ಆಮಿಷಕ್ಕೆ ಬಲಿಯಾಗಿ ಪ್ರಶ್ನಿಸುವ ಹಕ್ಕು ಕಳೆದುಕೊಳ್ಳಬೇಡಿ: ಜಿಲ್ಲಾ ನ್ಯಾಯಾಧೀಶರ ಕಿವಿಮಾತು

Source: sonews | By Staff Correspondent | Published on 25th January 2019, 11:11 PM | Coastal News |

ಕಾರವಾರ: ಚುನಾವಣೆಗಳಲ್ಲಿ ಆಮಿಷಗಳಿಗೆ ಬಲಿಯಾಗಿ ಚುನಾಯಿತರ ಜವಾಬ್ದಾರಿ ಪ್ರಶ್ನಿಸುವ ಹಕ್ಕನ್ನು ಕಳೆದುಕೊಳ್ಳಬೇಡಿ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ಜಿ.ಶಿವಶಂಕರೇಗೌಡ ಮತದಾರರಿಗೆ ಕಿವಿಮಾತು ಹೇಳಿದ್ದಾರೆ.

ಭಾರತ ಚುನಾವಣಾ ಆಯೋಗ, ಉತ್ತರ ಕನ್ನಡ ಜಿಲ್ಲಾಡಳಿತ, ಕರ್ನಾಟಕ ಮಾನವ ಹಕ್ಕುಗಳ ಆಯೋಗ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಶುಕ್ರವಾರ ಕಾರವಾರದ ಜಿಲ್ಲಾ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಹಾಗೂ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಚುನಾವಣೆ ಹುರಿಯಾಳುಗಳು ನೀಡುವ ಆಮಿಷಗಳಿಗೆ ಬಳಿಯಾದರೆ ಮುಂದೆ ಐದು ವರ್ಷಕಾಲ ಆಳುವ ಅವರ ಅಧಿಕಾರದ ಸಂದರ್ಭದಲ್ಲಿ ಅಭಿವೃದ್ಧಿಯ ಕುರಿತು ಅವರನ್ನು ಪ್ರಶ್ನಿಸುವ ಹಕ್ಕನ್ನೇ ಮತದಾರರು ಕಳೆದುಕೊಳ್ಳುತ್ತೀರಿ. ಆಮಿಷ ತೋರಿಸಿ ಆಯ್ಕೆಯಾದವರು ಜನರ ಹಿತದ ಜವಾಬ್ದಾರಿ ಮರೆತುಬಿಡಬಹುದು ಎಂದು ಅವರು ಮತದಾರರಿಗೆ ಕಿವಿಮಾತು ಹೇಳಿದರು.

ಜನಪರಿವರ್ತನೆಯ ಚುನಾವಣೆ ನಡೆಸುವ ಮೂಲಕ ಮತದಾನದ ಮೌಲ್ಯವನ್ನು ಉಳಿಸುವ ಜವಾಬ್ದಾರಿ ಪ್ರತಿ ಭಾರತದ ಮತದಾರರದ್ದಾಗಿದೆ. ಈ ಹಿನ್ನೆಲೆ ಯಾವುದೇ ಆಮಿಷಗಳಿಗೆ ಒಳಗಾಗದೇ ದೇಶದ ಅಭಿವೃದ್ಧಿ ದೃಷ್ಟಿಯಿಂದ ನಿರ್ಭಿಡೆಯ ಚುನಾವಣೆಯ ಪಾಲ್ಗೊಳ್ಳುವಿಕೆಯ ಅವಶ್ಯಕತೆ ಇದೆ. ಅದಕ್ಕೆ ದೇಶದ ಯುವಪೀಳಿಗೆ ಸನ್ನದ್ದವಾಗಬೇಕು ಎಂದು ಜಿಲ್ಲಾ ನ್ಯಾಯಾಧೀಶರು ಕರೆ ನೀಡಿದರು.

ಅಲ್ಲದೆ ಪರಸ್ಪರ ಎಲ್ಲರನ್ನೂ ಗೌರವಿಸುವ ಮೂಲಕ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಪ್ರತಿಯೊಬ್ಬರ ಹಕ್ಕುಗಳನ್ನು ಗೌರವಿಸಬೇಕು ಹಾಗೂ ಈ ಸಂಬಂಧಿಸಿದ ಕಾನೂನುಗಳು ಉಲ್ಲಂಘನೆಯಾಗದಂತೆ ಎಚ್ಚರ ವಹಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬರುವ ವಿರೋಧಾಭಾಸದ ಸುದ್ದಿಗಳ ಬಗ್ಗೆ ಯುವಜನತೆ ಎಚ್ಚರ ಬಹಿಸಬೇಕು. ಈ ಮೂಲಕ ಮೌಲ್ಯಾಧಾರಿತ ಚುನಾವಣೆಗೆ ಸಹಕಾರ ನೀಡಬೇಕು ಎಂದರು.

ಭಾರತ ಚುನಾವಣಾ ಆಯೋಗ ಜಾರಿಗೆ ತಂದಿರುವ ವಿದ್ಯುನ್ಮಾನ ಮತಯಂತ್ರಗಳ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಮೋಸ ಆಗಲು ಅವಕಾಶವಿಲ್ಲ. ಈ ಕುರಿತ ಊಹಾಪೋಹಗಳಿಗೆ ಕಿವಿಗೊಡಬೇಡಿ. ಈ ಚುನಾವಣೆ ವ್ಯವಸ್ಥೆಯಲ್ಲಿ ಅತ್ಯಂತ ಪ್ರಾಮಾಣಿಕ ಹಾಗೂ ಪಾರದರ್ಶಕ ಪದ್ಧತಿ ಇದ್ದು ಪ್ರತಿಯೊಬ್ಬರೂ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮೂಲಕ ಭವ್ಯಭಾರತದ ಭವಿಷ್ಯವನ್ನು ರೂಪಿಸಲು ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಟಿ.ಗೋವಿಂದಯ್ಯ ವಿಶೇಷ ಉಪನ್ಯಾಸ ನೀಡಿದರು.

ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಕಲ್ಪನಾ ಕೆರವಡಿಕರ ಪ್ರತಿಜ್ಞಾ ಬೋಧಿಸಿದರು. ಜಿಲ್ಲಾ ಪೊಲೀಸ್ ಅಧೀಕ್ಷಕ ವಿನಾಯಕ ವಿ.ಪಾಟೀಲ್, ಅಪರ ಜಿಲ್ಲಾಧಿಕಾರಿ ಡಾ.ಸುರೇಶ್ ಇಟ್ನಾಳ್ ಉಪಸ್ಥಿತರಿದ್ದರು.
ಕಾರವಾರ ಉಪ ವಿಭಾಗಾಧಿಕಾರಿ ಅಭಿಜಿನ್ ಸ್ವಾಗತಿಸಿ, ತಹಸೀಲ್ದಾರ್ ಆರ್.ವಿ.ಕಟ್ಟಿ ವಂದಿಸಿದರು.
ಕಾರ್ಯಕ್ರಮದಲ್ಲಿ ಉತ್ತಮ ಬ್ಲಾಕ್ ಮಟ್ಟದ ಅಧಿಕಾರಿಗಳಿಗೆ ಹಾಗೂ ಸ್ವೀಪ್ ವತಿಯಿಂದ ನಡೆಸಲಾದ ಚುನಾವಣೆ ಕುರಿತ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮನ ವಿತರಿಸಲಾಯಿತು. ಕಾರ್ಯಕ್ರಮಕ್ಕೆ ಮುನ್ನಾ ಜಿಲ್ಲಾಧಿಕಾರಿ ಕಚೇರಿಯಿಂದ ಜಿಲ್ಲಾ ರಂಗಮಂದಿರವರೆಗೆ ಮತದಾನದ ಜಾಗೃತಿ ಕುರಿತು ಸುಮಾರು ಒಂದು ಸಾವಿರ ವಿದ್ಯಾರ್ಥಿಗಳಿಂದ ಜಾಥಾ ನಡೆಯಿತು.
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...