ಕೋಲಾರ:ರಾಜ್ಯ ಸರ್ಕಾರಿ ನೌಕರರ ರಾಜ್ಯ ಕ್ರೀಡಾಕೂಟಕ್ಕೆ ಮಾರ್ಗದರ್ಶನ-ಕ್ರೀಡಾನಿಯಮ ಪಾಲಿಸಿ ಜಿಲ್ಲೆಗೆ ಕೀರ್ತಿ ತನ್ನಿ-ಕೆ.ಎನ್.ಮಂಜುನಾಥ್

Source: shabbir ahmed | By Arshad Koppa | Published on 15th January 2017, 9:48 AM | Sports News |

ಕೋಲಾರ:- ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ನೌಕರರು ಶಿಸ್ತು,ಕ್ರೀಡಾ ನಿಯಮಗಳ ಪಾಲನೆಗೆ ಒತ್ತು ನೀಡುವ ಮೂಲಕ ಜಿಲ್ಲೆಗೆ ಕೀರ್ತಿ ತನ್ನಿ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್.ಮಂಜುನಾಥ್ ಕರೆ ನೀಡಿದರು.

ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಜ.20 ರಂದು ನಡೆಯಲಿರುವ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ತೆರಳಲಿರುವ ನೌಕರ ಕ್ರೀಡಾಪಟುಗಳಿಗಾಗಿ ಏರ್ಪಡಿಸಿದ್ದ ಮಾರ್ಗದರ್ಶನ ಕಾರ್ಯಾಗಾರದಲ್ಲಿ ಅವರು ಮಾತನಾಡುತ್ತಿದ್ದರು.

ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ ನೌಕರ ಕ್ರೀಡಾಪಟುಗಳು ಜ.19 ರಂದೇ ಸಂಜೆ 5 ಗಂಟೆಯೊಳಗೆ ವರದಿ ಮಾಡಿಕೊಳ್ಳಿ ಎಂದ ಅವರು, ತೆರಳುವಾಗ ನಿಮ್ಮ ಇಲಾಖೆ ಮುಖ್ಯಸ್ಥರಿಂದ ಬಿಡುಗಡೆ ಪತ್ರ ಪಡೆದುಕೊಳ್ಳಿ ಎಂದರು.

ಜಿಲ್ಲಾ ನೌಕರರ ಸಂಘ, ಇಲಾಖೆ ಮುಖ್ಯಸ್ಥರು ಅಥವಾ ಯುವಜನ ಸೇವಾ ಇಲಾಖೆಯಿಂದ ದೃಢಿಕರಿಸಿದ ಭಾವಚಿತ್ರ ಇರುವ ಗುರುತಿನ ಚೀಟಿ ತಪ್ಪದೇ ಕೊಂಡೊಯ್ಯಬೇಕು ಎಂದು ತಿಳಿಸಿದರು.

ಬೆಳಗ್ಗೆ 10 ಗಂಟೆಗೆ ನೆಹರು ಕ್ರೀಡಾಂಗಣದಲ್ಲಿ ನಡೆಯುವ ಕ್ರೀಡಾ ಪಥಸಂಚಲನಕ್ಕೆ ಜಿಲ್ಲೆಯ ಕ್ರೀಡಾಪಟುಗಳು ತಪ್ಪದೇ ಹಾಜರಾಗುವ ಮೂಲಕ ಕೋಲಾರ ಜಿಲ್ಲೆಯ ಘನತೆಗೆ ಕುಂದು ಬಾರದಂತೆ ನಡೆದುಕೊಳ್ಳಿ ಎಂದು ಕಿವಿಮಾತು ಹೇಳಿದರು.

ನಿರಂತರ ಅಭ್ಯಾಸಕ್ಕೆ ಕ್ರೀಡಾಪಟುಗಳಿಗೆ ಕರೆ

ಈಗಾಗಲೇ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಗೆಲುವು ಸಾಧಿಸಿರುವ ನೌಕರರು ರಾಜ್ಯಮಟ್ಟದಲ್ಲಿ ಪಾಲ್ಗೊಳ್ಳಲು ಉಳಿದಿರುವ ಕಾಲಾವಧಿಯಲ್ಲಿ ನಿರಂತರ ಅಭ್ಯಾಸದ ಮೂಲಕ ಗೆಲುವು ಸಾಧಿಸುವ ಪ್ರಯತ್ನ ನಡೆಸಿ ಎಂದರು.

ಕ್ರೀಡಾಕೂಟದಲ್ಲಿ ಗೆಲುವು ನಿಮ್ಮ ಗುರಿಯಾಗಿರಲಿ ಆದರೆ ಎಲ್ಲೂ ಕ್ರೀಡಾನಿಯಮ ಉಲ್ಲಂಘಿಸುವ ಪ್ರಯತ್ನ ನಡೆಸಬಾರದು, ಜಿಲ್ಲೆಗೆ ಹೆಚ್ಚಿನ ಪ್ರಶಸ್ತಿಗಳನ್ನು ತಂದುಕೊಡಬೇಕು ಎಂದ ಅವರು, ಸ್ನೇಹ,ಸೌಹಾರ್ದತೆಗೆ ಒತ್ತು ನೀಡಿ,ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಎಂದರು.
ಜಿಲ್ಲಾ ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕಿ ಗೀತಾ, ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ನೌಕರರಿಗೆ ಇಲಾಖೆಯಿಂದ ಭಾವಚಿತ್ರ ದೃಢೀಕರಿಸಿದ ಗುರುತಿನ ಚೀಟಿ ನೀಡುತ್ತಿದ್ದು, ಪಡೆದುಕೊಳ್ಳಲು ಮನವಿ ಮಾಡಿದರು.
ಕ್ರೀಡಾಳುಗಳು ತಮ್ಮ ಅಭ್ಯಾಸ ಅಥವಾ ತರಬೇತಿಗೆ ಅಗತ್ಯವಾದ ಕ್ರೀಡಾಪರಿಕರಗಳನ್ನು ಒದಗಿಸುವುದಾಗಿ ಅವರು ಭರವಸೆ ನೀಡಿದರು.
ಜಿಲ್ಲಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಬಿ.ಅಶೋಕ್,ಖಜಾಂಚಿ ಎಸ್.ಚೌಡಪ್ಪ, ದೈಹಿಕ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಇ.ಶ್ರೀನಿವಾಸಗೌಡ ಕ್ರೀಡಾಪಟುಗಳಿಗೆ ಶುಭ ಕೋರಿ, ರಾಜ್ಯಮಟ್ಟಕ್ಕೆ ಹೋಗುವ ಮುನ್ನಾ ಯಾರಿಗಾದರೂ ತರಬೇತಿ, ಕ್ರೀಡೆಯ ನಿಯಮಗಳ ಕುರಿತು ಅರಿವು ಬೇಕಿದ್ದಲ್ಲಿ ನೀಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಬಸವರಾಜ ಚಿಲಕಾಂತಮಠ್, ನೌಕರರ ಸಂಘದ ಪತ್ರಿಕಾ ಕಾರ್ಯದರ್ಶಿ ಸಿ.ಎಲ್.ಶ್ರೀನಿವಾಸಲು, ಸಂಘಟನಾ ಕಾರ್ಯದರ್ಶಿ ಎಂ.ಎನ್.ಶ್ರೀನಿವಾಸಮೂರ್ತಿ ಮತ್ತಿತರರಿದ್ದರು. 

 

Read These Next

ಐಸಿಎಸ್‍ಇ ರಾಷ್ಟ್ರೀಯ ಕಬಡ್ಡಿ; ರಾಜ್ಯ ತಂಡವನ್ನು ಪ್ರತಿನಿಧಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ

ಭಟ್ಕಳ; ಇತ್ತಿಚೆಗೆ ತಮಿಳುನಾಡಿನಲ್ಲಿ ಜರಗಿದ ಐಸಿಎಸ್‍ಇ ಶಾಲಾ ತಂಡಗಳ ರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿಯಲ್ಲಿ ರಾಜ್ಯವನ್ನು ...