ಕೋಲಾರ:ಮಾ.30 ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ-ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಅಧಿಕಾರಿಗಳ ಸಲಹೆ

Source: shabbir | By Arshad Koppa | Published on 24th March 2017, 7:33 PM | State News |

ಕೋಲಾರ:- ರಾಜ್ಯಾದ್ಯಂತ ಮಾ.30 ರಿಂದ ಆರಂಭಗೊಳ್ಳುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ದರಾಗುತ್ತಿರುವ ಜಿಲ್ಲೆಯ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಹಲವು ಸಲಹೆ ಸೂಚನೆ ನೀಡಿ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಿರುವ ಪರೀಕ್ಷಾ ನೋಡೆಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್  ಸಾರ್ವಜನಿಕ ಶಿಕ್ಷಣ ಇಲಾಖೆ ಪರವಾಗಿ ಶುಭ ಹಾರೈಸಿದ್ದಾರೆ. 
ಗುಣಾತ್ಮಕ ಫಲಿತಾಂಶದ ದೃಷ್ಟಿಯಿಂದ ಮತ್ತು ಮಕ್ಕಳಲ್ಲಿನ ಪರೀಕ್ಷಾ ಭಯ ಹೋಗಲಾಡಿಸಲು ಮಕ್ಕಳಲ್ಲಿ ಧೈರ್ಯ ಮತ್ತು ಆತ್ಮವಿಶ್ವಾಸ ತುಂಬಲು ಇಲಾಖೆ ಪರವಾಗಿ ಹಲವಾರು ಸೂಚನೆ,ಸಲಹೆಗಳನ್ನು ಅವರು ನೀಡಿದ್ದಾರೆ.
ಪರೀಕ್ಷಾ ಸಲಕರಣೆ
ಸಿದ್ದಪಡಿಸಿಕೊಳ್ಳಿ:- 
ಪರೀಕ್ಷೆಗೆ ದೈಹಿಕ,ಮಾನಸಿಕವಾಗಿ ಸಿದ್ದರಾಗಿ, ಪರೀಕ್ಷಾ ಸಲಕರಣೆಗಳಾದ ಪ್ರವೇಶಪತ್ರ, ಕ್ಲಿಬ್‍ಬೋರ್ಡ್, ಲೇಖನಿಗಳು, ಪೆನ್ಸಿಲ್, ರಬ್ಬರ್, ಜಾಮಿಟ್ರಿ ಬಾಕ್ಸ್ ಮತ್ತಿತರ ವಸ್ತುಗಳ ಕುರಿತು ಮೊದಲ ದಿನವೇ ಗಮನಹರಿಸಿ ಸಿದ್ದಪಡಿಸಿಕೊಳ್ಳಲು ಸೂಚಿಸಿರುವ ಅವರು, ನೀಲಿ ಅಥವಾ ಕಪ್ಪು ಒಂದೇ ಬಣ್ಣದ ಪೆನ್ ಬಳಸಿ ಎಂದು ಸಲಹೆ ನೀಡಿದ್ದಾರೆ. 
ಪರೀಕ್ಷೆಗೆ ಉಳಿದಿರುವ ದಿನ ಹಾಗೂ ಪರೀಕ್ಷೆಗಳ ನಡುವಿನ ಬಿಡುವಿನ ದಿನಗಳನ್ನು ವ್ಯರ್ಥವಾಗಿ ಕಳೆಯಬೇಡಿ.  ಪುನರಾವಲೋಕನ ಹಾಗೂ ಕಲಿಕೆಯ ದೃಢೀಕರಣಕ್ಕೆ ಒತ್ತು ನೀಡಿ.  ಹಗಲು ವೇಳೆ ಚೆನ್ನಾಗಿ ಓದಿ, ರಾತ್ರಿ ನಿದ್ದೆಗೆ ಭಂಗ ತಂದುಕೊಳ್ಳಬೇಡಿ. 
ಶೀತ, ನೆಗಡಿ, ಜ್ವರದಂತಹ ಕಾಯಿಲೆ ಕಂಡುಬಂದರೆ ಕೂಡಲೇ ವೈದ್ಯರಲ್ಲಿ ತೆರಳಿ.  ಎಣ್ಣೆಯಿಂದ ಕರಿದ ಪದಾರ್ಥಗಳನ್ನು ತಿನ್ನದಿರಿ ಎಂದು ಸಲಹೆ ನೀಡಿದ್ದಾರೆ. 
ಪ್ರಶ್ನೆಪತ್ರಿಕೆ ಸೋರಿಕೆ
ವದಂತಿಗೆ ಕಿವಿಗೊಡದಿರಿ
ಪ್ರಶ್ನೆ ಪತ್ರಿಕೆ ಬಹಿರಂಗದಂತಹ ವದಂತಿಗಳಿಗೆ ಕಿವಿಗೊಡದಿರಿ.  ನಿಮ್ಮ ಕಲಿಕೆಯ ಕಡೆ ಗಮನವಿರಲಿ.  ಒಂದು ವಿಷಯದ ಪರೀಕ್ಷೆ ಮುಗಿದ ನಂತರ ಬರೆದ ವಿಷಯದ ಚಿಂತೆ ಮಾಡಿ ಕಾಲಹರಣ ಮಾಡಿದಿರಿ.  ಮುಂದಿನ ವಿಷಯದ ಕಡೆ ಮಾತ್ರ ನಿಮ್ಮ ಗಮನವಿರಲಿ.
ಪೋಷಕರು ಶಾಲೆಯಲ್ಲಿ ನೀಡಿರುವ ಪ್ರವೇಶ ಪತ್ರದಲ್ಲಿ ವಿದ್ಯಾರ್ಥಿಯ ಹೆಸರು, ತಂದೆ, ತಾಯಿಯ ಹೆಸರು, ಹುಟ್ಟಿದ ದಿನಾಂಕ, ಪರೀಕ್ಷಾ ಕೇಂದ್ರ, ಪರೀಕ್ಷೆಯ ದಿನಾಂಕ, ಪರೀಕ್ಷಾ ವಿಷಯಗಳು ಮತ್ತಿತರ ಅಂಶಗಳನ್ನು ಪರಿಶೀಲಿಸಿ ದೃಢಪಡಿಸಿಕೊಳ್ಳಿ ಎಂದು ಕೋರಿದ್ದಾರೆ.
ಮಕ್ಕಳನ್ನು ನಿಂದಿಸದಿರಿ
ಪೋಷಕರಿಗೆ ಮನವಿ
ಪರೀಕ್ಷೆಗೆ ತೆರಳುವ ಮಕ್ಕಳನ್ನು ಕ್ಷುಲ್ಲಕ ಕಾರಣಗಳಿಗೆ ನಿಂದಿಸುವುದು, ಬೈಯುವುದರಿಂದ ಅವರ ಮನಸ್ಸಿಗೆ ಆಘಾತವಾಗುತ್ತದೆ.  ಆದ್ದರಿಂದ ಮನೆಯಿಂದ ಹೊರಡುವಾಗ ಸಂತೋಷದಿಂದ ಹಾರೈಸಿ ಕಳುಹಿಸಿಕೊಡಿ ಎಂಧು ಪೋಷಕರಲ್ಲಿ ಮನವಿ ಮಾಡಿದ್ದಾರೆ.
ಪೋಷಕರು ಪರೀಕ್ಷೆಯ ದಿನ ನಿಮ್ಮ ಮಕ್ಕಳನ್ನು ಒಂದು ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ಕರೆ ತಂದು ಆಸನ ವ್ಯವಸ್ಥೆ ಬಗ್ಗೆ ಮಾರ್ಗದರ್ಶನ ನೀಡಿ ಅವರಲ್ಲಿ ಗೊಂದಲ, ಗಾಬರಿಗೆ ಅವಕಾಶವಿಲ್ಲದಂತೆ ಎಚ್ಚರವಹಿಸಿ ಎಂದು ತಿಳಿಸಿದ್ದಾರೆ.
ಪರೀಕ್ಷಾ ಕೊಠಡಿಯ ಸಂಖ್ಯೆ ಹಾಗೂ ಆಸನ ವ್ಯವಸ್ಥೆಯ ಬಗ್ಗೆ ಗೊಂದಲವುಂಟಾದರೆ ಗಾಬರಿಗೊಳ್ಳಬೇಡಿ.  ಕೇಂದ್ರದ ಮುಖ್ಯ ಅಧೀಕ್ಷಕರನ್ನು ಸಂಪರ್ಕಿಸಿ ನಿಮ್ಮ ಗೊಂದಲವನ್ನು ಬಗೆಹರಿಸಿಕೊಳ್ಳಲು ಸಲಹೆ ನೀಡಿದ್ದಾರೆ.  
ಪರೀಕ್ಷಾ ಕೇಂದ್ರಕ್ಕೆ ಗೈಡ್, ಪುಸ್ತಕ, ಚೀಟಿ, ಮೊಬೈಲ್ ನಂತಹ ಎಲೆಕ್ಟ್ರಾನಿಕ್ ಉಪಕರಣಗಳನ್ನು ತರುವುದನ್ನು ನಿಷೇಧಿಸಿದ್ದು, ಇದ್ಯಾವುದನ್ನು ತರಬೇಡಿ ಎಂದು ತಿಳಿಸಿದ್ದಾರೆ. 
ಪರೀಕ್ಷೆ ಬದಲಾವಣೆ
9-30ಕ್ಕೆ ಪ್ರವೇಶವಿಲ್ಲ
ಈ ಬಾರಿ ಪರೀಕ್ಷಾ ವ್ಯವಸ್ಥೆಯಲ್ಲಿ ಒಂದೆರಡು ಬದಲಾವಣೆಗಳಾಗಿರುವುದನ್ನು ಗಮನಿಸಿ.  ಪರೀಕ್ಷೆಯ ದಿನ ಮೊದಲ ಬೆಲ್ ಬೆಳಿಗ್ಗೆ 9.15ಕ್ಕೆ ಆಗುತ್ತದೆ.  ಆಗ ಪರೀಕ್ಷಾ ಕೇಂದ್ರವನ್ನು ಪ್ರವೇಶಿಸಿ ನಿಗದಿಪಡಿಸಿದ ಆಸನದಲ್ಲಿ ಕುಳಿತುಕೊಳ್ಳಬೇಕು.  9.25ಕ್ಕೆ ಎರಡನೆಯ ಬೆಲ್ ಆಗುತ್ತದೆ.  9.30ಕ್ಕೆ ಮೂರನೆ ಬೆಲ್ ಬಾರಿಸಿದಾಗ ಪ್ರಶ್ನೆ ಪತ್ರಿಕೆ ನೀಡಲಾಗುತ್ತದೆ.  9.30ರ ನಂತರ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನೀಡಲಾಗುವುದಿಲ್ಲವೆಂಬುದು ತಿಳಿದಿರಲಿ ಎಂದಿದ್ದಾರೆ.
ಈ ಬಾರಿ ಪರೀಕ್ಷೆಯಲ್ಲಿ ಮತ್ತೊಂದು ಬದಲಾವಣೆಯಾಗಿದೆ.  ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆಯನ್ನು ಪ್ರತ್ಯೇಕವಾಗಿ ನೀಡಲಾಗುತ್ತದೆ. ಪರೀಕ್ಷೆಯ ನಂತರ ಪ್ರಶ್ನೆ ಪತ್ರಿಕೆಯನ್ನು ವಿದ್ಯಾರ್ಥಿಗಳು ಮನೆಗೆ ತರಬಹುದಾಗಿದೆ.
ಪರೀಕ್ಷಾ ಕೇಂದ್ರದಲ್ಲಿ ನಿಮಗೆ ಉತ್ತರ ಬರೆಯಲು ಗಣಿತ ವಿಷಯಕ್ಕೆ ಮಾತ್ರ 28 ಪುಟಗಳನ್ನೊಳಗೊಂಡ ಉತ್ತರ ಪತ್ರಿಕೆ ಬುಕ್‍ಲೆಟ್  ನೀಡಲಾಗುತ್ತದೆ.  ಉಳಿದ ವಿಷಯಕ್ಕೆ 20 ಪುಟಗಳ ಉತ್ತರ ಪುಸ್ತಕವನ್ನು ನೀಡಲಾಗುತ್ತದೆ.
ನಿಮಗೆ ನೀಡಿರುವ ಮುಖ್ಯ ಉತ್ತರ ಪುಸ್ತಕದಲ್ಲಿನ ಎಲ್ಲಾ ಪುಟಗಳಲ್ಲೂ ಬರೆದು ಪೂರ್ಣಗೊಂಡ ನಂತರ  ಹೆಚ್ಚುವರಿ ಹಾಳೆಗಳನ್ನು ಪಡೆದುಕೊಳ್ಳಬಹುದು. ಅದು 4 ಪುಟಗಳನ್ನು ಒಳಗೊಂಡಿರುತ್ತದೆ.  ಹೆಚ್ಚುವರಿ ಹಾಳೆಯನ್ನು ಪಡೆದುಕೊಂಡ ಕೂಡಲೇ ಅದರಲ್ಲಿ ನಿಗದಿತ ಸ್ಥಳದಲ್ಲಿ ನಿಮ್ಮ ನೋಂದಣಿ ಸಂಖ್ಯೆಯನ್ನು ಬರೆಯಿರಿ.  ಹಾಗೆಯೇ ಮುಖ್ಯ ಉತ್ತರ ಪುಸ್ತಕದ ಸಂಖ್ಯೆಯನ್ನು ತಪ್ಪದೆ ನಮೂದಿಸಿ.  ಹೆಚ್ಚುವರಿ ಹಾಳೆಯಲ್ಲಿನ ಕ್ರಮ ಸಂಖ್ಯೆಯನ್ನು ಮುಖ್ಯ ಉತ್ತರ ಪುಸ್ತಕದಲ್ಲಿ ನಮೂದಿಸಿ ಆ ನಂತರ ಉತ್ತರ ಬರೆಯಲು ಆರಂಭಿಸಿ.
ಪ್ರಶ್ನೆ ಪತ್ರಿಕೆಯನ್ನು ಓದುವುದಕ್ಕಾಗಿಯೇ ಮೊದಲ 15 ನಿಮಿಷಗಳನ್ನು ಮೀಸಲಿರಿಸಲಾಗಿದೆ.  ಆದ್ದರಿಂದ ಪ್ರಶ್ನೆ ಪತ್ರಿಕೆಯನ್ನು ಎರಡು ಮೂರು ಬಾರಿ ಚೆನ್ನಾಗಿ ಓದಿ.  ಚೆನ್ನಾಗಿ ಉತ್ತರ ಗೊತ್ತಿರುವ ಪ್ರಶ್ನೆಗಳನ್ನು ಗುರುತಿಸಿಕೊಳ್ಳಿ.  ಶೇ 100 ರಷ್ಟು ಉತ್ತರ ಗೊತ್ತಿರುವ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ.  ಆನಂತರ ಉಳಿದ ಪ್ರಶ್ನೆಗಳಿಗೆ ಯೋಚಿಸಿ ಉತ್ತರಿಸಲು ಉಳಿದ ಸಮಯವನ್ನು ಬಳಿಸಿಕೊಳ್ಳಿ ಎಂದಿದ್ದಾರೆ.
ಪರೀಕ್ಷೆಗೆ ನಿಗದಿಪಡಿಸಿದ ಸಂಪೂರ್ಣ ಸಮಯವನ್ನು ಬಳಸಿಕೊಳ್ಳಿ.  ಉತ್ತರಗಳೆಲ್ಲಾ ಬರೆದ ನಂತರ ಬರೆದಿರುವ ಎಲ್ಲಾ ಉತ್ತರಗಳು ಸರಿಯಾಗಿದೆಯೇ ಎಂಬುದನ್ನು ಮತ್ತೊಮ್ಮೆ ಪರಿಶೀಲಿಸಿ.  ತಪ್ಪುಗಳಿದ್ದಲ್ಲಿ ಸರಿಪಡಿಸಿ, ಕೆಲವೊಮ್ಮ ಕೆಲವು ಪ್ರಶ್ನೆಗಳಿಗೆ ಉತ್ತರ ಪೂರ್ಣ ತಪ್ಪಾಗಿದೆ ಎಂದೆನಿಸಿದರೆ ಅದನ್ನು ಹೊಡೆದು ಹಾಕಿ ಮತ್ತೊಮ್ಮೆ ಬರೆಯಲು ಅವಕಾಶವಿದೆ.  ನಿಮ್ಮ ಬರವಣಿಗೆ ಸುಂದರವಾಗಿರಲಿ.
ಮಕ್ಕಳೇ, ಯಾವುದೇ ಕಾರ್ಯವನ್ನು ಯಶಸ್ವಿಯಾಗಿ ಮಾಡಲು 'ಆತ್ಮ ವಿಶ್ವಾಸ' ಬಹಳ ಮುಖ್ಯ.  ಅಂತೆಯೇ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸುವಲ್ಲಿಯೂ 'ಆತ್ಮ ವಿಶ್ವಾಸ' ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ.  ಆತ್ಮ ವಿಶ್ವಾಸ ವಿದ್ಯಾರ್ಥಿಗಳಲ್ಲಿನ ಪರೀಕ್ಷಾ ಭಯವನ್ನು ಹೋಗಲಾಡಿಸುತ್ತದೆ.  ಆತ್ಮ ವಿಶ್ವಾಸ ಹೆಚ್ಚಾದಷ್ಟು ನೆನಪಿನ ಶಕ್ತಿಯೂ ಹೆಚ್ಚಾಗುತ್ತದೆ.
ನಿಮ್ಮಲ್ಲಿರುವ ನಕಾರಾತ್ಮಕ ಭಾವನೆಯನ್ನು ತೆಗೆದು ಹಾಕಿ, ಸಕರಾತ್ಮಕ ಭಾವನೆ ರೂಢಿಸಿಕೊಳ್ಳಿ.  ಉತ್ತೀರ್ಣನಾಗುತ್ತೇನೆಂಬ ಆತ್ಮ ವಿಶ್ವಾಸದಿಂದ ಅಭ್ಯಾಸ ಮಾಡಿ.
 ಈವರೆಗೆ ಶಾಲಾ ಹಂತದಲ್ಲಿ ನಡೆದಿರುವ ಎಲ್ಲಾ ಪ್ರಶ್ನೆ ಪತ್ರಿಕೆಗಳನ್ನು ಒಮ್ಮೆ ತಿರುವಿ ಹಾಕಿ.  ಆ ಪ್ರಶ್ನೆ ಪತ್ರಿಕೆಗಳಲ್ಲಿ ಯಾವ ಪ್ರಶ್ನೆಗೆ ಉತ್ತರಿಸಲು ಸಾಧ್ಯವಿಲ್ಲವೋ ಅಂತಹ ಪ್ರಶ್ನೆಗಳನ್ನು ಪಟ್ಟಿ ಮಾಡಿಕೊಂಡು ಅವುಗಳಿಗೆ ಉತ್ತರಿಸುವ ಪ್ರಯತ್ನ ಮಾಡಿ. 
ಭಾಷಾ ವಿಷಯಗಳಲ್ಲಿ ಉತ್ತರಿಸುವಾಗ ವಾಕ್ಯ ರಚನೆ ಉತ್ತಮವಾಗಿರಲಿ.  ಕಾಗುಣಿತ ತಪ್ಪುಗಳಾಗದಂತೆ ಎಚ್ಚರವಹಿಸಿ.  ಲೇಖನ ಚಿಹ್ನೆಗಳತ್ತಲೂ ಗಮನಹರಿಸಿ.  ಇದರಿಂದ 100 ಕ್ಕೆ 100 ರಷ್ಟು ಅಂಕಗಳಿಸಲು ಸಾಧ್ಯವಾಗುತ್ತದೆ.
ಕಠಿಣ ವಿಷಯಗಳಾದ ಇಂಗ್ಲೀಷ್,  ಗಣಿತ ಹಾಗೂ ವಿಜ್ಞಾನ ವಿಷಯಗಳಿಗೆ ಹೆಚ್ಚಿನ ಒತ್ತು ನೀಡಿ.  ನಿರಂತರ ಅಭ್ಯಾಸದಿಂದ ಈ ವಿಷಯಗಳು ಸುಲಭವೆನಿಸುತ್ತದೆ.
ಗಣಿತ ವಿಷಯಕ್ಕೆ ಅಭ್ಯಾಸ ಬಹಳ ಮುಖ್ಯ.  ಸೂತ್ರಗಳನ್ನು ನೆನಪಿಸಿಕೊಂಡು ತಪ್ಪಿಲ್ಲದೆ ಬರೆಯುವುದನ್ನು ಅಭ್ಯಾಸ ಮಾಡಿ.  ಪ್ರತಿಯೊಂದು ಅಭ್ಯಾಸದಲ್ಲಿರುವ ಸಮಸ್ಯೆಗಳನ್ನು ಬರೆದುಕೊಂಡು ಸ್ವತಃ ಬಿಡಿಸುವ ಸಾಮಥ್ರ್ಯ ಬೆಳೆಸಿಕೊಳ್ಳಿ.
ಗಣಿತದಲ್ಲಿನ ಸಮಸ್ಯೆಗಳನ್ನು ಬಿಡಿಸುವಾಗ ಪ್ರತಿಯೊಂದು ಹಂತಕ್ಕೂ ಅಂಕಗಳಿರುವುದರಿಂದ ಪರೀಕ್ಷೆಯಲ್ಲಿ ಯಾವುದೇ ಲೆಕ್ಕವನ್ನು ಬಿಡಸದೇ ಬಿಡಬೇಡಿ.  ನಿಮಗೆ ಯಾವ ಹಂತದವರೆಗೆ ಬಿಡಸಲು ಸಾಧ್ಯವೋ ಅಷ್ಟನ್ನಾದರೂ ಪ್ರಯತ್ನಿಸಿ.
ಪರೀಕ್ಷೆಗಳು ದಿನಾಂಕ 30.03.2017 ರಿಂದ 12.04.2017ರ ವರೆಗೆ ನಡೆಯಲಿದ್ದು ಈ ಅವಧಿಯಲ್ಲಿ ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ.  ಬೇಸಿಗೆ ಕಾಲವಾದ್ದರಿಂದ ನಿರ್ಜಲೀಕರಣ ಉಂಟಾಗುವ ಸಾಧ್ಯತೆ ಇರುತ್ತದೆ.  ಶುದ್ಧವಾದ ನೀರನ್ನು ಕುಡಿಯಿರಿ. ಯಾವುದೇ ಗೊಂದಲ ಅಥವಾ ಗಾಬರಿಗೊಳಗಾಗದೆ ನಿಶ್ಚಲ ಮನಸ್ಸಿನಿಂದ ಪರೀಕ್ಷೆ ಬರೆದರೆ ಖಂಡಿತ ಯಶಸ್ಸು ಸಿಗುತ್ತದೆ ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಡಿಡಿಪಿಐ ಡಾ.ಡಿ.ವಿ.ಕಾಂತ, ಇಒ ಮಾಧವರೆಡ್ಡಿ, ವಿಷಯ ಪರಿವೀಕ್ಷಕರಾದ ಹೆಚ್.ವೆಂಕಟಸ್ವಾಮಿ, ಸಿ.ಆರ್.ಅಶೋಕ್, ರಾಜಣ್ಣ, ಬಾಬುಜನಾರ್ಧನನಾಯ್ಡು, ಮಲ್ಲಿಕಾರ್ಜುನಾಚಾರಿ, ನರಸಿಂಹರೆಡ್ಡಿ,ದೈಹಿಕ ಶಿಕ್ಷಣಾಧಿಕಾರಿ ನಾರಾಯಣಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಿ.ಜಗದೀಶ್, ಸುಬ್ರಹ್ಮಣ್ಯಂ,ದೇವರಾಜ್, ಜಯರಾಜ್, ವೆಂಕಟರಾಮರೆಡ್ಡಿ, ರಾಘವೇಂದ್ರ ಗುಣಾತ್ಮಕ ಫಲಿತಾಂಶದ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ತರುವಂತೆ ಶುಭ ಹಾರೈಸಿದ್ದಾರೆ ಎಂದು ತಿಳಿಸಿದ್ದಾರೆ.

ಕೋಲಾರ ಜಿಲ್ಲಾ ಎಸ್ಸೆಸ್ಸೆಲ್ಸಿ ನೋಡೆಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್.

ಕೋಲಾರ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ದತೆ ನಡೆದಿದೆ.(ಸಾಂದರ್ಭಿಕ ಚಿತ್ರ)

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...