ಕುಂದಾಪುರ:ಹಾಡು ಹಗಲೇ ಮನೆಗೆ ನುಗ್ಗಿ ಲಕ್ಷಾಂತರ ರೂ. ನಗ -ನಗದು ಕಳವು

Source: manju | By Arshad Koppa | Published on 22nd September 2016, 8:05 AM | Coastal News | Incidents |

ಕುಂದಾಪುರ, ಸೆ ೨೧: ಮನೆಯಲ್ಲಿ ಯಾರೂ ಇಲ್ಲದೆ ಸಮಯ ನೋಡಿ ಹಾಡ ಹಗಲೇ ಮನೆಗೆ ಹಿಂಬದಿಯಿಂದ ನುಗ್ಗಿದ ಕಳ್ಳರು ನಗದು ಹಾಗೂ ಚಿನ್ನಾಭರಣ ದೋಚಿದ ಘಟನೆ ಕುಂದಾಪುರದ ಬಸ್ರೂರು ಮೂರು ಕೈ-ಕೋಣಿ ರಾಜ್ಯ ಹೆದ್ದಾರಿಯ ಪಕ್ಕದಲ್ಲಿರುವ ವಡೇರಹೋಬಳಿಯ ನೇರಂಬಳ್ಳಿಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ. ನೇರಂಬಳ್ಳಿ ನಿವಾಸಿ ಜಿ.ಪಿ.ಚಂದ್ರ ಹೊಳ್ಳ ಎಂಬುವರ ಮನೆಯೇ ದರೋಡೆಕೋರರ ದಾಳಿಗೆ ತುತ್ತಾಗಿರುವ ಮನೆಯಾಗಿದ್ದು, ಹಿಂಬದಿಯ ಬಾಗಿಲು ಒಡೆದು ಕಳ್ಳರು ನಗ ನಗದು ದೋಚಿದ್ದಾರೆ.

ವಡೇರಹೋಬಳಿ ಸಮೀಪದ ನೇರಂಬಳ್ಳಿಯಲ್ಲಿ ಮನೆ ಮಾಡಿಕೊಂಡಿರುವ ಜಿ.ಪಿ.ಚಂದ್ರ ಹೊಳ್ಳ ಅವರು ತನ್ನ ಪತ್ನಿಯೊಂದಿಗೆ ವಾಸವಿದ್ದು, ಕುಂದಾಪುರದ ಶಾಸ್ತ್ರೀ ವೃತ್ತದಲ್ಲಿರುವ ವೈಶಾಲಿ ಕಾಂಪ್ಲೆಕ್ಸ್‍ನಲ್ಲಿ ಜ್ಯೂಸ್ ಅಂಗಡಿ ನಡೆಸುತ್ತಿದ್ದರು. ಪತ್ನಿಯೂ ಅಂಗಡಿಯಲ್ಲಿ ತನ್ನ ಪತಿಗೆ ಸಹಕರಿಸುತ್ತಿದ್ದರು. ಪ್ರತೀ ಬಾರಿಯೂ ಚಂದ್ರ ಹೊಳ್ಳರು ಅಂಗಡಿಯಿಂದ ಊಟಕ್ಕೆ ಬರಬೇಕಾದರೆ ಪತ್ನಿ ಅಂಗಡಿಗೆ ಬಸ್ಸಿನಲ್ಲಿ ಹೋಗಿ ಅವರನ್ನು ಕಳುಹಿಸಿಕೊಡುತ್ತಿದ್ದರು. ಈ ವೇಳೆಯನ್ನು ಗಮನಿಸಿದ್ದ ಕಳ್ಳರು ಮಧ್ಯಾಹ್ನ ಚಂದ್ರ ಹೊಳ್ಳರ ಪತ್ನಿ ಅಂಗಡಿಗೆ ತೆರಳಿದ ಸಂದರ್ಭವನ್ನು ನೋಡಿ ಮನೆಯ ಹಿಂಬದಿಯ ಬಾಗಿಲು ಒಡೆದು ಒಳ ನುಗ್ಗಿದ್ದಾರೆ. ಪತ್ನಿ ಅಂಗಡಿಗೆ ಬಂದ ನಂತರ ಅಂಗಡಿಯಲ್ಲಿದ್ದ ಗಿರಾಕಿಯೊಬ್ಬರಿಗೆ ಜ್ಯೂಸ್ ನೀಡಿ ಮನೆಗೆ ಬಂದ ಚಂದ್ರ ಹೊಳ್ಳರು ಮನೆಯ ಬಾಗಿಲಿಗೆ ಹಾಕಿದ್ದ ಬೀಗ ತೆರೆದಿದ್ದಾರೆ. ಆಗ ಶಬ್ಧವಾಗಿದ್ದನ್ನು ಗಮನಿಸಿದ ಕಳ್ಳರು ಕೈಗೆ ಸಿಕ್ಕಿದ್ದನ್ನು ದೋಚಿಕೊಂಡು ಹಿಂಬಾಗಿಲಿನಿಂದ ಓಡಿ ಹೋಗಿದ್ದಾರೆ. 

ಸಾಮಾನ್ಯವಾಗಿ ಮಧ್ಯಾಹ್ನ ಚಂದ್ರ ಹೊಲ್ಳರ ಪತ್ನಿ ಮನೆಯಿಂದ ಹೊರಟು ನಂತರ ಚಂದ್ರ ಹೊಳ್ಳ ಮನೆಗೆ ಬರುವಾಗ ಮುಕ್ಕಾಲು ಗಂಟೆ ಸಮಯ ತಗುಲುತ್ತಿದ್ದು, ಇದೇ ಸಮಯವನ್ನು ಕಳ್ಳರು ದರೋಡೆಗೆ ಬಳಸಿಕೊಂಡಿದ್ದಾರೆನ್ನಲಾಗಿದೆ. ಮನೆಯ ಹಿಂಬಾಗಿಲು ಮತ್ತು ಎದುರಿನ ಬಾಗಿಲನ್ನು ಮಾತ್ರ ಭದ್ರಪಡಿಸಿದ್ದರಿಂದ ಕಳ್ಳರಿಗೆ ಮಲಗುವ ಕೋಣೆಗೆ ಪ್ರವೇಶಿಸಲು ಅನುಕೂಲವಾಗಿತ್ತು. ಅಲ್ಲದೇ ಮನೆಯೊಳಗಿದ್ದ ಕಪಾಟುಗಳಿಗೆ ಬೀಗ ಹಾಕದೇ ಇರುವುದು ಕಳ್ಳರಿಗೆ ನಗ ನಗದು ದೋಚಲು ಸಹಕಾರಿಯಾಗಿತ್ತು ಎನ್ನಲಾಗಿದೆ. 

ಮನೆಯಿಂದ ಓಡಿ ಹೋಗುವ ಶಬ್ಧ ಮನೆ ಮಾಲೀಕರಿಗೆ ಹಾಗೂ ಸ್ಥಳೀಯರಿಗೆ ಗೊತ್ತಾಗಿದ್ದು, ದರೋಡೆ vಂಡದಲ್ಲಿ ಇಬ್ಬರು ಇದ್ದರೆನ್ನಲಾಗಿದೆ. ಸ್ಥಳೀಯರು ಓಡಿ ಹೋಗುತ್ತಿರುವ ಕಳ್ಳರನ್ನು ಹಿಡಿಯಲು ಪ್ರಯತ್ನಿಸಿದ್ದರಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಮನೆಯಲ್ಲಿ ಮೂವತ್ತೈದು ಸಾವಿರ ರೂಪಾಯಿ ನಗದು, ನೂರಾನಾಲ್ಕು ಗ್ರಾಮ ಚಿನ್ನಾಭರಣಗಳು ಸೇರಿದಂತೆ ಒಂದೂಕಾಲು ಕೇಜಿ ಬೆಳ್ಳಿಯ ಆಭರಣಗಳಿದ್ದವು. ಆದರೆ ಕಳ್ಳರು ಬೆಳ್ಳಿಯ ಆಭರಣಗಳನ್ನು ದೋಚುವಲ್ಲಿ ವಿಫಲರಾಗಿದ್ದಾರೆ. 

ಕುಂದಾಪುರ ಪೊಲಿಸರು ಪ್ರಕರಣ ದಾಖಲಿಸಿಕೊಂಡಿದ್ದು, ಘಟನಾ ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಆಗಮಿಸಿ ತನಿಖೆ ನಡೆಸಿದ್ದಾರೆ. ಕುಂದಾಪುರ ಡಿವೈಎಸ್ಪಿ ಪ್ರವೀಣ್ ನಾಯಕ್, ಪ್ರಭಾರ ವೃತ್ತ ನಿರೀಕ್ಷಕ ರಾಘವ ಪಡೀಲ್ ಮೊದಲಾದವರು ಸ್ಥಳ ಮಹಜರು ನಡೆಸಿದ್ದಾರೆ. ಕಳ್ಳರು ಧರಿಸಿದ್ದರೆನ್ನಲಾದ ಚಪ್ಪಲಿ ಹಾಗೂ ಬಾಗಿಲು ಒಡೆಯಲು ಬಳಸಲಾಗಿದ್ದ ಕಬ್ಬಿಣದ ರಾಡ್ ಸ್ಥಳದಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...