ವಿಶೇಷ ಲೇಖನ: ಕೈಗಾ ಪರಮಾಣು ಸ್ಥಾವರ ವಿಸ್ತರಣೆ ಬೇಡ ಏಕೆ?

Source: anant hegde | By Arshad Koppa | Published on 21st June 2017, 7:52 AM | Special Report | Guest Editorial | Don't Miss |

ಕಾರವಾರ, ಜೂ ೨೧: ಅಣುಸ್ಥಾವರವನ್ನು ಜಗತ್ತೇ ತಿರಸ್ಕರಿಸುತ್ತಿದೆ: ಪರಮಾಣು ವಿದ್ಯುತ್ತು ದುಬಾರಿ, ಅಪಾಯಕಾರಿ ಮತ್ತು ಮುಂದಿನ ಪೀಳಿಗೆಗೆ ಹೆಮ್ಮಾರಿ ಎಂಬುದ ಬಹುತೇಕ ಎಲ್ಲ ರಾಷ್ಟ್ರಗಳೂ ಪರಿಭಾವಿಸಿವೆ. ನಮಗೆ ಪರಮಾಣು ತಂತ್ರಜ್ಞಾನವನ್ನ ಪೂರೈಸಲು ಸಜ್ಜಾಗಿರುವ ಅಮೆರಿಕ ಮತ್ತು ಬಹಳಷ್ಟು ಯುರೋಪಿಯನ್ ದೇಶಗಳು  ಹೊಸ ರಿಯಾಕ್ಟರನ್ನ ಕಟ್ಟದೆ ಎರಡು ಮೂರು ದಶಕಗಳೇ ಆಗಿವೆ. ಕೆನಡಾ ತನ್ನ ಸ್ಥಾವರಗಳನ್ನು ಒಂದೊಂದಾಗಿ ಮುಚ್ಚುತ್ತಿದೆ; ಹೊಸ ಒಂದೂ ಯೋಜನೆ ಇಲ್ಲ. ಅಮೆರಿಕ 35 ವರ್ಷಗಳಿಂದ ಹೊಸದನ್ನು ನಿರ್ಮಿಸಿಲ್ಲ. ಅಲ್ಲಿನ ಅತಿ ದೊಡ್ಡ ವೆಸ್ಟಿಂಗ್ಹೌಸ್ ಪರಮಾಣು ಕಂಪನಿ ಮೊನ್ನೆ ಏಪ್ರಿಲ್ ತಿಂಗಳಲ್ಲಿ ದಿವಾಳಿ ಘೋಷಿಸಿದೆ. ಅದರಲ್ಲಿ ಬಂಡವಾಳ ಹೂಡಿರುವ ಜಪಾನಿನ ತೋಶಿಬಾ ಕಂಪನಿ 600 ಶತಕೋಟಿ ಡಾಲರ್ ನಷ್ಟವನ್ನು ಅನುಭವಿಸಿದೆ. ನಮಗೆ ಯುರೇನಿಯಂ ಖನಿಜವನ್ನು ಪೂರೈಸಲು ಉತ್ಸುಕತೆ ತೋರುವ ಆಸ್ಟ್ರೇಲಿಯಾ, ಕಝಾಕಿಸ್ತಾನ್ ತಮ್ಮ ದೇಶದಲ್ಲಿ ಒಂದೂ ಪರಮಾಣು ಸ್ಥಾವರ ಹಾಕಿಕೊಂಡಿಲ್ಲ. ಇವೆಲ್ಲ ಗೊತ್ತಿದ್ದರೂ ನಮ್ಮ ದೇಶದ ಅಣುಶಕ್ತಿ ಇಲಾಖೆ NPCL ಭಾರೀ ವೆಚ್ಚದಲ್ಲಿ, ಭಾರೀ ಸಮಯ ತಗಲುವ, ಭಾರೀ ವಿದೇಶೀ ಅವಲಂಬನೆಯನ್ನು ಬೇಡುವ ಪರಮಾಣುವನ್ನು ಮುಂದಕ್ಕೆ ಒಡ್ಡುತ್ತಿದೆ. ಪರಮಾಣು ಶಕ್ತಿಗೆ ವಿರೋಧವೇ ಇಲ್ಲವೆಂದು ಕೇಂದ್ರ ಸರಕಾರಕ್ಕೆ ತಪ್ಪು ಮಾಹಿತಿ ನೀಡಿದೆ. ‘ವಿರೋಧ ಇದೆ’ ಎಂದು ನಮ್ಮ ಪ್ರಧಾನಿಯವರಿಗೆ ಗೊತ್ತಾಗುವಂತೆ ಮಾಡಬೇಕಾಗಿದೆ. 
ಅಣುತ್ಯಾಜ್ಯ  ಭಾರೀಅಪಾಯ: ಕೈಗಾದಲ್ಲಿ ಉತ್ಪಾದನೆಯಾಗುವ ವಿದ್ಯುತ್ ಶಕ್ತಿ ಎಲ್ಲರಿಗೂ ಬೇಕು. ಆದರೆ ಇಲ್ಲಿ ಉತ್ಪಾದನೆಯಾಗುವ ಅಪಾಯಕಾರಿ ತ್ಯಾಜ್ಯವನ್ನು ಮಾತ್ರ ನಾವೇ ಇಟ್ಟುಕೊಳ್ಳಬೇಕಾಗಿದೆ. ಅದು ಉಡಿಯಲ್ಲಿ ಕೆಂಡವನ್ನಿಟ್ಟುಕೊಂಡ ಹಾಗೆ. ಸ್ಥಾವರಗಳ ಸಂಖ್ಯೆ ಹೆಚ್ಚುತ್ತ ಹೋದಷ್ಟೂ ತ್ಯಾಜ್ಯ ಮತ್ತು ವಿಕಿರಣ ಪರಿಕರಗಳ (ಕೊಳವೆ, ಪಂಪ್, ಕಂಬಿ, ಮೋಟರ್ ಯಂತ್ರಗಳ ಬಿಡಿಭಾಗಗಳ) ಸಂಖ್ಯೆ ಹೆಚ್ಚುತ್ತಲೇ ಹೋಗುತ್ತದೆ. ಸಹಸ್ರಾರು ವರ್ಷ ವಿಕಿರಣ ಸೂಸುತ್ತಲೇ ಇರುವ ಈ ಪರಿಕರಗಳನ್ನು ಹೂತರೂ ಅವುಗಳ ಅಪಾಯದ ಬಗ್ಗೆ ದೂರಭವಿಷ್ಯದ ಪೀಳಿಗೆಗಳಿಗೆ ಹೇಗೆ ಎಚ್ಚರಿಕೆ ಕೊಡಬೇಕು ಎಂಬುದೇ ಯಾರಿಗೂ ಗೊತ್ತಿಲ್ಲ. ಭಾರೀ ಮಳೆಬೀಳುವ ಕೈಗಾದಲ್ಲಿ ಅವುಗಳ ಗತಿಸ್ಥಿತಿಯನ್ನು ಊಹಿಸುವುದೂ ಸಾಧ್ಯವಿಲ್ಲ. 
ಕೈಗಾ ಸುತ್ತ ಕ್ಯಾನ್ಸರ್: ಎಷ್ಟೇ ಭದ್ರ ವ್ಯವಸ್ಥೆಯಿದ್ದರೂ ಗಾಳಿಗೆ, ನೀರಿಗೆ ವಿಕಿರಣ ಸೂಸುತ್ತಲೇ ಇರುತ್ತದೆ ಎಂಬುದು ಜಗತ್ತಿನ ಎಲ್ಲ ಸ್ಥಾವರಗಳ ಅಧ್ಯಯನದಲ್ಲೂ ಗೊತ್ತಾಗಿದೆ.  ಕ್ಯಾನ್ಸರ್, ಕರುಳಿನ ಹುಣ್ಣು, ಯಕೃತ್ತಿನ ಊತ, ಶ್ವಾಸಕೋಶಗಳ ಹುಣ್ಣು, ಚಿತ್ತವಿಭ್ರಮೆ, ಸ್ತ್ರೀರೋಗ, ಅಪಾಂಗ ಶಿಶುಗಳ ಜನನ ಇವೆಲ್ಲ ಕೈಗಾ ಸುತ್ತ ಹೆಚ್ಚುತ್ತಲೇ ಇವೆಯೆಂಬ ಶಂಕೆ ಬಲವಾಗುತ್ತಿದೆ. 1990 ರ ಆರೋಗ್ಯ ದಾಖಲೆಗಳ ಜೊತೆ ಈಗಿನದನ್ನು ಹೋಲಿಸಿ ಅಧ್ಯಯನ ಮಾಡಲು ಯಾರೂ ಆಸಕ್ತಿ ತೋರುತ್ತಿಲ್ಲ. ಯಾರೂ ಸ್ವತಂತ್ರ ಆರೋಗ್ಯ ಸಮೀಕ್ಷೆ ನಡೆಸದಂತೆ ಪರಮಾಣು ಇಲಾಖೆ ನಿಗಾ ವಹಿಸಿದೆ. 
ಹಲವು ದುಷ್ಪರಿಣಾಮಗಳು: ಜೀವಿ ವೈವಿಧ್ಯದ ದೃಷ್ಟಿಯಿಂದ ಉತ್ತರ ಕನ್ನಡ ಜಿಲ್ಲೆ ತೀರಾ ಸೂಕ್ಷ್ಮವಾದುದು. ಅದರ ತೂಕ ತಪ್ಪದಂತೆ ಬಹುಪಾಲು ಸಾವಯವ ವಿಧಾನದಲ್ಲೇ ಕೃಷಿ ಮಾಡುತ್ತ ಇಲ್ಲಿನ ನಿವಾಸಿಗಳು ತಕ್ಕಮಟ್ಟಿನ ಆರ್ಥಿಕ ನೆಲೆಗಟ್ಟನ್ನು ಕಟ್ಟಿಕೊಂಡಿದ್ದಾರೆ. ಅಕಸ್ಮಾತ್ ನಾಳೆ ದೊಡ್ಡ ಪ್ರಮಾಣದಲ್ಲಿ ವಿಕಿರಣ ಸೂಸಿದರೆ ಇಲ್ಲಿನ ಆರ್ಥಿಕತೆಯ ಬೆನ್ನೆಲುಬಾದ ಅಡಿಕೆ, ಮೆಣಸು, ಏಲಕ್ಕಿಗೆ ವಹಿವಾಟು ಸಂಪೂರ್ಣ ನೆಲಕಚ್ಚ ಬಹುದು. ಪರಿಹಾರ ನೀಡುವ ಹೊಣೆಯಿಂದ ಪಾರಾಗಲು ಪರಮಾಣು ತಂತ್ರದಲ್ಲಿ ಸಾಕಷ್ಟು ಮಾರ್ಗೋಪಾಯಗಳಿವೆ. ಕ್ಯಾನ್ಸರಿಗೂ ವಿಕಿರಣಕ್ಕೂ ಸಂಬಂಧವೇ ಇಲ್ಲ ಎಂದು NPCL ಅನೇಕ ಬಾರಿ ಹೇಳಿಕೆ ನೀಡಿದೆ. ಅದೇ ಕಾರಣವನ್ನು ಮುಂದೊಡ್ಡುತ್ತಲೇ ಈ ಜಿಲ್ಲೆಯಲ್ಲಿ ಒಂದು ಉತ್ತಮ ಆಸ್ಪತ್ರೆಯನ್ನೂ ಸ್ಥಾಪಿಸುತ್ತಿಲ್ಲ.  ನಾಳೆ ವಿಕಿರಣದ ಭಯದಿಂದಾಗಿಯೇ ಅಡಿಕೆಯ ಬೆಲೆ ಕುಸಿದರೆ ‘ಅದು ಕೇವಲ ಭಯ; ಅದರಲ್ಲಿ ಸತ್ಯಾಂಶವಿಲ್ಲ’ ಎಂದು ವಾದಿಸಿ NPCL ಕಾಳಿಯಲ್ಲಿ ಕೈತೊಳೆದು ಕೂರಬಹುದು. 
ಪಶ್ಚಿಮಘಟ್ಟ ಉಳಿಸಿ :ರಾಜ್ಯದಲ್ಲೇ ಅತಿ ದಟ್ಟ ವನಸಿರಿ ಇರುವ ಉತ್ತರ ಕನ್ನಡ ಜಿಲ್ಲೆ ಅನಾದಿ ಕಾಲದಿಂದಲೂ ನಾಡಿನ ಪರಿಸರ ಸಮತೋಲಕ್ಕೆ ತನ್ನ ಗರಿಷ್ಠ ಕೊಡುಗೆಯನ್ನು ಕೊಡುತ್ತಿದೆ. ಜಗತ್ತಿನಲ್ಲೇ ಅಪರೂಪವೆನಿಸಿದ ಜೀವರಾಶಿಗಳನ್ನು ಪೊರೆಯುತ್ತಿರುವ ಈ ಪಶ್ಚಿಮಘಟ್ಟಗಳನ್ನು ರಕ್ಷಿಸಲೇಬೇಕಾದ ಸಂದಭವಿದು. 
ಸೋಲಾರ ಸ್ಥಾವರ ಸ್ಥಾಪಿಸಿ : ಸೋಲಾರ್ ವಿದ್ಯುತ್ ಅಗ್ಗವಾಗಿದೆ. ಕೇಂದ್ರ ಸರಕಾರ ಸೋಲಾರಿಗೆ ಬಹಳ ಆದ್ಯತೆ ನೀಡಿದೆ. ಕೈಗಾ ಅಣುಸ್ಥಾವರ ವಿಸ್ತರಣೆ ಬೇಡ. ಸೋಲಾರ್ ಸ್ಥಾವರ ಸ್ಥಾಪಿಸ ಬೇಕೆಂದು ಒತ್ತಾಯಿಸಬೇಕು.   

ಉ.ಕ. ಜಿಲ್ಲೆಯ ಪರಿಸರ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಕಾರ್ಯಕರ್ತರ ಸಭೆ ಪರಮಪೂಜ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿ ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನ ಅವರ ದಿವ್ಯ ಸಾಂನಿಧ್ಯದಲ್ಲಿ  ದಿ. 7-6-2017 ರಂದು ಶಿರಸಿಯಲ್ಲಿ ನಡೆಯಿತು. ವಿವರ ಸಮಾಲೋಚನೆ ನಂತರ ಈ ಕೆಳಗಿನ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.: 
1) ಉ.ಕ. ಜಿಲ್ಲೆಯ ಪರಿಸರ ಧಾರಣ ಸಾಮಥ್ರ್ಯ ಮುಗಿದಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಸರ್ಕಾರಕ್ಕೆ ವರದಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ-ಕೇಂದ್ರ ಸರ್ಕಾರಗಳು ಬೃಹತ್ ಅರಣ್ಯ ನಾಶೀ-ಪರಿಸರ ನಾಶೀ ಯೋಜನೆಗಳನ್ನು ಉ.ಕ. ಜಿಲ್ಲೆಯಲ್ಲಿ ಜಾರಿ ಮಾಡಬಾರದು.
2) ಕೈಗಾ ಅಣುಸ್ಥಾವರದ ನಾಲ್ಕು ವಿದ್ಯುತ್ ಉತ್ಪಾದನಾ ಘಟಕಗಳಿಂದ ಕ್ಯಾನ್ಸರ್ ಕಾಯಿಲೆ ವ್ಯಾಪಕವಾಗಿರುವದು ಜನಜನಿತವಾಗಿದೆ. ಉ.ಕ. ಜಿಲ್ಲೆಯ ಜನರ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮಗಳಾಗಿವೆ. ಅರಣ್ಯ -ನದಿಗಳು ವನ್ಯಜೀವಿಗಳ  ಮೇಲೆ ಅಣು  ವಿಕಿರಣದ ಪರಿಣಾಮಗಳೇನು ಎಂಬ ಬಗ್ಗೆ ಸ್ವತಂತ್ರ ಅಧ್ಯಯನಗಳೇ ನಡೆದಿಲ್ಲ. ಸಾರ್ವಜನಿಕ ಸುರಕ್ಷಾ ಸಮೀತಿ ರಚಿಸಿಲ್ಲ. ಕೈಗಾ ಅಣು ಸ್ಥಾವರದ ಈವರೆಗಿನ ಅಪಘಾತಗಳ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಸಾರ್ವಜನಿಕ ಅಹವಾಲು ಸಭೆ ನಡೆಸಿದರೂ ಅದು ಹೆಸರಿಗೆ ಮಾತ್ರವಾಗುತ್ತದೆ. ಅಣು ತ್ಯಾಜ್ಯವಿಲೇವಾರಿ ಬಗ್ಗೆ ಮಾಹಿತಿ ಇಲ್ಲ. ಆರ್ಥಿಕವಾಗಿ 5-6ನೇ ಘಟಕ ಅತಿವೆಚ್ಚ ದಾಯಕ. ಬೃಹತ್ ತಂತಿ ಮಾರ್ಗಕ್ಕೆ  ಲಕ್ಷ ಮರಗಳ ಕಟಾವು ಆಗಲಿದೆ. ಈ ಹಿನ್ನೆಲೆಯಲ್ಲಿ ಕೈಗಾದಲ್ಲಿ 5-6 ನೇ ಘಟಕ ನಿರ್ಮಾಣಕ್ಕೆ ಅವಕಾಶ ಸಲ್ಲದು. ಕೈಗಾ ಅಣುಸ್ಥಾವರದ 5-6ನೇ ಘಟಕಗಳ ನಿರ್ಮಾಣ ಯೋಜನೆಗೆ ಜಿಲ್ಲೆಯ ಜನತೆ ತೀವ್ರ ವಿರೋಧ ವ್ಯಕ್ತ ಮಾಡಬೇಕು ಎಂದು ಕರೆನೀಡಲಾಗಿದೆ. 
3) ನಮ್ಮ ವಿರೋಧ ಪ್ರಕಟಿಸಲು ಯಲ್ಲಾಪುರದಲ್ಲಿ 25-06-2017 ರಂದು ಬೆಳಿಗ್ಗೆ ಜಿಲ್ಲಾ ಪರಿಸರ ಸಮಾವೇಶ ಏರ್ಪಡಿಸಲು ನಿರ್ಧರಿಸಲಾಗಿದೆ. ಪೂಜ್ಯ ಸ್ವರ್ಣವಲ್ಲೀ ಮಹಾ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಹಲವಾರು ಪರಿಸರ ತಜ್ಞರು ಪಾಲ್ಗೊಳ್ಳಲಿದ್ದಾರೆ.ಜಿಲ್ಲೆಯ ರೈತರು ಮಹಿಳೆಯರು ಯುವಜನರು ಸಮಾವೇಶಕ್ಕೆ ಆಗಮಿಸಿ ಕೈಗಾ ಅಣುಸ್ಥಾವರದ 5-6ನೇ ಘಟಕ ಸ್ಥಾಪನೆಗೆ ವಿರೋಧ ಪ್ರಕಟಿಸಲು ಕರೆನೀಡಲಾಗಿದೆ.
4) 5-6ನೇ ಘಟಕ ನಿರ್ಮಾಣಕ್ಕೆ ಬದಲಾಗಿ ಸೌರ ವಿದ್ಯುತ್ ಸ್ಥಾವರವನ್ನು  ಉ.ಕ. ಜಿಲ್ಲೆಯಲ್ಲಿ  ಸ್ಥಾಪಿಸಲು ಸರ್ಕಾರಕ್ಕೆ ಒತ್ತಾಯ ಮಾಡಲಾಗಿದೆ. 


ಉ.ಕ ಜಿಲ್ಲಾ ಪರಿಸರ ಸಂರಕ್ಷಣಾ ಸಮೀತಿ ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮೀತಿ
 
ಪತ್ರಿಕಾ ಗೋಷ್ಠಿ, ಕಾರವಾರ 20-6-2017
ಕೈಗಾ ಅಣುಸ್ಥಾವರದ ದುಷ್ಪರಿಣಾಮಗಳು ವ್ಯಾಪಕವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಣುಸ್ಥಾವರವನ್ನು ಇನ್ನಷ್ಟು ವಿಸ್ತಾರ ಮಾಡುವ 5-6 ನೇ ಘಟಕ ನಿರ್ಮಾಣ ಬೇಡ ಎಂದು ಆಗ್ರಹಿಸಿ ಇದೇ 25-6-2017 ಬೆಳಿಗ್ಗೆ 10-30 ಕ್ಕೆ ಯಲ್ಲಾಪುರ ಟಿ.ಎಂ.ಎಸ್. ಸಭಾಂಗಣದಲ್ಲಿ ಬೃಹತ್ ಪರಿಸರ ಸಮಾವೇಶ ಏರ್ಪಡಿಸಲಾಗಿದೆ. 
    ಹಸಿರು ಸ್ವಾಮೀಜಿ ಎಂದೇ ಖ್ಯಾತರಾದ ಪೂಜ್ಯ ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರು ಹೋರಾಟ ಸಮಾವೇಶದ ದಿವ್ಯ ಸಾಂನಿಧ್ಯ ವಹಿಸಲಿದ್ದಾರೆ. 
 
ಉ.ಕ ಜಿಲ್ಲೆಯ ಎಲ್ಲಾ ಶಾಸಕರನ್ನು ಆಹ್ವಾನಿಸಲಾಗಿದೆ. ನಾಡಿನ ಪರಿಸರ ತಜ್ಞರನ್ನು ಆಹ್ವಾನಿಸಲಾಗಿದೆ. ಡಾ|| ವಿಷ್ಣು ಕಾಮತ್ ಬೆಂಗಳೂರು, ಶ್ರೀ ನಾಗೇಶ ಹೆಗಡೆ, ಡಾ|| ವೈ.ಬಿ. ರಾಮಕೃಷ್ಣ, ಡಾ|| ಟಿ. ವಿ. ರಾಮಚಂದ್ರ, ಶ್ರೀ ಶಂಕರ ಶರ್ಮಾ, ಪ್ರೊ|| ಬಿ. ಎಂ. ಕುಮಾರ ಸ್ವಾಮಿ ಮುಂತಾದವರು ಪಾಲ್ಗೊಳ್ಳಲಿದ್ದಾರೆ. ಪರಿಸರ ಸಮಾವೇಶದಲ್ಲಿ ರೈತರು ವನವಾಸಿಗಳು ಮಹಿಳೆಯರು, ಯುವಜನತೆ ಸಾವಿರರು ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. 
 
    ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗುತ್ತದೆ.  ಮಧ್ಯಾಹ್ನ ನಡೆಯುವ ಗೋಷ್ಠಿಗಳಲ್ಲಿ ಕೈಗಾ ಆರೋಗ್ಯ ಸಮೀಕ್ಷೆ, ನೆಲ, ಜಲ, ಜಾನುವಾರು, ವನ್ಯ ಜೀವಿಗಳ ಮೇಲೆ ಅಣುವಿಕಿರಣದ ಪರಿಣಾಮಗಳು. ಕೃಷಿ ಬದುಕಿನ ಮೇಲೆನ ಆಗುವ ದುಷ್ಪರಿಣಾಮಗಳು. ಕೈಗಾ ಸುತ್ತಲಿನ ಹಳ್ಳಿಗಳ ಜನರ ಅತಂತ್ರಬದುಕಿನ ಪರಿಸ್ಥಿತಿ, ಮುಂತಾದ ಜ್ವಲಂತ ಪರಿಸ್ಥಿತಿ ಬಗ್ಗೆ ಸಮಾಲೋಚನೆ, ವಿಷಯ ಮಂಡನೆ, ಮುಂದಿನ ಕ್ರಮ ಇತ್ಯಾದಿ ಚರ್ಚೆ ನಡೆಯಲಿದೆ.
 
ಪರಿಸರ, ರೈತ ಸಂಘಟನೆಗಳು, ಮಾತೃಮಂಡಳಿ, ಸಹಕಾರಿ ಧುರೀಣರು, ವೈದ್ಯರು, ಮಹಿಳಾ ಸಂಘಟನೆಗಳು, ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಕೈಗಾ ಅಣುವಿದ್ಯುತ್ ಉತ್ಪಾದನೆಯ ಆರ್ಥಿಕ ವಿಚಾರ, ಸೋಲಾರ್ ಬದಲೀ ವಿದ್ಯುತ್ ಮೂಲಗಳು ಮುಂತಾದ ವಿಷಯ ಚರ್ಚೆಗೆ ಬರಲಿದೆ.
ಈಗಾಗಲೇ ಯಲ್ಲಾಪುರ ಶಿರಸಿಗಳಲ್ಲಿ ಸ್ವರ್ಣವಲ್ಲೀ ಸ್ವಾಮೀಜಿ ಅವರ ಅಧ್ಯಕ್ಷತೆಯಲ್ಲಿ ತಯಾರಿ ಸಭೆ ನಡೆದಿವೆ. ವಜ್ರಳ್ಳಿ, ಮಲವಳ್ಳಿ, ಗುಂದ, ಉಮಚಗಿ, ಹೇರೂರು, ಕುಮಟಾ, ಅಂಕೋಲಾ ಮುಂತಾದ ಸ್ಥಳಗಳಲ್ಲಿ ಸಮಾವೇಶ ಪೂರ್ವ ಸಂಪರ್ಕ ಸಭೆಗಳು ನಡೆಯುತ್ತಿದೆ. ಜನ ಸಂಪರ್ಕ ಅಭಿಯಾನ ನಡೆಯುತ್ತಿದೆ. 
 
    ಯಲ್ಲಾಪುರ ತಾಲೂಕಾ ಮಾರ್ಕೆಟಿಂಗ್ ಸೊಸೈಟಿ ಅಧ್ಯಕ್ಷ ಶ್ರೀ ನಾರಾಯಣ ಭಟ್ಟ ಅಗ್ಗಾಶಿ ಕುಂಬ್ರಿ ಅವರ ಅಧ್ಯಕ್ಷತೆಯಲ್ಲಿ ಜೂನ್ 25 ರ ಪರಿಸರ ಸಮಾವೇಶ ಸ್ವಾಗತ ಸಮೀತಿ ರಚಿಸಲಾಗಿದೆ. ಉ.ಕ ಜಿಲ್ಲೆಯ ಜನತೆ ಪರಿಸರ ಸಮಾವೇಶದಲ್ಲಿ ಪಾಲ್ಗೊಳ್ಳಲು ಮನವಿ ಮಾಡಲಾಗಿದೆ.
 
ಇನ್ನಷ್ಟು ಮಾಹಿತಿಗಳು.
    ಉ.ಕ ಜಿಲ್ಲಾ ಪರಿಸರ ಧಾರಣಾ ಸಾಮಥ್ರ್ಯ ಮುಗಿದಿದೆ ಎಂದು ವಿಜ್ಞಾನಿಗಳು ವರದಿ ನೀಡಿದ್ದಾರೆ. 
ಕೈಗಾದಿಂದ ಇನ್ನೊಂದು ವಿದ್ಯುತ್ ಮಾರ್ಗ ನಿರ್ಮಾಣವಾದರೆ ಒಂದು ಲಕ್ಷ ಮರಗಳ ನಾಶವಾಗುತ್ತದೆ. ಈ ಹಿಂದೆ 2 ತಂತಿ ಮಾರ್ಗಗಳಿವೆ 2 ಲಕ್ಷ ಮರ ಕಡಿಯಲಾಗಿದೆ. ಸರ್ಕಾರದ ಆರೋಗ್ಯ ಸಮೀಕ್ಷೆ ವರದಿ ಜನತೆಗೆ ತಪ್ಪು ಮಾಹಿತಿ ನೀಡಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಕೈಗಾ ಸುತ್ತ ವ್ಯಾಪಕವಾಗಿ ಕ್ಯಾನ್ಸರ್ ಇತ್ಯಾದಿ ಕಾಯಲೆಗಳು ಹಬ್ಬಿರುವುದು ಎಲ್ಲರಿಗೆ ತಿಳಿದಿರುವ ಸಂಗತಿ. ಪತ್ರಿಕೆಗಳು, ಮಾಧ್ಯಮಗಳೂ ಪ್ರಕಟಿಸಿವೆ. 
 
 
ಅಣುಸ್ಥಾವರ ಸ್ಥಾಪನೆಗೆ ಮೊದಲೇ 1996-97 ರಲ್ಲಿ ಜಿಲ್ಲಾ ಪರಿಸರ ಸಮೀತಿ ಅವಿನಾಶ ಬೆಂಗಳೂರು ಸಂಸ್ಥೆಗಳು ಆರೋಗ್ಯ ಸಮೀಕ್ಷೆ ನಡೆಸಿದ್ದನ್ನು ಇಲ್ಲಿ ನೆನಪಿಸಬಹುದಾಗಿದೆ. ಗಾಳಿಗೆ, ನೀರಿಗೆ ಅಣು ವಿಕಿರಣ ಸೂಸೂತ್ತಲೇ ಇರುತ್ತದೆ. ಕ್ಯಾನ್ಸರ್, ಕರುಳಿನ ಹುಣ್ಣು , ಯಕೃತ್ತಿನ ಊತ, ಶ್ವಾಸಕೋಶ ಹುಣ್ಣು ಅಪಾಂಗ ಶಿಶುಗಳ ಜನನ, ಸ್ತ್ರೀರೋಗ ಇವೆಲ್ಲ ಕೈಗಾ ಸುತ್ತಲಿನ ಹಳ್ಳಿಗಳಲ್ಲಿ ಹೆಚ್ಚುತ್ತಲೇ ಇವೆ ಎಂಬುದು ಜನಜನಿತವಾಗಿದೆ. 
 
    ಕೈಗಾ ಸುತ್ತಲಿನ 5 ಕಿ. ಮೀ ವ್ಯಾಪ್ತಿಯ ಜನರಿಗೆ ಪುನರ್ ವಸತಿ ನೀಡಿ ಎಂಬ ಬೇಡಿಕೆ ಈಡೇರಿಲ್ಲ. ಅಣುತ್ಯಾಜ್ಯವನ್ನು ಎಲ್ಲಿ ಹೂಳುತ್ತಿದ್ದೀರಿ? ಎಲ್ಲಿಗೆ  ಸಾಗಾಟ ಮಾಡಲಾಗುತ್ತದೆ? ಎಂಬ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ. 

 
 
ಶ್ರೀ ಅನಂತ ಹೆಗಡೆ ಅಶೀಸರ 
ಕಾರ್ಯದರ್ಶಿ ಬೇಡ್ತಿ ಅಘನಾಶಿನಿ 
ಕೊಳ್ಳ ಸಂರಕ್ಷಣಾ ಸಮೀತಿ. 
ಶ್ರೀ ನಾರಾಯಣ ಭಟ್ ಅಗ್ಗಾಶಿ ಕುಂಬ್ರಿ, ಅಧ್ಯಕ್ಷರು, ಸ್ವಾಗತ ಸಮೀತಿ ಜಿಲ್ಲಾ ಪರಿಸರ ಸಮಾವೇಶ 
ಶ್ರೀ ಭಾಸ್ಕರ ಹೆಗಡೆ ಗೇರಾಳ, 
ಸಂಚಾಲಕರು, ಜಿಲ್ಲಾ ಪರಿಸರ ಸಮಾವೇಶ 
ಶ್ರೀ ರವಿ ಭಟ್ ವಡ್ಡರ ಮನೆ, ಸಂಚಾಲಕರು, ಪರಿಸರ ಸಮಾವೇಶ 
ಶ್ರೀ ರವೀಂದ್ರ ಪವಾರ್, ಶ್ರೀ ರವೀಂದ್ರ ಶೆಟ್ಟಿ
ಉ.ಕ ಜಿಲ್ಲಾ ಪರಿಸರ ಸಂರಕ್ಷಣಾ ಸಮೀತಿ
ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮೀತಿ
 

Read These Next

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...