ಕೋಲಾರ:ಜಿಲ್ಲೆಯಾದ್ಯಂತ ನಿರೀಕ್ಷೆಗಿಂತ ಉತ್ತಮ ಮಳೆ-ಸಾಮಾಜಿಕ ಅರಣ್ಯ ಅಭಿವೃದ್ಧಿಗೆ ಇದು ಸಕಾಲ-ಕಾವೇರಿ

Source: shabbir | By Arshad Koppa | Published on 12th October 2017, 8:06 AM | State News |

ಕೋಲಾರ ಜಿಲ್ಲೆಯಾದ್ಯಂತ ನಿರೀಕ್ಷೆಗಿಂತ ಉತ್ತಮ ಮಳೆಯಾಗಿದ್ದು ಬಹುತೇಕ ಕೆರೆಗಳು ತುಂಬಿವೆ. ಮೀನುಗಾರಿಕೆ ಹಾಗೂ ಸಾಮಾಜಿಕ ಅರಣ್ಯ ಅಭಿವೃದ್ಧಿಗೆ ಇದು ಸಕಾಲ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ ಬಿ ಕಾವೇರಿ ಅವರು ಅಭಿಪ್ರಾಯ ಪಟ್ಟರು. 


ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅಧ್ಯಕ್ಷೆ ಗೀತಮ್ಮ ಆನಂದರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಮಾಸಿಕ ಪ್ರಗತಿ ಪರಿಶಿಲನಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಜಿಲ್ಲೆಯಲ್ಲಿ ಶೇ. 41.17 ರಷ್ಟು ಅಧಿಕ ಮಳೆಯಾಗಿ 395 ಕೆರೆಗಳು ಕೋಡಿ ಹರಿದಿದ್ದು, ಸುಮಾರು 547 ಕೆರೆಗಳು ಶೇ. 90ರಷ್ಟು ತುಂಬಿಕೊಂಡಿವೆ. ಈ ನೀರು ವಿನಾಕಾರಣ ಪೋಲಾಗದಂತೆ ಎಚ್ಚರ ವಹಿಸಬೇಕು ಎಂದು ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.


ಇದೇ ಸಂದರ್ಭದಲ್ಲಿ ತುಂಬಿರುವ ಕೆರೆಗಳಲ್ಲಿ ಮೀನುಗಾರಿಕೆಗೆ ಉತ್ತಮ ಬೇಡಿಕೆ ಬರುವ ನಿರೀಕ್ಷೆ ಇರುವುದರಿಂದ ಮೀನುಮರಿಗಳನ್ನು ಸಿದ್ದವಾಗಿರಿಸಿಕೊಳ್ಳುವಂತೆ ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ ಅವರು ಸೂಚಿಸಿದರು. ಬೇತಮಂಗಲ ಹಾಗೂ ಬೂದಿಕೋಟೆಯಲ್ಲಿ ಮೀನುಮರಿ ಉತ್ಪಾದನಾ ಕೇಂದ್ರಗಳಿದ್ದು, ಹೆಚ್ಚಿನ ಬೇಡಿಕೆ ಬಂದಲ್ಲಿ ಶಿವಮೊಗ್ಗದಿಂದ ತರಿಸಿಕೊಳ್ಳಲಾಗುವುದೆಂದು ಮಾಲೂರು ತಾಲ್ಲುಕು ಮೀನುಗಾರಿಕಾ ಅಧಿಕಾರಿ ತಿಳಿಸಿದರು.
ತೋಟಗಾರಿಕೆ, ರೇಷ್ಮೆ ಹಾಗೂ ಸಾಮಾಜಿಕ ಅರಣ್ಯ ಇಲಾಖೆಗಳು ಸಮನ್ವಯದಿಂದ ನೀಲಗಿರಿ ತೆರವುಗೊಳಿಸಿ ನರೇಗಾ ಅಡಿ ಹಿಪ್ಪುನೇರಳೆ ಹಾಗೂ ಇತರೆ ದೇಸೀ ತಳಿಗಳ ಸಸಿಗಳನ್ನು ನೆಡಲು ಇದು ಸೂಕ್ತ ಸಮಯವಾಗಿದೆ ಎಂದ ಅವರು ಈ ಬಗ್ಗೆ ಕೂಡಲೆ ಕಾರ್ಯಪ್ರವೃತ್ತರಾಗಲು ಸಂಬಂದಿಸದ ಇಲಾಖಾ ಅಧಿಕಾರಿಗಳಿಗೆ ಸುಚಿಸಿದರು.
ರಾಗಿ ತೆನೆ ಬಾರದ ಬಗ್ಗೆ ಕಾರಣ ತಿಳಿಯಲು ಇನ್ನೆರಡು ವಾರಗಳಲ್ಲಿ ಬೆಂಗಳೂರಿನಿಂದ ವಿಜ್ಞಾನಿಗಳ ತಂಡ ಮತ್ತೆ ಭೇಟಿ ನೀಡಿ ಬೆಳೆ ಹಾನಿ ಹಾಗೂ ಅದರ ಕಾರಣದ ಬಗ್ಗೆ ವರದಿ ಸಲ್ಲಿಸಲಿದೆ, ಅದರಂತೆ ಸರ್ಕಾರಕ್ಕೆ ಪರಿಹಾರಕ್ಕಾಗಿ ಪತ್ರ ಬರೆಯಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕ ಶಿವಕುಮಾರ್ ಅವರು ಸಭೆಗೆ ಮಾಹಿತಿ ನೀಡಿದರು. 
ರಾಜಕಲ್ಲಳ್ಳಿ ಹಾಗೂ ಇತರೆ ಪ್ರದೇಶಗಳಲ್ಲಿ ವ್ಯಾಪಕ ಕೀಟಬಾಧೆಗೆ ಒಳಗಾಗಿದ್ದ ತಾಕುಗಳಲ್ಲಿ ಸತತ 8ರಿಂದ 10 ದಿನಗಳು ಕ್ಷೇತ್ರಗಳಲ್ಲಿ ಜಾಗೃತಿ ಮೂಡಿಸಲಾಗಿದ್ದು, ಸಾಮೂಹಿಕ ಔಷಧಿ ಸಿಂಪರಣೆಯಿಂದಾಗಿ, ಪೂರ್ಣ ಹತೋಟಿ ಸಾಧಿಸಲಾಗಿದ್ದು, ಶೇ. 95 ರಷ್ಟು ಉತ್ತಮ ತೆನೆ ಬಂದಿದೆ ಎಂದು ಅವರು ತಿಳಿಸಿದರು. ಈ ಬಗ್ಗೆ ಗ್ರಾಮ ಪಂಚಾಯತಿ ಮಟ್ಟದಲ್ಲಿ ಕೀಟ ನಾಶಕಗಳ ಬಗ್ಗೆ ಸೂಕ್ತ ಮಾಹಿತಿ ನೀಡಿ. ಪಶು ಸಂಗೋಪನೆ ಹಾಗೂ ರೇಷ್ಮೆ ಬೆಳೆಗಳಿಗೆ ಇದರಿಂದ ಹಾನಿಯಾಗದಂತೆ ನೋಡಿಕೊಳ್ಳಲು ಕರಪತ್ರಗಳನ್ನು ಮುದ್ರಿಸಿ ರೈತರಿಗೆ ವಿತರಿಸಿ ಜೊತೆಗೆ ಜಾಗೃತಿ ಮೂಡಿಸುವಂತೆ  ಕಾವೇರಿಯವರು ತಿಳಿಸಿದರು.
ಸತತ ಮಳೆಯಿಂದಾಗಿ ಕೆಲವೆಡೆ ಬೆಳೆ ಹಾನಿಗೊಳಗಾಗಿದ್ದು, ಈ ಬಗ್ಗೆ ಪರಿಹಾರಕ್ಕಾಗಿ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಬೆಳೆ ಹಾನಿ ಬಗ್ಗೆ ಮಾಹಿತಿ ಸಂಗ್ರಹಿಸಿ ಜಿಲ್ಲಾಡಳಿತದ ಗಮನಕ್ಕೆ ತರುವಂತೆ ಕೃಷಿ ಜಂಟಿ ನಿರ್ದೇಶಕರಿಗೆ ಸೂಚಿಸಿದರು. 
ತೋಟಗಾರಿಕೆ ಬೆಳೆಗಳಿಗೆ ನೀರು ಪೂರೈಕೆಗೆ ರೈತರಿಗೆ ಟ್ಯಾಂಕರ್‍ಗಳ ಖರೀದಿಗೆ ಸಹಾಯಧನ ನೀಡುವ ಕಾರ್ಯಕ್ರಮವನ್ನು ತೋಟಗಾರಿಕೆ ಇಲಾಖೆಯಲ್ಲಿ ನೂತನವಾಗಿ ಅಳವಡಿಸಲಾಗಿದೆ ಎಂದು ಸಭೆಗೆ ತೋಟಗಾರಿಕೆ ಉಪನಿರ್ದೇಶಕ ಕೃಷ್ಣಮೂರ್ತಿ  ತಿಳಿಸಿದರು. 4000 ಲೀಟರ್ ಕ್ಷಮತೆಯ ಒಂದು ಟ್ಯಾಂಕರ್ ಗೆ 1.00 ಲಕ್ಷ ರೂಗಳಾಗುತ್ತದೆ ಎಂದ ಅವರು ಯೋಜನೆಯ ಫಲಾನುಭವಿಗಳ ಅರ್ಹತೆ ಬಗ್ಗೆ ಸಭೆಗೆ ವಿವರಿಸಿದರು. ಜಿಲ್ಲೆಗೆ ಒಟ್ಟು 80 ಫಲಾನುಭವಿಗಳ ಗುರಿ ನೀಡಲಾಗಿದ್ದು ಈಗಾಗಲೇ 200 ಕ್ಕೂ ಹೆಚ್ಚು ಅರ್ಜಿಗಳು ಬಂದಿರುವುದಾಗಿ ಅವರು ತಿಳಿಸಿದರು.
ಪಶುಸಂಗೋಪನೆ ಇಲಾಖೆಯಿಂದ ವಿತರಿಸಲಾಗಿದ್ದ ಮಿನಿಕಿಟ್‍ಗಳಿಂದ ಬೆಳೆದಿರುವ ಹಸಿರು ಮೇವು ಇನ್ನು 6 ತಿಂಗಳಿಗೆ ಸಾಕಾಗುವಷ್ಟು ಲಭ್ಯವಿದೆ ಎಂದು ಉಪನಿರ್ದೇಶಕರು ತಿಳಿಸಿದರು.
ಸರ್ಕಾರಿ ಶಾಲೆಗಳನ್ನು ಬಲಪಡಿಸಲು, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗಾಗಿ ದಸರೆ ರಜೆಯ ಸಂದರ್ಭದಲ್ಲಿ 25 ದಿನಗಳ ವಿಶೇಷ ಯೋಜನೆ ‘ವಿಶ್ವಾಸಕಿರಣ’ ಶಿಕ್ಷಣ ಇಲಾಕೆಯು ಹಮ್ಮಿಕೊಂಡಿದ್ದು, ವಿಶೇಷ ತರಗತಿಗಳನ್ನು ನಡೆಸಲಾಘುವುದು ಎಂದು ಸಾರ್ವಜನಿಕ ಶಿಕಷಣಾಧಿಕಾರಿ ತಿಳಿಸಿದರು. 10ನೇ ತರಗತಿ ಫಲಿತಾಂಶವು ಉತ್ತಮವಾಗಿ ಬರುವಂತೆ ನೋಡಿಕೊಳ್ಳಲು ಈಗಾಗಲೆ ಕಾರ್ಯಪ್ರವೃತ್ತವಾಗಿರುವ ಇಲಾಖೆಯು ಅಗತ್ಯ ಸಿದ್ದತೆಗಾಗಿ ತಾಲ್ಲೂಕುವಾರು ಪ್ರಾಂಶುಪಲರ ಸಭೆಗಳನ್ನು ನಡೆಸುತ್ತಿದೆ ಎಂದು ಅವರು ತಿಳಿಸಿದರು.
ಸತತ ಮಳೆಯಿಂದಾಗಿ ಕೆಲವು ಶಿಥಿಲಗೊಂಡಿರುವ ಶಾಲೆಗಳು ಕುಸಿದ್ದಿದ್ದು ವಿದ್ಯಾರ್ಥಿಗಳಿಗೆ ಅಪಾಯಕಾರಿ ಹಾಗೂ ಆತಂಕಕಾರಿ ಸಂಗತಿಯಾಗಿದ್ದು, ಈ ರೀತಿ ಶಿಥಿಲಗೊಂಡಿರುವ ಶಾಲಾ ಕಟ್ಟಡಗಳು ಇದ್ದಲ್ಲಿ ಅವುಗಳನ್ನು ಗುರುತಿಸಿ, ಅಂತಹ ಕಟ್ಟಡಗಳಲ್ಲಿ ತರಗತಿ ನಡೆಸದಂತೆ ಕ್ರಮ ಕೈಗೊಳ್ಳಬೇಕೆಂದು ಜಿ. ಪಂ ಅಧ್ಯಕ್ಷೆ ಸೂಚಿಸಿದರು. ಜಿಲ್ಲೆಯ ಅಂಗನವಾಡಿ ಕೇಂದ್ರಗಳೂ ಸಹ ಕೆಲವೆಡೆ ಶಿಥಿಲಗೊಂಡಿದ್ದು, ಅಂತಹ ಕಟ್ಟಡಗಳಲ್ಲಿ ಅಂಗನವಾಡಿ ನಡೆಸದಿರುವಂತೆ ಸೂಚಿಸಿದರು. 
ಸಮಾಜಕಲ್ಯಾಣ ಇಲಾಖೆಯಿಂದ ಕೆಲವು ವರ್ಷಗಳಿಂದ ವಿದ್ಯಾರ್ಥಿವೇತನ ನೀಡುವಲ್ಲಿ ಬಹಳ ವಿಳಂಬವಾಗುತ್ತಿದ್ದು, ಈ ಬಗ್ಗೆ ತುರ್ತು ಕ್ರಮ ವಹಿಸುವಂತೆ ಕಾವೇರಿ ಅವರು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಯಣ್ಣ ಅವರಿಗೆ ಸೂಚಿಸಿದರು. ಅಲ್ಲದೇ, ವಿದ್ಯಾರ್ಥಿನಿಲಯಗಳಲ್ಲಿ ಮಕ್ಕಳಿಗೆ ಸ್ನಾನ ಮಾಡಲು ಬಿಸಿ ನೀರು ಒದಗಿಸಲಾಗುತ್ತಿದೆಯೆ ಎಂಬ ಬಗ್ಗೆ ಅಂಕಿ ಅಂಶ ಸಮೇತ ವರದಿಯನ್ನು ಸಲ್ಲಿಸುವಂತೆ ಸೂಚಿಸಿದರು.
ಸಭೆಯಲ್ಲಿ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟೇಶ್ ಹಾಗೂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ನಂಜುಂಡಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.


ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ.
 

Read These Next