ಕಾರವಾರ:ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಸಂತ್ರಸ್ತರ ಮನೆಬಾಗಿಲಿಗೆ ಪರಿಹಾರ ವಿತರಣೆ-ಜಿಲ್ಲಾಧಿಕಾರಿಯವರ ಜನಪರ ನಡೆ

Source: varthabhavan | By Arshad Koppa | Published on 23rd April 2017, 10:05 AM | Coastal News |

ಕಾರವಾರ ಎ.22 : ಚತುಷ್ಪಥ ಹೆದ್ದಾರಿಗೆ ತಮ್ಮ ಮನೆಮಾರುಗಳನ್ನು ಕಳೆದುಕೊಳ್ಳುವವರು ಇನ್ನು ಮುಂದೆ ತಮಗೆ ಸಿಗಬೇಕಾದ ಪರಿಹಾರಕ್ಕೆ ಸರ್ಕಾರಿ ಕಚೇರಿಗಳನ್ನು ಎಡಕಾಡುವ ಅಗತ್ಯವಿಲ್ಲ. ರಾಷ್ಟೀಯ ಹೆದ್ದಾರಿ ಭೂಸ್ವಾಧೀನ ಪ್ರಾಧಿಕಾರದ ಜವಾಬ್ದಾರಿ ಹೊಂದಿರುವ ಆಯಾ ಉಪವಿಭಾಗಾಧಿಕಾರಿಗಳೇ ಸಂಬಂಧಪಟ್ಟ ಗ್ರಾಮಗಳಿಗೆ ತೆರಳಿ ಪರಿಹಾರ ನೀಡುವ ಪ್ರಕ್ರಿಯೆ ಸ್ಥಳದಲ್ಲೇ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಅವರ ಸೂಚನೆಯಂತೆ ಬರ್ಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಚತುಷ್ಪಥ ಹೆದ್ದಾರಿಗೆ ಆಸ್ತಿಪಾಸ್ತಿ ಕಳೆದುಕೊಳ್ಳುವವರಿಗೆ ಪರಿಹಾರ ವಿತರಿಸಲು ಉಪವಿಭಾಗಾಧಿಕಾರಿ ರಮೇಶ್ ಕಳಸದ ಅವರು ತಮ್ಮ ಸಿಬ್ಬಂದಿಗಳೊಂದಿಗೆ ಶನಿವಾರ ಗ್ರಾಮಕ್ಕೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿ ಪರಿಹಾರ ವಿತರಿಸಿದರು.
ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ ಮತ್ತು ಕಾರವಾರ ತಾಲೂಕಿನಲ್ಲಿ ಹಾದುಹೋಗುವ ಚತುಷ್ಪಥ ಹೆದ್ದಾರಿಯಿಂದಾಗಿ ಸಾವಿರಾರು ಮಂದಿ ತಮ್ಮ ಮನೆಮಾರುಗಳನ್ನು ಕಳೆದುಕೊಳ್ಳುತ್ತಿದ್ದು, ಪರಿಹಾರಕ್ಕಾಗಿ ರಾಷ್ಟೀಯ ಹೆದ್ದಾರಿ ಭೂಸ್ವಾಧೀನ ಪ್ರಾಧಿಕಾರದ ಕಚೇರಿಗೆ ತೆರಳಬೇಕಾಗಿತ್ತು. ಜನರಿಗೆ ಸಿಗಬೇಕಾದ ಪರಿಹಾರದ ಹಣಕ್ಕಾಗಿ ಕಚೇರಿಗಳ ಮುಂದೆ ನಿಲ್ಲುವುದನ್ನು ತಪ್ಪಿಸಲು ಅಧಿಕಾರಿಗಳೇ ಗ್ರಾಮಗಳಿಗೆ ತೆರಳಿ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಲು ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದ್ದಾರೆ.
ಈಗಾಗಲೇ ಜಿಲ್ಲೆಯಲ್ಲಿ ಪರಿಹಾರ ಪ್ರಕ್ರಿಯೆ ಪ್ರಾರಂಭಿಸಲಾಗಿದ್ದು ಹಲವು ಪ್ರಕರಣಗಳಲ್ಲಿ ಪರಿಹಾರವನ್ನು ವಿತರಿಸಲಾಗಿದೆ. ಬಾಕಿ ಉಳಿದಿರುವ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವ ಉದ್ದೇಶದಿಂದ ಅಧಿಕಾರಿಗಳೇ ಗ್ರಾಮಗಳಿಗೆ ಭೇಟಿ ನೀಡಿ ಅಭಿಯಾನದ ರೀತಿಯಲ್ಲಿ ಪ್ರಕರಣ ಇತ್ಯರ್ಥಗೊಳಿಸಲು ಸೂಚಿಸಲಾಗಿದೆ.
ದಾಖಲೆಗಳನ್ನು ಅಧಿಕಾರಿಗಳೇ ಸಲ್ಲಿಸಬೇಕು: ಇಷ್ಟು ಮಾತ್ರವಲ್ಲದೆ ಕಂದಾಯ ಇಲಾಖೆಗೆ ಸಂಬಂಧಿಸಿದ ದಾಖಲೆಗಳನ್ನು ಜನರಿಂದ ಕೇಳಬಾರದು. ಆರ್‍ಟಿಸಿ, ಸರ್ವೇ ನಂ ಮ್ಯುಟೇಶನ್ ಎಂಟ್ರಿ, ಫಾರಂ 7 ಮತ್ತು 7ಎ ಪ್ರಮಾಣ ಪತ್ರ, ಸರ್ಕಾರಿ ಬಾಕಿ ಇಲ್ಲದಿರುವ ಬಗ್ಗೆ, ವಂಶಾವಳಿ ಇತ್ಯಾದಿ ದಾಖಲೆಗಳನ್ನು ಕಂದಾಯ ಇಲಾಖೆಯ ಅಧಿಕಾರಿಗಳೇ ಸಲ್ಲಿಸಲು ಸೂಚಿಸಲಾಗಿದೆ. ಇದರಿಂದ ಕೆಲವು ದಾಖಲೆಗಳನ್ನು ಸಂಗ್ರಹಿಸುವ ಜನರ ಹೊರೆ ಕಡಿಮೆಯಾದಂತಾಗಲಿದೆ ಎಂದು ಜಿಲ್ಲಾಧಿಕಾರಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
``ಕೆಲವು ಮಂದಿ ಬ್ಯಾಂಕ್ ಖಾತೆ ವಿವರ ಇತ್ಯಾದಿ ವೈಯಕ್ತಿಕ ದಾಖಲೆಗಳನ್ನು ನೀಡಲು ಮುಂದೆ ಬರುತ್ತಿಲ್ಲ. ಇದರಿಂದಾಗಿ ಕೆಲವು ಪ್ರಕರಣಗಳನ್ನು ವಿಲೇವಾರಿ ಮಾಡಲು ವಿಳಂಬವಾಗುತ್ತಿದೆ. ಫಲಾನುಭವಿಗಳು ಅಗತ್ಯವಿರುವ ತಮ್ಮ ವೈಯಕ್ತಿಕ ದಾಖಲೆಗಳನ್ನು ಗ್ರಾಮ ಲೆಕ್ಕಾಧಿಕಾರಿಗಳಿಗೆ ನೀಡಿದ್ದಲ್ಲಿ ಅಂತಹ ಪ್ರಕರಣಗಳನ್ನು ವಿಲೇವಾರಿ ಮಾಡಲು ಅನುಕೂಲವಾಗುತ್ತದೆ’’ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ.
``ಬಾಕಿ ಉಳಿದಿರುವ ಪರಿಹಾರ ವಿತರಣೆ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ನಿಗದಿತ ಗ್ರಾಮ ಚಾವಡಿಗೆ ಭೇಟಿ ನೀಡಿ ಸ್ಥಳದಲ್ಲಿಯೇ ದಾಖಲೆಗಳನ್ನು ಪರಿಶೀಲಿಸಿ ಅಂತಿಮಗೊಳಿಸಲಾಗುತ್ತಿದೆ. ಬರ್ಗಿ, ಧಾರೇಶ್ವರ, ಹೊಳಗದ್ದೆ, ಮಠಗ್ರಾಮ ವ್ಯಾಪ್ತಿಯಲ್ಲಿ ಈಗಾಗಲೇ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಎ.25ರಿಂದ ಅಂಕೋಲಾ ತಾಲೂಕಿನಲ್ಲಿ ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ಗ್ರಾಮಗಳಿಗೆ ಭೇಟಿ ನೀಡಲಾಗುವುದು. ಸುತ್ತಮುತ್ತಲಿನ ಗ್ರಾಮಸ್ಥರು ಗ್ರಾಮ ಚಾವಡಿಗೆ ಆಗಮಿಸಿ ಕಂದಾಯ ಇಲಾಖೆಗೆ ಹೊರತುಪಡಿಸಿದ ದಾಖಲೆಗಳು ಹಾಗೂ ವೈಯಕ್ತಿಕ ದಾಖಲೆಗಳನ್ನು ಸಲ್ಲಿಸಿದರೆ ಸಾಕು. ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ಪರಿಹಾರ ಮೊತ್ತ ಅವರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಆಗಲಿದೆ’’ ಎಂದು ರಮೇಶ ಕಳಸದ ತಿಳಿಸಿದ್ದಾರೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...