ಕೋಲಾರ:ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತರ ಅಭಿವೃದ್ಧಿ ಯೋಜನೆ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಪೂರ್ವಾಭಾವಿ ಸಭೆ

Source: shabbir | By Arshad Koppa | Published on 25th April 2017, 8:08 AM | State News |

ಕೋಲಾರ, ಏಪ್ರಿಲ್ 24 :    ಕರ್ನಾಟಕ ವಿಧಾನ ಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯು ಏ.26 ರಂದು ಬೆಳಗ್ಗೆ 10.30 ಗಂಟೆಗೆ ನಗರದ ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ಸಭೆ ಸೇರಿ, ಜಿಲ್ಲೆಯ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಜನಾಂಗದವರ ಅಭಿವೃದ್ಧಿಗಾಗಿ ಸರ್ಕಾರ ರೂಪಿಸಿರುವ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸುವರು. 
    ಇದಕ್ಕೆ ಪೂರಕವಾಗಿ ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕ್ ಚಂದ್ರ ಅವರು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸೋಮವಾರ ಪೂರ್ವಭಾವಿ ಸಭೆಯನ್ನು ನಡೆಸಿದರು. ನಗರದ ಜಿಲ್ಲಾಧಿಕಾರಿಗಳ ನ್ಯಾಯಾಂಗ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕ್ ಚಂದ್ರ ಅವರು ಇಲಾಖಾವಾರು ಮಾಹಿತಿ ಪಡೆದರು. 
    ಪೂರ್ವಭಾವಿ ಸಭೆಗೆ ಎಲ್ಲರನ್ನೂ ಕರೆಯಬೇಕು. ಅದನ್ನು ಬಿಟ್ಟು ಏಕೆ ಕೆಲವರನ್ನು ಕರೆದು ಕೆಲವರನ್ನು ಬಿಟ್ಟಿದ್ದೀರಲ್ಲ. ಸಭೆಯು ಕೇವಲ ಇನ್ನು ಒಂದು ದಿನ ಮಾತ್ರ ಬಾಕಿ ಉಳಿದಿದೆ. ಹೀಗಿರುವಾಗ ಅವರು ಮಾಡಿರುವ ಸಾಧನೆ ಬಗ್ಗೆ ನಮಗೆ ಮಾಹಿತಿ ಬೇಡವೇ?. ಜಿಲ್ಲಾ ಪಂಚಾಯತ್‍ನಲ್ಲಿ ನಡೆಯುವ ಸಭೆಯಲ್ಲಿ ಅವರು ಹೇಳುತ್ತಿದ್ದರೆ ನಾವು ಸುಮ್ಮನೆ ಕುಳಿತುಕೊಳ್ಳಬೇಕೆ? ಕೂಡಲೇ ವಕ್‍ಬೋರ್ಡ್‍ನವರನ್ನು ಕರೆಯಿಸಿ ಎಂದು ಬಿ.ಸಿ.ಎಂ.ನ ಜಿಲ್ಲಾ ಅಧಿಕಾರಿಗೆ ಸೂಚಿಸಿದರು. 
    ಜಿಲ್ಲಾ ಬಿ.ಸಿ.ಎಂ ಅಧಿಕಾರಿ ಮಹಾದೇವಯ್ಯ ಅವರು ಮಾತನಾಡಿ, ಜಿಲ್ಲೆಯಲ್ಲಿ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರ ಬಿ.ಸಿ.ಎಂ ಹಾಸ್ಟೆಲ್‍ಗಳಿಗೆ 3117 ಮಂದಿ ದಾಖಲಾಗಿದ್ದಾರೆ. ಒಟ್ಟು 5055 ಮಂದಿಯು ಹಾಸ್ಟೆಲ್‍ಗಳಲ್ಲಿ ದಾಖಲಿಸಿಕೊಳ್ಳಬಹುದಾಗಿದೆ. 2 ಅನುಧಾನಿತ ವಿದ್ಯಾರ್ಥಿ ನಿಲಯಗಳಿವೆ. ಮೊರಾರ್ಜಿ ದೇಸಾಯಿ ಶಾಲೆಗಳು 4 ಇದೆ ಎಂದು ತಿಳಿಸಿದರು. 
    ದೇವರಾಜು ಅಭಿವೃದ್ಧಿ ನಿಗಮದ ಕುರಿತು ಚರ್ಚಿಸಲಾಗಿ 2015-16 ನೇ ಸಾಲಿನ ಹೈನುಗಾರಿಕೆಯ ಬಗ್ಗೆ ಏಕೆ ಯಾವುದೇ ಮಾಹಿತಿ ಇದರಲ್ಲಿ ಬರೆದಿಲ್ಲ. ಹೈನುಗಾರಿಕೆಯನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳುತ್ತಾರಲ್ಲ ಎಂದು ಜಿಲ್ಲಾಧಿಕಾರಿಗಳು ಕೇಳಿದರು. ಇದಕ್ಕೆ ಧ್ವನಿಗೂಡಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ ಅವರು, ನಿಗಮದ ವತಿಯಿಂದ ಹೈನುಗಾರಿಕೆಗೆ ಎಷ್ಟು ಸಬ್‍ಸಿಡಿ ನೀಡಲಾಗುತ್ತದೆ ಎಂದಾಗ ಇದಕ್ಕೆ ಪ್ರತಿಕ್ರಿಯಿಸಿದ ದೇವರಾಜು ಅಭಿವೃದ್ಧಿ ನಿಮಗದ ಅಧಿಕಾರಿ, ಸುಮಾರು 10 ಸಾವಿರ ರೂಗಳು ಮಾತ್ರ ಸಭ್‍ಸಿಡಿ ನೀಡಲಾಗುತ್ತದೆ ಎಂದು ಸಭೆಗೆ ಮಾಹಿತಿ ನೀಡಿದರು. 
    ಅದೇ ರೀತಿ ಗಂಗಾ ಕಲ್ಯಾಣ ಯೋಜನೆಗಳ ಬಗ್ಗೆಯೂ ಸೂಕ್ತ ಮಾಹಿತಿಯನ್ನು ನೀಡಿಲ್ಲ. ಇದನ್ನು ಹೆಚ್ಚಿನ ಕಾಳಜಿ ವಹಿಸಿ ಮಾಡಬೇಕು. ಸ್ಥಳ ಪರಿಶೀಲನೆ ಮಾಡಿ ಸಂಪೂರ್ಣ ಮಾಹಿತಿಯನ್ನು ನೀಡಿ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕ್ ಚಂದ್ರ ಅವರು ದೇವರಾಜು ಅಭಿವೃದ್ಧಿ ನಿಗಮದ ಅಧಿಕಾರಿಗೆ ನಿರ್ದೇಶನ ನೀಡಿದರು. 
    ವಕ್‍ಬೋರ್ಡ್ ಅಧ್ಯಕ್ಷ ಇಕ್ಬಾಲ್ ಮಾತನಾಡಿ, ಮುಳಬಾಗಿಲಿನ ದರ್ಗಾದಲ್ಲಿ ಸುಮರು 130 ಅಂಗಡಿಗಳಿವೆ. ಒಂದು ಅಂಗಡಿಯನ್ನು ಪಡೆದ ಅವನು ಇದೀಗ ಎಲ್ಲಾ ಅಂಗಡಿಗಳ ಬಳಿಯೂ ಅವನೇ ಬಾಡಿಗೆ ವಸೂಲಿ ಮಾಡುತ್ತಿದ್ದಾನೆ. ಕೇಳಲು ಹೋದರೆ ನಮ್ಮ ಮೇಲೆ ಗಲಾಟೆ ಮಾಡುತ್ತಾನೆ. ಪೊಲೀಸ್ ಇಲಾಖೆಯು ನಮಗೆ ಸಹಕಾರ ನೀಡಿದರೆ ಕೂಡಲೇ ಅವುಗಳನ್ನು ನಾವು ಸರ್ಕಾರದ ವಶಕ್ಕೆ ಪಡೆದುಕೊಳ್ಳುತ್ತೇವೆ ಎಂದರು. 
    ಶ್ರೀನಿವಾಸಪುರದಲ್ಲಿಯೂ ಸಹ ವಕ್‍ಬೋರ್ಡ್‍ಗೆ ಸಂಬಂದಿಸಿದ 22 ಎಕರೆ ಭೂಮಿ ಇದೆ. ಈ ಭೂಮಿಗೆ ಒಬ್ಬ ನಕಲಿ ದಾಖಲಿಗಳನ್ನು ಸೃಷ್ಠಿಸಿಕೊಂಡಿದ್ದಾನೆ. ಅಷ್ಟೇ ಅಲ್ಲದೆ ಅದನ್ನು ತನ್ನದೇ ಎಂದು ನಂಬಿಸಿ ಅಲ್ಲಿನ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್‍ನಲ್ಲಿ 
2.5 ಲಕ್ಷ ಸಾಲವನ್ನು ಪಡೆದಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೇಸ್ ಮಾಡಲಾಗಿದೆ ಎಂದಾಗ ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಕೂಡಲೇ ಪೊಲೀಸ್ ಸಹಕಾರ ಪಡೆದು ವಕ್‍ಬೋರ್ಡ್‍ಗೆ ಸಂಬಂಧಿಸಿದ ಸ್ಥಳವನ್ನು ತಮ್ಮ ವಶಕ್ಕೆ ಪಡೆದುಕೊಳ್ಳಿ ಎಂದು ಸೂಚಿಸಿದರು. 
    ಕೋಲಾರ ಮತ್ತು ಮುಳಬಾಗಿಲಿಗೆ ಸಂಬಂಧಿಸಿದಂತೆ ಸ್ಥಳ ಆಯ್ಕೆ ಮಾಡಲಾಗಿದೆ. ಆದರೆ ಇದಕ್ಕೆ ದಾಖಲೆಯಲ್ಲಿ ಬಾಡಿಗೆ ಎಂದು ತೋರಿಸಿದ್ದೀರಲ್ಲ ಎಂದು ಪ್ರಶ್ನಿಸಲಾಗಿ ಇದಕ್ಕೆ ಪ್ರತಿಕ್ರಿಯಿಸಿದ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಸೋಮು, ಮುಳಬಾಗಿಲು ಮತ್ತು ಕೋಲಾರದಲ್ಲಿ ಸ್ಥಳವನ್ನು ನೀಡಿದೆ. ಕೆಲಸ ನಡೆಯುತ್ತಿದೆ. ಅದನ್ನು ಇನ್ನೂ ಇಲಾಖೆಗೆ ಹಸ್ತಾಂತರಿಸಿಲ್ಲ ಎಂದರು. 
    ಅದೇ ರೀತಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಪ್ರಗತಿಯ ಕುರಿತು ಪೂರ್ವ ಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಮಾಹಿತಿಯನ್ನು ಪಡೆದರು. 
    ಈ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. 

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...