ಕೋಲಾರ:ಸುಗಟೂರು ಮಹಿಳಾ ಸಂಘಗಳ ರಚನೆಯಲ್ಲಿ ನಿಯಮ ಉಲ್ಲಂಘಿಸಿಲ್ಲ

Source: shabbir | By Arshad Koppa | Published on 24th April 2017, 8:41 AM | State News |

ಕೋಲಾರ:- ತಾಲ್ಲೂಕಿನ ಸುಗಟೂರು ಎಸ್‍ಎಫ್‍ಸಿಎಸ್‍ನಲ್ಲಿ ಮಹಿಳಾ ಸ್ವಸಹಾಯ ಸಂಘಗಳ ರಚನೆ ಮತ್ತು ಉಳಿತಾಯ ಖಾತೆ ಆರಂಭಿಸುವಲ್ಲಿ ನಿಯಮಗಳ ಉಲ್ಲಂಘನೆಯಾಗಿಲ್ಲ ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಸ್ವಷ್ಟಪಡಿಸಿದರು.
ಭಾನುವಾರ ಎಸ್‍ಎಫ್‍ಸಿಎಸ್‍ಗೆ ಖುದ್ದು ಭೇಟಿ ನೀಡಿ ಮಹಿಳಾ ಸಂಘಗಳ ಸಾವಿರಾರು ಪ್ರತಿನಿಧಿಗಳಿಂದ ದಾಖಲೆ ಪತ್ರಗಳು ಮತ್ತು ಸೊಸೈಟಿಯಲ್ಲಿ ನಿರ್ವಹಿಸಿರುವ ಕಡತಗಳ ಪರಿಶೀಲನೆ ನಡೆಸಿ ಅವರು ಮಾತನಾಡುತ್ತಿದ್ದರು.
ಮಹಿಳೆಯರಿಗೆ ಸಂಘ ರಚನೆ ಮತ್ತು ಸೊಸೈಟಿಯಲ್ಲಿ ಉಳಿತಾಯ ಖಾತೆ ತೆರೆಯುವ ಹಕ್ಕು ಇದೆ, ಇದನ್ನೇ ಅವ್ಯವಹಾರ ಎಂದು ಬಿಂಬಿಸಿ ಕೆಲವರು ಮಾಹಿತಿ ಕೊರತೆಯಿಂದ ಆರೋಪಗಳನ್ನು ಮಾಡಿದ್ದಾರೆ ಎಂದರು. 
ಬರದ ಸಂಕಷ್ಟ ಹಾಗೂ ಬಡ್ಡಿ ಶೋಷಣೆಯಿಂದ ನಲುಗಿರುವ ತಾಯಂದಿರು ಯಾರೇ ಸಂಘ ರಚಿಸಿಕೊಂಡು ಸೊಸೈಟಿಗೆ ಬಂದು ಖಾತೆ ತೆರೆಯಲು ಕೇಳಿದರೆ ನಿಯಮಾನುಸಾರ ಅವರನ್ನು ವಾಪಸ್ಸು ಕಳುಹಿಸಲು ಸಾಧ್ಯವೇ ಇಲ್ಲ ಎಂದರು.
ರಾತ್ರೋರಾತ್ರಿ ಸಂಘಗಳ ರಚನೆಯಾಗಿದೆ ಎಂಬ ಮಾತು ಸುಳ್ಳು, ಸುಗಟೂರು ಎಸ್‍ಎಫ್‍ಸಿಎಸ್‍ನಲ್ಲಿ 303 ಸಂಘಗಳ ರಚನೆಯಾಗಿದೆ, ಇದರಲ್ಲಿ 159 ಸಂಘಗಳು ಈಗ ಸಾಲ ಪಡೆಯುವ ಅರ್ಹತೆ ಪಡೆದುಕೊಂಡಿದ್ದು, ವಾರದೊಳಗೆ ಸಾಲ ವಿತರಿಸುವುದಾಗಿ ತಿಳಿಸಿದರು.
ಉಳಿದ ಸಂಘಗಳು ನಿಯಮಾನುಸಾರ ಮುಂದಿನ ದಿನಗಳಲ್ಲಿ ಅರ್ಹತೆ ಪಡೆದುಕೊಳ್ಳಲಿವೆ, ಆಗ ಅವರಿಗೂ ಸಾಲ ವಿತರಿಸಲಾಗುವುದು ಎಂದು ಸ್ವಷ್ಟಪಡಿಸಿದರು.
ಸಹಕಾರ ಸಂಘಗಳ ಮೂಲಕ ರಾಜ್ಯದ ಮುಖ್ಯಮಂತ್ರಿಗಳು ಮಹಿಳೆಯರಿಗೆ ಶೂನ್ಯ ಬಡ್ಡಿ ಸಾಲ ವಿತರಿಸುವ ಐತಿಹಾಸಿಕ ಘೋಷಣೆ ಮಾಡಿ ನೆರವಿಗೆ ನಿಂತಿದ್ದಾರೆ.
ಶೂನ್ಯ ಬಡ್ಡಿ ಸಾಲ ಸಿಗುವ ಆಶಯದೊಂದಿಗೆ ತಾಯಂದಿರು ವಾಣಿಜ್ಯ,ರಾಷ್ಟ್ರಿಕೃತ ಬ್ಯಾಂಕುಗಳಿಂದ ಸಹಕಾರ ಸಂಘಗಳಿಗೆ ತಮ್ಮ ಉಳಿತಾಯ ಖಾತೆ ವರ್ಗಾವಣೆ ಮಾಡಿಕೊಂಡು ಬರುತ್ತಿದ್ದಾರೆ, ಇದನ್ನು ತಪ್ಪು ಎಂದು ಆರೋಪಿಸುವುದು ಸರಿಯೇ ಎಂದು ಪ್ರಶ್ನಿಸಿದರು.
ಜಿಲ್ಲೆಯಲ್ಲಿ ಕುಟುಂಬದ ಜವಾಬ್ದಾರಿ ಹೊತ್ತಿರುವ ತಾಯಂದಿರಿಗೆ ಆರ್ಥಿಕ ನೆರವು ನೀಡುವ ಆಶಯ ಶೂನ್ಯ ಬಡ್ಡಿ ಯೋಜನೆ ಜಾರಿಗೆ ಕಾರಣರಾದ ಸಚಿವ ರಮೇಶ್‍ಕುಮಾರ್ ಮತ್ತು ಡಿಸಿಸಿ ಬ್ಯಾಂಕಿನದ್ದಾಗಿದೆ ಎಂದರು.
ತಾಯಂದಿರು ಸಂಘ ರಚಿಸಿಕೊಂಡು ನೊಂದಾಯಿಸಿ,ಉಳಿತಾಯ ಖಾತೆ ಆರಂಭಿಸಿದಲ್ಲಿ ನಿಯಮಗಳಡಿ ಅವರಿಗೆ ಸಾಲ ಸೌಲಭ್ಯ ಸಿಗಲಿದೆ, ನಿಯಮಗಳ ಪಾಲನೆಯಲ್ಲಿ ಎಲ್ಲೂ ಎಡವಿಲ್ಲ, ಜಾತಿ,ಧರ್ಮ,ಪಕ್ಷ ಬೇಧ ಮಾಡಿರುವ ಸ್ವಷ್ಟ ದೂರುಗಳಿದ್ದರೆ ತಿಳಿಸಲಿ, ಅಂತಹ ಯಾವುದೇ ಅನುಮಾನಗಳು ಬೇಡ ಎಂದರು.
ಪಕ್ಷ,ಜಾತಿಬೇಧವಿಲ್ಲ
ವೆಂಕಟರಾಮರೆಡ್ಡಿ ಸ್ವಷ್ಟನೆ
ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಅವರ ಪರಮಾಪ್ತರು, ಸುಗಟೂರು ಎಸ್‍ಎಫ್‍ಸಿಎಸ್ ಮಾಜಿ ಅಧ್ಯಕ್ಷರು,ಹಾಲಿ ನಿರ್ದೇಶಕರಾದ ವೆಂಕಟರಾಮರೆಡ್ಡಿ, ಸೊಸೈಟಿಯಲ್ಲಿ ಸಂಘ ರಚನೆ ಹಾಗೂ ಸಾಲ ನೀಡಿಕೆಗೆ ಎಂದೂ ಪಕ್ಷ,ಜಾತಿ ಬೇಧ ಮಾಡಿಲ್ಲ ಎಂದು ತಿಳಿಸಿದರು.
ಎಲ್ಲಾ ರಾಜಕೀಯ ಪಕ್ಷಗಳಿಗೆ ಸೇರಿದ ಮಹಿಳೆಯರೂ ಸಾಲಕ್ಕಾಗಿ ಸಂಘ ರಚಿಸಿಕೊಂಡಿದ್ದಾರೆ, ಅವರಲ್ಲಿ ನಿಮ್ಮ ಪಕ್ಷ ಯಾವುದು ಎಂದು ಪ್ರಶ್ನಿಸಿ ಸಾಲ ವಿತರಿಸಲು ಸಾಧ್ಯವೇ ಎಂದು ಪ್ರಶ್ನಿಸಿ, ಅಂತಹ ಆರೋಪಗಳು ಸರಿಯಲ್ಲ ಎಂದರು.
ಎಸ್‍ಎಫ್‍ಸಿಎಸ್ ಅಧ್ಯಕ್ಷ ಟಿ.ವಿ.ತಿಮ್ಮರಾಯಪ್ಪ, ಸಂಘ ರಚನೆಯಲ್ಲಿ ಯಾವುದೇ ನಿಯಮಗಳ ಉಲ್ಲಂಘನೆಯಾಗಿಲ್ಲ, ಯಾವುದೇ ಮಹಿಳಾ ಸಂಘ ಬಂದರೂ ಉಳಿತಾಯ ಖಾತೆ ಮಾಡಿಕೊಂಡು ಹಣ ತುಂಬಿಸಿಕೊಳ್ಳಲಾಗಿದೆ ಮತ್ತು ನಿಯಮಾನುಸಾರವೇ ಸಾಲ ಸಿಗುವುದು ಎಂದು ಸ್ವಷ್ಟಪಡಿಸಲಾಗಿದೆ ಎಂದು ತಿಳಿಸಿದರು.
ಯಲ್ಲಮ್ಮ ಮಹಿಳಾ ಸ್ವಸಹಾಯ ಸಂಘದ ಗೀತಾ ಎಂಬುವವರು ಮಾತನಾಡಿ, ನಾವು ಕಷ್ಟದಲ್ಲಿದ್ದೇವೆ, ಮಕ್ಕಳ ಶಿಕ್ಷಣಕ್ಕೂ ನೆರವಿನ ಅಗತ್ಯವಿದೆ, ಶೂನ್ಯ ಬಡ್ಡಿ ಸಾಲ ಸಿಗುವುದೆಂಬ ಉದ್ದೇಶದಿಂದ ರಾಷ್ಟ್ರೀಕೃತ ಬ್ಯಾಂಕಿನಿಂದ ಇಲ್ಲಿಗೆ ತಮ್ಮ ಖಾತೆ ವರ್ಗಾವಣೆ ಮಾಡಿಕೊಂಡು ಉಳಿತಾಯದ ಹಣ ತುಂಬಿದ್ದೇವೆ ಎಂದು ತಿಳಿಸಿದರು.
ಮಧ್ಯವರ್ತಿಗಳ ಹಾವಳಿ, ಲಂಚಕ್ಕೆ ಒತ್ತಾಯವಾಗಲಿ ಯಾರಿಂದಲೂ ಕೇಳಿ ಬಂದಿಲ್ಲ, ಬಡ್ಡಿ ಶೋಷಣೆಯಿಂದ ನಮಗೆ ಮುಕ್ತಿ ಬೇಕು ಅಷ್ಟೆ ಎಂದರು.


ಈ ಸಂದರ್ಭದಲ್ಲಿ ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ಕೃಷ್ಣೇಗೌಡ,ಕೃಷಿಕ ಸಮಾಜದ ಅಧ್ಯಕ್ಷ ಮಂಜುನಾಥ್, ನಿರ್ದೇಶಕರಾದ ಎ.ಸಿ.ಭಾಸ್ಕರ್,ರಮಣಾರೆಡ್ಡಿ, ಸವಿತಾ ಎನ್.ಶೆಟ್ಟಿ, ವೆಂಕಟರಾಮಪ್ಪ, ರುಕ್ಕಮ್ಮ, ವೆಂಕಟಮ್ಮ, ಗ್ರಾ.ಪಂ ಸದಸ್ಯ ಶಂಕರಪ್ಪ, ಮುಖಂಡರಾದ ಸುಗಟೂರು ವಿಶ್ವನಾಥ್, ಆಲೇರಿ ಬಾಬು, ನಾಗನಾಳ ಮಂಜುನಾಥ್, ಹನುಮೇಗೌಡ,ತುರಾಂಡಹಳ್ಳಿ ಸರ್ವೇಶ್, ಚೌಡಪ್ಪ,ಭೂಪತಿ,ಸಂಘದ ಸಿಇಒ ಪುಟ್ಟರಾಜು  ಮತ್ತಿತರರು ಹಾಜರಿದ್ದರು. 

ಕೋಲಾರ ತಾಲ್ಲೂಕಿನ ಸುಗಟೂರು ಎಸ್‍ಎಫ್‍ಸಿಎಸ್ ಆವರಣದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಹಿಳಾ ಸಂಘಗಳ ರಚನೆ ಕುರಿತ ದಾಖಲೆಗಳ ಪರಿಶೀಲನೆ ನಡೆಸಿದರು.

ಕೋಲಾರ ತಾಲ್ಲೂಕಿನ ಸುಗಟೂರು ಎಸ್‍ಎಫ್‍ಸಿಎಸ್ ಆವರಣದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಹಿಳಾ ಸಂಘಗಳ ರಚನೆ ಕುರಿತ ದಾಖಲೆಗಳ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಸಾವಿರಾರು ಮಹಿಳೆಯರು ಹಾಜರಿದ್ದರು.   

Read These Next

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...