ಕೇರಳ: ಸಿಪಿಎಂ ಸಮಾರಂಭದ ಬಳಿ ಬಾಂಬು ಎಸೆತ: ೧೦ ಜನರ ಬಂಧನ

Source: S O News service | By sub editor | Published on 27th January 2017, 11:11 PM | National News | Incidents | Don't Miss |

ಕೇರಳ: ಕೇರಳದ ಕಣ್ಣೂರಿನಲ್ಲಿ ಗುರುವಾರ ರಾತ್ರಿ ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅವರ ಬಹಿರಂಗ ಸಭೆಯ ಸ್ಥಳದ ಬಳಿ ಬಾಂಬ್ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಸಿಪಿಎಂಗೆ ಸೇರಿದ್ದ 10 ಜನರನ್ನು ಪೊಲೀಸರಿಂದು ವಶಕ್ಕೆ ತೆಗೆದುಕೊಂಡಿದ್ದಾರೆ.

 ಬಾಂಬ್ ಎಸೆತ ಘಟನೆಯ ಹಿಂದೆ ಬಿಜೆಪಿ ಮತ್ತು ಆರೆಸ್ಸೆಸ್ ಕೈವಾಡವಿದೆ ಎಂದು ಸಿಪಿಎಂ ಆರೋಪಿಸಿದೆ. ಆರೋಪವನ್ನು ತಿರಸ್ಕರಿಸಿರುವ ಬಿಜೆಪಿಯು ಸಿಪಿಎಂ ಸುಳ್ಳುಸುದ್ದಿಯನ್ನು ಹರಡಲು ಮತ್ತು ಜಿಲ್ಲೆಯಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸಲು ಯತ್ನಿಸುತ್ತಿದೆ ಎಂದು ಹೇಳಿದೆ. ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ ಮತ್ತು ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಪೊಲೀಸರು ತಿಳಿಸಿದರು.

 ಕಣ್ಣೂರಿನ ನ್ಯೂ ಮಾಹೆ ಪ್ರದೇಶದ ನಂಗಾರ್ತುಪೀಡಿಕ ಎಂಬಲ್ಲಿ ಕಳೆದ ರಾತ್ರಿ ಸಿಪಿಎಂ ಬಹಿರಂಗ ಸಭೆಯ ತಾಣದ ಬಳಿ ಬಾಂಬ್ ಎಸೆಯಲಾಗಿತ್ತು. ಇದಕ್ಕೆ ಪ್ರತೀಕಾರವಾಗಿ ನೆರೆಯ ಕೊಝಿಕೋಡೆ ಜಿಲ್ಲೆಯ ನಾದಾಪುರಂ ಮತ್ತು ವಡಗರಗಳಲ್ಲಿ ಸಿಪಿಎಂ ಕಾರ್ಯಕರ್ತರೆನ್ನಲಾದ ಗುಂಪುಗಳು ಬಿಜೆಪಿ ಕಚೇರಿಗಳ ಮೇಲೆ ದಾಳಿಗಳನ್ನು ನಡೆಸಿದ್ದವು. ಇದನ್ನು ಖಂಡಿಸಿ ಬಿಜೆಪಿ ಪ್ರದೇಶದಲ್ಲಿ ಇಂದು ಬೆಳಿಗ್ಗೆಯಿಂದ ಸಂಜೆಯವರೆಗೆ ಹರತಾಳಕ್ಕೆ ಕರೆ ನೀಡಿತ್ತು. ಈ ಸಂದರ್ಭ ಸಿಪಿಎಂ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಹೊಯ್‌ಕೈ ನಡೆದಿದ್ದು, ಸ್ಥಳೀಯ ಬಿಜೆಪಿ ಪಂಚಾಯತ್ ಅಧ್ಯಕ್ಷರ ಮೇಲೆ ಹಲ್ಲೆಯಾಗಿದೆ.

 ಘಟನೆಗೆ ಪ್ರತಿಕ್ರಿಯಿಸಿರುವ ಬಾಲಕೃಷ್ಣನ್ ಇದು ಜನರನ್ನು ಪ್ರಚೋದಿಸಲು ರೂಪಿಸಲಾಗಿದ್ದ ಸಂಚು ಎಂದು ಆರೋಪಿಸಿದ್ದರೆ, ನರೇಂದ್ರ ಮೋದಿ ಸರಕಾರದ ನೆರಳಿನಡಿ ಬಿಜೆಪಿ ಮತ್ತು ಆರೆಸ್ಸೆಸ್ ಪ್ರಚೋದನೆಯ ಮೂಲಕ ಉದ್ವಿಗ್ನತೆಯನ್ನು ಸೃಷ್ಟಿಸಲು ಪದೇ ಪದೇ ಯತ್ನಿಸುತ್ತಿವೆ ಎಂದು ಹಿರಿಯ ಸಿಪಿಎಂ ನಾಯಕ ವಿ.ಎಸ್. ಅಚ್ಯುತಾನಂದನ್ ಆಪಾದಿಸಿದರು.

ಪಕ್ಷದ ವಿರುದ್ಧದ ಆರೋಪಗಳನ್ನು ನಿರಾಕರಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಕುಮ್ಮಣಂ ರಾಜಶೇಖರನ್ ಅವರು,ಬಾಲಕೃಷ್ಣನ್ ಅವರ ಸಭೆಯ ಸ್ಥಳದ ಬಳಿ ಬಾಂಬ್ ಎಸೆಯಲಾಗಿದೆ ಎಂಬ ಸುಳ್ಳುಸುದ್ದಿಯನ್ನು ಹಬ್ಬಿಸುವ ಮೂಲಕ ಜಿಲ್ಲೆಯಲ್ಲಿ ಭಾರೀ ಹಿಂಸಾಚಾರವನ್ನು ಹುಟ್ಟುಹಾಕಲು ಸಿಪಿಎಂ ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ.

Read These Next

ದಾವಣಗೆರೆ: ಯುವಕನ ಬರ್ಬರ ಕೊಲೆ

ದಾವಣಗೆರೆ: ಯುವಕನೋರ್ವನನ್ನು ಮಾರಕಾಯುಧಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆಗೈದ ಘಟನೆ ಹರಿಹರ ತಾಲೂಕಿನ ವಿದ್ಯಾನಗರ ಎಂಬಲ್ಲಿ ಇಂದು ...

ವಿವಾಹಿತ ಮಹಿಳೆ ಆತ್ಮಹತ್ಯೆ

ಶ್ರೀನಿವಾಸಪುರ: ತಾಲ್ಲೂಕಿನ ಯಲ್ದೂರು ಗ್ರಾಮದಲ್ಲಿ ಬುಧವಾರ ರಾತ್ರಿ ವಿವಾಹಿತ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ...