ಕಾರವಾರ:ಅ.1ರಿಂದ ಎಂಜಿನಿಯರಿಂಗ್ ತರಗತಿಗಳು ಹೊಸ ಕಟ್ಟಡದಲ್ಲಿ: ಡಿಸಿ

Source: varthabhavan | By Arshad Koppa | Published on 19th September 2017, 8:13 AM | Coastal News |

ಕಾರವಾರ ಸೆ.18: ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅಕ್ಟೋಬರ್ 1ರಿಂದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ತರಗತಿಗಳನ್ನು ಮಾಜಾಳಿಯ ಹೊಸ ಕಟ್ಟಡದಲ್ಲಿ ನಡೆಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಸರ್ಕಾರಿ ಎಂಜಿನಿಯರಿಂಗ್ ಮಹಾ ವಿದ್ಯಾಲಯದ ಪ್ರಾಂಶುಪಾಲರಿಗೆ ಸೂಚಿಸಿದ್ದಾರೆ.
    
ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ತರಗತಿಗಳನ್ನು ಹೊಸ ಕಟ್ಟಡದಲ್ಲಿಯೇ ಶೀಘ್ರ ಆರಂಭಿಸುವಂತೆ ಸ್ಥಳೀಯ ಶಾಸಕ ಸತೀಶ್ ಸೈಲ್ ಅವರ ಸಲಹೆಯಂತೆ ಅಕ್ಟೋಬರ್ 1ರಿಂದಲೇ ತರಗತಿಗಳನ್ನು ಹೊಸ ಕಟ್ಟಡದಲ್ಲಿ ಆರಂಭಿಸಲು ಬೇಕಿರುವ ಎಲ್ಲ ಸಿದ್ಧತೆ ಮಾಡಿಕೊಳ್ಳುವಂತೆ ಅವರು ಸೋಮವಾರ ತಮ್ಮ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪ್ರಾಂಶುಪಾಲರಿಗೆ ತಿಳಿಸಿದರು.

ಸ್ಥಳೀಯ ಶಾಸಕರ ಸಲಹೆಯಂತೆ ಪ್ರಸ್ತುತ ಮಾಜಾಳಿಯಲ್ಲಿ ನಿರ್ಮಿಸಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಹೊಸ ಕಟ್ಟಡ ತರಗತಿ ನಡೆಸಲು ಸಿದ್ಧಗೊಂಡಿದ್ದು ಸಾರಿಗೆ ಸಂಪರ್ಕ ಹಾಗೂ ವಿದ್ಯಾರ್ಥಿಗಳಿಗೆ ಪೂರಕ ಸೌಲಭ್ಯಗಳನ್ನು ಕಲ್ಪಿಸಬಹುದಾಗಿರುವುದರಿಂದ ಅಕ್ಟೋಬರ್ 1ರಿಂದಲೇ ತರಗತಿಗಳನ್ನು ಹೊಸ ಕಟ್ಟಡದಲ್ಲಿ ನಡೆಸಲು ತಾಂತ್ರಿಕ ಸಮಸ್ಯೆಗಳಿಲ್ಲದಿರುವುದಿಲ್ಲ. ಎಂಜಿನಿಯರಿಂಗ್ ಕಾಲೇಜು ತಾತ್ಕಾಲಿಕವಾಗಿ ನಡೆಯುತ್ತಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿಯೇ ಪ್ರಯೋಗಾಲಯ ಸ್ಥಳಾಂತರ ಆಗುವವರೆಗೆ ಮುಂದುವರಿಸಬಹುದು. ಈ ಬಗ್ಗೆ ಸಿದ್ಧತೆ ಮಾಡಿಕೊಳ್ಳುವಂತೆ ಅವರು ಸೂಚಿಸಿದರು.


ಪ್ರಸ್ತುತ ಹೊಸ ಎಂಜಿನಿಯರಿಂಗ್ ಕಾಲೇಜಿಗೆ ಲೋಕೋಪಯೋಗಿ ಇಲಾಖೆಯಿಂದ ಸಂಪರ್ಕ ರಸ್ತೆ ಮಂಜೂರು ಆಗಿದ್ದು ಶೀಘ್ರವೇ ರಸ್ತೆ ಸಂಪರ್ಕವೂ ಆಗಲಿದೆ. ಉಳಿದಂತೆ ಬಹುತೇಕ ಪೂರಕ ಮೂಲ ಸೌಲಭ್ಯಗಳು ಇದ್ದು, ಪ್ರಯೋಗಾಲಯ ಸ್ಥಳಾಂತರಕ್ಕೆ ಸಮಯಾವಕಾಶ ಬೇಕೆಂಬ ಪ್ರಾಂಶುಪಾಲರ ಸಲಹೆ ಮೇರೆಗೆ ತರಗತಿಗಳನ್ನು ಹೊಸ ಕಟ್ಟಡದಲ್ಲಿಯೂ ಹಾಗೂ ಪ್ರಯೋಗಾಲಯ ಸ್ಥಳಾಂತರ ಆಗುವವರೆಗೆ ಹಾಲಿ ತಾತ್ಕಾಲಿಕ ಕಟ್ಟಡದಲ್ಲೇ ನಡೆಸಬಹುದಾಗಿದೆ ಎಂದರು.

ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಕನಿಷ್ಟ 4 ಸಾರಿಗೆ ಬಸ್‍ಗಳನ್ನು ಬೇರೆ ಬೇರೆ ಸಮಯದಲ್ಲಿ ಬಸ್ ನಿಲ್ದಾಣ ಹಾಗೂ ಮಾಜಾಳಿ ಎಂಜಿನಿಯರಿಂಗ್ ಕಾಲೇಜಿಗೆ ಓಡಿಸಲು ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ, ಅಕ್ಟೋಬರ್ 1ರಿಂದ ತರಗತಿ ನಡೆಸಲು ಕಾಲೇಜು ಕಟ್ಟಡ ಪೂರ್ಣ ಸಿದ್ಧತೆಯೊಂದಿಗೆ ಕಾಲೇಜಿಗೆ ವಹಿಸುವಂತೆ ನಿರ್ಮಾಣ ಸಂಸ್ಥೆ ರೈಟ್ಸ್‍ಗೆ ಸೂಚಿಸಿದರು.
ಸಭೆಯಲ್ಲಿ ಶಾಸಕ ಸತೀಶ್ ಸೈಲ್, ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ, ಎಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ನಿತ್ಯಾನಂದ, ಕೆಆರ್‍ಐಡಿಎಲ್ ಉಪ ನಿರ್ದೇಶಕ ತೀರ್ಥಲಿಂಗಪ್ಪ, ರೈಸ್ ಸಂಸ್ಥೆಯ ಪ್ರಾಜೆಕ್ಟ್ ಎಂಜಿನಿಯರ್ ಸಿ.ಜೆ.ರಮೇಶ್, ಕಾರವಾರ ಕೆಎಸ್‍ಆರ್‍ಟಿಸಿ ಡಿಪೋ ಮ್ಯಾನೇಜರ್ ತುಷಾರ್ ಮತ್ತಿತರರು ಉಪಸ್ಥಿತರಿದ್ದರು.

Read These Next