ಬರಿದಾಯಿತು ತ.ನಾ ರಾಜಕೀಯ ’ನಿಧಿ’ ;ರಾಷ್ಟ್ರಪತಿ ಸೇರಿದಂತ ಹಲವು ಮುಖಂಡರ ಸಂತಾಪ

Source: sonews | By sub editor | Published on 7th August 2018, 10:52 PM | State News | National News | Special Report | Don't Miss |

ಹೊಸದಿಲ್ಲಿ: ಡಿಎಂಕೆ ನಾಯಕ, ತಮಿಳುನಾಡಿನ ಮಾಜಿ ಸಿಎಂ ಎಂ.ಕರುಣಾನಿಧಿಯವರ ನಿಧನಕ್ಕೆ ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿ ಹಲವು ರಾಜಕೀಯ ಮುಖಂಡರು ಸಂತಾಪ ವ್ಯಕ್ತಪಡಿಸಿದ್ದಾರೆ.

 

“ಕಲೈಞರ್ ಕರುಣಾನಿಧಿ ನಿಧನದ ಸುದ್ದಿ ಕೇಳಿ ಬೇಸರಗೊಂಡಿದ್ದೇನೆ. ಅವರು ದೇಶದ ಹಿರಿಯ ನಾಯಕರಲ್ಲೊಬ್ಬರು. ನಾವು ಇಂದು ಚಿಂತಕ, ಬರಹಗಾರ, ತಳಮಟ್ಟದ ನಾಯಕರೊಬ್ಬರನ್ನು ಕಳೆದುಕೊಂಡಿದ್ದೇವೆ” ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಸ್ಪೀಕರ್ ಸುಮಿತ್ರಾ ಮಹಾಜನ್, ಕೇಂದ್ರ ಸಚಿವ ಸುರೇಶ್ ಪ್ರಭು, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್. ಜಮ್ಮು ಕಾಶ್ಮೀರ ಮಾಜಿ ಸಿಎಂ ಮೆಹಬೂಬಾ ಮುಫ್ತಿ, ಉಮರ್ ಅಬ್ದುಲ್ಲಾ ಸೇರಿ ಹಲವು ರಾಜಕೀಯ ನಾಯಕರು ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.

“ಇಂದು ನನ್ನ ಬದುಕಿನಲ್ಲಿ ಕರಾಳ ದಿನ. ಕಲೈಞರ್ ರನ್ನು ನಾವು ಕಳೆದುಕೊಂಡಿದ್ದೇವೆ” ಎಂದು ನಟ, ರಾಜಕಾರಣಿ ರಜಿನಿಕಾಂತ್ ಟ್ವೀಟ್ ಮಾಡಿದ್ದಾರೆ.

ಆ.೮ರಂದು ಕರ್ನಾಟಕ ರಾಜ್ಯದ್ಯಂತ ಶೋಕಾಚರಣೆ

ಬೆಂಗಳೂರು: ತಮಿಳುನಾಡಿನ ಮಾಜಿ ಸಿಎಂ ಎಂ.ಕರುಣಾನಿಧಿ ಅವರ ನಿಧನಕ್ಕೆ ರಾಜ್ಯ ಸರಕಾರವು ತೀವ್ರ ಸಂತಾಪ ಸೂಚಿಸಿದ್ದು, ಆ.8ರಂದು ಒಂದು ದಿನ ಕರ್ನಾಟಕದಲ್ಲಿ ರಾಜ್ಯಾದ್ಯಂತ ಶೋಕಾಚರಣೆಯನ್ನು ಆಚರಿಸಲಾಗುತ್ತದೆ. 

ಈ ಅವಧಿಯಲ್ಲಿ ಯಾವುದೇ ಅಧಿಕೃತ ಸಾರ್ವಜನಿಕ ಸಮಾರಂಭಗಳು, ಮನರಂಜನಾ ಕಾರ್ಯಕ್ರಮಗಳು ಇರುವುದಿಲ್ಲ. ಆದರೆ, ಶಾಲಾ, ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಹಾಗೂ ನಿಯಮಿತವಾಗಿ ರಾಷ್ಟ್ರಧ್ವಜವನ್ನು ಹಾರಿಸಲ್ಪಡುವ ಸರಕಾರದ ಎಲ್ಲ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧಮಟ್ಟದಲ್ಲಿ ಹಾರಿಸಲಾಗುತ್ತದೆ ಎಂದು ಸರಕಾರದ ಉಪ ಕಾರ್ಯದರ್ಶಿ ವಿಜಯಮಹಾಂತೇಶ ದಾನಮ್ಮನವರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ಕರುಣಾನಿಧಿ ರಾಜಕೀಯ ಯಾತ್ರೆಯ ಹಿನ್ನೋಟ

 

ಚೆನ್ನೈ: ‘ಕಲೈಞರ್’ ಎಂದೇ ಬೆಂಬಲಿಗರಿಂದ ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದ ಕರುಣಾನಿಧಿ ಅವರ ರಾಜಕೀಯ ಯಾತ್ರೆಯ ಒಂದು ಸಂಕ್ಷಿಪ್ತ ನೋಟ:

ಜನನ: 1924ರ ಜೂನ್ 3; ತಮಿಳುನಾಡಿನ ಅಂದಿನ ತಂಜಾವೂರು(ಇಂದು ತಿರುವರೂರ್) ಜಿಲ್ಲೆಯ ತಿರುಕ್ಕವಲೈ. ಮೊದಲ ಹೆಸರು ದಕ್ಷಿಣಾಮೂರ್ತಿ.

1938: ಜಸ್ಟಿಸ್ ಪಾರ್ಟಿಗೆ ಸೇರುವ ಮೂಲಕ ರಾಜಕೀಯ ಪ್ರವೇಶ. ಹಿಂದಿ ವಿರೋಧಿ ಚಳವಳಿಯಲ್ಲಿ ಪಾಲ್ಗೊಂಡಿದ್ದರು.

1942: ಕೈಬರಹದ, ಎಂಟು ಪುಟಗಳನ್ನು ಒಳಗೊಂಡಿದ್ದ ‘ಮನಾವರ್ ನೇಸನ್’ ಎಂಬ ಪತ್ರಿಕೆಯನ್ನು ಆರಂಭಿಸಿದರು. ಬಳಿಕ ಇದು ಡಿಎಂಕೆಯ ಮುಖವಾಣಿ ‘ಮುರಸೋಳಿ’ ಎಂಬ ಹೆಸರು ಪಡೆಯಿತು. ಬಳಿಕ ತಮಿಳುನಾಡು ತಮಿಳ್ ಮನ್ನವರ್ ಮಂದ್ರಮ್ ಎಂಬ ಸಂಘಟನೆ ಆರಂಭಿಸಿದ್ದು ಇದು ಬಳಿಕ ಡಿಎಂಕೆಯ ವಿದ್ಯಾರ್ಥಿ ಸಂಘಟನೆಯಾಗಿ ಬೆಳೆಯಿತು.

1944: ಜ್ಯುಪಿಟರ್ ಪಿಕ್ಚರ್ಸ್ ಸಂಸ್ಥೆಗೆ ಚಿತ್ರಕಥೆ ಲೇಖಕನಾಗಿ ಸೇರಿದರು.

1947: ಇವರು ಚಿತ್ರಕಥೆ ಬರೆದ ಪ್ರಥಮ ಸಿನೆಮ ‘ರಾಜಕುಮಾರಿ’ ಬಿಡುಗಡೆ.

1949: ದ್ರಾವಿಡರ್ ಕಳಗಂನಿಂದ ದೂರವಾಗಿದ್ದ ಅಣ್ಣಾದುರೈ ಜೊತೆ ಸೇರಿ ಡಿಎಂಕೆ ಸ್ಥಾಪನೆ.

1952: ಕರುಣಾನಿಧಿ ಚಿತ್ರಕಥೆ ಬರೆದಿದ್ದ ಯಶಸ್ವೀ ಸೂಪರ್‌ಹಿಟ್ ಸಿನೆಮ ‘ಪರಾಶಕ್ತಿ’ ಬಿಡುಗಡೆ. ದ್ರಾವಿಡರ ಚಳವಳಿಯ ತಿರುಳನ್ನು ಹೊಂದಿದ್ದ ಪ್ರಥಮ ಚಿತ್ರವಿದು.

1953: ಕಲ್ಲಕುಡಿ ನಗರವನ್ನು ದಾಲ್ಮಿಯಾಪುರಂ(ಸಿಮೆಂಟ್ ಸಂಸ್ಥೆಯೊಂದರ ಹೆಸರು) ಎಂದು ಮರುನಾಮಕರಣಗೊಳಿಸುವ ನಿರ್ಧಾರವನ್ನು ವಿರೋಧಿಸಿ ರೈಲು ಹಳಿಗಳ ಮೇಲೆ ಮಲಗಿ ಪ್ರತಿಭಟನೆ. 3 ತಿಂಗಳ ಸೆರೆವಾಸದ ಶಿಕ್ಷೆ.

1957: ಕುಳಿತಲೈ ವಿಧಾನಸಭಾ ಕ್ಷೇತ್ರದಿಂದ ಮೊತ್ತ ಮೊದಲ ಬಾರಿಗೆ ಚುನಾಯಿತರಾದರು.

1961: ಡಿಎಂಕೆಯ ಖಜಾಂಚಿಯಾಗಿ ನೇಮಕ.

1962: ವಿಧಾನಸಭೆಯಲ್ಲಿ ವಿರೋಧಪಕ್ಷಗಳ ಉಪನಾಯಕನಾಗಿ ನೇಮಕ.

1967: ಡಿಎಂಕೆ ಮೊತ್ತಮೊದಲ ಬಾರಿಗೆ ಅಧಿಕಾರಕ್ಕೆ. ಅಣ್ಣಾದುರೈ ಸಂಪುಟದಲ್ಲಿ ಕರುಣಾನಿಧಿ ಲೋಕೋಪಯೋಗಿ ಇಲಾಖೆಯ ಸಚಿವರಾಗಿ ನೇಮಕ.

1969: ಅಣ್ಣಾದುರೈ ನಿಧನದ ಬಳಿಕ ಮೊತ್ತಮೊದಲ ಬಾರಿಗೆ ತಮಿಳುನಾಡಿನ ಮುಖ್ಯಮಂತ್ರಿಯಾದರು.

1972: ಕರುಣಾನಿಧಿಯಿಂದ ದೂರವಾದ ಎಂಜಿಆರ್ ಎಐಎಡಿಎಂಕೆ ಸ್ಥಾಪಿಸಿದರು.

1976: ಭ್ರಷ್ಟಾಚಾರದ ಆರೋಪದಲ್ಲಿ ಕರುಣಾನಿಧಿ ಸರಕಾರವನ್ನು ಇಂದಿರಾಗಾಂಧಿ ವಜಾಗೊಳಿಸಿದರು.

1977: ಎಐಎಡಿಎಂಕೆ ಅಧಿಕಾರಕ್ಕೆ ಬಂದಿತು. ಮುಂದಿನ 13 ವರ್ಷ ಕರುಣಾನಿಧಿ ವಿಪಕ್ಷದ ಸ್ಥಾನದಲ್ಲಿ ಕುಳಿತರು.

1989: ಎಂಜಿಆರ್ ನಿಧನದ ಬಳಿಕ ಡಿಎಂಕೆ ಹಾಗೂ ಕರುಣಾನಿಧಿ ಮರಳಿ ಅಧಿಕಾರಕ್ಕೆ.

1991, ಜನವರಿ: ಎಲ್‌ಟಿಟಿಇಗೆ ನಿಕಟವಾಗಿದೆ ಎಂಬ ಕಾರಣ ನೀಡಿ ಕೇಂದ್ರ ಸರಕಾರ ಡಿಎಂಕೆ ಸರಕಾರವನ್ನು ವಜಾಗೊಳಿಸಿತು.

1991, ಮೇ: ರಾಜೀವ್‌ಗಾಂಧಿಯವರ ಹತ್ಯೆ; ಎಐಎಡಿಎಂಕೆ-ಕಾಂಗ್ರೆಸ್ ಮಿತ್ರಕೂಟ ಚುನಾವಣೆಯಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆಯಿತು.

1996: ರಜನೀಕಾಂತ್ ಡಿಎಂಕೆ-ಟಿಎಂಸಿ ಮೈತ್ರಿಕೂಟವನ್ನು ಬೆಂಬಲಿಸಿದ ಬಳಿಕ ಜಯಲಲಿತಾರನ್ನು ಅಧಿಕಾರದಿಂದ ಕೆಳಗಿಳಿಸಿ ಮರಳಿ ಅಧಿಕಾರಕ್ಕೆ.

2001: ಭ್ರಷ್ಟಾಚಾರ ಆರೋಪದಲ್ಲಿ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಸರಕಾರ ಕರುಣಾನಿಧಿ, ಸ್ಟಾಲಿನ್ ಹಾಗೂ ಮಾರನ್‌ರನ್ನು ಬಂಧಿಸಿತು.

2004: ಲೋಕಸಭಾ ಚುನಾವಣೆಯಲ್ಲಿ 40 ಸ್ಥಾನ ಪಡೆದಿದ್ದ ಡಿಎಂಕೆ ನೇತೃತ್ವದ ಮಿತ್ರಕೂಟ ಕೇಂದ್ರ ಸರಕಾರದಲ್ಲಿ 7 ಸಚಿವ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಯಿತು.

2006: ಐದನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ.

2009: ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ ಒಳಗಾದರು. ಬಳಿಕ ಗಾಲಿಕುರ್ಚಿಯ ಸಹಾಯ ಪಡೆಯಬೇಕಾಯಿತು.

2010: 2ಜಿ ಸ್ಪೆಕ್ಟ್ರಮ್ ಹಗರಣದಲ್ಲಿ ಕೇಂದ್ರದ ಟೆಲಿಕಾಂ ಸಚಿವ ಎ.ರಾಜ ಹೆಸರು ಕೇಳಿಬಂದಿತು.

2011: 2ಜಿ ಹಗರಣದಲ್ಲಿ ಕರುಣಾನಿಧಿ ಪುತ್ರಿ ಕನಿಮೋಳಿ ಬಂಧನ. ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆಗೆ ಸೋಲು.

2013, ಜನವರಿ: ತನ್ನ ಉತ್ತರಾಧಿಕಾರಿಯಾಗಿ ಸ್ಟಾಲಿನ್ ಹೆಸರು ಘೋಷಣೆ .

2013, ಮಾರ್ಚ್: ಈಳಂ ತಮಿಳು ವಿವಾದ ; ಯುಪಿಎಯಿಂದ ಹಿಂದೆ ಸರಿದ ಡಿಎಂಕೆ, ಕೇಂದ್ರ ಸಂಪುಟಕ್ಕೆ ಡಿಎಂಕೆ ಸಚಿವರ ರಾಜೀನಾಮೆ.

2014: ಪಕ್ಷದಿಂದ ಹಿರಿಯ ಪುತ್ರ ಅಳಗಿರಿ ಉಚ್ಛಾಟನೆ; ವಯಸ್ಸನ್ನು ಮರೆತು ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡರೂ ಡಿಎಂಕೆಗೆ ಸೋಲು. ಆದರೆ ತಿರುವರೂರ್ ಸ್ಥಾನ ಉಳಿಸಿಕೊಂಡ ಕರುಣಾನಿಧಿ.

2016: ಆಸ್ಪತ್ರೆಗೆ ದಾಖಲು; ಕೆಲ ದಿನದ ಬಳಿಕ ಬಿಡುಗಡೆ.

2017, ಜನವರಿ: ಬಿಗಡಾಯಿಸಿದ ಆರೋಗ್ಯಸ್ಥಿತಿ. ಡಿಎಂಕೆ ಕಾರ್ಯಾಧ್ಯಕ್ಷರಾಗಿ ಸ್ಟಾಲಿನ್ ಆಯ್ಕೆ. 2017, ಮೇ: ವಿಧಾನಸಭಾ ಶಾಸಕನಾಗಿ 60 ವರ್ಷ ಪೂರ್ಣ.

2017, ಅಕ್ಟೋಬರ್: ಪಕ್ಷದ ಮುಖವಾಣಿ ‘ಮುರಸೋಳಿ’ಯ 75ನೇ ವರ್ಷಾಚರಣೆಯ ಸಂಭ್ರಮದಲ್ಲಿ ಪಾಲ್ಗೊಳ್ಳಲು ಪತ್ರಿಕೆಯ ಕಚೇರಿಗೆ ಆಗಮನ. ಒಂದು ವರ್ಷದ ಬಳಿಕ ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಂಡರು.

2018 ಜೂನ್: 94ನೇ ಜನ್ಮದಿನಾಚರಣೆ.

Read These Next

ಗಡಿಯಾರ ವ್ಯಾಪಾರಿಯನ್ನು”ಭಯೋತ್ಪಾದಕ’ ಎಂದು ಬಿಂಬಿಸಿದ ಮಾಧ್ಯಮಗಳಿಗೆ ಛೀ,ಥೂ ಎನ್ನುತ್ತಿರುವ ಸಾರ್ವಜನಿಕರು

ಬೆಂಗಳೂರು: ಅಮಾಯಕ ಗಡಿಯಾರ ವ್ಯಾಪಾರಿಯೊಬ್ಬರನ್ನು ‘ಉಗ್ರ’ನೆಂದು ಬಿಂಬಿಸಿ ಕೆಲ ಸುದ್ದಿ ಚಾನೆಲ್ ಗಳು ಸುಳ್ಳು ವದಂತಿಗಳನ್ನು ...

ಬಿಜೆಪಿ ಹಿಂದುಳಿದವರನ್ನು ತುಳಿಯುವ ಸಂಚು ರೂಪಿಸಿದೆ, ಭಟ್ಕಳದಲ್ಲಿ ಬಿಜೆಪಿ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

ಬಿಜೆಪಿ ಮೇಲ್ನೋಟಕ್ಕೆ ಅಲ್ಪಸಂಖ್ಯಾತರನ್ನು ವಿರೋಧಿಸುವ ಪಕ್ಷವಾಗಿ ಮೇಲ್ನೋಟಕ್ಕೆ ಕರೆಯಿಸಿಕೊಳ್ಳುತ್ತಿದೆಯಾದರೂ, ವಾಸ್ತವಾಗಿ ...

ಪ್ರಜಾತಂತ್ರ ಮತ್ತು ವಿನಯ

ಆದರೆ ತಮ್ಮ ವಿರೋಧಿಗಳಲ್ಲಿ ಮಾತ್ರವಲ್ಲದೆ ಒಂದು ಸಭ್ಯ ಸಮಾಜವು ಪಸರಿಸಬೇಕೆಂಬ ಆಶಯವುಳ್ಳವರಲ್ಲೂ ಸಹ ಒಂದು ಬಗೆಯ ಹತಾಷ ಭಾವಗಳನ್ನು ...

ಆಂಧ್ರಪ್ರದೇಶದಲ್ಲಿ ಹಿಂಸಾಚಾರಕ್ಕೆ ತಿರುಗಿದ ಚುನಾವಣೆ: ಟಿಡಿಪಿ, ವೈಎಸ್​ಆರ್​ ಪಕ್ಷಗಳ ಇಬ್ಬರು ಕಾರ್ಯಕರ್ತರ ಸಾವು

ಆಂಧ್ರಪ್ರದೇಶದಲ್ಲಿ ಹಿಂಸಾಚಾರಕ್ಕೆ ತಿರುಗಿದ ಚುನಾವಣೆ: ಟಿಡಿಪಿ, ವೈಎಸ್​ಆರ್​ ಪಕ್ಷಗಳ ಇಬ್ಬರು ಕಾರ್ಯಕರ್ತರ ಸಾವು

ಪ್ರಜಾತಂತ್ರ ಮತ್ತು ವಿನಯ

ಆದರೆ ತಮ್ಮ ವಿರೋಧಿಗಳಲ್ಲಿ ಮಾತ್ರವಲ್ಲದೆ ಒಂದು ಸಭ್ಯ ಸಮಾಜವು ಪಸರಿಸಬೇಕೆಂಬ ಆಶಯವುಳ್ಳವರಲ್ಲೂ ಸಹ ಒಂದು ಬಗೆಯ ಹತಾಷ ಭಾವಗಳನ್ನು ...

ಗಡಿಯಾರ ವ್ಯಾಪಾರಿಯನ್ನು”ಭಯೋತ್ಪಾದಕ’ ಎಂದು ಬಿಂಬಿಸಿದ ಮಾಧ್ಯಮಗಳಿಗೆ ಛೀ,ಥೂ ಎನ್ನುತ್ತಿರುವ ಸಾರ್ವಜನಿಕರು

ಬೆಂಗಳೂರು: ಅಮಾಯಕ ಗಡಿಯಾರ ವ್ಯಾಪಾರಿಯೊಬ್ಬರನ್ನು ‘ಉಗ್ರ’ನೆಂದು ಬಿಂಬಿಸಿ ಕೆಲ ಸುದ್ದಿ ಚಾನೆಲ್ ಗಳು ಸುಳ್ಳು ವದಂತಿಗಳನ್ನು ...