ಇಸ್ಲಾಮಾಬಾದ್: ಭಾರತ ಸೇರಿದಂತೆ ಐದು ರಾಷ್ಟ್ರಗಳು ಸಾರ್ಕ್ ಸಮ್ಮೇಳನದಲ್ಲಿ ಭಾಗವಹಿಸದ ಕಾರಣ ಶೃಂಗಸಭೆ ಮುಂದಕ್ಕೆ

Source: vb | By Arshad Koppa | Published on 1st October 2016, 8:29 AM | Global News |

ಇಸ್ಲಾಮಾಬಾದ್, ಸೆ.೩೦: ಭಾರತ ಸೇರಿದಂತೆ ಐದು ರಾಷ್ಟ್ರಗಳು  ಹಾಜರಾಗದಿರಲು ನಿರ್ಧರಿಸಿದ ಹಿನ್ನೆಲೆಯಲ್ಲಿ ಪಾಕಿಸ್ತಾನವು ಇಸ್ಲಾಮಾಬಾದ್ ನಲ್ಲಿ ನವೆಂಬರ್‌ನಲ್ಲಿ ನಡೆಯಲಿದ್ದ ಸಾರ್ಕ್ ಶೃಂಗಸಭೆಯನ್ನು ಮುಂದೂಡಿದೆ. ಈ ಬಗ್ಗೆ ಪಾಕ್ ವಿದೇಶಾಂಗ ಕಾರ್ಯಾಲಯವು ಶುಕ್ರವಾರ ನೀಡಿದ ಹೇಳಿಕೆಯೊಂದರಲ್ಲಿ ಸಾರ್ಕ್ ಶೃಂಗಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿರುವುದಾಗಿ ತಿಳಿಸಿದೆ.

ಉರಿಯಲ್ಲಿ ಭಾರತೀಯ ಸೇನಾಶಿಬಿರದ ಮೇಲೆ ಪಾಕ್ ಉಗ್ರರ ದಾಳಿಯನ್ನು ಪ್ರತಿಭಟಿಸಿ, ಭಾರತವು ಶೃಂಗಸಭೆಯಲ್ಲಿ ಭಾಗವಹಿಸದಿರಲು
ನಿರ್ಧರಿಸಿತ್ತು. ಇದರ ಬೆನ್ನಲ್ಲೇ ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿ ಅಫ್ಘಾನಿಸ್ತಾನ, ಬಾಂಗ್ಲಾ, ಭೂತಾನ್ ದೇಶಗಳು ಕೂಡಾ ಶೃಂಗಸಭೆಗೆ
ಗೈರುಹಾಜರಾಗುವುದಾಗಿ ಘೋಷಿಸಿದ್ದವು. ೨೦೧೬ರ ನವೆಂಬರ್ ೯-೧೦ರ ನಡುವೆ ಇಸ್ಲಾಮಾಬಾದ್‌ನಲ್ಲಿ ನಡೆಯಲಿದ್ದ ೧೯ನೆ ಸಾರ್ಕ್ ಶೃಂಗಸಭೆಯಲ್ಲಿ ಪಾಲ್ಗೊಳ್ಳದಿರುವ ಭಾರತದ ನಿರ್ಧಾರವನ್ನು ಪಾಕಿಸ್ತಾನವು ಖಂಡಿಸುತ್ತದೆಯೆಂದು ಅದು ಹೇಳಿಕೆಯಲ್ಲಿ ತಿಳಿಸಿದೆ. ಬಹುಪಕ್ಷೀಯ ಪ್ರಾದೇಶಿಕ ಸಹಕಾರ ಸಭೆಯಲ್ಲಿ ಎರಡು ರಾಷ್ಟ್ರಗಳ ನಡುವಿನ ಬಿಕ್ಕಟ್ಟನ್ನು ಎಳೆದು ತರುವ ಮೂಲಕ ಭಾರತವು ಸಾರ್ಕ್ ಸನದಿನ ನಿಯಮಗಳನ್ನು ಭಾರತವು ಉಲ್ಲಂಸಿದೆಯೆಂದು ಅದು ಆಪಾದಿಸಿದೆ. ಪಾಕ್ ಪ್ರಧಾನಿ ನವಾಝ್ ಶರೀಫ್ ಅವರು ಸಾರ್ಕ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿರುವ ಸಾರ್ಕ್ ನಾಯಕರನ್ನು ಸ್ವಾಗತಕ್ಕೆ ಎದುರು ನೋಡುತ್ತಿದ್ದರು. ಈ ಶೃಂಗಸಭೆಯನ್ನು ಯಶಸ್ವಿಯಾಗಿ ನಡೆಸಲು ಎಲ್ಲಾ ರೀತಿಯ ಸಿದ್ದತೆಗಳನ್ನು ನಡೆಸಲಾಗಿತ್ತೆಂದು ಹೇಳಿಕೆಯು ತಿಳಿಸಿದೆ. ‘ಶೃಂಗಸಭೆಯ ಹಳಿತಪ್ಪಿಸುವ’ ಭಾರತದ ನಿರ್ಧಾರವು, ಈ ಪ್ರದೇಶದಲ್ಲಿ ಬಡತನದ ವಿರುದ್ಧ ಹೋರಾಡಬೇಕೆಂಬ ಪ್ರಧಾನಿ ನರೇಂದ್ರ ಮೋದಿ ತಾನಾಗಿಯೇ ನೀಡಿದ ಕರೆಗೆ ವ್ಯತಿರಿಕ್ತವಾಗಿದೆಯೆಂದು ಅದು ಆಪಾದಿಸಿದೆ. ಉರಿ ಘಟನೆಗೆ ಸಂಬಂಧಿಸಿ, ಶೃಂಗಸಭೆಗೆ ಗೈರುಹಾಜರಾಗುವ ಭಾರತದ ನಿರ್ಧಾರವು ಕಾಶ್ಮೀರದಲ್ಲಿ ಭಾರತವು ನಡೆಸುತ್ತಿರುವ ದೌರ್ಜನ್ಯಗಳಿಂದ ಜಗತ್ತಿನ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನವಾಗಿದೆಯೆಂದು ಪಾಕ್ ವಿದೇಶಾಂಗ ಕಾರ್ಯಾಲಯ ಆಪಾದಿಸಿದೆ.

ಬಾರದ ಶ್ರೀಲಂಕಾ: ೧೯ನೆ ಸಾರ್ಕ್ ಶೃಂಗಸಭೆಯಲ್ಲಿ ಭಾಗವಹಿಸದಿರಲು ಶ್ರೀಲಂಕಾ ಸಹಾ ನಿರ್ಧರಿಸಿದೆ.  ಉರಿ ದಾಳಿ ಪ್ರತಿಭಟಿಸಿ ಭಾರತವು ಸಾರ್ಕ್ ಶೃಂಗಸಭೆಯನ್ನು ಬಹಿಷ್ಕರಿಸಿದ ಬೆನ್ನಲ್ಲೇ ಅಫ್ಘಾನಿಸ್ತಾನ, ಬಾಂಗ್ಲಾ ಹಾಗೂ ಭೂತಾನ್ ದೇಶಗಳು ಕೂಡಾ ಸಮಾವೇಶದಿಂದ ಹೊರಗುಳಿಯಲು ನಿರ್ಧರಿಸಿದ್ದವು. ಇದೀಗ ಶ್ರೀಲಂಕಾ ಕೂಡಾ ಅದೇ ದಾರಿಹಿಡಿಯುವುದರೊಂದಿಗೆ ಒಟ್ಟು ಐದು ದೇಶಗಳು ಸಾರ್ಕ್ ಶೃಂಗಸಭೆಯನ್ನು ಬಹಿಷ್ಕರಿಸಿದಂತಾಗಿದೆ. “ ಈ ಪ್ರದೇಶದಲ್ಲಿ ನೆಲೆಸಿರುವ ಪ್ರಸಕ್ತ ಪರಿಸ್ಥಿತಿಯು ೧೯ನೆ ಸಾರ್ಕ್ ಶೃಂಗಸಭೆಯನ್ನ ಇಸ್ಲಾಮಾಬಾದ್‌ನಲ್ಲಿ ನಡೆಸುವುದಕ್ಕೆ ಪೂರಕವಾಗಿಲ್ಲವೆಂದು ಹೇಳಲು ಶ್ರೀಲಂಕಾ ವಿಷಾದಿಸುತ್ತದೆ" ಎಂದು ವಿದೇಶಾಂಗ ಸಚಿವಾಲಯದ ಹೇಳಿಕೆಯೊಂದು ತಿಳಿಸಿದೆ. ಶೃಂಗಸಭೆಯ ಎಲ್ಲಾ ಮಟ್ಟದ ನಿರ್ಧಾರಗಳನ್ನು ಅವಿರೋಧವಾಗಿ ಕೈಗೊಳ್ಳಬೇಕೆಂದು ಸಾರ್ಕ್ ಸನದಿನ ಸಾಮಾನ್ಯ ನಿಯಮಾವಳಿಗಳು ಪ್ರತಿಪಾದಿಸುತ್ತವೆ. ಸಾರ್ಕ್ ಸದಸ್ಯ ರಾಷ್ಟ್ರಗಳ ಸರಕಾರಿ ವರಿಷ್ಠರ ಸಭೆಯನ್ನು ಆಯೋಜಿಸುವುದಕ್ಕೂ ಈ ನಿಯಮಗಳು ಅನ್ವಯವಾಗುತ್ತವೆ ಎಂದು ಶ್ರೀಲಂಕಾ ವಿದೇಶಾಂಗ ಸಚಿವಾಲಯದ ಸಂಕ್ಷಿಪ್ತ ಹೇಳಿಕೆಯೊಂದು ತಿಳಿಸಿದೆ. ಭಾರತ ಹಾಗೂ ಪಾಕಿಸ್ತಾನಗಳ ನಡುವೆ ಪ್ರಸ್ತುತ ತಲೆದೋರಿರುವ ಉದ್ವಿಗ್ನತೆಯ ಬಗ್ಗೆ ಹೇಳಿಕೆಯು ಯಾವುದೇ ಪ್ರಸ್ತಾಪ ಮಾಡಿಲ್ಲವಾದರೂ, ಭಯೋತ್ಪಾದನೆಯ ಎಲ್ಲಾ ರೂಪಗಳನ್ನು ತಾನು ಖಂಡಿಸುವುದಾಗಿ ಅದು ಹೇಳಿದೆ. ದಕ್ಷಿಣ ಏಶ್ಯದ ಜನತೆಯ ಹಿತದೃಷ್ಟಿಯಿಂದ ಅರ್ಥಪೂರ್ಣವಾದ ಪ್ರಾದೇಶಿಕ ಸಹಕಾರದ ಅಗತ್ಯವಿದೆಯೆಂದು ಅದು ಪ್ರತಿಪಾದಿಸಿದೆ. ೧೯೮೫ರಲ್ಲಿ ರಚನೆಯಾದ ದಕ್ಷಿಣ ಏಶ್ಯ ಪ್ರಾದೇಶಿಕ ಸಹಕಾರ ಒಕ್ಕೂಟ (ಸಾರ್ಕ್)ದಲ್ಲಿ ಭಾರತ, ಅಫ಼್ಫ್ಟಾನಿಸ್ತಾನ, ಭೂತಾನ್, ಮಾಲ್ಡೀವ್ಸ್, ನೇಪಾಳ, ಪಾಕಿಸ್ತಾನ ಹಾಗೂ ಶ್ರೀಲಂಕಾ ಸದಸ್ಯ ರಾಷ್ಟ್ರಗಳಾಗಿವೆ.
 

Read These Next