ಕಾರವಾರ: ಜಿಲ್ಲೆಯ ಜಲಪಾತಗಳಿಗೆ ಜಿಲ್ಲಾಧಿಕಾರಿಗಳ ತಂಡದ ಭೇಟಿ  

Source: so english | By Arshad Koppa | Published on 27th May 2017, 10:27 AM | Coastal News |

ಕಾರವಾರ ಮೇ 25 :  ಮಳೆಗಾಲದಲ್ಲಿ ಜಿಲ್ಲೆಯ ಜಲಪಾತಗಳ ವೀಕ್ಷಣೆಗೆ ಬರುವ ಪ್ರವಾಸಿಗರ ಸುರಕ್ಷತೆಗೆ ಹಾಗೂ ಜಲಪಾತಗಳ ಪರಿಸರದ ಸ್ವಚ್ಛತೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಗುರುವಾರ ತಿಳಿಸಿದರು.


ಗುರುವಾರ ಜಿಲ್ಲೆಯ ಪ್ರಮುಖ ಜಲಪಾತಗಳಾದ ಸಾತೋಡ್ಡಿ, ಮಾಗೋಡು, ಶಿರ್ಲೆ, ವಿಭೂತಿ ಜಲಪಾತಗಳಿಗೆ ಹಿರಿಯ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಅಲ್ಲಿ ಲಭ್ಯವಿರುವ ಮೂಲಸೌಲಭ್ಯಗಳು, ಸುರಕ್ಷತಾ ಕ್ರಮಗಳು ಹಾಗೂ ಸ್ವಚ್ಚತೆಯ ಪರಿಶೀಲನೆ ನಡೆಸಿದರು.
``ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ಜಿಲ್ಲೆಯ ರುದ್ರರಮಣ ೀಯ ಜಲಪಾತಗಳ ವೀಕ್ಷಣೆಗೆ ರಾಜ್ಯದ ಮೂಲೆಮೂಲೆಗಳಿಂದ ಸಾವಿರಾರು ಮಂದಿ ಪ್ರವಾಸಿಗರು ಆಗಮಿಸುತ್ತಾರೆ. ಈ ಎಲ್ಲಾ ಪ್ರವಾಸಿಗರ ಸುರಕ್ಷತೆ ಮತ್ತು ಅವರಿಗೆ ಸೂಕ್ತ ಸೌಲಭ್ಯಗಳನ್ನು ಕಲ್ಪಿಸುವುದು ಜಿಲ್ಲಾಡಳಿತದ ಆದ್ಯತೆಯಾಗಿದೆ. ಜಲಪಾತ ಪರಿಸರದ ಸ್ವಚ್ಛತೆಯನ್ನು ಕಾಪಾಡುವುದು ಗ್ರಾಮ ಅರಣ್ಯ ಸಮಿತಿಯದ್ದು ಮಾತ್ರವಲ್ಲದೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಪ್ರವಾಸಿಗರಿಗೆ ಉತ್ತಮ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪರಿಶೀಲಿಸಲು ಪ್ರಮುಖ ಜಲಪಾತಗಳಿಗೆ ಭೇಟಿ ನೀಡಿ ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸಲಾಗಿದೆ’’ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಪ್ರವಾಸಿಗರಿಂದ ಅಭಿವೃದ್ಧಿ ಶುಲ್ಕ ಪಡೆಯುವ ಸಮಿತಿಗಳು ಅದನ್ನು ಪ್ರವಾಸಿಗರ ಸೌಲಭ್ಯಗಳ ಒದಗಿಸುವಿಕೆಗೆ ವೆಚ್ಚ ಮಾಡಬೇಕು. ಜಲಪಾತಗಳ ಪರಿಸರದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ತಪ್ಪಿಸಬೇಕು. ಈ ಕುರಿತು ಸಮಿತಿಗಳು ಪ್ರವಾಸಿಗರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಜಾರಿಗೊಳಿಸಬೇಕು. ಜಲಪಾತಗಳ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಸೂಕ್ತ ಕುಡಿಯುವ ನೀರಿನ ವ್ಯವಸ್ಥೆ, ಸುಸಜ್ಜಿತ ಶೌಚಾಲಯ ಖಾತ್ರಿಪಡಿಸಬೇಕು. ಈ ಪರಿಸರದಲ್ಲಿ ಪ್ಲಾಸ್ಟಿಕ್ ನಿಷೇಧ ಕುರಿತು, ಪ್ರಾಣ ಹಾನಿ ಸಂಭವಿಸುವ ಕುರಿತು ಎಚ್ಚರಿಕೆ ಬೋರ್ಡ್‍ಗಳನ್ನು ಹಾಕಬೇಕು. ಮೂಲಸೌಲಭ್ಯ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಸಬೇಕು ಎಂದು ಅವರು ಹೇಳಿದರು.
ಸಾತೊಡ್ಡಿ ಜಲಪಾತ ಪರಿಸರದಲ್ಲಿ ಕಸದ ರಾಶಿ ಬಿದ್ದಿದ್ದು, ಸ್ವಚ್ಛತೆ ಕಾರ್ಯ ಕೈಗೊಳ್ಳದ ಗ್ರಾಮ ಅರಣ್ಯ ಸಮಿತಿ ಸದಸ್ಯರನ್ನು ಜಿಲ್ಲಾಧಿಕಾರಿ ಅವರು ಈ ಸಂದರ್ಭದಲ್ಲಿ ತರಾಟೆಗೆ ತೆಗೆದುಕೊಂಡರು. ಪ್ರವಾಸಿಗರಿಗೆ ಹೆಚ್ಚಿನ ಸೌಲಭ್ಯ, ಜಲಪಾತ ಪ್ರದೇಶ ಅಭಿವೃದ್ಧಿ ಇತ್ಯಾದಿಗಳ ಕುರಿತು ಜಿಲ್ಲಾಧಿಕಾರಿ ಅವರು ಸ್ಥಳೀಯ ಗ್ರಾಮಸ್ಥರೊಂದಿಗೆ ಈ ಸಂದರ್ಭದಲ್ಲಿ ಸಮಾಲೋಚನೆ ನಡೆಸಿದರು. ಬೇಸಿಗೆ ಕೊನೆಯಲ್ಲಿ ಸಹ ಜಿಲ್ಲೆಯ ಜಲಪಾತಗಳಲ್ಲಿ ನೀರು ಹರಿಯುತ್ತಿದ್ದು, ರಾಜ್ಯದ ಬಹುತೇಕ ಕಡೆಗಳಲ್ಲಿ ಈ ವೇಳೆಗೆ ಜಲಪಾತಗಳು ಬತ್ತಿ ಹೋಗಿರುತ್ತವೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಜಲಪಾತಗಳ ಕುರಿತು ಪ್ರವಾಸಿಗರಿಗೆ ಅನುಕೂಲವಾಗುವಂತೆ ಮಾಹಿತಿ ಪುಸ್ತಿಕೆ ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲ್.ಚಂದ್ರಶೇಖರ ನಾಯಕ, ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ, ಅಂಕೋಲಾ-ಹುಬ್ಬಳ್ಳಿ ವಿಶೇಷ ಭೂಸ್ವಾಧೀನಾಧಿಕಾರಿ ಸದಾಶಿವ ಪ್ರಭು, ಅರಣ್ಯ ಇಲಾಖೆ ಅಧಿಕಾರಿಗಳು, ಸ್ಥಳೀಯ ಗ್ರಾಮ ಅರಣ್ಯ ಸಮಿತಿ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...