802ಕೋಟಿ ರೂ. ಮುಂಗಡ ಪತ್ರಕ್ಕೆ ಅನುಮೋದನೆ

Source: sonews | By sub editor | Published on 4th June 2018, 11:33 PM | Coastal News | Don't Miss |

ಕಾರವಾರ: ಉತ್ತರ ಕನ್ನಡ ಜಿಲ್ಲಾ ಪಂಚಾಯತ್‍ನ 2018-19ನೇ ಸಾಲಿನಲ್ಲಿ ಒಟ್ಟು 802ಕೋಟಿ ರೂ. ಮೊತ್ತದ ಒಟ್ಟು ಆಯವ್ಯಯಕ್ಕೆ ಸೋಮವಾರ  ನಡೆದ ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೊಗೇರ ಅವರು ಆಯವ್ಯಯವನ್ನು ಸಭೆಯಲ್ಲಿ ಮಂಡಿಸಿದರು. ಇದರಲ್ಲಿ ಜಿಲ್ಲಾ ಪಂಚಾಯತ್ ಕಾರ್ಯಕ್ರಮಗಳಿಗೆ 270032.94 ಲಕ್ಷ, ತಾಲೂಕು ಪಂಚಾಯತ್ ಕಾರ್ಯಕ್ರಮಗಳಿಗೆ ಲೆಕ್ಕ ಶೀರ್ಷಿಕೆಯಡಿ 53177.75 ಲಕ್ಷ ಹಾಗೂ ಗ್ರಾಮ ಪಂಚಾಯತ್ ಕಾರ್ಯಕ್ರಮಗಳಿಗೆ 66 ಲಕ್ಷ ಅನುದಾನ ಒದಗಿಸಿದ್ದು, 2018-19ನೇ ಸಾಲಿನಲ್ಲಿ ಯೋಜನೆ/ಯೋಜನೇತರ ಲೆಕ್ಕ ಶೀರ್ಷಿಕೆಯಡಿ ಪ್ರತ್ಯೇಕವಾದ ಯಾವುದೇ ಅನುದಾನ ಒದಗಿಸಿರುವುದಿಲ್ಲ ಎಂದು ಅವರು ಹೇಳಿದರು.
ಯೋಜನೇತರ ಶೀರ್ಷಿಕೆಯಡಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಅಧಿಕಾರಿ ನೌಕರರ ವೇತನಕ್ಕಾಗಿ 548ಕೋಟಿ ರೂ. ಮೀಸಲಿಡಲಾಗಿದೆ. ಉಳಿದಂತೆ ಸಾಧಿಲ್ವಾರು ವೆಚ್ಚ ಮತ್ತು ಇತರೇ ವೆಚ್ಚಕ್ಕಾಗಿ ಜಿಲ್ಲಾ ಪಂಚಾಯತ್‍ಗೆ 13453.6 ಲಕ್ಷ ಮತ್ತು ತಾಲೂಕು ಪಂಚಾಯತ್‍ಗೆ 11914.75 ಲಕ್ಷ ಮೀಸಲಿಡಲಾಗಿದೆ. ಕೃಷಿ ಇಲಾಖೆಗೆ ಒಟ್ಟು 745.40 ಲಕ್ಷ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಒಟ್ಟು 9134.42 ಲಕ್ಷ, ಕೈಗಾರಿಕಾ ಇಲಾಖೆಗೆ ಒಟ್ಟು 65.18 ಲಕ್ಷ, ಅನುದಾನ ಒದಗಿಸಲಾಗಿದೆ ಎಂದರು. 
ಶಿಕ್ಷಣ, ಗ್ರಾಮೀಣ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಪಶ್ಚಿಮ ಘಟ್ಟ ಅಭಿವೃದ್ಧಿ ಯೋಜನೆ, ವಿಶೇಷ ಘಟಕ ಯೋಜನೆ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಇಲಾಖೆ, ಅಲ್ಪಸಂಖ್ಯಾತರ ಇಲಾಖೆ, ಪಶುಸಂಗೋಪನೆ ಮತ್ತು ಪಶುವೈದ್ಯ ಇಲಾಖೆ, ವಯಸ್ಕರ ಶಿಕ್ಷಣ, ಕ್ರೀಡೆ ಮತ್ತು ಯುವಜನ ಸೇವೆ, ಗ್ರಾಮೀಣ ನೀರು ಪೂರೈಕೆ, ಮಹಿಳೆಯರ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೌಷ್ಟಿಕ ಆಹಾರ, ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಸಾಮಾಜಿಕ ಅರಣ್ಯ, ಸಹಕಾರ, ಪ್ರದೇಶಾಭಿವೃದ್ಧಿ ಮತ್ತು ಇತರ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳು, ಪಂಚಾಯತ್ ರಾಜ್ ಸಂಸ್ಥೆಗಳಿಗೆ ಅನುದಾನ, ಸಣ್ಣ ನೀರಾವರಿ, ಗ್ರಾಮೋದ್ಯಮ ಮತ್ತು ಸಣ್ಣ ಉದ್ಯಮಗಳು, ರೇಷ್ಮೆ, ರಸ್ತೆ ಮತ್ತು ಸೇತುವೆಗಳು, ಕೈಮಗ್ಗ ಮತ್ತು ಜವಳಿ, ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣ ವಲಯಗಳಿಗೆ 2017-18ನೇ ಸಾಲಿನಲ್ಲಿ ಒದಗಿಸಿದ ಅನುದಾನಕ್ಕಿಂತ 193 ಕೋಟಿ ರೂ.ಹೆಚ್ಚಿನ ಅನುದಾನವನ್ನು ಈ ಬಾರಿ ಒದಗಿಸÀಲಾಗಿದೆ ಎಂದು ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸಂತೋಷ ರೇಣಕೆ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಆರ್.ಜಿ.ನಾಯಕ, ಜಿಲ್ಲಾ ಮತ್ತು ತಾಲೂಕ ಪಂಚಾಯತ್  ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
 

Read These Next