ಕೋಲಾರ:ವಿಧಾನಸಭಾ ಕ್ಷೇತ್ರದಿಂದ ಸ್ವರ್ಧಿಸಲು ಕಾಂಗ್ರೆಸ್ ಟಿಕೆಟ್ ಸಿಗುವ ವಿಶ್ವಾಸ-ಸೈಯದ್ ಜಮೀರ್ ಪಾಷ

Source: shabbir | By Arshad Koppa | Published on 24th October 2017, 8:23 AM | State News |

ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ವರ್ಧಿಸಲು ಕಾಂಗ್ರೆಸ್ ಟಿಕೆಟ್ ಸಿಗುವ ವಿಶ್ವಾಸದೊಂದಿಗೆ ಕಳೆದ ಆರು ತಿಂಗಳಿಂದ ತಾವು ಕ್ಷೇತ್ರದಾದ್ಯಂತ ಮತದಾರರ ಅಭಿಪ್ರಾಯ ಸಂಗ್ರಹ ಮಾಡಿರುವುದಾಗಿ ನಿವೃತ್ತ ಐಎಎಸ್ ಅಧಿಕಾರಿ ಸೈಯದ್ ಜಮೀರ್ ಪಾಷ ತಿಳಿಸಿದರು.


ಸೋಮವಾರ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇಲ್ಲಿ ಜಿಲ್ಲಾಧಿಕಾರಿಯಾಗಿ 3 ವರ್ಷ ಕೆಲಸ ಮಾಡಿದ ಅನುಭವವಿದೆ, ಇಲ್ಲಿನ ಸಮಸ್ಯೆಗಳನ್ನು ಖುದ್ದು ಅರಿತಿದ್ದೇನೆ, ಕ್ಲೀನ್ ಕೋಲಾರ ನನ್ನ ಗುರಿಯಾಗಿದೆ, ನಾನು ಇಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದರು.
ಕಾಂಗ್ರೆಸ್ ಹೈಕಮಾಂಡ್ ನನಗೆ ಟಿಕೆಟ್ ನೀಡುವುದಾಗಿ ತಿಳಿಸಿದ ಹಿನ್ನಲೆಯಲ್ಲಿ ಕ್ಷೇತ್ರದಾದ್ಯಂತ 6 ತಿಂಗಳಿಂದ ಪ್ರತಿಹಳ್ಳಿಗೂ ಭೇಟಿ ನೀಡುವ ಮೂಲಕ ಒಂದು ಸುತ್ತಿನ ಓಡಾಟ ಮುಗಿಸಿದ್ದೇನೆ, ಹೋದೆಲ್ಲೆಲ್ಲಾ ಜನತೆಯ ಬೆಂಬಲ ವ್ಯಕ್ತವಾಗುತ್ತಿದೆ ಎಂದರು.
ತಾವು ನರಸಾಪುರದಿಂದ ಜನರ ಅಭಿಪ್ರಾಯ ಸಂಗ್ರಹಿಸಲು ಆರಂಭಿಸಿದ್ದು, ಕುಡಿಯುವ ನೀರು, ಶೌಚಾಲಯ, ರಸ್ತೆ ಇಲ್ಲದಿರುವುದು ತಮ್ಮ ಗಮನಕ್ಕೆ ಬಂದಿದೆ ಎಂದರು.
ಜಿಲ್ಲೆಯಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ, ಹಲವಾರು ಕೈಗಾರಿಕೆಗಳು ಸ್ಥಾಪನೆಯಾಗಿದ್ದರೂ, ಇಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡದೇ ಹೊರಗಿನವರಿಗೆ ಅವಕಾಶ ಕಲ್ಪಿಸಿರುವ ಕುರಿತು ಗ್ರಾಮೀಣ ಜನರಿಂದ ಆರೋಪಗಳು ಕೇಳಿ ಬಂತು ಎಂದರು.
ನಿವೃತ್ತಿಯಾದ ನಂತರ ಪೂರ್ಣವಾಗಿ ಕಾಂಗ್ರೆಸ್‍ನಲ್ಲೇ ಇದ್ದೇನೆ, ಪಕ್ಷದ ಹೈಕಮಾಂಡ್ ಸೂಚನೆಯಂತೆಯೇ ಕೋಲಾರ ಕ್ಷೇತ್ರದಿಂದ ಕಣಕ್ಕಿಳಿಯಲು ಸಿದ್ದತೆ ಮಾಡಿಕೊಂಡಿದ್ದೇನೆ ಎಂದರು.
ಸಂಸದರು,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಸ್ಥಳೀಯ ಮುಖಂಡರ ಸಹಮತ ಪಡೆದು ಇಲ್ಲಿ ಸಮಾಜ ಸೇವೆಯ ಉದ್ದೇಶದಿಂದ ಕೆಲಸ ಮಾಡುತ್ತಿದ್ದೇನೆ, ಪಕ್ಷ ಟಿಕೆಟ್ ನೀಡಿದಲ್ಲಿ ಸ್ವರ್ಧಿಸುತ್ತೇನೆ, ಇಲ್ಲವಾದಲ್ಲಿ ಯಾರಿಗೇ ಟಿಕೆಟ್ ಸಿಕ್ಕರು ಪಕ್ಷದ ಪರ ಕೆಲಸ ಮಾಡುತ್ತೇನೆ ಎಂದರು.
ತಾವು ಕೋಲಾರದಲ್ಲಿ ಡಿಸಿಯಾಗಿದ್ದಾಗ, ಇಲ್ಲಿ ಕೋಮು ಸೌಹಾರ್ದತೆಗೆ ಶ್ರಮಿಸಿದ್ದು, ಯಾವುದೇ ಸಣ್ಣಪುಟ್ಟ ಗಲಭೆಗಳಿಗೂ ಅವಕಾಶ ನೀಡಲಿಲ್ಲ ಎಂದು ತಿಳಿಸಿ, ಬಂಗಾರಪೇಟೆಯಲ್ಲಿ ಅಂಬೇಡ್ಕರ್ ಪ್ರತಿಮೆ ಭಗ್ನ ಪ್ರಕರಣದಿಂದ ನೆಲೆಗೊಂಡಿದ್ದ ಉದ್ವಿಗ್ನತೆಯನ್ನು 36 ಗಂಟೆಗಳಲ್ಲಿ ತಣ್ಣಗಾಗಿಸಿ ಹೊಸ ಪ್ರತಿಮೆ ಅನಾವರಣಗೊಳಿಸಿ ಶಾಂತಿ ಕಾಪಾಡಿದ್ದಾಗಿ ತಿಳಿಸಿದರು.
ಸ್ವಾತಂತ್ರ್ಯ ಬಂದು 70 ವರ್ಷ ದಾಟಿದರೂ ಕೋಲಾರ ಕೊಳೆತು ನಾರುತ್ತಿದೆ, ಕಸದ ರಾಶಿಗಳು ಕಂಡು ಬರುತ್ತಿವೆ, ತಮಗೆ ಅವಕಾಶ ಸಿಕ್ಕಲ್ಲಿ ಕ್ಲೀನ್ ಕೋಲಾರ ನಿರ್ಮಾಣಕ್ಕೆ ಶ್ರಮಿಸುತ್ತೇನೆ, ಪರಿಸರ ಮಾಲಿನ್ಯ ರಹಿತ ಕೋಲಾರ ಮಾಡುತ್ತೇನೆ ಎಂದರು.
ಆಸ್ಪತ್ರೆ,ಗ್ರಾ.ಪಂ ತಹಸೀಲ್ದಾರ್ ಕಚೇರಿ ಎಲ್ಲಾ ಕಡೆಯೂ ಲಂಚದ ಹಾವಳಿ ಇದೆ, ತಾನು ಶಾಸಕನಾದರೆ ಇದೆಲ್ಲವನ್ನು ಭ್ರಷ್ಟಮುಕ್ತ ಮಾಡಲು ಸಂಕಲ್ಪದೊಂದಿಗೆ ಶ್ರಮಿಸುವುದಾಗಿ ತಿಳಿಸಿದರು.
ನಿರುದ್ಯೋಗ ನಿವಾರಣೆಗೆ ವಾರ್ಡುವಾರು ಕೌಶಲ್ಯ ಅಭಿವೃದ್ದಿಗೆ ಒತ್ತು ನೀಡುವುದು, ಎಲ್ಲರನ್ನು ಒಂದಾಗಿ ಕರೆದೊಯ್ದು, ಕೋಮು ಸೌಹಾರ್ದತೆ ಕಾಪಾಡುವ ಬದ್ದತೆಯೊಂದಿಗೆ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡರಾದ ವಿಜಯಕುಮಾರ್, ಕನಕರಾಜು, ಎಸ್.ತನ್ವೀರ್ ಅಹಮದ್, ರಾಮಮೂರ್ತಿ, ವೆಂಕಟಾಚಲಪತಿ, ಷಬೀರ್ ಅಹಮದ್ ಸರ್ಕಾರ್ ಮತ್ತಿತರರಿದ್ದರು.

Read These Next

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...