ಕೋಲಾರ:ನೀರಿನ ಸಮಸ್ಯೆ ನಿವಾರಣೆಯಾಗುವವರೆಗೆ ಅಧಿಕಾರಿಗಳು ರಜೆ ಹಾಕಬೇಡಿ-ಎಸ್.ಜಿ. ನಂಜಯ್ಯನಮಠ ಸೂಚನೆ

Source: shabbir | By Arshad Koppa | Published on 29th April 2017, 10:31 AM | State News | Special Report | Don't Miss |


ಕೋಲಾರ, ಏಪ್ರಿಲ್ 27 :    ರಾಜ್ಯದಲ್ಲಿ ಬರಗಾಲ ಮುಂದುವರೆದಿದ್ದು ಅಧಿಕಾರಿಗಳು ಈ ವರ್ಷ ರಜೆಯ ಮೇಲೆ ತೆರಳದೆ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಭೇಟಿ ನೀಡಿ ಸಮಸ್ಯೆಯನ್ನು ಬಗೆಹರಿಸಲು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವಿವಿಧ ಕಾಮಗಾರಿಗಳ ಭೌತಿಕ ಪರಿಶೀಲನಾ ಸಮಿತಿಯ ಅಧ್ಯಕ್ಷರಾದ ಎಸ್.ಜಿ. ನಂಜಯ್ಯನಮಠ ಅವರು ಸೂಚಿಸಿದರು. 
    ನಗರದ ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 
    ರಾಜ್ಯವು ಸತತ ಮೂರನೇ ವರ್ಷ ಬರಗಾಲವನ್ನು ಎದುರಿಸುತ್ತಿದ್ದು ನೀರಿನ ಭವಣೆ ಹೆಚ್ಚಾಗಿದೆ. ಹಾಗಾಗಿ ಮಳೆಯಾಗುವವರೆಗೂ ಅಧಿಕಾರಿಗಳು ರಜೆ ಹಾಕಿಕೊಂಡು ಹೋಗಬೇಡಿ. ಪ್ರಕೃತಿಯ ವಿಕೋಪದಿಂದ ಮಳೆಯಾಗುತ್ತಿಲ್ಲ. ಇದಕ್ಕೆ ಕಾರಣಗಳನ್ನು ಹುಡುಕುವ ಸ್ಥಿತಿ ಈಗಿಲ್ಲ. ಸಮಸ್ಯೆಯನ್ನು ಎದುರಿಸಬೇಕಾಗಿರುವುದೊಂದೇ ದಾರಿ ಎಂದು ತಿಳಿಸಿದರು. 
    ಸ್ವರಾಜ್ಯ ಎಂಬ ಶಿಸ್ತು ಪಂಚಾಯಿತಿಗಳಲ್ಲಿ ಬರಬೇಕಾಗಿದೆ. ಅದಕ್ಕಾಗಿಯೇ ಸರ್ಕಾರವು ನೂತನ ಕಾರ್ಯಕ್ರಮಗಳನ್ನು ಗ್ರಾಮಪಂಚಾಯಿತಿಯಿಂದ ಜಿಲ್ಲಾ ಪಂಚಾಯತ್‍ವರೆಗೆ ನೀಡಿದೆ. ಇವುಗಳನ್ನು ಸೂಕ್ತವಾಗಿ ಅನುಷ್ಠಾನಗೊಳಿಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. 
    ಜಿಲ್ಲೆಯಲ್ಲಿ ನೀರಿನ ಸಮಸ್ಯೆ ತೀವ್ರವಾಗಿದ್ದು 1500 ಅಡಿ ಕೊಳವೆ ಬಾವಿ ಕೊರದರೂ ನೀರು ದೊರೆಯುತ್ತದೆಂದು ನಂಬಿಕೆ ಇಲ್ಲ. ಆದರೂ ಸಹ ಜಿಲ್ಲೆಯಲ್ಲಿ ಕೃಷಿ ಮಾಡುವವರು ಕಡಿಮೆಯಾಗಿಲ್ಲ. ನೀರಿನ ಮಿತ ಬಳಕೆಯ ಬಗ್ಗೆ ಜನತೆಯಲ್ಲಿ ಜಾಗೃತಿ ಇದೆ. ನೀರಿನ ನಿರ್ವಹಣೆಯಲ್ಲಿ ಕೋಲಾರ ಜಿಲ್ಲೆಯು ಇತರೆ ಜಿಲ್ಲೆಗಳಿಗೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು. 


    ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವಿವಿಧ ಕಾಮಗಾರಿಗಳ ಭೌತಿಕ ಪರಿಶೀಲನಾ ಸಮಿತಿಯ ಸದಸ್ಯರಾದ ತಿಪ್ಪೇಸ್ವಾಮಿ ಮಾತನಾಡಿ, ನೀರಿನ ಸಮಸ್ಯೆಯನ್ನು ಎಲ್ಲರೂ ಗಂಭೀರವಾಗಿ ಪರಿಗಣ ಸಬೇಕು. ನೀರಿನ ಸಮಸ್ಯೆಗೆ ಸೂಕ್ತವಾಗಿ ಸ್ಪಂಧಿಸಬೇಕು. ಇಲ್ಲವಾದರೆ ಅಧಿಕಾರಿಗಳನ್ನೇ ನೇರ ಜವಾಬ್ದಾರರನ್ನಾಗಿ ಮಾಡಬೇಕಾಗುತ್ತದೆ ಎಂದು ಹೇಳಿದರು. 
    ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ ಅವರು ಮಾತನಾಡಿ, ಜಿಲ್ಲೆಯ ಎಲ್ಲಾ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಮಳೆ ಪ್ರಮಾಣ ಕಡಿಮೆಯಾಗಿದ್ದು ನೀರಿನ ಭವಣೆ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಸುಮಾರು 31 ಹಳ್ಳಿಗಳಿಗೆ ಖಾಸಗಿ ಕೊಳವೆ ಬಾವಿಗಳ ಮೂಲಕ ನೀರನ್ನು ಒದಗಿಸಲಾಗುತ್ತಿದೆ ಎಂದರು.
    ಇನ್ನು ನೀರನ ಸಮಸ್ಯೆ ಇರುವ ಗ್ರಾಮಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಈಗಾಗಲೇ 68 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರನ್ನು ನೀಡಲಾಗುತ್ತಿದೆ. ಮುಂದೆ 245 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಕಾಡಲಿದೆ. ಇನ್ನೂ 96 ಗ್ರಾಮಗಳಿಗೆ ನೀರನ್ನು ಟ್ಯಾಂಕರ್ ಮೂಲಕ ಒದಗಿಸಲು ಕ್ರಮವಹಿಸಲಾಗುತ್ತಿದೆ ಎಂದು ನುಡಿದರು. 
    ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಗೀತಮ್ಮ ಆನಂದರೆಡ್ಡಿ ಮಾತನಾಡಿ, ಜಿಲ್ಲೆಯಲ್ಲಿ ಯಾವುದೇ ನದಿ-ನಾಲೆಗಳು ಹರಿಯುವುದಿಲ್ಲ. ಇದರಿಂದಾಗಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಒದಗಿಸಬೇಕಾಗಿರುವುದು ಅವಶ್ಯಕವಾಗಿದೆ. ಅಧಿಕಾರಿಗಳು ನೀರಿನ ಸಮಸ್ಯೆ ನಿವಾರಿಸಲು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು. 
    ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಯಶೋಧ ಕೃಷ್ಣಮೂರ್ತಿ ಮಾತನಾಡಿ, ಜನರಿಗೇನು ಟ್ಯಾಂಕರ್, ಖಾಸಗಿ ಕೊಳವೆ ಬಾವಿಗಳ ಮೂಲಕ ನೀರನ್ನು ಕೊಡಬಹುದು. ಆದರೆ ಧನಕರುಗಳಿಗೆ ಕುಡಿಯುವ ನೀರನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ಗ್ರಾಮಪಂಚಾಯಿತಿಗಳಲ್ಲಿ ಧನಕರುಗಳಿಗೆ ನೀರು ಕುಡಿಯಲು ನೀರಿನ ತೊಟ್ಟಿಗಳನ್ನು ನಿರ್ಮಿಸಲಾಗಿದೆ. ಈ ತೊಟ್ಟಿಗಳು ನೀರಿಲ್ಲದೆ ಖಾಲಿ ಖಾಲಿ ಹೊಡೆಯುತ್ತಿದೆ ಎಂದು ತಿಳಿಸಿದರು. 
    ಗ್ರಾಮೀಣ ನೀರು ಮತ್ತು ನೈರ್ಮಲ್ಯ ವಿಭಾಗಕ್ಕೆ ಸಂಬಂಧಿಸಿದಂತೆ ಇಲಾಖಾಧಿಕಾರಿ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಒಟ್ಟು 2525 ಕಾಗಾರಿಗಳನ್ನು ನಿರ್ವಹಿಸುವ ಗುರಿ ಹೊಂದಲಾಗಿದ್ದು ಈ ಪೈಕಿ 1347 ಕಾಮಗಾರಿಗಳು ಮುಕ್ತಾಯಗೊಂಡಿದೆ. ಇದಕ್ಕೆ ಒಟ್ಟು 1765.74 ಲಕ್ಷ ರೂಗಳಿದ್ದು ಇದರಲ್ಲಿ ಒಟ್ಟಾರೆ 6969.45 ಲಕ್ಷ ರೂಗಳನ್ನು ಖರ್ಚು ಮಾಡಲಾಗಿದೆ ಎಂದು ಮಾಹಿತಿ ನೀಡಿದರು. 
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಲಕ್ಷ್ಮೀ ನಾರಾಯಣ್ ಮಾತನಾಡಿ, ಸ್ವಚ್ಛ ಭಾರತ ಯೋಜನೆಯಡಿ ಶೌಚಾಲಯಗಳ ನಿರ್ಮಾಣ ಮಾಡಲಾಗುತ್ತಿದ್ದು 2013-14 ನೇ ಸಾಲಿನ ಶೇ.27 ರಷ್ಟು, 2014-15 ನೇ ಸಾಲಿನಲ್ಲಿ ಶೇ.91 ರಷ್ಟು, 2016-17 ರಲ್ಲಿ ಶೇ.92 ರಷ್ಟು ಪ್ರಗತಿಯನ್ನು ಸಾಧಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು ಸರಿಸುಮಾರು 1,14,617 ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದರು. 
    ಇದಕ್ಕೆ ಸಮಿತಿ ಅಧ್ಯಕ್ಷ ನಂಜಯ್ಯನ ಮಠ ಅವರು ಪ್ರತಿಕ್ರಿಯಿಸಿ, ರಾಜ್ಯದಲ್ಲಿ 4 ಜಿಲ್ಲೆಗಳು ಬಯಲು ಬಹಿರ್ದೆಸೆ ಮುಕ್ತವಾಗಿ ಹೊರಹೊಮ್ಮಿದೆ. ಉಡುಪಿ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆ, ಮಂಗಳೂರು ಮತ್ತು ಕೊಡುಗು ಜಿಲ್ಲೆಗಳಲ್ಲಿ ಪ್ರತಿಯೊಂದು ಕುಟುಂಬಕ್ಕೂ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಲಾಗಿದೆ ಎಂದರು. 
    ಮಧ್ಯಪ್ರವೇಶಿಸಿದ ಜಿಲ್ಲಾಪಂಚಾಯತ್ ಅಧ್ಯಕ್ಷೆ ಗೀತಮ್ಮ ಅವರು, ಶೌಚಾಲಯ ನಿರ್ಮಾಣಕ್ಕೆ ಮೊದಲೇ ಪೂರ್ತಿ ಹಣ ಬಿಡುಗಡೆ ಮಾಡಿದರೆ ಒಳ್ಳೆಯದು. ಆಗ ಎಲ್ಲರೂ ಶೌಚಾಲಯ ನಿರ್ಮಿಸಿಕೊಳ್ಳಲು ಮುಂದೆ ಬರುತ್ತಾರೆ ಎಂದಾಗ ಇದಕ್ಕೆ ಧ್ವನಿಗೂಡಿಸಿದ ಜಿ.ಪಂ ಉಪಾಧ್ಯಕ್ಷೆ ಯಶೋಧ ಕೃಷ್ಣಮೂರ್ತಿ, ಶೌಚಾಲಯ ನಿರ್ಮಿಸಲು ಕೇವಲ ಒಂದು ದಿನ ಸಾಕು. ಹಾಗಾಗಿ ಸಂಪೂರ್ಣ ಹಣ ಒಂದೇ ಬಾರಿ ಬಿಡುಗಡೆಗೊಳಿಸಿದರೆ ಒಳ್ಳೆಯದು ಎಂದರು. 
    ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ ಅವರು, ಸರ್ಕಾರದ ಮಟ್ಟದಲ್ಲಿ ಇದನ್ನು ಮಾಡಬೇಕಾಗಿದೆ. ಇನ್ನು ಶೌಚಾಲಯಗಳ ನಿರ್ಮಾಣವನ್ನು ಜನತೆ ಸ್ವಯಂಪ್ರೇರಿತವಾಗಿ ಮಾಡಿಕೊಳ್ಳಲು ಮುಂದಾಗಬೇಕು. ಶೌಚಾಲಯಗಳನ್ನು ಗೌರವಕ್ಕಾಗಿ ನಿರ್ಮಿಸಿಕೊಳ್ಳುವುದು. ಹಾಗಾಗಿ ಸರ್ಕಾರದ ಪ್ರೋತ್ಸಾಹ ಧನಕ್ಕೂ ಸಹ ಕಾಯಬಾರದು. ಅಂತಹ ಮನಸ್ಥಿತಿಯು ಜನತೆಯಲ್ಲಿ ಬರಬೇಕು ಎಂದರು. 
    ದೇಶದಲ್ಲಿ ಸುಮಾರು 2 ಲಕ್ಷ ಅಧಿಕ ಮಂದಿ ಬಯಲು ಶೌಚದಿಂದ ಸಾವನಪ್ಪುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ಅರಿವನ್ನು ಮೂಡಿಸಬೇಕು. ಗ್ರಾಮಗಳಲ್ಲಿ ಈ ಕುರಿತು ನಾಟಕಗಳನ್ನು ಮಾಡಿ ಎಂದ ಅವರು, ಅಕ್ಟೋಬರ್-02 ರ ಒಳಗಾಗಿ ಕೋಲಾರ ಜಿಲ್ಲೆಯು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯಾಗಿ ಹೊರಹೊಮ್ಮಲು ಎಲ್ಲರೂ ಕೆಲಸ ಮಾಡಬೇಕು ಎಂದು ಸಮಿತಿ ಅಧ್ಯಕ್ಷ ಎಸ್.ಜಿ.ನಂಜಯ್ಯನ ಮಠ ಅವರು ತಿಳಿಸಿದರು. 
    ಮುಂದುವರೆದು, ತೆರೆದ ಕೊಳವೆ ಬಾವಿಗಳನ್ನು ತಪ್ಪದೆ ಮುಚ್ಚಿ. ಇಲ್ಲವಾದರೆ ಅದಕ್ಕೆ ಮುಚ್ಚಳ ಹಾಕಿ. ಇದರಿಂದ ಯಾವುದೇ ಮಕ್ಕಳಿಗೂ ತೊಂದರೆ ಆಗಬಾರದು. ಸಮಸ್ಯೆಯಾದರೆ ಸರ್ಕಾರಕ್ಕೆ ಕೆಟ್ಟ ಹೆಸರು. ಗ್ರಾಮೀಣಾಭಿವೃದ್ಧಿ ಸಚಿವರು ಇದರ ಬಗ್ಗೆ ಕಠೋರ ತೀರ್ಮಾನವನ್ನು ತೆಗೆದುಕೊಳ್ಳುವರು. ಇದಕ್ಕೆ ಅಧಿಕಾರಿಗಳು ಯಾರೂ ಗುರಿಯಾಗಬಾರದು ಎಂಬುವುದು ನಮ್ಮ ಕಾಳಜಿ ಎಂದರು. 
    ಅದೇ ರೀತಿ ಕಿರುನೀರು ಸರಬರಾಜು ಯೋಜನೆ, ಶುದ್ಧ ಕುಡಿಯುವ ನೀರಿನ ಘಟಕಗಳು, ಬಾಪೂಜಿ ಸೇವಾ ಕೇಂದ್ರಗಳು ಸೇರಿದಂತೆ ಇತರೆ ವಿಷಯಗಳ ಬಗ್ಗೆ ಚರ್ಚಿಸಲಾಯಿತು. 
    ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು. 

ಹಸಿರು ಮೇವು ಬೆಳೆ ಆಂದೋಲನ ಕುರಿತು ಮೆಚ್ಚುಗೆ:
ಹಸಿರು ಮೇವು ಬೆಳೆ ಆಂದೋಲನ ಕುರಿತು ಪ್ರತಿಕ್ರಿಯಿಸಿದ ಸಮಿತಿ ಅಧ್ಯಕ್ಷ ಎಸ್.ಜಿ. ನಂಜಯ್ಯನ ಮಠ ಕೋಲಾರ ಜಿಲ್ಲೆಯಲ್ಲಿ ಹೈನುಗಾರಿಕೆಯ ಉತ್ತೇಜನಕ್ಕಾಗಿ ಮೇವು ಬೆಳೆ ಆಂದೋಲನವನ್ನು ಮಾಡಿರುವುದು ಸಂತಸದ ವಿಚಾರ. ಬರಗಾಲವಾಗಿದ್ದರೂ ಹಸಿರು ಮೇವು ಜಿಲ್ಲೆಯಲ್ಲಿ ಲಭ್ಯವಾಗುತ್ತಿದೆ. ಜಿಲ್ಲಾಡಳಿತ ಮಿನಿಕಿಟ್‍ಗಳನ್ನು ರೈತರಿಗೆ ನೀಡಿ ಸುಮಾರು 3 ಸಾವಿರಕ್ಕೂ ಹೆಚ್ಚು ಪ್ರದೇಶದಲ್ಲಿ ಮೇವು ಬೆಳೆ ಬೆಳೆಸಿರುವುದು ಇತರೆ ಜಿಲ್ಲೆಗಳಿಗೆ ಮಾದರಿಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. 

ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳ ಕುರಿತು ವೀಕ್ಷಣೆ
ಕೋಲಾರ, ಏಪ್ರಿಲ್ 27:ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಲಾಗಿರುವ ಜಿಲ್ಲೆಯ ಮಾಲೂರು ತಾಲ್ಲೂಕಿನ ಚಿಕ್ಕ ಕಡತೂರಿಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವಿವಿಧ ಕಾಮಗಾರಿಗಳ ಭೌತಿಕ ಪರಿಶೀಲನಾ ಸಮಿತಿಯ ಅಧ್ಯಕ್ಷರಾದ ಎಸ್.ಜಿ. ನಂಜಯ್ಯನಮಠ ಭೇಟಿ ನೀಡಿ ವೀಕ್ಷಣೆ ಮಾಡಿದರು. 
ಗ್ರಾಮದಲ್ಲಿ ಒಟ್ಟು 121 ಕುಟುಂಬಗಳಿದ್ದು ಎಲ್ಲಾ ಮನೆಗಳಲ್ಲೂ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಲಾಗಿದೆ. ಇದನ್ನು ಕಂಡು ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಮೆಚ್ಚುಗೆ ನುಡಿಗಳನ್ನಾಡಿದರು. ಅದೇ ರೀತಿ ಬಸವ ವಸತಿ ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ ಮನೆಗಳು, ನರೇಗಾ ಯೋಜನೆಯಲ್ಲಿ ನಿರ್ಮಾಣಗೊಂಡಿದ್ದ ನೀರಿನ ತೊಟ್ಟಿಯನ್ನು ವೀಕ್ಷಿಸಿದರು. 
ಚಕ್ಕ ಕಡತೂರು ಗ್ರಾಮದ ಎಸ್‍ಸಿ ಸಮುದಾಯಕ್ಕೆ ಸೇರಿದ ಹಾಗೂ 34 ಗುಂಟೆಯಲ್ಲಿ ಮಾಡಲಾಗಿರುವ ಸ್ಮಶಾನ ಭೂಮಿಯನ್ನು ನೋಡಿದ ಅವರು, ಸುತ್ತಲೂ ಬೇಲಿ ಹಾಕಿ ಬದ್ರ ಮಾಡಿರುವುದು ಸರಿ. ನಿಧನ ಹೊಂದಿದವರನ್ನು ಇದರಲ್ಲಿ ಕಾರ್ಯ ಮಾಡಲಿ ಆದರೆ ಮೇಲೆ ದೊಡ್ಡದಾಗಿ ಕಟ್ಟೆ ಕಟ್ಟುವುದನ್ನು ನಿಲ್ಲಿಸಲು ಕ್ರಮ ತೆಗೆದುಕೊಳ್ಳಿ. ಇಲ್ಲವಾದರೆ ಸುಮಾರು 50 ಎಕರೆ ನೀಡಿದರೂ ಜಾಗ ಸಾಕಾಗುವುದಿಲ್ಲ. 
ಇದಕ್ಕೆ ಸಂಬಂಧಿಸಿದಂತೆ ಪಂಚಾಯಿತಿ ಮಟ್ಟದಲ್ಲಿ ಕುಳಿತು ಒಂದು ನಿರ್ದಾರವನ್ನು ತೆಗೆದುಕೊಳ್ಳಿ ಎಂದು ನಿರ್ದೇಶನ ನೀಡಿದರು. ಅದರಂತೆ ಮಾಲೂರು ತಾಲ್ಲೂಕಿನ ಹುಂಗೇನಹಳ್ಳಿಯಲ್ಲಿ ನಿರ್ಮಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕ ವೀಕ್ಷಿಸಿದರು. 
ಈ ಸಂದರ್ಭದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವಿವಿಧ ಕಾಮಗಾರಿಗಳ ಭೌತಿಕ ಪರಿಶೀಲನಾ ಸಮಿತಿಯ ಸದಸ್ಯರಾದ ತಿಪ್ಪೇಸ್ವಾಮಿ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಯಶೋಧ ಕೃಷ್ಣಮೂರ್ತಿ, ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ, ಉಪ ಕಾರ್ಯದರ್ಶಿ ಲಕ್ಷ್ಮೀ ನಾರಾಯಣ್, ಮಾಲೂರು ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ನಾಗವೇಣ  ಚಂದ್ರ, ತಾಪಂ ಇಓ ಸಂಜೀವಪ್ಪ, ಹುಂಗೇನಹಳ್ಳಿ ಪಿಡಿಓ ರಮೇಶ್ ನಾಯಕ್ ಮುಂತಾದವರು ಇದ್ದರು. 


 

Read These Next

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...