ಗೋವಾದ ದಬೊಲಿಮ್ ವಿಮಾನ ನಿಲ್ದಾಣದಲ್ಲಿ ರನ್ ವೇಯಲ್ಲಿ ಜಾರಿದ ಜೆಟ್ ಏರ್ ವೇಸ್ ; 15 ಪ್ರಯಾಣಿಕರಿಗೆ ಗಾಯ

Source: S O News | By MV Bhatkal | Published on 27th December 2016, 8:34 PM | National News |

ಪಣಜಿ: ಗೋವಾದ ದಬೊಲಿಮ್ ವಿಮಾನ ನಿಲ್ದಾಣದಲ್ಲಿ ಗೋವಾದಿಂದ ಮುಂಬೈಗೆ ಹೊರಟಿದ್ದ 9 ಡಬ್ಲ್ಯು 2374 ಜೆಟ್ ಏರ್ ವೇಸ್ ವಿಮಾನ ರನ್ ವೇಯಲ್ಲಿ ಹಠಾತ್ತನೆ ಜಾರಿದ ಘಟನೆ ಇಂದು ಬೆಳಗಿನ ಜಾವ 4.45ರ ಸುಮಾರಿಗೆ ನಡೆದಿದೆ.

ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ. ಸಣ್ಣಪುಟ್ಟ ಗಾಯಗಳಾದ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ವಿಮಾನದಲ್ಲಿ ಏಳು ಮಂದಿ ಸಿಬ್ಬಂದಿ ಹಾಗೂ 151 ಮಂದಿ ಪ್ರಯಾಣಿಕರು ಇದ್ದರು.ವಿಮಾನದಿಂದ ಕೆಳಗಿಳಿಸುವಾಗ ಸಣ್ಣಪುಟ್ಟ ಗಾಯಗಳಾಗಿರುವುದು ಬಿಟ್ಟರೆ ಉಳಿದವರೆಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ಜೆಟ್ ಏರ್ ವೇಸ್ ತಿಳಿಸಿದೆ.

ವಿಮಾನಕ್ಕೆ ಕೂಡ ಸಣ್ಣ ಪ್ರಮಾಣದಲ್ಲಿ ಹಾನಿಯಾಗಿದೆ. ಗಾಯಗೊಂಡ 15 ಮಂದಿ ಪ್ರಯಾಣಿಕರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ವಿಮಾನ 360 ಡಿಗ್ರಿಯಲ್ಲಿ ರನ್ ವೇಯಲ್ಲಿ ಜಾರಿತು. ಅವಘಡಕ್ಕೆ ಕಾರಣ ತಿಳಿದುಬಂದಿಲ್ಲ. ತನಿಖೆ ನಡೆಯುತ್ತಿದೆ.

ಕ್ಷಿಪ್ರ ಪ್ರಿತಿಕ್ರಿಯೆಯಿಂದಾಗಿ ಮಹಾ ದುರಂತವನ್ನು ತಪ್ಪಿಸಲಾಯಿತು ಎಂದು ನೌಕಾಪಡೆ ತಿಳಿಸಿದೆ. ಪ್ರಯಾಣಿಕರನ್ನು ಹೊರತೆಗೆಯುವಾಗ ಹಠಾತ್ತನೆ ವಿಮಾನ ಮುಂದಕ್ಕೆ ಬಾಗಿತು. ಇದರಿಂದ ಪ್ರಯಾಣಿಕರಲ್ಲಿ ಆತಂಕ, ಭಯ ಉಂಟಾಗಿತ್ತು. ಜೆಟ್ ಏರ್ ವೇಸ್ ಮತ್ತು ವಿಮಾನ ನಿಲ್ದಾಣ ಅಧಿಕಾರಿಗಳು ಒಟ್ಟು ಸೇರಿ ಪ್ರಯಾಣಿಕರನ್ನು ವಿಮಾನದಿಂದ ಹೊರತೆಗೆಯುವಲ್ಲಿ ಮತ್ತು ಗಾಯಗೊಂಡ ಪ್ರಯಾಣಿಕರಿಗೆ ಚಿಕಿತ್ಸೆ ಕೊಡಿಸುವಲ್ಲಿ ನೆರವಾದರು.

ದುಬೈಯಿಂದ ಬಂದ 9 ಡಬ್ಲ್ಯು 2374 ವಿಮಾನ ಮುಂಬೈಗೆ ಹೊರಟು ರನ್ ವೇಯಲ್ಲಿ ಹೋಗುತ್ತಿದ್ದಾಗ ಇನ್ನೇನು ಟೇಕ್ ಆಫ್ ಆಗಬೇಕು ಅನ್ನುವಷ್ಟರಲ್ಲಿ ದುರಂತ ನಡೆದಿದೆ. ಐಎನ್ಎಸ್ ಹಂಸ ವಾಸ್ಕೊ ಪಟ್ಟಣದಲ್ಲಿದ್ದು ಇದು ಇರುವುದು ಗೋವಾದಿಂದ 25 ಕಿಲೋ ಮೀಟರ್ ದೂರದಲ್ಲಿ.

ರಕ್ಷಣಾ ಕಾರ್ಯದ ಹೊತ್ತಿನಲ್ಲಿ ಗೋವಾ ವಿಮಾನ ನಿಲ್ದಾಣಕ್ಕೆ ಬರಬೇಕಿದ್ದ ವಿಮಾನವನ್ನು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮತ್ತು ಒಮನ್ ಏರ್ ವಿಮಾನವನ್ನು ಮುಂಬೈಗೆ ತಿರುಗಿಸಲಾಯಿತು. ಏಳು ವಿಮಾನಗಳನ್ನು ರದ್ದುಪಡಿಸಲಾಯಿತು. ಮತ್ತೆರಡು ವಿಮಾನಗಳು ನಿಗದಿತ ವೇಳೆಗೆ ಹಾರಾಟ ನಡೆಸಲಿಲ್ಲ.

ಪ್ರಯಾಣಿಕರಿಗೆ ಅನನುಕೂಲವಾಗದಂತೆ ಬದಲಿ ವಿಮಾನದ ವ್ಯವಸ್ಥೆಯನ್ನು ಮಾಡಲಾಗುವುದು. ವಿಮಾನ ನಿಲ್ದಾಣ ಕೂಡಲೇ ಸಹಜ ಸ್ಥಿತಿಗೆ ಬರಲು ಸಾಕಷ್ಟು ಪ್ರಯತ್ನಿಸುತ್ತಿದ್ದೇವೆ. ಸ್ಥಳೀಯ ವಿಮಾನ ನಿಲ್ದಾಣ ಅಧಿಕಾರಿಗಳ ಜೊತೆ ಸತತ ಸಂಪರ್ಕದಲ್ಲಿದ್ದೇವೆ ಎಂದು ಜೆಟ್ ಏರ್ ವೇಸ್ ತಿಳಿಸಿದೆ.

ವಿಮಾನ ಅಪಘಾತ ತನಿಖಾ ವಿಭಾಗ ಜೆಟ್ ಏರ್ ವೇಸ್ ಅಪಘಾತದ ತನಿಖೆ ನಡೆಸಲಿದೆ. ನಾಗರಿಕ ವಿಮಾನಯಾನ ನಿರ್ದೇಶನಾಲಯ ತಪಾಸಣೆ ಕೈಗೊಂಡಿದೆ. ಹಂಸಾ ರನ್ ವೇಯಲ್ಲಿ ವಿಮಾನ ಟೇಕ್ ಆಫ್ ಆಗುವಾಗ ಜಾರಿದ್ದು ಬೆಳಗ್ಗೆ 9 ಗಂಟೆ ವೇಳೆಗೆ ಸಂಚಾರಕ್ಕೆ ಬಳಸಲಾಗಿದೆ ಎಂದು ಭಾರತೀಯ ನೌಕಾಪಡೆ ತಿಳಿಸಿದೆ.

Read These Next

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ...

ಲೋಕಸಭಾ ಚುನಾವಣೆ; ಕಾಂಗ್ರೇಸ್ ನ ಎರಡನೇ ಪಟ್ಟಿ ಬಿಡುಗಡೆ; ಉ.ಕ ಕ್ಷೇತ್ರಕ್ಕೆ ಅಂಜಲಿ ನಿಂಬಾಳ್ಕರ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕದ 17, ಅರುಣಾಚಲ ...

ಸಿಎಎ ನಿಯಮಾವಳಿಗಳಿಗೆ ತಡೆ ಕೋರುವ ಅರ್ಜಿಗಳ ವಿಚಾರಣೆ ; ಸು.ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ...