ಯಶಸ್ವಿ ಉದ್ಯಮಿ, ಅನನ್ಯ ಸಾಧಕ, ಶಿಕ್ಷಣ ಪ್ರೇಮಿ ಬಾಶು ಸಾಹೇಬ್

Source: sonews | By sub editor | Published on 25th July 2017, 9:13 PM | Coastal News | State News | Gulf News | Special Report | Don't Miss |

ಮಂಗಳೂರು: ಮಂಗಳವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿರುವ ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ, ಶಿಕ್ಷಣ ಪ್ರೇಮಿ ಸೈಯದ್ ಅಬ್ದುಲ್ ಖಾದರ್ ಬಾಶು ಅವರು, 'ಬಾಶು ಸಾಹೇಬ್' ಎಂದೇ ಚಿರಪರಿಚಿತರು. ಇವರೊಬ್ಬ ಯಶಸ್ವಿ ಉದ್ಯಮಿ, ಪ್ರಾಮಾಣಿಕ ಸಮಾಜ ಸೇವಕ ಮತ್ತು ಅನನ್ಯ ಸಾಧಕ. ಉದ್ಯಮಿಯಾಗಿ ತಮ್ಮ ಅನನ್ಯ ಸಾಧನೆಯಿಂದ ಮಾದರಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದವರು.

ಉಡುಪಿ ಜಿಲ್ಲೆಯ ಕುಂದಾಪುರದ ಶಿರೂರಿನಲ್ಲಿ ಸೈಯದ್ ಅಬ್ದುಲ್ ಖಾದರ್ ಬಾಶು ಅವರು ಜನಿಸಿದ್ದು, ಅವರ ತಂದೆ ದಿವಂಗತ ಮೀರಾನ್ ಸಾಹೇಬ್ ಓರ್ವ ವ್ಯಾಪಾರಿ ಹಾಗೂ ಶಿಕ್ಷಕರಾಗಿದ್ದವರು. ಅವರ ಜನಪರ ಕೊಡುಗೆಗಳನ್ನು ಈ ಪ್ರದೇಶದ ವಿವಿಧ ಸಮುದಾಯಗಳ ಜನ ಇಂದಿಗೂ ಸ್ಮರಿಸುತ್ತಾರೆ. 

ಶಿಕ್ಷಣ: ಶಿರೂರಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪಡೆದ ಅವರು ಬೈಂದೂರು ಸರಕಾರಿ ಪ್ರಾಥಮಿಕ ಶಾಲೆ ಬಳಿಕ ಬೈಂದೂರಿನ ಸರಕಾರಿ ಹೈಸ್ಕೂಲ್‌ನಲ್ಲಿ ಶಿಕ್ಷಣ ಪಡೆದರು. ಕುಂದಾಪುರದ ಭಂಡಾರ್‌ಕಾರ್ಸ್ ಕಾಲೇಜಿನಿಂದ ಬಿಕಾಂ ಪದವಿಯನ್ನು ಗಳಿಸಿದರು.

ವಿದ್ಯಾರ್ಥಿ ನಾಯಕ: ಕಾಲೇಜಿನಲ್ಲಿ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (ಎನ್‌ಎಸ್‌ಯುಐ) ಘಟಕದ ಕಾರ್ಯದರ್ಶಿಯಾಗಿದ್ದ ಅವರು, ಅಂದಿನ ಸಂಸತ್ ಸದಸ್ಯರಾಗಿದ್ದ ಆಸ್ಕರ್ ಫೆರ್ನಾಂಡಿಸ್‌ರವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿ ನಾಯಕನಾಗಿ ಸಾಮಾಜಿಕವಾಗಿ ಕ್ರಿಯಾಶೀಲರಾಗಿದ್ದವರು.

ವ್ಯವಹಾರ: 1982ರಲ್ಲಿ ವ್ಯವಹಾರ ಪ್ರತಿನಿಧಿಯಾಗಿ ದುಬೈನಲ್ಲಿ ಖ್ಯಾತ ಬಹುರಾಷ್ಟ್ರೀಯ ಸಂಸ್ಥೆಯೊಂದನ್ನು ಬಾಶು ಸೇರಿಕೊಂಡರು. ಈ ಕಂಪನಿಯಲ್ಲಿ ಸುಮಾರು ಒಂದು ದಶಕ ಸೇವೆ ಸಲ್ಲಿಸಿದ ಅವರು, 1992ರಲ್ಲಿ ತಮ್ಮದೇ ಸುಗಂಧ ದ್ರವ್ಯಗಳ ಸಂಸ್ಥೆಯೊಂದನ್ನು ಪ್ರಾರಂಭಿಸಿದರು. ವ್ಯವಹಾರದಲ್ಲಿ ಪ್ರಾಮಾಣಿಕತೆ, ಅತ್ಯುನ್ನತ ಗುಣಮಟ್ಟಗಳ ಜತೆ ತಮ್ಮ ಸಂಘಟನೆ, ನಾಯಕತ್ವ ಕೌಶಲ್ಯ ಮತ್ತು ಬದ್ಧತೆಯೊಂದಿಗೆ ಅತ್ಯಲ್ಪ ಸಮಯದಲ್ಲೇ ಯಶಸ್ವಿಯಾದರು. 

ಶಿಕ್ಷಣ ಪ್ರೇಮಿ: ತಮ್ಮ ತಂದೆಯ ಆದರ್ಶದ ಹೆಜ್ಜೆಯನ್ನನುಸರಿಸುತ್ತಾ ಬಾಶುರವರು ಶಿರೂರು ಮತ್ತು ಸುತ್ತಮುತ್ತಲ ಗ್ರಾಮಗಳ ಭವಿಷ್ಯದ ಪೀಳಿಗೆಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ನಿರ್ಧರಿಸಿದರು. ಅದಕ್ಕಾಗಿ ಸಮಾನ ಮನಸ್ಕರ ಜತೆ ಸೇರಿ, ಶಿರೂರಿನಲ್ಲಿ ಶಿಕ್ಷಣದ ಉತ್ತೇಜನಕ್ಕಾಗಿ ನಿರ್ದಿಷ್ಟ ಮಾರ್ಗಸೂಚಿಯೊಂದನ್ನು ತಯಾರಿಸಿ, ಶಿರೂರು ವೆಲ್‌ಫೇರ್ ಟ್ರಸ್ಟ್ ಆರಂಭಿಸಿದರು. ಈ ಟ್ರಸ್ಟ್‌ನ ಮೂಲಕ ಗ್ರೀನ್ ವ್ಯಾಲಿ ನ್ಯಾಷನಲ್ ಸ್ಕೂಲ್ (ಜಿವಿಎನ್‌ಎಸ್) ಅನ್ನು ಪ್ರಾರಂಭಿಸಿದರು. ಇಂದು ಗ್ರೀನ್‌ವ್ಯಾಲಿ ನ್ಯಾಶನಲ್ ಸ್ಕೂಲ್ ಹಾಗು ಪಿಯು ಕಾಲೇಜು ಕರ್ನಾಟಕದ ಪ್ರತಿಷ್ಠಿತ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.

ವಿವಿಧ ಹುದ್ದೆಗಳು: 

  • ಅಧ್ಯಕ್ಷರು ಮತ್ತು ಆಡಳಿತ ಟ್ರಸ್ಟಿ-ಶಿರೂರು ವೆಲ್‌ಫೇರ್ ಟ್ರಸ್ಟ್, ಶಿರೂರು.

  • ಅಧ್ಯಕ್ಷರು-ಸೈಯದ್ ಮೀರಾನ್ ಚಾರಿಟೇಬಲ್ ಟ್ರಸ್ಟ್, ಶಿರೂರು.

  • ಆಡಳಿತ ಟ್ರಸ್ಟಿ-ಗ್ರೀನ್ ವ್ಯಾಲಿ ನ್ಯಾಷನಲ್ ಸ್ಕೂಲ್ ಆ್ಯಂಡ್ ಪಿಯು ಕಾಲೇಜು, ಶಿರೂರು.

  • ನಿರ್ದೇಶಕರು- ಮಾಧ್ಯಮ ಕಮ್ಯುನಿಕೇಶನ್ಸ್ ಲಿಮಿಟೆಡ್, ಮಂಗಳೂರು.

  • ಮುಖ್ಯ ಪೋಷಕರು- ಇನ್ ಸ್ಟಿಟ್ಯೂಟ್ ಆಫ್ ಮೀಡಿಯಾ ಸ್ಟಡೀಸ್, ಮಂಗಳೂರು.

  • ಪೋಷಕರು- ಶಿರೂರು ಅಸೋಸಿಯೇಶನ್, ದುಬೈ.

  • ಪೋಷಕರು- ತೌಹೀದ್ ಸ್ಕೂಲ್, ಶಿರೂರು ಮತ್ತು ದೀನಾ ಸ್ಪೆಷಲ್ ಸ್ಕೂಲ್,ಶಿರೂರು.

  • ಆಡಳಿತ ನಿರ್ದೇಶಕರು- ಅಲ್ ಆಜ್- ಪರ್ಫ್ಯೂಮ್ ಆ್ಯಂಡ್ ಫ್ರಾಗ್ರೆನ್ಸ್ ಇಂಡಸ್ಟ್ರಿ, ದುಬೈ.

2004ರಲ್ಲಿ ಅತ್ಯುತ್ತಮ ಎನ್‌ಆರ್‌ಐ ಉದ್ಯಮಿ ಪ್ರಶಸ್ತಿ ಗಳಿಸಿದ್ದ ಸೈಯದ್ ಅಬ್ದುಲ್ ಖಾದರ್ ಬಾಶು 2016ನೆ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು. ಇದಲ್ಲದೆ ಸಮಾಜ ಸೇವಾ ಚಟುವಟಿಕೆಗಳಿಗಾಗಿ ಹಲವಾರು ಬಿರುದು, ಸನ್ಮಾನಗಳಿಗೂ ಇವರು ಪಾತ್ರರಾಗಿದ್ದಾರೆ.

ತಮ್ಮ ಹುಟ್ಟೂರಾದ ಶಿರೂರಿನಲ್ಲಿ 2000ದಲ್ಲಿ ಪ್ರತಿಷ್ಠಿತ ವಸತಿ ಶಿಕ್ಷಣ ಸಂಸ್ಥೆಯಾದ ಗ್ರೀನ್ ವ್ಯಾಲಿ ನ್ಯಾಷನಲ್ ಸ್ಕೂಲ್ ಆ್ಯಂಡ್ ಪಿಯು ಕಾಲೇಜನ್ನು (ಜಿವಿಎನ್‌ಎಸ್) ಸೈಯದ್ ಅಬ್ದುಲ್ ಖಾದರ್ ಬಾಶು ಸ್ಥಾಪಿಸಿ ಬೆಳೆಸಿದರು. ಇಂದು ಗ್ರೀನ್ ವ್ಯಾಲಿ ನ್ಯಾಷನಲ್ ಸ್ಕೂಲ್ ಆ್ಯಂಡ್ ಪಿಯು ಕಾಲೇಜು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಅನೇಕ ಸಾಧನೆಗಳನ್ನು ಮಾಡಿದೆ. ಇಷ್ಟೇ ಅಲ್ಲದೆ ಶಿರೂರಿನಂತಹ ಸಣ್ಣ ಊರಿನಲ್ಲೂ ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳುಳ್ಳ ಶಿಕ್ಷಣ ಸಂಸ್ಥೆಯೊಂದನ್ನು ಸ್ಥಾಪಿಸಿರುವ ಕೀರ್ತಿ ಬಾಶು ಅವರದ್ದು.

ವಿಶೇಷ ಮಕ್ಕಳಿಗಾಗಿ ದೀನಾ ಸ್ಕೂಲ್: ದೈಹಿಕ ಮತ್ತು ಮಾನಸಿಕ ಭಿನ್ನ ಸಾಮರ್ಥ್ಯದ ಮಕ್ಕಳಿಗಾಗಿ ಬಾಶು ಅವರು 2005ರಲ್ಲಿ ಶಿರೂರಿನಲ್ಲಿ 'ದೀನಾ ವಿಶೇಷ ಶಾಲೆ'ಯನ್ನು ಆರಂಭಿಸಿದರು. ಇದು ಉಚಿತ ಶಾಲೆ ಹಾಗೂ ಪುನರ್ವಸತಿ ಕೇಂದ್ರವಾಗಿಯೂ ಕಾರ್ಯ ನಿರ್ವಹಿಸುತ್ತಿದೆ. 

ಇಷ್ಟೇ ಅಲ್ಲದೆ ಆರೋಗ್ಯಯುತ ಮತ್ತು ಅತ್ಯುತ್ತಮ ಜೀವನಮಟ್ಟಕ್ಕಾಗಿ ದೀನಾ ಶಾಲೆಯ ಎಲ್ಲಾ ಮಕ್ಕಳಿಗೆ ಅವರ ಮನೆಗಳಲ್ಲೂ ಅಗತ್ಯ ಸೌಲಭ್ಯಗಳು ದೊರಕುವಂತೆ ಮಾಡಲಾಗಿದೆ. ಸ್ವಂತ ಮನೆಗಳೇ ಇಲ್ಲದ ವಿಶೇಷ ಮಕ್ಕಳ ಕೆಲವು ಕುಟುಂಬಗಳಿಗೆ ಮನೆಗಳನ್ನು ಕೊಡುಗೆಯಾಗಿ ನೀಡಲಾಗಿದೆ. ಇನ್ನು ಕೆಲವರಿಗೆ ಶಿಥಿಲಾವಸ್ಥೆಯಲ್ಲಿದ್ದ ಮನೆಯ ನವೀಕರಣ ಹಾಗೂ ಬಾವಿ ನಿರ್ಮಾಣಕ್ಕೆ ಸಹಕರಿಸಲಾಗಿದೆ. ಉಚಿತ ವಿದ್ಯುತ್ ಮತ್ತು ನೀರಿನ ಸಂಪರ್ಕವನ್ನೂ ಒದಗಿಸಲಾಗಿದ್ದು, ಅರ್ಹ ವಿಶೇಷ ಮಕ್ಕಳ ಕುಟುಂಬಗಳಿಗೆ ರೆಫ್ರಿಜರೇಟರ್‌ಗಳನ್ನೂ ಒದಗಿಸಲಾಗಿದೆ. ಬಾಶುರವರು ತಮ್ಮ ತಂದೆಯ ಸ್ಮರಣಾರ್ಥ ಆರಂಭಿಸಿದ ಸೈಯದ್ ಮೀರಾನ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್‌ನಡಿ ಈ ಸೇವಾ ಕಾರ್ಯಗಳನ್ನು ನಿರ್ವಹಿಸಲಾಗಿದೆ.

ಉಚಿತ ಶಿಕ್ಷಣ: ಸೈಯದ್ ಮೀರಾನ್ ಮೆಮೋರಿಯಲ್ ಟ್ರಸ್ಟ್‌ನಡಿ ಶಿರೂರಿನಲ್ಲಿ ತೌಹೀದ್ ಪಬ್ಲಿಕ್ ಸ್ಕೂಲ್ ನಡೆಸಲಾಗುತ್ತಿದೆ. ಇಲ್ಲಿ ಶಿರೂರು ಮತ್ತು ಸುತ್ತಮುತ್ತಲಿನ ಗ್ರಾಮಗಳ ಅರ್ಹ ಮಕ್ಕಳಿಗೆ ಗುಣಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣವನ್ನು ಉಚಿತವಾಗಿ ಒದಗಿಸಲಾಗುತ್ತಿದೆ.

ಪ್ರಮುಖ ಸಾಧನೆಗಳು

ಶಿರೂರು ಅಸೋಸಿಯೇಶನ್, ದುಬೈ: ಯುಎಇಯಲ್ಲಿ ನೆಲೆಸಿರುವ ಶಿರೂರಿನ ಎಲ್ಲ ಧರ್ಮದವರನ್ನೊಳಗೊಂಡ 'ಶಿರೂರು ಅಸೋಸಿಯೇಶನ್' ಆರಂಭಿಸುವಲ್ಲಿ ಬಾಶು ಸಾಹೇಬ್ ಪ್ರಮುಖ ಪಾತ್ರವಹಿಸಿದ್ದು, ಈ ಸಂಘಟನೆಯು ಶಿರೂರಿನ ಸಮಗ್ರ ಕಲ್ಯಾಣ ಮತ್ತು ಅಭಿವೃದ್ಧಿಗಾಗಿ ಒಟ್ಟಾಗಿ ಕಾರ್ಯನಿರ್ವಹಿಸುತ್ತಿದೆ.

ಆ್ಯಂಬುಲೆನ್ಸ್ ಸೇವೆ: ಶಿರೂರಿನ ಜನರಿಗೆ ತುರ್ತು ವೈದ್ಯಕೀಯ ಅಗತ್ಯಗಳಿಗೆ ನೆರವಾಗಲು ದೀನಾ ಸ್ಕೂಲ್‌ನ ಮೂಲಕ ಶಿರೂರು ಅಸೋಸಿಯೇಶನ್‌ಗೆ ಆ್ಯಂಬುಲೆನ್ಸ್ ಸೇವೆಯನ್ನು ದೇಣಿಗೆಯಾಗಿ ನೀಡಲಾಗಿದೆ.

ಗ್ರಾಮಕ್ಕೆ ಬೆಳಕಿನ ವ್ಯವಸ್ಥೆ: ಶಿರೂರು ಗ್ರಾಮದ ಬೀದಿಗಳನ್ನು ಬೆಳಗುವ ಉದ್ದೇಶದಿಂದ ಶಿರೂರು ಗ್ರಾಮ ಪಂಚಾಯತ್‌ಗೆ ಬಾಶುರವರು ಸುಮಾರು 225 ಬೀದಿ ದೀಪಗಳನ್ನು ಕೊಡುಗೆಯಾಗಿ ನೀಡಿದ್ದಾರೆ.

ಪೊಲೀಸ್ ಠಾಣೆಗೆ ನೀರಿನ ಸೌಕರ್ಯ ಮತ್ತು ವಸತಿ ವ್ಯವಸ್ಥೆ: ಬೈಂದೂರು ಪೊಲೀಸ್ ಠಾಣೆಯ ಸಿಬ್ಬಂದಿಗೆ ಕ್ವಾಟ್ರರ್ಸ್ ನಿರ್ಮಾಣಕ್ಕೆ ಬಾಶುರವರು ದೇಣಿಗೆ ನೀಡಿದ್ದಾರೆ. ಪೊಲೀಸ್ ಠಾಣೆಗೆ ನೀರಿನ ಸೌಲಭ್ಯಕ್ಕಾಗಿ ಬೋರ್‌ವೆಲ್ ವ್ಯವಸ್ಥೆಯನ್ನೂ ಒದಗಿಸಿದ್ದರು.

ಅರ್ಹ ಕುಟುಂಬಗಳಿಗೆ ಉಚಿತ ಅಕ್ಕಿ ಮತ್ತು ನೀರಿನ ವ್ಯವಸ್ಥೆ: ಕಳೆದ ಹಲವಾರು ವರ್ಷಗಳಿಂದ ಬಾಶುರವರು ಬಡ ಕುಟುಂಬಗಳಿಗೆ ಉಚಿತ ಅಕ್ಕಿ, ಬೇಳೆ, ಅಡುಗೆ ಎಣ್ಣೆ ಮೊದಲಾದ ನೆರವನ್ನು ಒದಗಿಸುತ್ತಿದ್ದಾರೆ. ಇದಲ್ಲದೆ, ಜನವರಿಯಿಂದ ಆರಂಭಿಸಿ ಮಳೆಗಾಲದವರೆಗೆ ಇಡೀ ಗ್ರಾಮಕ್ಕೆ ತಮ್ಮ ವತಿಯಿಂದ ಬಾಶುರವರು ಕುಡಿಯುವ ನೀರಿನ ವ್ಯವಸ್ಥೆಯನ್ನು ಪ್ರತಿವರ್ಷ ಒದಗಿಸುತ್ತಿದ್ದಾರೆ. ಈ ಯೋಜನೆಯಡಿ ಶಿರೂರು ಮತ್ತು ಸುತ್ತಮುತ್ತಲಿನ ವಿವಿಧ ಸಮುದಾಯಕ್ಕೆ ಸೇರಿದ ಬೃಹತ್ ಸಂಖ್ಯೆಯ ಜನರು ಮತ್ತು ಕುಟುಂಬಗಳು ಪ್ರಯೋಜನವನ್ನು ಪಡೆಯುತ್ತಿದ್ದಾರೆ.

ವಿದ್ಯಾರ್ಥಿ ವೇತನ: ಸುಮಾರು 20 ವರ್ಷಗಳಿಂದ ಬಾಶುರವರು ಶಿರೂರು, ಬೈಂದೂರು ಮತ್ತು ಗಂಗೊಳ್ಳಿಯ ನೂರಾರು ಅರ್ಹ ವಿದ್ಯಾರ್ಥಿಗಳಿಗೆ ಸಂಪೂರ್ಣ ವಿದ್ಯಾರ್ಥಿ ವೇತನವನ್ನು ನೀಡುತ್ತಿದ್ದಾರೆ. ಬಾಶುರವರಿಂದ ವಿದ್ಯಾರ್ಥಿವೇತನವನ್ನು ಪಡೆದ ಹಲವಾರು ವಿದ್ಯಾರ್ಥಿಗಳು ಇಂದು ಇಂಜಿನಿಯರ್, ಡಾಕ್ಟರ್ ಮೊದಲಾದ ವೃತ್ತಿಗಳಲ್ಲಿ ಅತ್ಯುನ್ನತ್ತ ಸ್ಥಾನಗಳನ್ನು ಅಲಂಕರಿಸಿದ್ದಾರೆ.

ಶಿರೂರು- ಆದರ್ಶ ಗ್ರಾಮ ಯೋಜನೆ: ತಮ್ಮ ಒತ್ತಡದ ಕಾರ್ಯಗಳ ನಡುವೆಯೂ ಬಾಶುರವರು, ತಮ್ಮ ರಾಜಕೀಯ ಗುರುವಾಗಿರುವ ಆಸ್ಕರ್ ಫೆರ್ನಾಂಡಿಸ್‌ರವರು ಪ್ರಧಾನ ಮಂತ್ರಿಯವರ ಸಂಸದರ ಆದರ್ಶ ಗ್ರಾಮ ಯೋಜನೆಯಡಿ ತಮ್ಮ ಹುಟ್ಟೂರಾದ ಶಿರೂರನ್ನು ದತ್ತುಪಡೆಯಲು ನಿರಂತರವಾಗಿ ಮನವೊಲಿಸುತ್ತಾ ಬಂದಿದ್ದರು. ಈ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿಯ ಯೋಜನೆಯಡಿ ಶಿರೂರನ್ನು ಆದರ್ಶ ಗ್ರಾಮವಾಗಿಸಲು ಆಸ್ಕರ್ ಫೆರ್ನಾಂಡಿಸ್ ಸ್ವೀಕರಿಸಿದ್ದಾರೆ. 2015ರ ಎಪ್ರಿಲ್ 18ರಂದು ಶಿರೂರಿನಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿತ್ತು.

ಮಂಗಳೂರಿನ ಮಾಧ್ಯಮ ಕಮ್ಯುನಿಕೇಶನ್ಸ್ ಲಿಮಿಟೆಡ್ ನ ನಿರ್ದೇಶಕರು: ಬಾಶುರವರು ‘ವಾರ್ತಾಭಾರತಿ’ ಪತ್ರಿಕೆಯನ್ನು ಪ್ರಕಟಿಸುತ್ತಿರುವ ಮಾಧ್ಯಮ ಕಮ್ಯುನಿಕೇಶನ್ಸ್ ಲಿಮಿಟೆಡ್‌ನ ನಿರ್ದೇಶಕರಾಗಿದ್ದರು.

ಕೃಪೆ: ವಾರ್ತಾಭಾರತಿ

Read These Next

ಯಾರ ಸಮುದ್ರ? ಯಾರ ಕರಾವಳಿ?

ಕಳೆದ ಐದು ವರ್ಷಗಳಿಂದ ಮುಂಬೈನ ಸ್ಥಳೀಯ ಮೀನುಗಾರ ಸಮುದಾಯವು ವಿವಾದಾಸ್ಪದವಾದ ಕರಾವಳಿ ರಸ್ತೆ ಯೋಜನೆಯನ್ನು ತಾವು ಹಲವು ...