊಲೆ ಜಿಲ್ಲೆಯನ್ನು ದಂಗುಬಡಿಸಿತ್ತು. ಈ ಕೊಲೆಯ ಹಿಂದಿರುವ ಅಪರಾಧಿಗಳನ್ನು ಬಂಧಿಸದಿದ್ದರೆ ಜಿಲ್ಲೆಗೆ ಬೆಂಕಿ ಹಚ್ಚುವ ಬೆದರಿಕೆಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ಹಾಕಿದ್ದರು. ಈ ಹೇಳಿಕೆ ನೀಡಿದ ಕೆಲವೇ ದಿನಗಳ ಬಳಿಕ ಜಿಲ್ಲೆಗೆ ಆಗಮಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಕೊಲೆಯಲ್ಲಿ ಕೇರಳ ಮೂಲದ ಸಂಘಟನೆಯ ಕೈವಾಡವಿದೆ ಎಂದು ಆರೋಪಿಸಿದ್ದರು. ಆದರೆ, ಈ ಕೊಲೆಯ ರೂವಾರಿ ಕಾರ್ತಿಕ್‌ರಾಜ್‌ರ ಸಹೋದರಿಯೇ ಎಂಬುದು ಪೊಲೀಸರು ತನಿಖೆಯಲ್ಲಿ ಬಹಿರಂಗವಾಗಿ ಆಕೆಯನ್ನು ಬಂಧಿಸಲಾಗಿತ್ತು.

ನಾನು ಸತ್ತಿಲ್ಲ: ಅಶೋಕ್ ಪೂಜಾರಿ

      ಅಶೋಕ್ ಪೂಜಾರಿ

  ಸಂಸದೆ ಶೋಭಾ ಸಲ್ಲಿಸಿದ 'ಕೊಲೆಯಾದವರ ಪಟ್ಟಿಯಲ್ಲಿದ್ದ’ ವ್ಯಕ್ತಿಯ ಹೇಳಿಕೆ ಶೋಭಾ ಕರಂದ್ಲಾಜೆ ಅವರು ಬರೆದ ಪತ್ರದ ಪ್ರತಿ ವೈರಲ್ ಆಗುತ್ತಿದ್ದಂತೆ ಈ ಬಗ್ಗೆ ‘ವಾರ್ತಾಭಾರತಿ’ ಮಂಗಳವಾರ ಅಶೋಕ್ ಪೂಜಾರಿ ಅವರನ್ನು ಸಂಪರ್ಕಿಸಿ ಮಾತನಾಡಿತು. ‘‘2015ರ ಸೆ.20ರಂದು ಘಟನೆ ನಡೆದಿರುವುದು ನಿಜ. ಆದರೆ ನಾನು ಸತ್ತಿಲ್ಲ. ಗಾಯಗೊಂಡಿದ್ದೆ  ಎಂದು ಅಶೋಕ್ ಪೂಜಾರಿ ಹೇಳಿದ್ದಾರೆ.

ನಾನು ವಾದ್ಯದ ತಂಡದಲ್ಲಿ ಕೆಲಸ ಮಾಡುತ್ತಿದ್ದೆ. ಆಹ್ವಾನ ಬಂದರೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಬ್ಯಾಂಡ್ ಬಾರಿಸುತ್ತಿದ್ದೆ. ಕುಲಶೇಖರದಲ್ಲಿ ನಡೆದ ಚೌತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು 2015ರ ಸೆ.20ರಂದು ನಾನು ಮತ್ತು ನನ್ನ ಸ್ನೇಹಿತ ವಾಸು ಆಚಾರ್ಯ ಎಂಬವರು ಬೈಕ್‌ನಲ್ಲಿ ಹಿಂದಿರುಗುತ್ತಿದ್ದೆವು. ಈ ಸಂದರ್ಭದಲ್ಲಿ ಬೆಳಗ್ಗೆ ಸುಮಾರು7 ಗಂಟೆ ಹೊತ್ತಿಗೆ 6 ಮಂದಿಯ ತಂಡವೊಂದು ಹಂಡೇಲ್‌ನಲ್ಲಿ ನಮ್ಮನ್ನು ತಡೆದು ಹಲ್ಲೆ ಮಾಡಿತ್ತು. ಹಿಂಬದಿ ಸವಾರನಾಗಿದ್ದ ನಾನು ತೀವ್ರ ತರದ ಹಲ್ಲೆಗೊಳಗಾಗಿ ತಲೆಗೆ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದೆ. ಸುಮಾರು ಒಂದೂವರೆ ತಿಂಗಳ ಕಾಲ ಚಿಕಿತ್ಸೆ ಪಡೆದು ಚೇತರಿಸಿಕೊಂಡು ಬಿಡುಗಡೆಗೊಂಡಿದ್ದೇನೆ ಎಂದು ಅಶೋಕ್ ಪೂಜಾರಿ ‘ವಾರ್ತಾಭಾರತಿ’ಗೆ ಪ್ರತಿಕ್ರಿಯೆ ನೀಡಿದ್ದಾರೆ.

 ಮದ್ರಸ ವಿದ್ಯಾರ್ಥಿಗಳ ಮೇಲೆ ಬಾಂಗ್ಲಾ ದೇಶಿಗರೆಂಬ ಸುಳ್ಳಾರೋಪ ಮಾಡಿದ ಸಂಸದೆ

ಬಾಂಗ್ಲಾ ದೇಶದ ಸುಮಾರು 200 ಹುಡುಗರು ಬೆಂಗಳೂರಿಗೆ ಬಂದಿದ್ದಾರೆ. ಅವರನ್ನು ಭಯೋತ್ಪಾದಕರಾಗಿ ರೂಪಿಸಲು ತರಬೇತಿ ನೀಡಲಾಗುತ್ತದೆ ಎಂಬ ಸುಳ್ಳು ಮಾಹಿತಿಯನ್ನೂ ಶೋಭಾ ಅವರು ಜುಲೈ 17ರಂದು ಕೇಂದ್ರ ಗೃಹ ಸಚಿವರಿಗೆ ಬರೆದ ಪತ್ರದಲ್ಲಿ ನೀಡಿದ್ದಾರೆ. ಬಾಂಗ್ಲಾದೇಶದಿಂದ ಅಥವಾ ಉತ್ತರ ಭಾರತದ ವಿವಿಧೆಡೆಗಳಿಂದ ಕರೆದುಕೊಂಡು ಬಂದಿರುವ ಈ ಹುಡುಗರಿಗೆ ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬಂಧಿಸಿ ತರಬೇತಿಯನ್ನು ನೀಡಲಾಗುತ್ತಿದೆ ಎಂದೂ ಅವರು ಆರೋಪಿಸಿದ್ದರು.

ನಿಜವಾಗಿ ನಡೆದದ್ದೇನು ?

ಬಾಂಗ್ಲಾ ದೇಶದ ಮಕ್ಕಳು ಬೆಂಗಳೂರಿಗೆ ಬಂದಿದ್ದಾರೆ ಎಂಬ ವದಂತಿಯ ಹಿನ್ನೆಲೆಯಲ್ಲಿ ಜು. 11ರಂದು ಬೆಂಗಳೂರಿನ ರೈಲ್ವೇ ಪೊಲೀಸರು, ಸಿಸಿಬಿ ಹಾಗೂ ನಗರ ಪೊಲೀಸರು 160ಕ್ಕೂ ಹೆಚ್ಚು ಮದ್ರಸಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಬೆಂಗಳೂರಿನ ಕೆ ಆರ್ ಪುರಂ ರೈಲ್ವೆ ನಿಲ್ದಾಣದಲ್ಲಿ ವಿಚಾರಣೆಗೊಳಪಡಿಸಿದ್ದರು. ಮದ್ರಸ ವಿದ್ಯಾರ್ಥಿಗಳು ಹೊಂದಿದ್ದ ಗುರುತಿನ ಚೀಟಿ ಮತ್ತಿತರ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಪೊಲೀಸರು ಇವರು ಭಾರತದ ವಿವಿಧೆಡೆಗಳಿಂದ ರಮಝಾನ್ ರಜೆ ಮುಗಿಸಿಕೊಂಡು ರಾಜ್ಯದಲ್ಲಿರುವ ಮದ್ರಸಕ್ಕೆ ಬಂದಿರುವ ಹುಡುಗರು. ಬಾಂಗ್ಲಾ ದೇಶದವರಲ್ಲ ಎಂದು ಖಚಿತಪಡಿಸಿದ್ದರು. ಆದರೆ ಸುಳ್ಳು ವದಂತಿಯನ್ನೇ ನೆಚ್ಚಿಕೊಂಡ ಸಂಸದೆ ಶೋಭಾ ಅದೇ ಆಧಾರದಲ್ಲಿ ಕೇಂದ್ರ ಸಚಿವರಿಗೆ ಪತ್ರ ಬರೆದು ಬಿಟ್ಟಿದ್ದಾರೆ.

ಹಿಂಜಾವೇ ಕಾರ್ಯಕರ್ತರಿಂದ ಕೊಲೆಯಾದ ಉಡುಪಿಯ ಪ್ರವೀಣ್ ಪೂಜಾರಿ ಹೆಸರೇ ಇಲ್ಲ

 ಗೋ ಸಾಗಾಟ ಆರೋಪದಲ್ಲಿ ಆಗಸ್ಟ್ 17, 2016 ರಂದು ಉಡುಪಿಯ ಬ್ರಹ್ಮಾವರ ಕೊಕ್ಕರ್ಣೆ ಸಮೀಪದ ಕೆಂಜೂರಿನಲ್ಲಿ ಮಾರಣಾಂತಿಕ ಹಲ್ಲೆಗೊಳಗಾಗಿ ಸಾವನ್ನಪ್ಪಿದ್ದ ಉಡುಪಿ ಜಿಲ್ಲೆಯ ಪ್ರವೀಣ್ ಪೂಜಾರಿ ಅವರ ಹೆಸರನ್ನು ಶೋಭಾ ಪತ್ರದಲ್ಲಿ ಉಲ್ಲೇಖಿಸಲಾಗಿಲ್ಲ. ಬಿಜೆಪಿಯ ಕೆಂಜೂರು ಘಟಕದ ಮಾಜಿ ಸ್ಥಾನೀಯ ಅಧ್ಯಕ್ಷರಾಗಿದ್ದ ಪ್ರವೀಣ್ ಪೂಜಾರಿ ಅವರನ್ನು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರೇ ಕೊಲೆ ಮಾಡಿದ್ದಾರೆ ಎಂದು ಪೊಲೀಸರ ತನಿಖೆಯಿಂದ ಬಹಿರಂಗಗೊಂಡಿತ್ತು. ಆದರೆ, ತಮ್ಮದೇ ಕ್ಷೇತ್ರದಲ್ಲಿ ನಡೆದ ಈ ಕೊಲೆಯ ಬಗ್ಗೆ ಯಾವುದೇ ಉಲ್ಲೇಖ ಮಾಡಲು ಸಂಸದೆ ಶೋಭಾ ಮರೆತುಬಿಟ್ಟಿದ್ದಾರೆ.

ಹರೀಶ್ ಪೂಜಾರಿ ಹೆಸರನ್ನೂ ಮರೆತ ಶೋಭಾ

ನವೆಂಬರ್ 12 ,2015 ರಂದು ಬಿ.ಸಿ.ರೋಡ್ ಸಮೀಪದ ಮಣೆಹಳ್ಳಿ ಎಂಬಲ್ಲಿ ಹರೀಶ್ ಪೂಜಾರಿ ಎಂಬಾತನ ಕೊಲೆಯಾಗಿತ್ತು. ಈತನನ್ನು ಮುಸ್ಲಿಮರೇ ಕೊಲೆ ಮಾಡಿದ್ದಾರೆ ಎಂದು ಸಂಘ ಪರಿವಾರ ಪುಕಾರು ಎಬ್ಬಿಸಿತ್ತು. ಆದರೆ ಈ ಪ್ರಕರಣದಲ್ಲಿ ಸಂಘ ಪರಿವಾರಕ್ಕೆ ಸೇರಿದ ಭುವಿತ್ ಶೆಟ್ಟಿ ಎಂಬಾತನೇ ಪ್ರಮುಖ ಆರೋಪಿ ಎಂದು ಪೋಲೀಸರ ತನಿಖೆಯಲ್ಲಿ ಬಹಿರಂಗವಾಗಿ ಆತನನ್ನು ಬಂಧಿಸಲಾಗಿತ್ತು. ಆದರೆ ಹರೀಶ್ ಪೂಜಾರಿಯ ಹೆಸರು ಶೋಭಾ ಪಟ್ಟಿಯಲ್ಲಿ ಮಿಸ್ಸಿಂಗ್ !


ಆರ್ ಟಿ ಐ ಕಾರ್ಯಕರ್ತ ಬಾಳಿಗರನ್ನೂ ಮರೆತರು ಶೋಭಾ 
ಮಾರ್ಚ್ 21, 2016 ರಂದು ಮಂಗಳೂರಿನ ಆರ್ ಟಿ ಐ ಕಾರ್ಯಕರ್ತ ವಿನಾಯಕ ಬಾಳಿಗಾ ಅವರನ್ನು ಅವರ ಮನೆಯ ಸಮೀಪವೇ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಹಲವು ಅವ್ಯವಹಾರ ಪ್ರಕರಣಗಳನ್ನು ಬಯಲಿಗೆಳೆದಿದ್ದ ಬಾಳಿಗಾ ಅವರ ಕೊಲೆಯ ಪ್ರಧಾನ ಆರೋಪಿ ನಮೋ ಬ್ರಿಗೇಡ್ ನಾಯಕ ನರೇಶ್ ಶೆಣೈ ಎಂದು ತನಿಖೆಯಲ್ಲಿ ಬಹಿರಂಗವಾಗಿತ್ತು. ಬಳಿಕ ನರೇಶ್ ಶೆಣೈ ಬಂಧನವಾಗಿ ಈಗ ಜಾಮೀನಿನ ಮೇಲೆ ಬಿಡುಗಡೆಯೂ ಆಗಿದ್ದಾರೆ. ಆದರೆ ಶೋಭಾ ಪಟ್ಟಿಯಲ್ಲಿ ಬಾಳಿಗಾ ಹೆಸರಿಲ್ಲ !

ಕೃಪೆ: ವಾರ್ತಾಭಾರತಿ

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...