ಆನೆಗುಡ್ಡೆಯಲ್ಲಿ ಮಹಿಳೆಯ ಚಿನ್ನಾಭರಣ ಅಪಹರಣ ಪ್ರಕರಣ.ಖತರ್ನಾಕ್ ಸರಗಳ್ಳರ ಸೆರೆ

Source: S O News | By MV Bhatkal | Published on 22nd April 2017, 10:07 PM | Coastal News | Don't Miss |

ಕುಂದಾಪುರ: ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಭಕ್ತಾಧಿಯೊಬ್ಬರ ಬ್ಯಾಗ್‌ನಲ್ಲಿದ್ದ ಚಿನ್ನದ ಸರ ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಿಂಚಿನ ಕಾರ್ಯಾಚರಣೆ ನಡೆಸಿದ ಕುಂದಾಪುರ ಪೊಲೀಸರು ಖತರ್ನಾಕ್ ಸರಗಳ್ಳರ ತಂಡವನ್ನು ಚಿಕ್ಕಮಗಳೂರು ಸಮೀಪದ ಮೂಡಿಗೆರೆ ಎಂಬಲ್ಲಿ ಸೆರೆ ಹಿಡಿದಿದ್ದಾರೆ.
ಸವಣೂರು ನಿವಾಸಿಗಳಾದ ರಾಘವೇಂದ್ರ(24) ಹಾಗೂ ಗೌಸ್ ಮೋಯ್ದೀನ್(35), ಗದಗ ನಿವಾಸಿಗಳಾದ ರವಿ(32), ರಾಜು(35), ನೇತ್ರಾ(27), ಲಕ್ಕವ್ವ(50), ಹರಪ್ಪನಹಳ್ಳಿ ನಿವಾಸಿಗಳಾದ ಶಾರದಾ(30),  ದಾಕ್ಷಾಯಿಣಿ(24), ಗಂಗವ್ವ(40), ಶ್ರತಿ(26) ಒಟ್ಟು ಹತ್ತು ಮಂದಿ ಆರೋಪಿಗಳನ್ನು ಬಂಧಿಸಿಸಲಾಗಿದೆ. ಬಂಧಿತ ಆರೋಪಿಗಳಿಂದ ಒಟ್ಟು 303 ಗ್ರಾಂ ಚಿನ್ನಾಭರಣ, 7,000 ನಗದು ಹಾಗೂ ತೂಫಾನ್ ವಾಹನವನ್ನು ವಶಕ್ಕೆ ಪಡೆಯಲಾಗಿದೆ.
ಗುರುವಾರ ಮಧ್ಯಾಹ್ನ ಬೆಂಗಳೂರು ಮೂಲದ ಜ್ಯೋತಿ ಎಂಬವರು ಆನೆಗುಡ್ಡೆ ಶ್ರಿ ವಿನಾಯಕನ ದರ್ಶನಕ್ಕೆ ಆಗಮಿಸಿದ್ದರು. ದೇವಸ್ಥಾನದಲ್ಲಿ ಪೂಜಾ ಕೈಂಕರ್ಯ ಮುಗಿಸಿ ಮಂಗಳಾರತಿ ಪಡೆಯವ ವೇಳೆ ವ್ಯಾನಿಟಿ ಬ್ಯಾಗಿನಲ್ಲಿದ್ದ ಸುಮಾರಿ 82ಗ್ರಾಂ.ನ ಚಿನ್ನದ ಸರವನ್ನು ಎಗರಿಸಿದ್ದಾರೆ. ಬಳಿಕ ಬ್ಯಾಗ್ ಪರಿಶೀಲಿಸಿದಾಗ ಚಿನ್ನಾಭರಣ ಕಳವಾಗಿರುವುದು ಖಚಿತವಾದ ಮೇರೆಗೆ ಕೂಡಲೇ ಕುಂದಾಪುರ ಠಾಣೆಗೆ ದೂರು ನೀಡಿದ್ದರು.
ಕ್ಷಣಮಾತ್ರದಲ್ಲೇ ಕಾಲ್ಕಿತ್ತಿದ್ದರಿಂದ ಸೆರೆಯಾದರು!
ಚಿನ್ನದ ಸರ ಕಳವಾಗಿರುವ ಬಗ್ಗೆ ದೂರು ಬಂದ ಮೇಲೆ ಕಾರ್ಯಪ್ರವೃತ್ತರಾದ ಕುಂದಾಪುರ ಪೊಲೀಸರು ಆನೆಗುಡ್ಡೆ ದೇವಳದಲ್ಲಿರುವ ಸಿಸಿ ಟಿವಿ ಫೂಟೇಜ್ ಅನ್ನು ವೀಕ್ಷಿಸಿದ್ದರು. ಆ ಸಂದರ್ಭದಲ್ಲಿ ಒಂದು ಗುಂಪು ಅನುಮಾನಾಸ್ಪದವಾಗಿ ದೇವಸ್ಥಾನದ ಒಳಗೆ ತಿರುಗಾಡುತ್ತಿದ್ದರಿಂದ ಅವರ ಮೇಲೆ ಅನುಮಾನ ವ್ಯಕ್ತಪಡಿಸಿದ ಪೊಲೀಸರು ಅದೇ ತಂಡ ಕಳ್ಳತನ ನಡೆಸಿರುವುದುರ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು. ಅಲ್ಲದೇ ಚಿನ್ನ ಕಳ್ಳತನವಾದ ನಂತರ ಅದೇ ತಂಡ ಅವಸರವಸರವಾಗಿ ಅಲ್ಲಿಂದ ಕಾಲ್ಕಿತ್ತ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು.

ವಾಹನದ ನಂಬರ್ ಪೊಲೀಸರಿಗೆ ಕೊಟ್ಟ ಯಾತ್ರಿಕ
ಕಳ್ಳರ ತಂಡ ಬಹಳ ಗಿಡಿಬಿಡಿಯಲ್ಲಿ ತಾವು ಬಂದಿದ್ದ ತೂಫಾನ್ ವಾಹವನ್ನು ಏರುತ್ತಿರುವಾಗ ಅಲ್ಲೇ ಸಮೀಪದಲ್ಲಿದ್ದ ಯಾತ್ರಾರ್ಥಿಯೊಬ್ಬರಿಗೆ ಈ ತಂಡದ ಬಗ್ಗೆ ಅನುಮಾನ ಬಂದಿದ್ದರಿಂದ ಕಳ್ಳರು ಹೊರಡುವಾಗ ವಾಹನದ ನಂಬರ್ ಅನ್ನು ನೋಟ್ ಮಾಡಿಕೊಂಡಿದ್ದರು. ಬಳಿಕ ಪೊಲೀಸರು ದೇವಸ್ಥಾನಕ್ಕೆ ಆಗಮಿಸಿದಾಗ ಅವರು ವಾಹನದ ನಂಬರ್ ಅನ್ನು ಪೊಲೀಸರಿಗೆ ಕೊಟ್ಟಿದ್ದರು. ಇದರಿಂದಾಗಿ ತನಿಖೆ ನಡೆಸಲು ಪೊಲೀಸರಿಗೆ ಸಹಕಾರಿಯಾಗಿದೆ. ಅಲ್ಲದೇ ತೂಫಾನ್ ವಾಹನ ಗುಂಡ್ಮಿ ಟೋಲ್‌ಗೇಟ್ ಪ್ರವೇಶಿಸಿದ ಮಾಹಿತಿಯನ್ನು ಪೊಲಿಸರು ಕಲೆ ಹಾಕಿದ್ದರು.

ವಾಹನ ಮಾಲಕನನ್ನು ಹುಡುಕಲು ಹಾವೇರಿಗೆ ಹೊರಟ ಪೊಲೀಸರು
ಯಾತ್ರಿಕರೊಬ್ಬರು ಕೊಟ್ಟ ದಾವಣಗೆರೆ ನೋಂದಣಿ ಹೊಂದಿದ್ದ ತೂಫಾನ್ ವಾಹನದ ಮಾಲಕನನ್ನು ಹುಡುಕಲು ಶುಕ್ರವಾರ ಬೆಳಿಗ್ಗೆ ಕುಂದಾಪುರ ಪೊಲೀಸರ ಒಂದು ತಂಡ ಹಾವೇರಿಗೆ ಪ್ರಯಾಣ ಬೆಳೆಸಿದ್ದರು. ಅಲ್ಲಿ ವಾಹನ ಮಾಲಕನನ್ನು ಭೇಟಿ ಮಾಡಿದಾಗ ಆತನಿಗೂ ಕಳ್ಳರ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಬೇರೊಬ್ಬ ಚಾಲಕ ಬಂದು ವಾಹನವನ್ನು ಹದಿನೈದು ದಿನಗಳ ಮಟ್ಟಿಗೆ ಬಾಡಿಗೆಗೆ ಕೊಂಡೊಯ್ದಿದ್ದರು ಎಂದು ಪೊಲೀಸರಿಗೆ ತಿಳಿಸಿದ್ದರು. ವಾಹನ ಮಾಲಕನ ನೆರವಿನಿಂದ ಕಳ್ಳರು ಎಲ್ಲಿದ್ದಾರೆಂದು ಖಚಿತಪಡಿಸಿಕೊಂಡ ಪೊಲೀಸರು ಇನ್ನೊಂದು ತಂಡದೊಂದಿಗೆ ಕಳ್ಳರ ವಾಹನವನ್ನು ಬೆನ್ನಟ್ಟಿ ಚಿಕ್ಕಮಗಳೂರು ಸಮೀಪದ ಮೂಡಿಗೆರೆಯಲ್ಲಿ ಸರೆಹಿಡಿದಿದ್ದಾರೆ.

ಹೊರನಾಡು ದೇವಸ್ಥಾನದಲ್ಲೂ ಸರ ಎಗರಿಸಿದ್ದರು
ವಿವಿಧ ದೇವಸ್ಥಾನಗಳಲ್ಲಿ ಸರಣಿ ಕಳ್ಳತನ ನಡೆಸಿರುವ ಕಳ್ಳರು ಹೊರನಾಡು ದೇವಸ್ಥಾನದಲ್ಲೂ ಮಹಿಳೆ ಸರ ಕದ್ದು ಪರಾರಿಯಾಗಿದ್ದರು. ಈ ಕುರಿತು ಕಳಸ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಾಗಿದೆ. ಒಟ್ಟು ಹತ್ತು ದಿನಗಳ ಅಂತರದಲ್ಲಿ 303 ಗ್ರಾಂ ಚಿನ್ನವನ್ನು ಎಗರಿಸಿರುವ ಕಳ್ಳರ ತಂಡವನ್ನು ಮಿಂಚಿನ ಕಾರ್ಯಾಚಣೆಯಲ್ಲಿ ಸೆರೆ ಹಿಡಿದಿರುವ ಕುಂದಾಪುರ ಪೊಲೀಸರ ಸಾಹಸಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ದೇವಸ್ಥಾನಗಳಲ್ಲಿ ಸರ ಎಗರಿಸುವ ಖತರ್ನಾಕ್ ತಂಡ
ಕುಟುಂಬ ಸಮೇತವಾಗಿ ದೇವಸ್ಥಾನಗಳಿಗೆ ಹೋಗುವ ಸೋಗಿನಲ್ಲಿ ಈ ತಂಡ ಭಾರೀ ಕಳ್ಳತನ ನಡೆಸಿರುವ ಮಾಹಿತಿ ಪೊಲೀಸ್ ತನಿಖೆಯ ವೇಳೆ ಬಯಲಿಗೆ ಬಂದಿದೆ. ಶಾಲಾ-ಕಾಲೇಜು ರಜಾ ಸಮಯದಲ್ಲಿ ಧಾರ್ಮಿಕ ಕ್ಷೇತ್ರಗಳಲ್ಲಿ ಭಕ್ತರ ಸಂಖ್ಯೆ ಗಣನೀಯವಾಗಿರುವುದನ್ನು ಖಚಿತಪಡಿಸಿಕೊಂಡು ಕಟುಂಬ ಸಮೇತರಾಗಿ ದೇವಸ್ಥಾನಗಳಿಗೆ ತೆರಳಿ ಅಲ್ಲಿ ಕಳ್ಳತನ ಕೃತ್ಯ ನಡೆಸಿ ಅಲ್ಲಿಂದ ಬೇರೆ ದೇವಸ್ಥಾನಗಳಿಗೆ ತೆರಳುತ್ತಾರೆ. ಇದೇ ತಿಂಗಳ 13 ರಂದು ಗದಗದಿಂದ ಹೊರಟ ಕಳ್ಳರ ತಂಡ ಗೋಕರ್ಣ, ಮುರ್ಡೇಶ್ವರ, ಕೊಲ್ಲೂರು, ಆನೆಗುಡ್ಡೆ, ಬೇಳೂರು, ಹಳೆಬೀಡು, ಮೈಸೂರು, ಶ್ರೀರಂಗಪಟ್ಟಣ, ಹೊರನಾಡು ಹೀಗೆಯೇ ಪ್ರಮುಖ ದೇವಾಲಯಗಳಿಗೆ ತೆರಳಿದ್ದರು ಎಂದು ತನಿಖೆಯ ವೇಳೆ ಬಾಯಿಬಿಟ್ಟಿದ್ದಾರೆ.


ಉಡುಪಿ ಎಸ್ಪಿ ಕೆ.ಟಿ ಬಾಲಕೃಷ್ಣ  ಹಾಗೂ ಎಎಸ್ಪಿ ವಿಷ್ಣುವರ್ಧನರವರ ನಿರ್ದೇಶನದಂತೆ, ಡಿವೈಎಸ್ಪಿ ಪ್ರವೀಣ್ ನಾಯ್ಕ್ ರವರ ಮಾರ್ಗದರ್ಶನದಲ್ಲಿ, ಪೊಲೀಸ್ ವೃತ್ತನಿರೀಕ್ಷಕ ಮಂಜಪ್ಪ ಡಿ.ಆರ್, ಕುಂದಾಪುರ ಪಿಎಸ್ಐ ನಾಸೀರ್ ಹುಸೇನ್, ಕ್ರೈಂ ಪಿಎಸ್ಐ ದೇವರಾಜ್, ಸಿಬ್ಬಂದಿಗಳಾದ ರಾಘವೇಂದ್ರ, ಜ್ಯೋತಿ, ನಾಗೇಂದ್ರ, ಸಚಿನ್ ಶೆಟ್ಟಿ, ಸಂತೋಷ, ಸಂತೋಷ, ಶ್ರೀಧರ ಮುಂತಾದವರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.

 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...