ಅನ್ನಭಾಗ್ಯ ಯೋಜನೆ ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಲಿ -    ಸಚಿವ ಯು.ಟಿ.ಖಾದರ್

Source: sonews | By Staff Correspondent | Published on 7th March 2018, 11:50 PM | State News | Don't Miss |

ಕೋಲಾರ:  ಅನ್ನಭಾಗ್ಯ ಯೋಜನೆ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿದ್ದು, ಈ ಯೋಜನೆಯು ಎಲ್ಲ ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪುವಂತಾಗಲಿ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರಾದ ಯು.ಟಿ. ಖಾದರ್ ಅವರು ತಿಳಿಸಿದರು.

ಇಂದು ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಕಳೆದ ಒಂದು ವರ್ಷದಿಂದ ಆಧಾರ್ ಜೋಡಣೆ, ಕೂಪನ್ ವ್ಯವಸ್ಥೆ ಹಾಗೂ ಬಯೋಮೆಟ್ರಿಕ್ ಮುಂತಾದ ಆಧುನಿಕ ವ್ಯವಸ್ಥೆಗಳನ್ನು ಜಾರಿಗೊಳಿಸಿ ಸಂಪೂರ್ಣವಾಗಿ ಸೋರಿಕೆಗಳನ್ನು ತಡೆಗಟ್ಟಲಾಗಿದೆ.  ಕರ್ನಾಟಕದಲ್ಲಿ ಪ್ರತಿಯೊಬ್ಬರಿಗೂ 7 ಕೆ.ಜಿ. ಅಕ್ಕಿ ನೀಡಲಾಗುತ್ತಿದೆ.  ಈ ಅನ್ನಭಾಗ್ಯ ಯೋಜನೆ ಮುಖ್ಯಮಂತ್ರಿಯವರ ಕನಸಿನ ಯೋಜನೆಯಾಗಿದ್ದು, ಅತ್ಯಂತ ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ ಎಂದು ಹೇಳಿದರು.
ಜನಪರ ಯೋಜನೆಗಳಲ್ಲಿ ಒಂದಾದ ಹರೀಶ್ ಸಾಂತ್ವಾನ ಯೋಜನೆ ಜಾರಿಗೊಳಿಸಲಾಗಿದ್ದು, ರಸ್ತೆ ಅಪಘಾತವಾದಲ್ಲಿ ಯಾರೂ ಚಿಕಿತ್ಸೆ ಇಲ್ಲದೆ ಸಾಯಬಾರದು ಎಂಬ ಉದ್ದೇಶದಿಂದ 25 ಸಾವಿರ ರೂ.ಗಳನ್ನು ಆಸ್ಪತ್ರೆಗೆ ತಕ್ಷಣ ಮಂಜೂರು ಮಾಡಲಾಗುತ್ತದೆ ಎಂದರು.

ಆಧಾರ್‍ಕಾರ್ಡ್ ಇರುವ ಎಲ್ಲರೂ ಪಡಿತರ ಚೀಟಿ ಪಡೆಯಬಹುದು. ಪಡಿತರ ಚೀಟಿಯಲ್ಲಿ ಆದ್ಯತಾ ಕುಟುಂಬ ಮತ್ತು ಆದ್ಯತೇತರ ಕುಟುಂಬ ಎಂದು ಗುರುತಿಸಲಾಗಿದೆ. ಆದ್ಯತಾ ಕುಟುಂಬ ಅಂದರೆ ವಾರ್ಷಿಕ ವರಮಾನ ರೂ.1,20,000/- ಗಳಿಗಿಂತ ಕಡಿಮೆ ಕುಟುಂಬಗಳು ಬಿ.ಪಿ.ಎಲ್ ಪಡಿತರ ಚೀಟಿಗಳಲ್ಲಿ ಪಡೆಯಬಹುದಾಗಿರುತ್ತದೆ.  ರೂ.1,20,000/- ಗಳಿಗಿಂತ ಹೆಚ್ಚು ಆದಾಯ ಇರುವ ಕುಟುಂಬಗಳು ಅಂದರೆ ಸರ್ಕಾರಿ ನೌಕರರು, ಸ್ವಂತ ಉಪಯೋಗಕ್ಕಾಗಿ ನಾಲ್ಕು ಚಕ್ರ ವಾಹನ ಹೊಂದಿರುವವರನ್ನು ಆದ್ಯತೇತರ ಕುಟುಂಬ ಎಂಬುವುದಾಗಿ ಕರೆಯಲಾಗುತ್ತಿದ್ದು ಇವರುಗಳು ಎ.ಪಿ.ಎಲ್ ಪಡಿತರ ಚೀಟಿಯನ್ನು ಹೊಂದಬಹುದಾಗಿರುತ್ತದೆ. ಆದ್ಯತಾ ಕುಟುಂಬದವರಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಮೂಲ ಉದ್ದೇಶವಾಗಿದೆ.   ಪಡಿತರ ಚೀಟಿಗಳನ್ನು ಕೋರಿ ಜಿಲ್ಲೆಯಲ್ಲಿ 57,819 ಅರ್ಜಿಗಳನ್ನು ಆನ್‍ಲೈನ್‍ನಲ್ಲಿ ಸ್ವೀಕರಿಸಲಾಗಿದ್ದು, 26,170 ರೇಷನ್ ಕಾರ್ಡ್‍ಗಳನ್ನು ಅಂಚೆ ಮೂಲಕ ಈಗಾಗಲೇ ತಲುಪಿಸಲಾಗಿದೆ.  ಈ ಯೋಜನೆ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಜಾರಿಗೊಳಿಸಲಾಗಿದ್ದು,  ಈ ಯೋಜನೆ ದೇಶದಲ್ಲೇ ಪ್ರಥಮವಾಗಿದೆ ಎಂದು ಸಚಿವರು ಹೇಳಿದರು.

ಬಹುಮಾನ ಯೋಜನೆ :  ಯಾರಾದರು ಜನಸಾಮಾನ್ಯರು ಬೋಗಸ್ ಕಾರ್ಡ್‍ಗಳ ಬಗ್ಗೆ ಮಾಹಿತಿ ಕೊಟ್ಟರೆ ಅವರ ಹೆಸರನ್ನು ಗೌಪ್ಯವಾಗಿಟ್ಟು, ತನಿಖೆ ಮಾಡಿ ಬೋಗಸ್ ಕಾರ್ಡ್ ಎಂದು ಸಾಬೀತಾದರೆ ಮಾಹಿತಿ ಕೊಟ್ಟವರಿಗೆ ಪ್ರತೀ ಪಡಿತರ ಚೀಟಿಗೆ ತಲಾ 400 ರೂ.ಗಳ ಬಹುಮಾನವನ್ನು ಸರ್ಕಾರದಿಂದ ನೀಡಲಾಗುವುದು.  ಈ ಯೋಜನೆಯ ಸಾಫ್ಟ್‍ವೇರ್ ಸಿದ್ಧತೆ ಕೊನೆಯ ಹಂತದಲ್ಲಿದ್ದು, ಇನ್ನು 10 ದಿನಗಳಲ್ಲಿ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.

ರೇಷನ್ ಸೋರಿಕೆ ತಡೆಗಟ್ಟಲು ಬಯೋಮೆಟ್ರಿಕ್ ಯೋಜನೆ ಜಾರಿಗೊಳಿಸಿದ್ದು, ಕೋಲಾರ ಜಿಲ್ಲೆಯಲ್ಲಿ 607 ನ್ಯಾಯಬೆಲೆ ಅಂಗಡಿಗಳಿದ್ದು, ಅದರಲ್ಲಿ 605 ಅಂಗಡಿಗಳಲ್ಲಿ ಪಿಓಎಸ್ (ಪಾಯಿಂಟ್ ಆಫ್ ಸೇಲ್) ಮಿಷನ್‍ಗಳನ್ನು ಅಳವಡಿಸಲಾಗಿದೆ.  ಪಡಿತರ ಕಾರ್ಡ್‍ನಲ್ಲಿರುವ ಯಾರಾದರೊಬ್ಬರು ನ್ಯಾಯಬೆಲೆ ಅಂಗಡಿಗೆ ಹೋಗಿ ಹೆಬ್ಬೆಟ್ಟು (ತಂಬ್) ಗುರುತನ್ನು ನೀಡಿ ಪಡಿತರವನ್ನು ಪಡೆಯಬಹುದು.  ರಾಜ್ಯದಲ್ಲಿ 20 ಸಾವಿರ ನ್ಯಾಯಬೆಲೆ ಅಂಗಡಿಗಳಿದ್ದು,  ಅದರಲ್ಲಿ 19 ಸಾವಿರ ಪಡಿತರ ಅಂಗಡಿಗಳಿಗೆ ಪಿಓಎಸ್ ಮಿಷನ್‍ಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.

ದಾಸೋಹ ಕಾರ್ಯಕ್ರಮ : ವೃದ್ಧಾಶ್ರಮ, ಹಾಸ್ಟೆಲ್, ಮತ್ತಿತರ ಧಾರ್ಮಿಕ ಸಂಸ್ಥೆಗಳು ಉಚಿತವಾಗಿ ಜನರಿಗೆ ಊಟ, ವಸತಿ ವ್ಯವಸ್ಥೆ ಮಾಡಿದರೆ, ಅಂತಹ ಸಂಸ್ಥೆಗಳಲ್ಲಿರುವ ಪ್ರತಿಯೊಬ್ಬ ಸದಸ್ಯರಿಗೆ ತಲಾ 10 ಕೆ.ಜಿ ಅಕ್ಕಿ, 5 ಕೆ.ಜಿ. ಗೋಧಿಯನ್ನು ನೀಡಲಾಗುತ್ತದೆ.  ಇಂತಹ 9 ಸಂಸ್ಥೆಗಳು ಕೋಲಾರ ಜಿಲ್ಲೆಯಲ್ಲಿ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಅನಿಲ ಭಾಗ್ಯ ಯೋಜನೆ :  ಈ ಯೋಜನೆಯಲ್ಲಿ ಕೋಲಾರ ಜಿಲ್ಲೆಗೆ ಪ್ರಥಮ ಹಂತದಲ್ಲಿ 50 ಲಕ್ಷ ರೂ.ಗಳನ್ನು ಮಂಜೂರು ಮಾಡಲಾಗಿದೆ.  ಈ ಯೋಜನೆಯಲ್ಲಿ 17 ಸಾವಿರ ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಜಿಲ್ಲಾ ಸಚಿವರ ನೇತೃತ್ವದಲ್ಲಿ ಈ ಯೋಜನೆಗೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು.  ಆಹಾರ ಇಲಾಖೆ ಮುಖಾಂತರ ಬೇರೆ ಬೇರೆ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.  ಹಸಿವು ಮುಕ್ತ ಕರ್ನಾಟಕ ಸರ್ಕಾರದ ಗುರಿ ಎಂದು ತಿಳಿಸಿದರು. 

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...